ಗುತ್ತಿಗೆಯಾಗಿ ಕೆಲಸ ಮಾಡಬೇಕೆಂಬ ಆದೇಶ ಸರಿಯಲ್ಲ

ಸಂಪುಟ: 
10
ಸಂಚಿಕೆ: 
47
Wednesday, 9 November 2016

ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಿಕೊಂಡು ಬಂದಿರುವ ಈಗಿನ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳನ್ನು ಖಾಯಂ ಮಾಡುವ ಕುರಿತು ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಬೇಕು ಎಂಬ 24-10-2016ರ ಸುತ್ತೋಲೆ ರದ್ದು ಮಾಡುವಂತೆ ಒತ್ತಾಯಿಸಿ ಪಟ್ಟಣ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ನವೆಂಬರ್ 09ರಂದು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಸುಮಾರು 10-20 ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಾ ಬಂದಿದ್ದೇವೆ. ಕೆಲವರು ಮಂಡಲ ಪಂಚಾಯತ ಇದ್ದಾಗಿನಿಂದಲು ಕೆಲಸ ಮಾಡುತ್ತಾ ಬಂದಿದ್ದಾರೆ. ಈಗ ನಮ್ಮ ಗ್ರಾಮ ಪಂಚಾಯತಗಳು “ಪಟ್ಟಣ ಪಂಚಾಯತಿ”ಗಳಾಗಿ ಮೇಲ್ದರ್ಜೆಗೆ ಏರಿವೆ. ಈ ಸಂದರ್ಭದಲ್ಲಿ ಕೆಲವು ಜನ ಸಿಬ್ಬಂದಿಗಳನ್ನು ಮಾತ್ರ ಖಾಯಮಾತಿ ಆದೇಶ ನೀಡಿದ್ದು ಇನ್ನುಳಿದ ಸಿಬ್ಬಂದಿಗಳನ್ನು ಖಾಯಂ ಮಾಡಿರುವುದಿಲ್ಲ, ಈ ಬಗ್ಗೆ ಮೇಲಾಧಿಕಾರಿಗಳಿಗೆ ವಿಚಾರಿಸಿದರೆ ನಿಮ್ಮ ಬಗ್ಗೆ ಪಂಚಾಯತ ಠರಾವು ಇಲ್ಲ, ಜಿಲ್ಲಾ ಪಂಚಾಯತ ಅನುಮೋದನೆ ಇಲ್ಲ, ವಯಸ್ಸು ಆಗಿದೆ, ಶಿಕ್ಷಣ ಇಲ್ಲ ಮುಂತಾದ ಕಾರಣಗಳನ್ನು ನೀಡಿ ಖಾಯಂ ಮಾಡಲಾಗುತ್ತಿಲ್ಲ ಎಂದು ಮುಖಂಡರಾದ ಅಣ್ಣಾರಾಯ ಈಳಿಗೇರಾ ತಿಳಿಸಿದರು.

ಅಕ್ಟೋಬರ್ 24ರ ಸುತ್ತೋಲೆ ರದ್ದು ಮಾಡಬೇಕೆಂದು ಆಗ್ರಹಿಸಿದ ಅವರು ``ಆಡಳಿತದ ಈ ಕ್ರಮ ಸರಿಯಾದುದ್ದಲ್ಲ. ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ಸಿಬ್ಬಂದಿಗಳಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಆದರೆ ಈಗ ನಮ್ಮನ್ನು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಬೇಕೆಂದು ಹೇಳಿರುವ ಪೌರಾಡಳಿತ ಯೋಜನಾ ಅಧಿಕಾರಿಗಳ ಸುತ್ತೋಲೆಯಿಂದ ನಾವುಗಳೆಲ್ಲ ಅಘಾತಗೊಂಡಿದ್ದೇವೆ.

ನಮ್ಮ ಬದುಕನ್ನೆ ಕಸಿದುಕೊಳ್ಳಲು ಹೊರಟಂತಿದೆ. ಮಂಡಲ ಪಂಚಾಯತದಿಂದ ಬಂದಿರುವ ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ ಅನುಮೋದನೆಯ ಅವಶ್ಯಕತೆ ಇಲ್ಲ ಎಂದು ಸರಕಾರದ ಈ ಹಿಂದಿನ ಸುತ್ತೋಲೆ ಹೇಳುತ್ತವೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವೇತನ ಬಟವಡೆ ಮಾಡಬೇಕು. ಯಾರದೋ ತಪ್ಪಿಗೆ ಸಿಬ್ಬಂದಿಗಳಿಗೆ ಶಿಕ್ಷೆಕೊಡುವುದು ತರವಲ್ಲ ಅದರಿಂದ ಸುತ್ತೊಲೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಭೀಮಶಿ ಕಲಾದಗಿ, ಲಕ್ಷ್ಮಣ ಹಂದ್ರಾಳ, ಮಲ್ಲಿಕಾರ್ಜುನ ಹೂಗಾರ, ಎಂ.ಎಸ್.ದೊಡಮನಿ, ಶಾಂತಾಬಾಯಿ ತಳಕೇರಿ, ಅಶೋಕ ಚಲವಾದಿ, ಸಿದ್ರಾಮ ಬಂಗಾರಿ, ಶೋಭಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ಎಪಿಎಂಸಿ ರೈತ ಸಂಘದ ಕಚೇರಿಯಲ್ಲಿ ಸಮಾವೇಶಗೊಂಡಿದ್ದ ಪಟ್ಟಣಪಂಚಾಯಿತಿ ನೌಕರರು ಸಂಘಟನಾ ಸಮಿತಿಯನ್ನು ರಚಿಸಿದರು. ಹಾಗೂ ಅಣ್ಣಾರಾಯ ಈಳಗೇರಿ ಸಂಚಾಲಕರು, ಮಲ್ಲಿಕಾಜುರ್ನ ಹೂಗಾರ ಸಹ ಸಂಚಾಲಕರು, ಎನ್.ಎಸ್. ದೊಡ್ಡಮನಿ 15 ಜನರ ಸಂಘಟನಾ ಸಮಿತಿಯನ್ನು ರಚಿಸಲಾಯಿತು.