ನೋಟು ಅಲ್ಲ, ನೀತಿ ಬದಲಾಗಲಿ-ಮಹಾಂತೇಶ್

ಸಂಪುಟ: 
10
ಸಂಚಿಕೆ: 
48
Sunday, 13 November 2016

ಕುಂದಾಪುರ : ಕಟ್ಟಡ ಕಾರ್ಮಿಕರ 10ನೇ ಮಹಾಸಭೆ

ಕಪ್ಪು ಹಣದ ಧನಿಕರನ್ನು ನಿಯಂತ್ರಣ ಮಾಡಬೇಕಾದರೆ ಸರಕಾರ ಆರ್ಥಿಕ ನೀತಿಗಳನ್ನು ಬದಲಾಯಿಸಬೇಕೆ ಹೊರತು ನೋಟುಗಳನ್ನಲ್ಲ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಕೆ. ಹೇಳಿದರು.

ನವೆಂಬರ್ 13ರಂದು ಉಡುಪಿ ಜಿಲ್ಲೆ ಕುಂದಾಪುರದ ಹಂಚು ಕಾರ್ಮಿಕ ಭವನದಲ್ಲಿ ತಾಲೂಕು ಮಟ್ಟದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಆಶ್ರಯದಲ್ಲಿ ಡಾ|| ಬಾಬಾಸಾಹೇಬರ 125ನೇ ವರ್ಷಾಚರಣೆ, ಮತ್ತು ಸಮಾಜವಾದಿ ಕ್ರಾಂತಿ ಶತಮಾನೋತ್ಸವದ ಅಂಗವಾಗಿ ನಡೆದ 10ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ನೋಟು ನಿಷೇಧದಿಂದಾಗಿ ದೇಶದಲ್ಲಿ ಇದುವರೆಗೆ 5 ಕೋಟಿ ಜನ ಬಡವರು ಬೀದಿಗೆ ಬಿದ್ದರೆ, 34 ಜನ ಪ್ರಾಣ ಕಳೆದುಕೊಂಡಿದ್ದಾರೆ. ಶ್ರೀಮಂತರು ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಆಹಾರ ಖರೀದಿಸುತ್ತಿದ್ದರೆ, ಬಡವರು, ಕಾರ್ಮಿಕರು ಆಹಾರ ವಸ್ತುಗಳನ್ನು ಖರೀದಿಸಲು ದಿನವಿಡೀ ಕೆಲಸಗಳನ್ನು ತೊರೆದು ಅಲೆದಾಡುವಂತಾಗಿದೆ ಎಂದರು.

ದೇಶದಲ್ಲಿ ನೋಟಿನ ಮೇಲೆ ನಿಷೇಧ ಹೇರಿದ್ದು ಇದೇ ಪ್ರಥಮವೇನಲ್ಲ. ನಿಷೇಧಿಸುವಾಗ ಸರಕಾರ ಪೂರ್ವ ಸಿದ್ಧತೆ ಮಾಡದೇ ಇರುವುದರಿಂದ ಜನರು ಪರಿತಪಿಸುವಂತಾಗಿದೆ ಎಂದು ದೂರಿದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 5 ಸಾವಿರ ಕೋಟಿ ಜಮೆಯಾಗಿದೆ. ಕಾರ್ಮಿಕ ಇಲಾಖೆಗಳಲ್ಲಿ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳದೇ ಕಾರ್ಮಿಕರ ಸವಲತ್ತುಗಳು ವಿಳಂಭ ಮಾಡಲಾಗುತ್ತಿದೆ. ಕಾರ್ಮಿಕರನ್ನು ಕಡೆಗಣಿಸುತ್ತಿರುವ ಕ್ರಮ ಖಂಡನೀಯ ಎಂದು ಹೇಳಿದ ಅವರು ಮಂಡಳಿ ಕಾರ್ಮಿಕರ ಹೆಸರಲ್ಲಿ ಭೂಮಿ ಖರೀದಿ, ಕಲ್ಯಾಣ ಮಂಟಪಕ್ಕೆ ಅನಗತ್ಯ ಖರ್ಚುಗಳನ್ನು ಮಾಡಲು ಹೊರಟಿದೆ. ಮಂಡಳಿ ಸಂಗ್ರಹಿಸುತ್ತಿರುವ ಸೆಸ್‍ನ್ನು ರದ್ದು ಮಾಡುವ ನಿರ್ಧಾರಕ್ಕೆ ಸರ್ಕಾರ ಕ್ರಮವಹಿಸುತ್ತಿರುವುದರಿಂದ ಸವಲತ್ತುಗಳು ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿಐಟಿಯು ತಾಲೂಕು ಅಧ್ಯಕ್ಷರಾದ ಹೆಚ್. ನರಸಿಂಹ ಬಾಲಕೃಷ್ಣ ಶೆಟ್ಟಿ, ವೆಂಕಟೇಶ ಕೋಣಿ, ನಾಗರತ್ನ ನಾಡ, ಶೀಲಾವತಿ, ಮಹಾಬಲ ವಡೇರ ಹೋಬಳಿ ಮಾತನಾಡಿದರು.

ಸಂಘದ ಅಧ್ಯಕ್ಷರಾದ ಯು. ದಾಸಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್‍ಕಲ್ಲಾಗರ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ತಾಲೂಕಿನ 76 ಘಟಕಗಳಿಂದ 375 ಕಾರ್ಮಿಕರು ತಮ್ಮ ಘಟಕಗಳಿಂದ ಪ್ರತಿನಿಧಿಗಳಾಗಿ ಆಗಮಿಸಿ ಚರ್ಚೆಯಲ್ಲಿ ಭಾಗವಹಿಸಿದ್ದರು.

ಮಹಾಸಭೆಯಲ್ಲಿ ಬಾಕಿ ಇರುವ ಅರ್ಜಿಗಳ ಶೀಘ್ರ ವಿಲೇವಾರಿಗಾಗಿ ಮರಳು ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ನಿವೇಶನ ಮತ್ತು ವಸತಿಗಾಗಿ ಜೈಲ್‍ಭರೋ ಯಶಸ್ವಿಗೊಳಿಸಲು, ಕುಂದಾಪುರ ನಗರದಲ್ಲಿ ಯಕ್ಷಗಾನ ಕಲೆಗೆ ಅನುಮತಿ ನಿರಾಕರಣೆ ವಿರುದ್ಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಶ್ರದ್ಧಾಂಜಲಿ ಠರಾವು ಗಣೇಶಮೊಗವೀರ ಮಂಡಿಸಿದರು. ಸ್ವಾಗತ ಸಂತೋಷಹೆಮ್ಮಾಡಿ ಧನ್ಯವಾದ ವಿಜೇಂದ್ರ ಕೋಣಿ ನೆರವೇರಿಸಿದರು.

ಮಹಾಸಭೆಯು 17 ಜನರನ್ನೊಳಗೊಂಡ ನೂತನ ತಾಲೂಕು ಸಮಿತಿ ಆಯ್ಕೆ ಮಾಡಿತು. ಅಧ್ಯಕ್ಷರಾಗಿ ಯು. ದಾಸಭಂಡಾರಿ, ಉಪಾಧ್ಯಕ್ಷರಾಗಿ ರಾಜೀವಪಡುಕೋಣೆ, ರಾಮಚಂದ್ರನಾವುಡ, ಶ್ರೀನಿವಾಸಪೂಜಾರಿ, ಜನಾರ್ಧನಆಚಾರ್, ಅಲೆಗ್ಸಾಂಡರ್, ಚಿಕ್ಕಯ್ಯಮೊಗವೀರ, ಗಣೇಶತೊಂಡೆಮಕ್ಕಿ, ಪ್ರಧಾನ ಕಾರ್ಯದರ್ಶಿಯಾಗಿ - ಸುರೇಶ್‍ಕಲ್ಲಾಗರ, ಕಾರ್ಯದರ್ಶಿಗಳಾಗಿ – ಗಣೇಶಮೊಗವೀರ, ಸತೀಶ್‍ತೆಕ್ಕಟ್ಟೆ, ವಿಜೇಂದ್ರಕೋಣಿ, ಶ್ರೀಧರಉಪ್ಪುಂದ, ಅರುಣ್‍ಕುಮಾರ್, ರಮೇಶ್‍ಪೂಜಾರಿ, ಕೋಶಾಧಿಕಾರಿ – ಜಗದೀಶ್ ಆಚಾರ್‍ರೊಳಗೊಂಡ 157 ತಾಲೂಕು ಸಮಿತಿ ರಚನೆಗೊಂಡಿತು.

 

-    ಸುರೇಶ್ ಕಲ್ಲಾಗರ್