ಅಕ್ರಮ ಮರಳುಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕಾಗಿ ಮನವಿ

ಸಂಪುಟ: 
10
ಸಂಚಿಕೆ: 
47
Tuesday, 8 November 2016

ಮಂಗಳೂರು ನೇತ್ರಾವತಿ ನದಿ ತೀರದ ಅಡ್ಯಾರ್, ಕಣ್ಣೂರು, ವಳಚ್ಚಿಲ್, ಉಳಿಯಕುದ್ರು, ಹರೇಕಳ, ಇನೋಳಿ ಮುಂತಾದ ನದಿ ದಂಡೆಗಳಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಅದರಲ್ಲೂ ಸರಕಾರದ ನಿಯಮವನ್ನು ಉಲ್ಲಂಘಿಸಿ ಯಂತ್ರೋಪಕರಣಗಳ ಮೂಲಕ ಮರಳುಗಾರಿಕೆ ನಡೆಸುವುದಲ್ಲದೆ, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಮರಳು ಪಟ್ಟಿಯಿಂದ ಮರಳು ತೆಗೆದು ಸಾಗಾಣಿಕೆ ಮಾಡಲು ಅವಕಾಶ ಇದ್ದರೂ ದಿನದ 24 ಗಂಟೆಯೂ ಯಥೇಚ್ಛವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ.

ಇವರ ಅಕ್ರಮಗಳ ಬಗ್ಗೆ ಧ್ವನಿ ಎತ್ತುವವರ ವಿರುದ್ಧ ಹಲ್ಲೆ ಮಾಡುವಂತಹ, ಬೆದರಿಸುವಂತಹ ಕೆಲಸಗಳು ನಡೆಯುತ್ತಿವೆ. ಈ ಹಿಂದೆ ಆರ್‍ಟಿಐ ಕಾರ್ಯಕರ್ತ ಮಾಧವ ಕುಲಾಲ್ ಎಂಬವರನ್ನು ಅಕ್ರಮ ಮರಳುಗಾರಿಕೆ ನಡೆಸುವ ಗೂಂಡಾಗಳು ಕೊಲೆ ಮಾಡಿರುವುದನ್ನು ನೆನಪಿಸಬಹುದು.

ಅಕ್ರಮ ಮರಳುಗಾರಿಕೆ ವಿರುದ್ಧ ಆಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ನವೆಂಬರ್ 08ರಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇವರ ಅಕ್ರಮಗಳಿಗೆ ಸ್ಥಳೀಯ ಪೊಲೀಸರ ಸಹಕಾರವೂ ಕೂಡಾ ಇದೆ ಎಂಬ ಆರೋಪವಿದೆ.

ನಿಯೋಗದಲ್ಲಿ: ಡಿವೈಎಫ್‍ಐ ಜಿಲ್ಲಾಧ್ಯಕ್ಷರಾದ ದಯಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕೋಶಾಧಿಕಾರಿ ಜೀವನ್‍ರಾಜ್ ಕುತ್ತಾರ್, ಸಾದಿಕ್ ಕಣ್ಣೂರು, ನೌಷಾದ್ ಬಾವು, ಉಸ್ಮಾನ್ ಉಪಸ್ಥಿತರಿದ್ದರು.

 

 

ವರದಿ : ಸಂತೋಷ್ ಬಜಾಲ್