ಪರೀಕ್ಷಾ ಶುಲ್ಕ ಕಟ್ಟಲು ದಿನಾಂಕ ವಿಸ್ತರಿಸಬೇಕೆಂದು ವಿನಂತಿ

ಸಂಪುಟ: 
10
ಸಂಚಿಕೆ: 
47
Wednesday, 9 November 2016

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಡಿಸೆಂಬರ್-2016ರಲ್ಲಿ ನಡೆಸಲು ಉದ್ದೇಶಿಸಿರುವ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕ ಪಾವತಿಸಲು ದಂಡವಿಲ್ಲದೇ ವಿದ್ಯಾರ್ಥಿಗಳು ಕಾಲೇಜಿಗೆ 07-11-2016ರವರೆಗೆ, ದಂಡವಿಲ್ಲದೇ ಕಾಲೇಜುಗಳು ಕೆ.ಎಸ್.ಎಲ್.ಯುಗೆ 11-11-2016ರವರೆಗೆ, 100ರೂ ದಂಡದೊಂದಿಗೆ ವಿದ್ಯಾರ್ಥಿಗಳು ಕಾಲೇಜಿಗೆ 11-11-2016ರವರೆಗೆ, 100ರೂ ದಂಡದೊಂದಿಗೆ ಕಾಲೇಜುಗಳು ಕೆ.ಎಸ್.ಎಲ್.ಯುಗೆ 14-11-2016ರವರೆಗೆ ಹಾಗೂ 1,500ರೂ. ವಿಶೇಷ ದಂಡದೊಂದಿಗೆ 18-11-2016ರವರೆಗೆ ದಿನಾಂಕವನ್ನು ನಿಗದಿಗೊಳಿಸಿತ್ತು. ಅದರಂತೆಯೇ ವಿದ್ಯಾರ್ಥಿಗಳು ಮತ್ತು ಕಾಲೇಜುಗಳು ಪರೀಕ್ಷಾ ಶುಲ್ಕವನ್ನು ಪಾವತಿಸುತ್ತಿದ್ದರು.

ಆದರೆ ಪ್ರಸ್ತುತ ಕೇಂದ್ರ ಸರ್ಕಾರ 08 ನವೆಂಬರ್ 2016ರ ಮಧ್ಯರಾತ್ರಿಯಿಂದ ದೇಶದಲ್ಲಿ ಚಲಾವಣೆಯಲ್ಲಿರುವ 500 - 1000ರೂ. ಮುಖಬೆಲೆಯ ನೋಟುಗಳು ಅಮಾನ್ಯವಾಗಲಿವೆ ಎಂದು ದಿಡೀರ್ ಘೋಷಣೆ ಮಾಡಿದ್ದಾರೆ. ಜೊತೆಗೆ ನವೆಂಬರ್ 09ರಂದು ಬ್ಯಾಂಕ್ ವ್ಯವಹಾರಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ನವೆಂಬರ್ 9 ಮತ್ತು 10ರಂದು ದೇಶಾದ್ಯಂತ ಎ.ಟಿ.ಎಂ ಸೇವೆ ಸ್ಥಗಿತಗೊಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಕಟ್ಟಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಪರೀಕ್ಷಾ ಶುಲ್ಕ ನಿಗದಿತ ದಿನಾಂಕವನ್ನು ವಿಸ್ತರಿಸಬೇಕೆಂದು ನವೆಂಬರ್ 09ರಂದು ಎಸ್.ಎಫ್.ಐ. ಕರ್ನಾಟಕ ರಾಜ್ಯ ಸಮಿತಿ ಕೆಎಸ್‍ಎಲ್‍ಯು ಉಪಕುಲಪತಿಗಳಿಗೆ ಮನವಿ ಸಲ್ಲಿಸಿದರು.