ಕ್ಯಾಸ್ಟ್ರೋ ಕ್ಯೂಬಾಗೆ ಮಾತ್ರ ಸಿಮೀತವಾಗಿರದೆ ಜಗತ್ತಿನ ಶೋಷಿತರ ಪರವಾಗಿದ್ದರು

Saturday, 10 December 2016

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ "ಫಿಡೆಲ್ ಕ್ಯಾಸ್ಟ್ರೊ ಒಂದು ನೆನಪು" ಕಾರ್ಯಕ್ರಮವನ್ನು ಡಿಸೆಂಬರ್ 09ರಂದು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಸಭೆಯ ಮಾಜಿ ಅಧ್ಯಕ್ಷರು ಮತ್ತು ಸದಸ್ಯರಾದ ಬಿ.ಎಂ. ಮುಬಾರಕ್ ಮಾತನಾಡಿ `ಕ್ಯಾಸ್ಟ್ರೊ ಕೇವಲ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿದ್ದರು. ಅ ಶಕ್ತಿ ಕೇವಲ ಕ್ಯೂಬಾಗೆ ಮಾತ್ರ ಸಿಮೀತವಾಗಿರದೆ ಜಗತ್ತಿನ ಶೋಷಿತ ರಾಷ್ಟ್ರಗಳಿಗೆ, ಶೋಷಿತ ಜನತೆಗೆ ಹೋರಾಟದ ಮತ್ತು ಸ್ವಾಭಿಮಾನದ ಮಾದರಿಯಾಗಿದ್ದವರು. ಅಮೆರಿಕಾದ ಯಾವುದೇ ಬೆದರಿಕೆಗಳಿಗೂ ಹೆದರದೆ ಕ್ಯೂಬಾದ ಜನತೆಗೆ ಜಾಗೃತಿಯನ್ನು ನೀಡಿದ ಫಿಡೆಲ್ ಕ್ಯಾಸ್ಟ್ರೊ ಅಮೇರಿಕಾದ ಆನೇಕ ದಿಗ್ಭಂದನಗಳ ನಡುವೆಯೂ ಕ್ಯೂಬಾವನ್ನು ಸ್ವತಂತ್ರವಾಗಿ ಕಟ್ಟಿದವರು. ವಿಚಾರವಿದ್ದರೆ ಮಾತ್ರ ಶಕ್ತಿಯಾಗಿ ಬೆಳೆಯಲು ಸಾಧ್ಯ. ಕ್ಯಾಸ್ಟ್ರೊ ಒಬ್ಬ ಓದುಗರಾಗಿದ್ದು ವಿಚಾರವಂತ್ತಾರಾಗಿದ್ದರು ಭಾರತದಂತಹ ದೇಶಕ್ಕೆ ಕ್ಯಾಸ್ಟ್ರೊನಂತಹ ವಿಚಾರವಂತ, ಮುತ್ಸದ್ದಿ ನಾಯಕರು ಬೇಕಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಹೋರಾಟಗಾರರು ಮತ್ತು ಸಂಚಿಕೆ ದಿನ ಪತ್ರಿಕೆಯ ಸಂಪಾದಕರೂ ಆದ ಸಿ.ಎಂ. ಮುನಿಯಪ್ಪ ಮಾತನಾಡಿ ಕ್ಯಾಸ್ಟ್ರೊ ಒಬ್ಬ ಕ್ರಾಂತಿಕಾರಿ ಮಾತ್ರವಾಗಿರಲಿಲ್ಲ ಆತ ಒಬ್ಬ ಮಹಾನ್ ಓದುಗರಾಗಿದ್ದರು. ತನ್ನ ದೇಶದ ಜನತೆಗೆ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚು ಆದ್ಯತೆ ನೀಡಿದ್ದರು. ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದ ಕ್ಯಾಸ್ಟ್ರೊ ಜಗತ್ತಿನ ಸಂಗಾತಿಯಾಗಿದ್ದರು ಎಂದರು.

ಪ್ರಸ್ತಾವಿಕವಾಗಿ ಪತ್ರಕರ್ತರಾದ ವಿಶ್ವ ಕುಂದಾಪುರ ಅವರು ಮಾತನಾಡಿದರು, ಕಾರ್ಯಕ್ರಮದಲ್ಲಿ ಹೂಹಳ್ಳಿ ನಾಗರಾಜ, ವಿ ಅಂಬರೀಷ್, ಉಪನ್ಯಾಸಕರಾದ ಅರಿವು ಶಿವಪ್ಪ, ಜೆ.ಜಿ ನಾಗರಾಜ್, ಪಂಡಿತ್ ಮುನಿವೆಂಕಟಪ್ಪ, ವಕೀಲರಾದ ಎಸ್. ಸತೀಶ್, ಸುಬ್ರಹ್ಮಣಿ ಮತ್ತಿತರರಿದ್ದರು.
 

 

 

ಕೃಪೆ  : ವಿ.ಅಂಬರೀಶ್