ಅಭೂತ ಪೂರ್ವವಾಗಿ ಜಾಥಾಕ್ಕೆ ಸ್ವಾಗತ

ಸಂಪುಟ: 
10
ಸಂಚಿಕೆ: 
48
Thursday, 17 November 2016

ಬಸವಕಲ್ಯಾಣದಿಂದ ಆರಂಭವಾದ ಎಐಕೆಎಸ್ ಜಾಥಾವು ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಧಾರವಾಡ, ಜಿಲ್ಲೆಗಳಲ್ಲಿ ಸಂಚರಿಸಿ, ನವೆಂಬರ್ 16ರಂದು ಬೆಳಗಾವಿಗೆ ಹೊರಟ ಜಾಥಾವು ಅಖಿಲ ಭಾರತ ಜಾಥಾಗೆ ಸಮ್ಮಿಲನಗೊಂಡಿತು.

ರಾಯಚೂರು ಜಿಲ್ಲೆಗೆ ನವೆಂಬರ್ 11ರಂದು ಜಾಥಾ ಆಗಮಿಸಿತು. ನವೆಂಬರ್ 14ರಂದು ಕಲಬುರಗಿಯ ರಟಕಲ್ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಕೆಪಿಆರ್‍ಎಸ್ ರಾಜ್ಯಾಧ್ಯಕ್ಷರಾದ ಕಾಂ||ಮಾರುತಿ ಮಾನ್ಪಡೆರವರು ಮಾತನಾಡಿದರು.

ಕರ್ನಾಟಕ ಪ್ರಾಂತ ರೈತ ಸಂಘ, ಕಿಸಾನ ಸಭಾ ಸಂಘರ್ಷ ಜಾಥಾವನ್ನು ನವೆಂಬರ್ 15ರಂದು ವಿಜಯಪುರ ಜಿಲ್ಲೆಯ  ಹುತಾತ್ಮ (ಮೀನಾಕ್ಷಿ ಚೌಕ)ನಲ್ಲಿ ಸ್ವಾಗತ ಮಾಡಲಾಯಿತು. ಈ ಸಂದರ್ಭದಲ್ಲಿ ಅಣ್ಣಾರಾಯ ಈಳಗೇರ ಇವರು ಸಂಘರ್ಷ ಜಾಥಾದ ವಿವರಣೆ ಕೊಟ್ಟು ಭೂಮಿ ವಸತಿ ರೈತರ ಸಾಲ ಮನ್ನಾ ಪರಿಹಾರ ಬಗ್ಗೆ ಹೇಳಿ ಜನ ಜಾಗೃತಿಗೊಳಿಸುತ್ತಾ ಜಾಥಾದ ನೇತೃತ್ವ ವಹಿಸಿದ್ದ ಎಲ್ಲರಿಗೂ ಸ್ವಾಗತಿಸಿದರು.

ಜಾಥಾ ನೇತೃತ್ವ ವಹಿಸಿದ್ದ ರಾಜ್ಯ ಮುಖಂಡರಾದ ಬಿ.ಎಂ.ಸೊಪ್ಪಿನ ಮಾತನಾಡಿ ``ದೇಶದಲ್ಲಿ ಕೃಷಿ ಬಿಕ್ಕಟ್ಟು ಬಗ್ಗೆ ವಿವರಣೆ ಕೊಟ್ಟರು. ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನವೆಂಬರ್ 24ರಂದು ಪಾರ್ಲಿಮೆಂಟ್ ಮುಂದೆ ಲಕ್ಷಾಂತರ ರೈತ ಕಾರ್ಮಿಕರು ಪ್ರತಿಭಟನೆ ಮಾಡಲಿದ್ದಾರೆ. ಕರ್ನಾಟಕದಲ್ಲಿಯೂ ನವೆಂಬರ್ 18ರಂದು ತಾಲೂಕಾ ಜಿಲ್ಲಾ ಕೇಂದ್ರದಲ್ಲಿ ಬೇಡಿಕೆಗಳಿಗಾಗಿ ಜೈಲ್‍ಬರೋ ಚಳುವಳಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರ ಪಾಲ್ಗೊಳ್ಳಬೇಕು'' ಎಂದರು.

ರಾಜ್ಯ ಉಪಾಧ್ಯಕ್ಷರಾಧ ಭೀಮಶಿ ಕಲಾದಗಿ ಮಾತನಾಡಿ ``ರೈತರ ಬೆಳೆದ ಯೋಗ್ಯ ಬೆಲೆ ನೀಡಲಿಕ್ಕೆ ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿ ಮಾಡದಿರುವ ಬಗ್ಗೆ ಅಸಂತೋಷ ವ್ಯಕ್ತಪಡಿಸಿದರು. ರೈತರಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಶಾಶ್ವತ ಬರಗಾಲ ನಿವಾರಣೆಗೆ ನೀರಾವರಿ ಯೋಜನೆಗಳು ಹಾಗೂ ಕೆರೆ ತುಂಬುವ ಯೋಜನೆಗಳು ಜಾರಿಗೆ ತರಬೇಕು. ಸಂಕಷ್ಟಕ್ಕೆ ಈಡಾಗಿರುವ ರೈತರ ಸಾಲಮನ್ನಾ ಮಾಡಬೇಕು'' ಎಂದರು.

ಕಾರ್ಯಕ್ರಮದಲ್ಲಿ ಅಯ್ಯಪ್ಪ ಗದ್ದಿನಕೇರಿ ಅಧ್ಯಕ್ಷತೆ ವಹಿಸಿದ್ದರು. ಮಹೇಶ ಹಿರೇಮಠ, ಸಲೀಂ ನಾಯ್ಕೋಡಿ, ಸುನಂದಾ ನಾಯಕ ಹಾಗೂ ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ತಾಲೂಕ ಅಧ್ಯಕ್ಷ ರಂಗಪ್ಪ ದಳವಾಯಿ, ಹೀರಾಬಾಯಿ ಹಜೇರಿ, ಸುಮಿತ್ರಾ ಗೋಣಸಗಿ, ಸಿದ್ರಾಮ ಬಂಗಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ನವೆಂಬರ್ 16ರಂದು ಧಾರವಾಡಕ್ಕೆ ಆಗಮಿಸಿದ ಜಾಥಾಕ್ಕೆ ರೈತರು, ಕಾರ್ಯಕರ್ತರು ಸ್ವಾಗತ ಕೋರಿದರು. ಮುಖಂಡರಾದ ಮಹೇಶ್ ಪತ್ತಾರ್ ಮತ್ತು ಬಿ.ಐ. ಈಳೀಗೇರ್ ಮತ್ತಿತರ ಮುಖಂಡರು ಮಾತನಾಡಿದರು. ನಂತರದಲ್ಲಿ ಬೆಳಗಾವಿ ಕಡೆಗೆ ಪ್ರಯಾಣ ಬೆಳೆಸಿತು.