ಜಾತಿ ನಿಂದನೆ: ಭಜರಂಗದಳದ ಮುಖಂಡನ ಬಂಧನಕ್ಕೆ ಆಗ್ರಹ

ಸಂಪುಟ: 
10
ಸಂಚಿಕೆ: 
47
Friday, 4 November 2016

ಸೆಪ್ಟೆಂಬರ್ 2 ರಂದು ನಡೆದ ಅಖಿಲ ಭಾರತ ಮುಷ್ಕರ ವೇಳೆ ಮೂಡಬಿದರೆ ಬಳಿ ಬೆಳುವಾಯಿ ಎಂಬಲ್ಲಿ ಸಿಪಿಐ(ಎಂ)ನ ದಲಿತ ಕಾರ್ಯಕರ್ತೆಯರಿಬ್ಬರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಬಜರಂಗದಳದ ಮುಖಂಡ ಸೋಮನಾಥ ಕೋಟ್ಯಾನ್‍ನನ್ನು ಬಂಧಿಸುವಂತೆ ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ನವಂಬರ್ 4 ರಂದು ಮೂಡಬಿದರೆ ಪೋಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಬಜರಂಗದಳದ ಮುಖಂಡ ಸೋಮನಾಥ ಕೋಟ್ಯಾನ್ ದಲಿತ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ್ದಾನೆ. ಆತನ ವಿರುದ್ಧ ಪೋಲೀಸು ಠಾಣೆಯಲ್ಲಿ ದೂರು ದಾಖಲಾದರೂ, ಪೋಲೀಸರು ಆರೋಪಿಯನ್ನು ಬಂಧಿಸದೆ ರಾಜಾರೋಷವಾಗಿ ತಿರುಗಾಡಲು ಬಿಟ್ಟಿದ್ದಾರೆ. ಆದರೆ ಆತನು ನೀಡಿದ ದೂರಿನ ಮೇಲೆ ಸಿಐಟಿಯು ಕಾರ್ಯಕರ್ತರ ತನಿಖೆ ನಡೆಸಿದ್ದಾರೆ. ಪೋಲಿಸರು ಈ ರೀತಿ ಪಕ್ಷಪಾತ ತೋರುವ ಮೂಲಕ ಬಜರಂಗದಳದ ಗೂಂಡಾ ಪ್ರವೃತ್ತಿಗೆ ಸಹಕಾರ ನೀಡುವುದನ್ನು ನಿಲ್ಲಿಸಬೇಕು ಮತ್ತು ಸೋಮನಾಥ ಕೋಟ್ಯಾನ್‍ನನ್ನು ಬಂಧಿಸಬೇಕು ಎಂಬುದಾಗಿ ಸಿಐಟಿಯು ಮೂಡಬಿದರೆ ಘಟಕದ ಅಧ್ಯಕ್ಷೆ ರಮಣಿ ಆಗ್ರಹಿಸಿದರು.

ಸಿಪಿಐ(ಎಂ) ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಹಲ್ಲೆ ಪ್ರಕರಣದ ಆರೋಪಿ ಬಜರಂಗದಳದ ಸೋಮನಾಥ ಕೋಟ್ಯಾನ್‍ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸಿಪಿಐ(ಎಂ) ಮೂಡಬಿದ್ರೆ ವಲಯ ಕಾರ್ಯದರ್ಶಿ ಯಾದವ ಶೆಟ್ಟಿ, ಡಿವೈಎಫ್‍ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ದಲಿತ ಹಕ್ಕುಗಳ ಸಮಿತಿ ದ.ಕ.ಜಿಲ್ಲಾ ಮುಖಂಡ ಲಿಂಗಪ್ಪ ನಂತೂರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.