ಯುವಜನರ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸಲು ಮನವಿ

ಸಂಪುಟ: 
10
ಸಂಚಿಕೆ: 
46
Wednesday, 26 October 2016

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿ.ವೈ.ಎಫ್.ಐ), ಬಳ್ಳಾರಿ ಜಿಲ್ಲೆ, ಹೊಸಪೇಟೆ ತಾಲೂಕು ಸಮಿತಿ ವತಿಯಿಂದ ಯುವಜನರಿಗೆ ಸಂಬಂಧಿಸಿದಂತಹ ಹಾಗೂ ಜನತೆಗೆ ಸಮಸ್ಯೆಗಳ ವಿರುದ್ಧ ತಹಶೀಲ್ದಾರ್ ಕಛೇರಿ ಮುಂಭಾಗ ಅಕ್ಟೋಬರ್ 26ರಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್‍ರವರ ಮೂಲಕ ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷಲಾಡ್‍ರವರಿಗೆ ಮನವಿ ಸಲ್ಲಿಸಿದರು.

ಪ್ರಮುಖವಾಗಿ ಸ್ಥಳೀಯ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕಾಗಿ, ಸ್ವ-ಉದ್ಯೋಗಿಗಳಿಗೆ ಬ್ಯಾಂಕುಗಳಿಂದ ಸರಿಯಾದ ಸಾಲ ಸಿಗುತ್ತಿಲ್ಲ, ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೂ ಮತ್ತು ಇತರೆ ಸಿಬ್ಬಂದಿಗಳನ್ನು ನೇಮಿಸಿ, ಉನ್ನತೀಕರಿಸಬೇಕೆಂದು, ಡೊನೇಷನ್‍ಗೆ ಸಂಬಂಧಿಸಿದಂತೆ ನೇತಾಜಿ ಶಾಲೆಯ ಮೇಲೆ ಕ್ರಮಜರುಗಿಸಬೇಕೆಂದು ಈಗಾಗಲೇ ದೂರು ನೀಡಿದ್ದರೂ ಶಿಸ್ತುಕ್ರಮ ಕೈಗೊಂಡಿಲ್ಲ. ಹೊಸಪೇಟೆಯ ಅಗ್ನಿಶಾಮಕ ಠಾಣೆ ಹಿಂಭಾಗದಲ್ಲಿ ನಿರ್ಮಿಸುತ್ತಿರುವ ಮಹಿಳಾ ಶೌಚಾಲಯವು ಕಳಪೆ ಮಟ್ಟದಲ್ಲಿದ್ದು, ಈ ಕುರಿತು ಕ್ರಮಜರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಐ.ಪಿ.ಎಸ್, ಐ.ಎ.ಎಸ್. ಕೆ.ಎ.ಎಸ್ ಹಾಗೂ ಬ್ಯಾಂಕ್ ಕೊಚಿಂಗ್ ತರಬೇತಿ ಕೇಂದ್ರಗಳನ್ನು ಸರ್ಕಾರ ತಾಲೂಕು ಮಟ್ಟದಲ್ಲಿ ಉಚಿತವಾಗಿ ತರಬೇತಿ ನೀಡಲು ಕೇಂದ್ರಗಳನ್ನು ತೆರೆಯಬೇಕು. ಕಂಪ್ಯೂಟರ್ ಶಿಕ್ಷಣವನ್ನು ನೀಡುವ ನಿರಂತರವಾದ ಕೇಂದ್ರಗಳನ್ನು ಸ್ಥಾಪಿಸಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರಚಾರ ಪಡಿಸಿ ಅರ್ಹರಿಗೆ ನೀಡುವಂತಾಗಬೇಕು ಎಂದು ತಿಳಿಸಿದರು.

ಜೊತೆಗೆ ಕಲಂ 371 (ಜೆ) ಅನುಗುಣವಾಗಿ ಅನುದಾನ ಮತ್ತು ಸೌಲಭ್ಯವನ್ನು ಜಾರಿಗಾಗಿ ಮತ್ತು ವಡ್ಡರಹಳ್ಳಿಯಲ್ಲಿ ಬಸ್ ಸ್ಟಾಂಡ್ ನಿರ್ಮಿಸಬೇಕು. ರಾಜ್ಯದಲ್ಲಿಯೂ ಕೇರಳದ ಮಾದರಿಯಲ್ಲಿ “ಜನತಾಅಂಗಡಿ” ಸ್ಥಾಪಿಸಬೇಕು. ಜೀವಸಂಕುಲ ನಾಶಕ ಕೋಲ್‍ಟಾರ್ `ಇ.ಸಿ.ಪಿ.ಎಲ್ ಡಾಂಬರ್ ಕಾರ್ಖಾನೆ' ನಿಲ್ಲಿಸಬೇಕು. ಹೋರಾಟಗಾರರ ಮೇಲೆ ದಾಖಾಲಾಗಿರುವ ಕೇಸ್‍ನ್ನು ವಾಪಾಸು ಪಡೆಯಬೇಕು ಹಾಗೂ ಕೆಲಸದಿಂದ ವಜಾ ಮಾಡಿರುವವನ್ನು ತಕ್ಷಣವೇ ಕೆಲಸಕ್ಕೆ ಸೇರಿಸಿಕೊಳ್ಳಲು ಜಿಂದಾಲ್ ಕಂಪನಿಗೆ ನಿರ್ದೇಶಿಸಬೇಕು. ಹೆಲ್ಮೆಟ್ ಕಡ್ಡಾಯವನ್ನು ನಗರದ ಒಳಗೆ ಸಡಿಲಗೊಳಿಸಬೇಕು.

ಸರ್ಕಾರ ಉದ್ಯೋಗ ಹಾಗೂ ಬ್ಯಾಕ್‍ಲಾಗ್ ಉದ್ಯೋಗ ಭರ್ತಿಗಾಗಿ, ಎಸ್‍ಸಿಪಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬೇಕೆಂದು, ನಿರುದ್ಯೋಗ ಭತ್ಯೆಗಾಗಿ, ಖಾಸಗೀ ರಂಗದಲ್ಲಿ ಮೀಸಲಾತಿಗಾಗಿ ಸೇರಿದಂತೆ ಜನತೆ ಬೇಡಿಕೆಗಳ ಬಗ್ಗೆ ಈಗಾಗಲೇ ಅನೇಕ ಬಾರಿ ಮನವಿ ಕೊಟ್ಟಿರುತ್ತೇವೆ ಆದರೆ ಇಲ್ಲಿಯವರೆಗೂ ನಮ್ಮ ಮನವಿಗೆ ಸರಿಯಾಗಿ ಸ್ಪÀಂದನೆ ಸಿಕ್ಕಿಲ್ಲ ಮಾತ್ರವಲ್ಲ, ಸಮಸ್ಯೆಗಳು ಮತ್ತು ಬೇಡಿಕೆಗಳು ಇಲ್ಲಿಯವರೆಗೂ ಈಡೇರಿಕೆಯಾಗಿಲ್ಲ ಆದ ಕಾರಣ ಮತ್ತೊಮ್ಮೆ ಪ್ರತಿಭಟನೆ ಮೂಲಕ ಸರ್ಕಾರದ ಗಮನಕ್ಕೆ ತಂದರು.

ನಮ್ಮ ಸಮಸ್ಯೆ ಈಡೇರದಿದ್ದಲ್ಲಿ ಹಂಪಿ ಉತ್ಸವದಿನದಂದು ಮತ್ತೊಮ್ಮೆ ಹೋರಾಟ ಮಾಡಬೇಕಾಗಬಹುದೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಎಸ್‍ಎಫ್‍ಐ ಜಿಲ್ಲಾಧ್ಯಕ್ಷರಾದ ಬಿಸಾಟಿ ಮಹೇಶ್, ತಾಲ್ಲೂಕು ಅಧ್ಯಕ್ಷರಾದ ವಿ.ಸ್ವಾಮಿ, ಕಾರ್ಯದರ್ಶಿ ಕಲ್ಯಾಣಯ್ಯ, ಮುಖಂಡರಾದ ಕೆ.ರಮೇಶ್, ತಿರುಕಪ್ಪ, ಬಿ.ಸೂರ್ಯಕಿರಣ, ಯಲ್ಲಾಪ್ಪ, ಇ.ಮಂಜುನಾಥ, ರಾಜಚಂದ್ರಶೇಖರ್, ಹನುಮಂತ ಮತ್ತಿತರ ಮುಖಂಡರು ಹಾಜರಿದ್ದರು.