ವಿಯೇಟ್ನಾಮಿನಲ್ಲಿ ಕಮ್ಯುನಿಸ್ಟ್-ಕಾರ್ಮಿಕ ಪಕ್ಷಗಳ 18 ನೇ ಸಭೆ ಅಂತರ್ರಾಷ್ಟ್ರೀಯ ಸೌಹಾರ್ದ ಕಾರ್ಯಾಚರಣೆಗಳಿಗೆ ಹೊಸ ಬಲ

ಸಂಪುಟ: 
10
ಸಂಚಿಕೆ: 
51
date: 
Sunday, 11 December 2016

ಇದೇ ಅಕ್ಟೋಬರ್ 28-30 ರಲ್ಲಿ ಕಮ್ಯುನಿಸ್ಟ್ ಮತ್ತು ಕಾರ್ಮಿಕರ ಪಕ್ಷಗಳ 18ನೇ ಅಂತರ್ರಾಷ್ಟ್ರೀಯ ಸಭೆ ನಡೆಯಿತು. ಈ ಬಾರಿಯ ಸಭೆಯ ವಿಷಯ “ಬಂಡವಾಳಶಾಹಿ ಬಿಕ್ಕಟ್ಟು ಮತ್ತು ಸಾಮ್ರಾಜ್ಯಶಾಹಿ ದಾಳಿ - ಶಾಂತಿಗಾಗಿ, ಕಾರ್ಮಿಕರ ಮತ್ತು ಜನತೆಯ ಹಕ್ಕುಗಳಿಗಾಗಿ, ಹಾಗೂ ಸಮಾಜವಾದಕ್ಕಾಗಿ ಕಮ್ಯುನಿಸ್ಟ್ ಮತ್ತು ಕಾರ್ಮಿಕರ ಪಕ್ಷಗಳ ವ್ಯೂಹ ಮತ್ತು ತಂತ್ರಗಳು” ಆಗಿತ್ತು. 

ಈ ಬಾರಿಯ ಸಭೆಯಲ್ಲಿ ಹಲವು ವಿಶೇಷಗಳಿದ್ದವು. 1999ರಲ್ಲಿ ಇಂತಹ ವಾರ್ಷಿಕ ಸಭೆಗಳು ಆರಂಭವಾದ ಮೇಲೆ ಮೊದಲ ಬಾರಿಗೆ ಈ ಸಭೆ ಒಂದು ಸಮಾಜವಾದಿ ದೇಶವೊಂದರಲ್ಲಿ - ವಿಯೇಟ್ನಾಂನ ರಾಜಧಾನಿ ಹನೊಯ್ ನಲ್ಲಿ - ನಡೆಯಿತು. ಈ ಬಾರಿ ಅತ್ಯಂತ ಹೆಚ್ಚು - ಅಂದರೆ 49 ದೇಶಗಳ 57 ಪಕ್ಷಗಳ - 108 ಪ್ರತಿನಿಧಿಗಳು ಭಾಗವಹಿಸಿದ್ದರು. 1999ರ ಮೊದಲ ಸಭೆಯಲ್ಲಿ 46 ದೇಶಗಳ 55 ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು. 1999ರ ಮೊದಲ ಸಭೆಗೆ ಸ್ಫೂರ್ತಿಯಾಗಿದ್ದ ಸಿಪಿಐ(ಎಂ) ಕೊಲ್ಕತ್ತಾದಲ್ಲಿ ಸಂಘಟಿಸಿದ್ದ ‘ಕಾರ್ಲ್ ಮಾಕ್ರ್ಸ್ - 175ನೇ ವಾರ್ಷಿಕ’ ವಿಚಾರ ಸಂಕಿರಣ ಮತ್ತು ಸಭೆಯಲ್ಲಿ 11 ಕಮ್ಯುನಿಸ್ಟ್ ಮತ್ತು ಕಾರ್ಮಿಕರ ಪಕ್ಷಗಳ 42 ಪ್ರತಿನಿಧಿಗಳು ಪಾಲುಗೊಂಡಿದ್ದರು.

ಮಾತ್ರವಲ್ಲ, ಈ ಬಾರಿ ಸರ್ವಸಮ್ಮತ ಜಂಟಿ ಹೇಳಿಕೆಯನ್ನು ಹೊರಡಿಸುವುದು ಸಾಧ್ಯವಾಯಿತು. ಹಿಂದೆ ಹಲವು ಬಾರಿ ಸರ್ವಸಮ್ಮತ ಜಂಟಿ ಹೇಳಿಕೆಯೊಂದು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ಕಾರ್ಯನಿರತ ಗುಂಪೊಂದನ್ನು ರಚಿಸಿದರೂ ಅದು ಹಲವು ಬಾರಿ ಸಾಧ್ಯವಾಗುತ್ತಿರಲಿಲ್ಲ. ಹಲವು ವಿಷಯಗಳ ಮೇಲೆ ಸಾಮಾನ್ಯ ನಿಲುವು ರೂಪಿಸಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಸಭೆಯ ಒಟ್ಟು ಅಭಿಪ್ರಾಯಗಳನ್ನು ನಿರೂಪಿಸುವ ಕೆಲಸವನ್ನು  ಆತಿಥೇಯ ದೇಶಕ್ಕೆ ವಹಿಸುವ ಸಂಪ್ರದಾಯ ಆರಂಭವಾಗಿತ್ತು. ಆದರೆ ಈ ಬಾರಿ ಸರ್ವಸಮ್ಮತ ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡುವುದು ಸಾಧ್ಯವಾಯಿತು. ಅಷ್ಟೇ ಅಲ್ಲ, ಪ್ರಮುಖ ಆಳುವ (ಚೀನಾ, ಕೊರಿಯಾ) ಕಮುನಿಸ್ಟ್ ಪಕ್ಷಗಳು ಮೊದಲಿನಿಂದಲೂ ಸಭೆಯಲ್ಲಿ ಭಾಗವಹಿಸುತ್ತಿದ್ದರೂ, ಸಭೆಯ ಚರ್ಚೆ ಮತ್ತಿತರ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. ಜಂಟಿ ಹೇಳಿಕೆ ಸಿದ್ಧ ಪಡಿಸುವ ಕಾರ್ಯನಿರತ ಗುಂಪಿನಲ್ಲಿ ಭಾಗವಹಿಸುವುದರ ಮೂಲಕ, ಚೀನಾ ಕಮ್ಯುನಿಸ್ಟ್ ಪಕ್ಷದ ಪ್ರತಿನಿಧಿಗಳು ಇದರ ಬದಲಾವಣೆಗೂ ನಾಂದಿ ಹಾಡಿತು. ದೀರ್ಘ ಮತ್ತು ಶ್ರೀಮಂತ ಅನುಭವವಿರುವ ಇಂತಹ ಪಕ್ಷಗಳು ಸೇರಿದಂತೆ ಜಗತ್ತಿನ ಹಲವು ಖಂಡಗಳ ವೈವಿಧ್ಯಮಯ ಅನುಭವಗಳನ್ನು ನಿಲುವುಗಳನ್ನು ಕಾರ್ಯನಿರತ ಗುಂಪು ಚರ್ಚಿಸಿ ಸರ್ವಸಮ್ಮತ ಸಾಮಾನ್ಯ ನಿಲುವನ್ನು ರೂಪಿಸುವುದರಲ್ಲಿ ಈ ಬಾರಿಯ ಅಂತರ್ರಾಷ್ಟ್ರೀಯ ಸಭೆ ದೊಡ್ಡ ಮುನ್ನಡೆ ಸಾಧಿಸಿದೆ.  

ವಿಯೇಟ್ನಾಂ ಕಮ್ಯುನಿಸ್ಟ್ ಪಕ್ಷದ ವಿದೇಶ ಸಂಬಂಧಗಳ ಕಮಿಶನ್ ಮುಖ್ಯಸ್ಥ ಹೊವಾಂಗ್ ಬಿನ್ ಕ್ವಾನ್ ಪ್ರತಿನಿಧಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅವರು ಶಾಂತಿ, ಸ್ವಾತಂತ್ರ್ಯ, ಸಾರ್ವಭೌಮತೆ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟಗಳಿಗೆ ಉತ್ತೇಜನ ನೀಡುವುದರ ಮಹತ್ವದ ಬಗ್ಗೆ ಒತ್ತು ಕೊಟ್ಟರು. ತಮ್ಮ ದೇಶ ಮತ್ತು ಪಕ್ಷ ಸಮಾಜವಾದಿ ದೇಶಗಳೊಂದಿಗೆ, ಪಾರಂಪಾರಿಕ ಮಿತ್ರರು ಮತ್ತು ಕಮ್ಯುನಿಸ್ಟ್/ಕಾರ್ಮಿಕ ಪಕ್ಷಗಳೊಂದಿಗೆ  ಸಂಬಂಧಗಳನ್ನು ಗಟ್ಟಿಗೊಳಿಸುವ ಉತ್ತಮಗೊಳಿಸುವುದರ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸುತ್ತದೆ ಎಂದರು. 

ಪ್ರಾಸ್ತಾವಿಕ ಮಾತುಗಳ ನಂತರ ಭಾಗವಹಿಸುತ್ತಿರುವ ಪಕ್ಷದ ಪ್ರತಿನಿಧಿ ಸಭೆಯ ಪ್ರಮುಖ ವಿಷಯ ಹಾಗು ಪ್ರಸಕ್ತ ಅಂತರ್ರಾಷ್ಟ್ರೀಯ ಪರಿಸ್ಥಿತಿ ಹಾಗೂ ತಮ್ಮ ದೇಶಗಳ ಮೇಲೆ ಅದರ ಪರಿಣಾಮಗಳ ಬಗ್ಗೆ ಮಾತನಾಡಿದರು. ಅದರ ನಂತರ ಸಭೆಯ ಹೇಳಿಕೆಯೊಂದನ್ನು ಅಂಗೀಕರಿಸಲಾಯಿತು. ಈ ಹೇಳಿಕೆಯಲ್ಲಿ ನೀಡಲಾದ ಕರೆಗಳನ್ನು ಪ್ರತ್ಯೇಕವಾಗಿ ಕೊಡಲಾಗಿದೆ. 

ಸಿಪಿಐ(ಎಂ) ಪರವಾಗಿ ಪೊಲಿಟ್ ಬ್ಯುರೊ ಸದಸ್ಯ ಹಾಗೂ ಅಂತರ್ರಾಷ್ಟ್ರೀಯ ವಿಭಾಗದ ಮುಖ್ಯಸ್ಥ ಕಾ. ಎಂ.ಎ. ಬೇಬಿ ಸಭೆಯಲ್ಲಿ ಭಾಗವಹಿಸಿದ್ದರು. ಅವರ ಭಾಷಣದ ಕೆಲವು ಭಾಗಗಳನ್ನು ಪ್ರತ್ಯೇಕವಾಗಿ ಕೊಡಲಾಗಿದೆ.

ಒಟ್ಟಾರೆಯಾಗಿ ಈ ಸಭೆ ಕಮ್ಯುನಿಸ್ಟ್ ಮತ್ತು ಕಾರ್ಮಿಕರ ಪಕ್ಷಗಳ ಅಂತರ್ರಾಷ್ಟ್ರೀಯ ಸೌಹಾರ್ದತೆಗೆ ಹೊಸ ಬಲ ಕೊಟ್ಟಿದೆ ಎನ್ನಬಹುದು

ಹನೊಯ್ ನಲ್ಲಿ ಕಾ. ಎಂ.ಎ. ಬೇಬಿ ಅವರ ಭಾಷಣದ ತುಣುಕುಗಳು

ನಮ್ಮ ಪಕ್ಷ ಆಳುವ ವರ್ಗಗಳ ಹುನ್ನಾರಗಳನ್ನು ಬಯಲಿಗೆಳೆದು ಅವರನ್ನು ಒಂದುಗುಡಿಸಲು ಪ್ರಯತ್ನಿಸುತ್ತಿದೆ. ಆಳುವ ವರ್ಗಗಳ ಶೋಷಕ ನೀತಿಗಳ ವಿರುದ್ಧ ಸತತವಾದ ಸಮರಶೀಲ ವರ್ಗ ಮತ್ತು ಸಾಮೂಹಿಕ ಹೋರಾಟಗಳ ಆಧಾರದಲ್ಲಿ ಒಂದು ಪರ್ಯಾಯ ವೇದಿಕೆಯಲ್ಲಿ ಜನರನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದೇವೆ.. ..

ನಮ್ಮ ದೇಶದ ಆಳುವ ವರ್ಗ ನಮ್ಮ ಪಕ್ಷವನ್ನು ಭೌತಿಕವಾಗಿಯೂ ಸೈದ್ಧಾಂತಿಕವಾಗಿಯೂ ಮುಗಿಸಿ ಇಡಲು ಅತೈಂತ ಭೀಕರ ದಾಳಿಗಳನ್ನು ಮಾಡುತ್ತಿದೆ. .. .. ದೇಶದ ತುಂಬಾ ಸರ್ವಾಧಿಕಾರಿ ಧೋರಣೆಗಳು ಗಟ್ಟಿಯಾಗುತ್ತಿವೆ. ಭಿನ್ನಮತ ಮತ್ತು ಪ್ರತಿಭನಟೆಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. .. ..

ಆಳುವ ವರ್ಗಗಳ ದಾಳಿಗಳಿಗೆ ಪ್ರತಿರೋಧ ಒಡ್ಡುವ ಹಾಗೂ ಒಂದು ಪ್ರಬಲ ಕಮ್ಯುನಿಸ್ಟ್ ಪಕ್ಷ ಕಟ್ಟುವ ಕೆಲಸ ಜತೆ ಜತೆಯಾಗಿಯೇ ನಡೆಯಬೇಕಾಗಿದೆ ಎಂಬುದು ನಮಗೆ ತಿಳಿದಿದೆ. ಅದಕ್ಕಾಗಿ ಕಾ. ಹೊ ಚಿ ಮಿನ್ ಹೇಳಿದಂತೆ “ಹೋರಾಟದ ಜತೆ ಕಟ್ಟುವುದು”, “ಕಾರ್ಮಿಕ ವರ್ಗದ ಕ್ರಾಂತಿಕಾರಿ ನಿಲುಮೆಗಳನ್ನು ಎತ್ತಿ ಹಿಡಿಯುವುದು” ಹಾಗೂ ಪಕ್ಷ ಮತ್ತು ಜನಸಮೂಹಗಳ ನಡುವೆ ನಿಕಟ ಸಂಪರ್ಕ ಸಾಧಿಸುವುದು” ಅಗತ್ಯವಿದೆ.

ಅಕ್ಟೋಬರ್ ಕ್ರಾಂತಿಯ ಶತಮಾನೋತ್ಸವ ಮತ್ತು ‘ಬಂಡವಾಳ’ದ ಪ್ರಕಟಣೆಯ 150ನೇ ವಾರ್ಷಿಕೋತ್ಸವ ಜಂಟಿಯಾಗಿ ಆಚರಿಸಲು ಕರೆ

ಹನೊಯ ನಲ್ಲಿ ಅಕ್ಟೋಬರ್ 28-30 ರಲ್ಲಿ ಸೇರಿದ್ದ ಕಮ್ಯುನಿಸ್ಟ್ ಮತ್ತು ಕಾರ್ಮಿಕರ ಪಕ್ಷಗಳ 18ನೇ ಅಂತರ್ರಾಷ್ಟ್ರೀಯ ಸಭೆ ಒಂದು ಜಂಟಿ ಹೇಳಿಕೆಯನ್ನು ಅಂಗೀಕರಿಸಿದೆ. ಬಂಡವಾಳಶಾಹಿ, ಆಳಗೊಳ್ಳುತ್ತಿರುವ ಅದರ ಬಿಕ್ಕಟ್ಟು, ಅದನ್ನು ನಿರ್ವಹಿಸಲು ಸಾಮ್ರಾಜ್ಯಶಾಹಿ ಮಧ್ಯಪ್ರವೇಶಗಳು ಉಂಟು ಮಾಡಿರುವ ಇಂದಿನ ಅಂತರ್ರಾಷ್ಟ್ರೀಯ ಪರಿಸ್ಥಿತಿಯನ್ನು ಹೇಳಿಕೆ ನಿರೂಪಿಸಿದೆ. ಇದಕ್ಕೆ ಸಮಾಜವಾದ ಮಾತ್ರವೇ ನಿಜವಾದ ಬದಲಿ ಎಂದು ಹೇಳಿಕೆ ಘೋಷಿಸಿದೆ. ಬಂಡವಾಳಶಾಹಿ, ಹಾಗೂ ಸಾಮ್ರಾಜ್ಯಶಾಹಿಯ ದಾಳಿಗಳ ವಿರುದ್ಧ ಕಾರ್ಮಿಕರು ಮತ್ತು ಜನತೆಯ ಹೋರಾಟಗಳಿಗೆ ಸಲಾಂ ಮಾಡಿದೆ. ಈ ಸಂದರ್ಭದಲ್ಲಿ ರಶ್ಯಾದ ಮಹಾನ್ ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ಶತಮಾನೋತ್ಸವದ ಚಾರಿತ್ರಿಕ ಮಹತ್ವದ ಬಗ್ಗೆ ಹೇಳಿಕೆ ಗಮನ ಸೆಳೆದಿದೆ. ಈ ಅವಧಿಯಲ್ಲಿ ಕಮ್ಯುನಿಸ್ಟ್ ಮತ್ತು ಕಾರ್ಮಿಕರ ಪಕ್ಷಗಳ ಹೋರಾಟಗಳು, ಸೌಹಾರ್ದ ಕಾಯಾಚರಣೆಗಳು ಹಾಗೂ ಸಹಕಾರ ಸ್ಫೂರ್ತಿದಾಯಕ ಎಂದಿದೆ. 

ಈ ಕೆಳಗಿನ ಸಾಮಾನ್ಯ ಹಾಗೂ ಜಂಟಿ ಕಾರ್ಯಾಚರಣೆಗಳನ್ನು ನಡೆಸಬೇಕೆಂದು ಕರೆ ಕೊಟ್ಟಿದೆ:

21ನೇ ಶತಮಾನದಲ್ಲಿ ಸಮಾಜವಾದ ಕಟ್ಟು ಬಗ್ಗೆ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಕೆಲಸಗಳನ್ನು ತೀವ್ರಗೊಳಿಸಬೇಕು ಹಾಗೂ ಹಂಚಿಕೊಳ್ಳಬೇಕು

ರಶ್ಯಾದ ಮಹಾನ್ ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ಶತಮಾನೋತ್ಸವವನ್ನು ಜಂಟಿಯಾಗಿ ಆಚರಿಸಬೇಕು

ಕಾರ್ಲ್ ಮಾಕ್ರ್ಸ್ ಅವರ ಮೇರುಗ್ರಂಥ ‘ಬಂಡವಾಳ’ದ ಮೊದಲ ಸಂಪುಟದ ಪ್ರಕಟಣೆಯ 150ನೇ ವಾರ್ಷಿಕೋತ್ಸವ ಆಚರಿಸಬೇಕು

ಬಂಡವಾಳಶಾಹಿಯ ಎಲ್ಲಾ ರೂಪದ ದಾಳಿಗಳನ್ನು ಎದುರಿಸುವ  ಹಾಗೂ, ಅದರಲ್ಲಿ ದುಡಿಯುವ ಮತ್ತು ಇತರ ಜನವಿಭಾಗಗಳನ್ನು ತೊಡಗಿಸಲು ಅಣಿ ನೆರೆಸಲು ಹೂಡಬೇಕಾದ ವ್ಯೂಹ ಮತ್ತು ತಂತ್ರಗಳ ಬಗ್ಗೆ ಅನುಭವಗಳನ್ನು ಪಕ್ಷಗಳು ಪರಸ್ಪರ ಹಂಚಿಕೊಳ್ಳಬೇಕು

ನಿಷೇಧ ಮತ್ತಿತರ ರೂಪಗಳ ತೀವ್ರ ದಾಳಿಗಳನ್ನು ಎದುರಿಸುತ್ತಿರುವ ಉಕ್ರೇನಿನ ಮತ್ತು ಇತರ ಕಮ್ಯುನಿಸ್ಟ್ ಪಕ್ಷಗಳಿಗೆ ಸೌಹಾರ್ದ ಬೆಂಬಲ ವ್ಯಕ್ತಪಡಿಸುವುದು

ಮೇ 5-11 2017 ವಾರದಲ್ಲಿ ನವ ನಾಜಿ-ಫ್ಯಾಸಿಸ್ಟ್ ಗಳ ವಿರುದ್ಧ ಪ್ರಚಾರಾಂದೋಲನ ಕೈಗೊಳ್ಳುವುದು

ನಾಟೋದ ವಿಸ್ತರಣೆ, ವಿದೇಶೀ ಮಿಲಿಟರಿ ನೆಲೆಗಳ ಸ್ಥಾಪನೆ, ಸಾಮ್ರಾಜ್ಯಶಾಹಿ ಮಿಲಿಟರಿ ಆಕ್ರಮಣಗಳ ವಿರುದ್ಧ ಕಾರ್ಯಾಚರಣೆಗಳ ಮೂಲಕ ಸಾಮ್ರಾಜ್ಯಶಾಹಿ-ವಿರೋಧಿ ರಂಗವನ್ನು ವಿಸ್ತರಿಸುವುದು

ಕ್ಯೂಬಾದ ವಿರುದ್ಧ ಅಮೆರಿಕದ ದಿಗ್ಬಂಧನ ಕೊನೆಗಳಿಸಲು, ಪ್ಯಾಲೆಸ್ತೀನ್ ಸ್ವಾತಂತ್ರ್ಯವನ್ನು ಬೆಂಬಲಿಸುವುದು

ಸಾಮಾರಾಜ್ಯಶಾಹಿ ಅತಿಕ್ರಮಣ, ಮಧ್ಯಪ್ರವೇಶ ಮತ್ತು ದಿಗ್ಬಂಧನ ಎದುರಿಸುತ್ತಿರುವ ಎಲ್ಲಾ ದೇಶ/ಜನತೆ ಗಳಿಗೆ ಸೌಹಾರ್ದ ಬೆಂಬಲ ಕೊಡುವುದು