ಉಳ್ಳವರಿಗೆ ವರ : ಉಳಿದವರಿಗೆ ಶಾಪ

ಸಂಪುಟ: 
10
ಸಂಚಿಕೆ: 
48
date: 
Sunday, 20 November 2016

ನಮ್ಮ ರಾಜ್ಯದಲ್ಲಿ ಪ್ರತಿ 10 ಸಾವಿರ ಜನರಿಗೆ ಒಂದು ಬ್ಯಾಂಕು ಶಾಖೆಯಿದೆ. ಅದೂ ಅವೆಲ್ಲವೂ ನಗರಗಳಲ್ಲಿ, ದೊಡ್ಡ ಗ್ರಾಮಗಳಲ್ಲಿ ನೆಲೆಗೊಂಡಿವೆ. ಕರ್ನಾಟಕದಲ್ಲಿ 29 ಸಾವಿರ ಹಳ್ಳಿಗಳಿವೆ. ನಮ್ಮ ರಾಜ್ಯದಲ್ಲಿರುವ ಬ್ಯಾಂಕು ಶಾಖೆಗಳ ಸಂಖ್ಯೆ 8500. ಗ್ರಾಮಾಂತರ ಪ್ರದೇಶದ ಎಷ್ಟು ಗ್ರಾಮಗಳಲ್ಲಿ ಬ್ಯಾಂಕುಗಳಿವೆ, ಎಟಿಎಮ್‍ಗಳಿವೆ? ನಮ್ಮಲ್ಲಿ ಎರಡು ಆರ್ಥಿಕತೆಗಳಿದ್ದಂತೆ ಎರಡು ಬಗೆ ಯ ಮಾರುಕಟ್ಟೆಗಳಿವೆ. ಡಿಜಿಟಲ್ ಮಾರುಕಟ್ಟೆಗೆ ಅನಾಣ್ಯೀಕರಣದಿಂದ ಕಿಂಚಿತ್ತೂ ದಕ್ಕೆಯಾಗಿಲ್ಲ. ಇನ್ನೊಂದು ಮಾರುಕಟ್ಟೆಯಿದೆಯಲ್ಲಾ-ಅಸಂಘಟಿತ, ತಳಮಟ್ಟದಲ್ಲಿನ, ಜನಮುಖಿಯಾದ ದೇಶೀ ಮಾರುಕಟ್ಟೆ ಅದು ಅನಾಣ್ಯೀಕರಣದಿಂದ ದಿಕ್ಕೆಟ್ಟು-ಕಂಗೆಟ್ಟು ಹೋಗಿದೆ.

ಕೇಂದ್ರ ಸರ್ಕಾರವು ಘೋಷಿಸಿರುವ ಐನೂರು ಮತ್ತು ಸಾವಿರ ರೂಪಾಯಿ ನೋಟುಗಳ ಅನಾಣ್ಯೀಕರಣ ಕ್ರಮವನ್ನು ಆರಂಭದಲ್ಲಿ ಹೊಗಳದವರೇ ಇಲ್ಲ ಅನ್ನುವಂತಿತ್ತು. ಪೈಪೋಟಿಯಲ್ಲಿ ಕೆಲವು ಜನರು ಸರ್ಕಾರದ ಕ್ರಮವನ್ನು ಶ್ಲಾಘಿಸುತ್ತಿದ್ದವರು ಈಗ ಮರುಆಲೋಚನೆ ಮಾಡತೊಡಗಿದ್ದಾರೆ. ಆ ಶ್ಲಾಘನೆಯಲ್ಲಿ ಸಕಾರಾತ್ಮಕ ಸಂಗತಿಗಳಿದ್ದುದನ್ನು ಅಲ್ಲಗಳೆಯಲು ಬರುವುದಿಲ್ಲ. ಆದರೆ ಕಪ್ಪುಹಣವನ್ನು ಹೊರತೆಗೆಯಲು ಸರ್ಕಾರವು ಅನುಸರಿಸಿದ ಕ್ರಮವು ಎಷ್ಟರ ಮಟ್ಟಿಗೆ ದುಡಿಯುವ ವರ್ಗಕ್ಕೆ ಅನುಕೂಲಕರ ಎಂಬುದನ್ನು ನಾವು ಯೋಚಿಸಬೇಕಾಗಿದೆ. ಕಪ್ಪು ಹಣವನ್ನು ಹೊರ ತೆಗೆಸಲು, ಸಮಾನಾಂತರ ಆರ್ಥಿಕತೆಯನ್ನು ಹತ್ತಿಕ್ಕಲು ಇದೊಂದೇ ದಾರಿಯೇ ಇದ್ದದ್ದು? ಪರ್ಯಾಯ ಮಾರ್ಗಗಳಿರಲಿಲ್ಲವೆ? ಬಡವರು, ದುಡಿಯುವ ವರ್ಗ, ಅಂಚಿನಲ್ಲಿರುವವರು ಮಾತ್ರ ಕಷ್ಟ ಪಡಬೇಕು, ಉಳ್ಳವರು ಕಪ್ಪು ಹಣವನ್ನು ಕೂಡಿಟ್ಟುಕೊಂಡೂ ಅನುಕೂಲ ಪಡೆಯಬೇಕು? ಇದು ಯಾವ ಸೀಮೆಯ ನ್ಯಾಯ? ದುಡಿಯುವ ವರ್ಗ ಅಂದಾಗ ಅದು ಕೇವಲ ನಗರ ಪ್ರದೇಶಗಳಲ್ಲಿನ ಸಂಘಟಿತ ವಲಯದ ಕೆಲಸಗಾರರು ಮಾತ್ರವಲ್ಲ, ನೌಕರಶಾಹಿ ಮಾತ್ರವಲ್ಲ ತಾನೆ! ನಮ್ಮ ಆರ್ಥಿಕತೆಯಲ್ಲಿನ ದುಡಿಮೆಗಾರರಲ್ಲಿ ಶೇ90ರಷ್ಟು ಅಸಂಘಟಿತ ವಲಯಗಳಲ್ಲಿದ್ದಾರೆ, ಗ್ರಾಮಗಳಲ್ಲಿದ್ದಾರೆ, ಕೃಷಿಯಲ್ಲಿದ್ದಾರೆ. ಇವರನ್ನು ‘ದಿನಗೂಲಿ ದುಡಿಮೆಗಾರರು’ ಎಂದು ಕರೆಯಬಹುದು. ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ ದಿನಗೂಲಿ ದುಡಿಮೆಗಾರರ ಸಂಖ್ಯೆ 72 ಲಕ್ಷ. ಅನಾಣ್ಯೀಕರಣವು ಇವರಿಗೆ ಯಾವ ಬಗೆಯ ಭಾಗ್ಯವನ್ನು ಒದಗಿಸಿದೆ ಎಂಬುದನ್ನು ನೋಡುವ ಅಗತ್ಯವಿದೆ. 

ಅನಾಣ್ಯೀಕರಣವನ್ನು ತಾತ್ವಿಕವಾಗಿ ಕಪ್ಪುಹಣದ ಸಮಸ್ಯೆಯನ್ನು ಹೋಗಲಾಡಿಸಲು ಸೂಕ್ತ ಕ್ರಮವೆಂದು ಒಪ್ಪಿಕೊಂಡರೂ ಅದನ್ನು ಅನುಷ್ಟಾನಗೊಳಿಸುತ್ತಿರುವ ರೀತಿಯು ಹೇಗೆ ಉಳಿದವರ ಬದುಕನ್ನು ಹೈರಾಣವಾಗಿಸುತ್ತ್ತಿದೆ ಎಂಬುದನ್ನು ಗಮನಿಸಬೇಕು. ಒಮ್ಮೆ ನೋಟು ಬದಲಾಯಿಸಿಕೊಳ್ಳಲು ಬ್ಯಾಂಕುಗಳ ಮುಂದೆ ಸರದಿ ನಿಂತಿರುವ ಜನರ ವರ್ಗ ಸ್ವರೂಪವನ್ನು ನೋಡಿದರೆ ಅದರ ಸಮಸ್ಯೆ ಅರ್ಥವಾಗುತ್ತದೆ. ಅದರಲ್ಲಿ ಕಪ್ಪುಹಣದ ಮಾಲೀಕರಾರು ಕಾಣುವುದಿಲ್ಲ. ಅಲ್ಲಿ ನಮಗೆ ಹೆಚ್ಚು ಕೂಲಿಕಾರರು, ಕಿರಾಣಿ ವರ್ತಕರು, ವೃದ್ಧರು, ಪಿಂಚಣಿಗಾರರು, ಟ್ಯಾಕ್ಸಿ-ರಿಕ್ಷಾ ಚಾಲಕರು ಕಣ್ಣಿಗೆ ಬೀಳುತ್ತಾರೆ. ಕಪ್ಪುಹಣದ ಪ್ರಭುಗಳು ಏಕೆ ಇಲ್ಲಿ ಸರದಿ ನಿಲ್ಲುತ್ತಿಲ್ಲ! ಅವರಿಗೆ ರೂ. 4000 ತೆಗೆದುಕೊಂಡು ಆಗಬೇಕಾದುದೇನಿದೆ? (ಈಗ ಅದು ರೂ. 4500 ಆಗಿದೆ). ಅವರ ಕಪ್ಪು ಹಣಕ್ಕೆ ಅನಾಣ್ಯೀಕರಣದಿಂದ ದಕ್ಕೆ ಉಂಟಾಗಿರಬಹುದು, ನಷ್ಟವೂ ಆಗಿರಬಹುದು.  ಆದರೆ ಅವರ ದೈನಂದಿನ ಬದುಕು ಹಳಿ ತಪ್ಪಿಲ್ಲ. ಡಿಜಿಟಲ್ ದಾರಿಯಲ್ಲಿ ಅವರು ಸರಾಗವಾಗಿ ಸಾಗುತ್ತಾರೆ ಮತ್ತು ಅವರ ಬಳಿಯಲ್ಲಿ ಬಿಳಿ ಹಣದ ದಾಸ್ತಾನು ಸಾಕಷ್ಟಿರುತ್ತದೆ. ಬರಿ ಬಿಳಿ ಹಣವನ್ನೇ ನಂಬಿದವರ ಮತ್ತು ಗ್ರಾಮೀಣ ಭಾಗದಲ್ಲಿರುವ ಜನರ ಅಳಲನ್ನು ಕೇಳುವವರಿಲ್ಲದಂತಾಗಿದೆ. ನೋಟು ಪರಿವರ್ತನೆಗೆ ಬ್ಯಾಂಕಿನ ಹೆಸರು, ಗುರುತಿನ ಚೀಟಿಯ ಕ್ರಮಸಂಖ್ಯೆ, ಮೊಬೈಲ್ ಸಂಖ್ಯೆ ಇಂಗ್ಲೀಷಿನಲ್ಲಿ ತುಂಬಬೇಕು ಮತ್ತು ಅದಕ್ಕೆ ಗುರುತಿನ ಚೀಟಿಯ ಪ್ರತಿಯನ್ನು ಲಗತ್ತಿಸಬೇಕು. ಸರ್ಕಾರವು ಇದಕ್ಕೆ ಸಂಬಂಧಿಸಿದಂತೆ ಜಾಹಿರಾತನ್ನು ಇಂಗ್ಲೀಷಿನಲ್ಲಿ ನೀಡುತ್ತಿದೆ. ಇದರ ಅರ್ಜಿ ನಮೂನೆಯು ಇಂಗ್ಲೀಷಿನಲ್ಲಿದೆ! ಈ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ರವಷ್ಟೂ ಮುಂಜಾಗರೂಕತೆ ಇಲ್ಲದಿದ್ದರೆ ಹೇಗೆ? 

ದುಡಿಯುವ ಜನರ, ಸಣ್ಣ ವ್ಯಾಪಾರಿಗಳ ಬವಣೆ

ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ 132 ಲಕ್ಷ ಅನಕ್ಷರಸ್ಥರಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ರತಿ 10 ಸಾವಿರ ಜನರಿಗೆ ಒಂದು ಬ್ಯಾಂಕು ಶಾಖೆಯಿದೆ. ಅದೂ ಅವೆಲ್ಲವೂ ನಗರಗಳಲ್ಲಿ, ದೊಡ್ಡ ಗ್ರಾಮಗಳಲ್ಲಿ ನೆಲೆಗೊಂಡಿವೆ. ಕರ್ನಾಟಕದಲ್ಲಿ 29 ಸಾವಿರ ಹಳ್ಳಿಗಳಿವೆ. ನೋಟುಗಳ ಬದಲಾವಣೆಗಾಗಿ ಬ್ಯಾಂಕಿನ ಶಾಖೆಗಳಿರುವ ಗ್ರಾಮ/ನಗರಗಳಿಗೆ ಜನರು ಹೋಗಬೇಕು. ತಾವು ದುಡಿದ ಹಣವನ್ನು ಬಳಸುವುದಕ್ಕೆ ಅವರು ತಮ್ಮದೇ ಹಣ ಖರ್ಚು ಮಾಡಬೇಕು! ಇದು ದುರಂತ. ಅದಕ್ಕೆ ಹೇಳಿದ್ದು: ಅನಾಣ್ಯೀಕರಣ ಉಳ್ಳವರಿಗೆ ವರವಾದರೆ ಉಳಿದವರಿಗೆ ಶಾಪವಾಗಿದೆ. ಅಕ್ರಮಗಳ ಮೂಲಕ ಕಪ್ಪು ಹಣ ಸಂಪಾದನೆ ಮಾಡಿದವರ ಬದುಕು ಸುಗಮವಾಗಿ ನಡೆದಿದೆ. ಕಪ್ಪು ಹಣದ ಒಡೆಯರಾಗಿದ್ದಾಗ ಅವರು ಬದುಕು ವೈಭವದಿಂದ ಕೂಡಿತ್ತು. ಈಗ ಅದಕ್ಕೆ ಕಿಂಚಿತ್ತು ಊನ ಉಂಟಾಗಿರಬಹುದು. ಆದರೆ ತಪ್ಪು ಮಾಡದಿರುವ ದುಡಿಮೆಗಾರರ, ಬಡವರ, ಸಣ್ಣ ವ್ಯಾಪಾರಿಗಳ ಬದುಕು ಅನಾಣ್ಯೀಕರಣದಿಂದ ಹೈರಾಣವಾಗಿದೆ. 

ನಮ್ಮ ರಾಜ್ಯದಲ್ಲಿರುವ ಬ್ಯಾಂಕು ಶಾಖೆಗಳ ಸಂಖ್ಯೆ 8500. ಗ್ರಾಮಾಂತರ ಪ್ರದೇಶದ ಎಷ್ಟು ಗ್ರಾಮಗಳಲ್ಲಿ ಬ್ಯಾಂಕುಗಳಿವೆ, ಎಟಿಎಮ್‍ಗಳಿವೆ? ದಿನಗೂಲಿಕಾರರು ರೂ. 4000 ಪರಿವರ್ತಿಸಲು ಎರಡು-ಮೂರು ದಿನಗಳ ಕೂಲಿಯನ್ನು ತ್ಯಾಗ ಮಾಡಬೇಕು. ಒಮ್ಮೆ ಪಡೆದ ರೂ. 4000 ಖರ್ಚಾದ ಮೇಲೆ ಮತ್ತೆ ಎರಡು-ಮೂರು ದಿನಗಳಲ್ಲಿ ಸರದಿಯಲ್ಲಿ ನಿಲ್ಲಬೇಕು. ಮತ್ತೆ ಕೂಲಿ ಕಳೆದುಕೊಳ್ಳಬೇಕು. ಇದನ್ನು ಸರ್ಕಾರವು ಭವಿಷ್ಯದಲ್ಲಿನ ಲಾಭಕ್ಕಾಗಿ ನಾಗರಿಕರು ವರ್ತಮಾನದಲ್ಲಿ ಮಾಡಬೇಕಾದ ‘ತ್ಯಾಗ’ ಎಂದು ಹೇಳುತ್ತಿದೆ. ಯಾವಾಗಲೂ ಹೀಗೆಯೆ! ತ್ಯಾಗ ಮಾಡಬೇಕಾದವರು, ಬವಣೆ ಪಡಬೇಕಾದವರು, ವರಮಾನದಿಂದ ವಂಚಿತರಾಗಬೇಕಾದವರು ಉಳಿದವರು. ಉಳ್ಳವರಿಗೆ ಇಂತಹ ಕಷ್ಟಗಳನ್ನು ಎದುರಿಸುವ ಪ್ರಮೇಯ ಬರುವುದಿಲ್ಲ. ಸರ್ಕಾರಗಳು ಬಡವರಿಂದ ತ್ಯಾಗವನ್ನು ಬಯಸುತ್ತವೆ. ಆದರೆ ಉಳ್ಳವರಿಗೆ ಎಲ್ಲ ಭಾಗ್ಯವನ್ನು ಒದಗಿಸುತ್ತದೆ. ಬಡವರ ಹೆಸರಿನಲ್ಲಿ ಸುಧಾರಣೆಗಳನ್ನು ತರುತ್ತವೆ. ಈ ಕ್ರಮಗಳು ಬಡವರ ಬದುಕನ್ನು ಸುಧಾರಿಸುವುದಿಲ್ಲ. ಜಾಗತೀಕರಣ, ಖಾಸಗೀಕರಣದಲ್ಲಿಯೂ ನಡೆದದ್ದು ಇದೇ ತಾನೆ!

ದುಡಿಮೆಗಾರರಿಗೆ, ಸಣ್ಣ ವ್ಯಾಪಾರಿಗಳಿಗೆ, ತಲೆಯ ಮೇಲೆ ಹೊತ್ತು ಮಾರಾಟ ಮಾಡುವವರಿಗೆ ಅಗತ್ಯವಾಗಿರುವುದು 50ರ, 100ರ ಮೌಲ್ಯದ 10ರ, 20ರ ಮೌಲ್ಯದ ನೋಟುಗಳು. ಹಾಗಾದರೆ ಎರಡು ಸಾವಿರದ ನೋಟುಗಳು ಯಾರಿಗಾಗಿ ಬಿಡುಗಡೆಗೊಳಿಸಲಾಗಿದೆ? ನಮ್ಮ ದೇಶದಲ್ಲಿ ಚಲಾವಣೆಯಲ್ಲಿರುವ ಸುಮಾರು ರೂ. 17 ಲಕ್ಷ ಕೋಟಿ ಹಣದಲ್ಲಿ ರೂ. 500 ಮತ್ತು ರೂ. 1000 ನೋಟುಗಳ ಪ್ರಮಾಣ ಶೇ.86 ರಷ್ಟಿದೆ. ನಗದನ್ನೇ ಹೆಚ್ಚು ಬಳಸುವ ಸಮಾಜದಲ್ಲಿ ಸಣ್ಣ ಮೌಲ್ಯದ ನೋಟುಗಳಿಗೆ ಬೇಡಿಕೆ ಅಧಿಕ. ಅವು ದುಡಿಮೆಗಾರರಿಗೆ, ಬಡವರಿಗೆ, ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ಅಗತ್ಯ. ಉಳ್ಳವರಿಗೆ ಅನುಕೂಲ ಮಾಡಿಕೊಡಲು ಹೆಚ್ಚಿನ ಮೌಲ್ಯದ ನೋಟುಗಳನ್ನು ಮೊದಲು ಬಿಡುಗಡೆಗೊಳಿಸಿ ಸಣ್ಣ ಮೌಲ್ಯದ ನೋಟುಗಳ ಜನರಿಗೆ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ದೊರೆಯದಂತೆ ಮಾಡಲಾಗಿದೆ. ತಲೆಯ ಮೇಲೆ ಹೊತ್ತು ಮಾರುವವರು, ತಳ್ಳುವ ಗಾಡಿ ವ್ಯಾಪಾರಗಾರರು ಗೃಹಿಣಿಯರಿಗೆ ಸಾಲದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಸಗಟು ಮಾರುಕಟ್ಟೆಯಿಂದ ಸರಕುಗಳನ್ನು ತರಲು ಅವರೆಲ್ಲ ಇನ್ನಿಲ್ಲದ ಬವಣೆ ಪಡುತ್ತಿದ್ದಾರೆ. ವ್ಯಾಪಾರ ನೆಲ ಕಚ್ಚಿ ಬಿಟ್ಟಿದೆ. ಅವರಿಗೆ ಮತ್ತು ಇನ್ನಿತರರಿಗೆ ನಗರ ಸಾರಿಗೆಯಲ್ಲಿ ಓಡಾಡುವುದು ಕಷ್ಟವಾಗಿ ಬಿಟ್ಟಿದೆ.

ಎಷ್ಟು ಜನರ ಬಳಿಯಲ್ಲಿ ಎಟಿಎಮ್ ಕಾರ್ಡುಗಳಿವೆ? 

ಸರ್ಕಾರವು ಎಟಿಎಮ್ ಬಗ್ಗೆ, ಡಿಜಿಟೈಸೇಶನ್ ಬಗ್ಗೆ, ನೆಟ್ ಬ್ಯಾಂಕಿಂಗ್ ಬಗ್ಗೆ ಮಾತನಾಡುತ್ತಿದೆ. ನಮ್ಮ ರಿಸರ್ವ ಬ್ಯಾಂಕಿನ ಗೌರ್ವನರ್ ‘ಜನರು ಡಿಜಿಟೈಸ್ ಆಗಬೇಕು’ ಎಂದು ಹೇಳುತ್ತಿದ್ದಾರೆ. ಇದೆಲ್ಲ ಸರಿ. ಇವೆಲ್ಲ ಹೊಟ್ಟೆ ತುಂಬಿದ ಆರ್ಥಿಕತೆಗೆ ಅನ್ವಯವಾಗುವ ಮಾತು. ಆದರೆ ನಮ್ಮ ದೇಶದಲ್ಲಿ ಹಸಿವಿನ ಆರ್ಥಿಕತೆ ಅನ್ನುವುದೊಂದಿದೆಯಲ್ಲ! ಅಕ್ಷರ ಜಗತ್ತಿದ್ದಂತೆ ಅನಕ್ಷರತೆಯ ಭಾರತವೂ ಇದೆ. ನಮ್ಮ ರಾಜ್ಯದಲ್ಲಿ ಪ್ರತಿ ದಿನ ದುಡಿದರೆ ಮಾತ್ರ ಕೂಳು, ಇಲ್ಲದಿದ್ದರೆ ಉಪವಾಸ ಅನ್ನುವ 72 ಲಕ್ಷ ದಿನಗೂಲಿ ದುಡಿಮೆಗಾರರಿದ್ದಾರೆ. ಅನಾಣ್ಯೀಕರಣವು ಅವರಿಗೆ ಬಿಕ್ಕಟ್ಟು ತಂದಿದೆ. ಅದು ಅಲ್ಪ ಕಾಲಾವಧಿಯದ್ದೇ ಇರಬಹುದು. ಅನಾಣ್ಯೀಕರಣದ ಮೂಲಕ ಯಾರನ್ನು ಶಿಕ್ಷಿಸಬೇಕೆಂದು ಸರ್ಕಾರ ಬಯಸಿತ್ತೊ ಅವರಿಗೆ ಶಿಕ್ಷೆಯಾಗುತ್ತಿಲ್ಲ. ಅವರು ಕಳೆದುಕೊಂಡರೆ ತಮ್ಮ ಹಣ ಕಳೆದುಕೊಳ್ಳುತ್ತಾರೆ. ಅನಾಣ್ಯೀಕರಣದಿಂದ ಶಿಕ್ಷೆಗೆ ಒಳಗಾಗಿರುವವರು ದುಡಿಮೆಗಾರರು, ಬಡವರು, ವಂಚಿತರು, ಗ್ರಾಮಸ್ಥರು, ಅನಕ್ಷರಸ್ಥರು. ಈ ಬಗೆಯ ಜನರ ಇರುವನ್ನು ಸರ್ಕಾರವು ಗಮನಿಸಿದಂತೆ ಕಾಣುವುದಿಲ್ಲ. ಅದೇನಿದ್ದರೂ ಉಳ್ಳವರ ಬಗ್ಗೆ ಚಿಂತಿಸುತ್ತದೆ. ಅವರಿಗೆ ಮಾತ್ರ ತಾನೆ ಧ್ವನಿ ಇರುವುದು!. ಧ್ವನಿ ಇಲ್ಲದವರು ಏನು ಮಾಡಬೇಕು? ವಾಸ್ತವವಾಗಿ ಸಮಾಜದ ಒಂದು ಬಹುದೊಡ್ಡ ಸಮುದಾಯಕ್ಕೆ ಅಕ್ಷರವನ್ನು ನಿಷೇಧಿಸಿದ್ದ ಪರಂಪರೆ ನಮ್ಮದು. ಒಂದು ವರ್ಗಕ್ಕೆ ಊರೊಳಗಿನ ನೀರನ್ನು ನಿಷೇಧಿಸಿದ್ದ ಸಮಾಜ ನಮ್ಮದು. ಇಂದು ಬಡವರಿಗಾಗಿ ಯಾವ ಸುಧಾರಣೆಗಳನ್ನು ಜಾರಿಗೊಳಿಸಲಾಗುತ್ತಿದೆಯೋ ಆ ಸುಧಾರಣೆಗಳು ಉಳ್ಳವರಿಗೆ ವರವಾಗಿದ್ದರೆ ಉಳಿದವರಿಗೆ ಶಾಪವಾಗಿ ಬಿಟ್ಟಿವೆ. 

ಸ್ವಿಸ್ ಬ್ಯಾಂಕ್ ಖಾತೆಯ ಕಪ್ಪು ಹಣ ಏನಾಯಿತು?

ಆಳುವ ಪಕ್ಷದ ಚುನಾವಣೆಯಲ್ಲಿನ ಆಶ್ವಾಸನೆಯು ವಿದೇಶದಲ್ಲಿನ ಕಪ್ಪುಹಣವನ್ನು ತಂದು ಪ್ರತಿ ಭಾರತೀಯರ ಖಾತೆಗೆ ರೂ.15 ಲಕ್ಷ ಜಮಾ ಮಾಡುವುದು ಎಂಬುದಾಗಿತ್ತು. ಅದನ್ನು ಕೈಬಿಡಲಾಗಿದೆ. ಈಗ ಅನಾಣ್ಯೀಕರಣಕ್ಕೆ ಸರ್ಕಾರ ಮುಂದಾಗಿದೆ. ಸರ್ಕಾರವೇ ಪ್ರಕಟಿಸಿರುವಂತೆ ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಅಕ್ರಮವಾಗಿ ಇಟ್ಟಿರುವ ಖಾತೆಗಳ ಸಂಖ್ಯೆ 648. ಅದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿದ್ದು ಕಾಣಲಿಲ್ಲ. ದೇಶದೊಳಗೂ ಕಪ್ಪು ಹಣವಿರುವುದು ಸತ್ಯ. ಅದನ್ನು ಹೊರ ತೆಗೆಸುವುದಕ್ಕೆ ಅನೇಕ ವಿಕಲ್ಪಗಳಿದ್ದವು. ಅನಾಣ್ಯೀಕರಣ ಒಂದೇ ಮಾರ್ಗವಾಗಿರಲಿಲ್ಲ. ಕಪ್ಪುಹಣದ ಪ್ರಭುಗಳು ತಮ್ಮ ಸಂಪತ್ತನ್ನು ಹಣದ ರೂಪದಲ್ಲಿ ಹೆಚ್ಚು ಇಟ್ಟಿರುವುದಿಲ್ಲ. ಅವರು ಅದನ್ನು ಭೂಮಿ, ಅಪಾರ್ಟ್‍ಮೆಂಟುಗಳು, ಒಡವೆ, ಬಂಗಾರ ಮುಂತಾದ ರೂಪದಲ್ಲಿ ಅಡಗಿಸಿಟ್ಟಿರುತ್ತಾರೆ. ಈ ಬಗೆಯ ಅಕ್ರಮಗಳನ್ನು, ಕಪ್ಪುಹಣದ ಉತ್ಪಾದನೆಯನ್ನು, ಐಷಾರಾಮಿ ಬದುಕು ನಡೆಸುತ್ತಿರುವವರನ್ನು (ಉದಾಹರಣೆಗೆ ಬಳ್ಳಾರಿ ರಿಪಬ್ಲಿಕ್ ಜಗತ್ತಿನಲ್ಲಿ ನಡೆಯುತ್ತಿರುವ ವೈಭವೋಪೇತ ಮದುವೆ) ತಡೆಯುವುದಕ್ಕೆ ಪ್ರತಿಯಾಗಿ ದುಡಿಮೆಗಾರರಿಗೆ ಸಂಕಟ ಉಂಟುಮಾಡುವ ಅನಾಣ್ಯೀಕರಣ ಕ್ರಮವನ್ನು ಅನುಸರಿಸುವುದಕ್ಕೆ ಮೊದಲು ಕೇಂದ್ರ ಸರ್ಕಾರವು ಎರಡು ಬಾರಿ ಯೋಚಿಸಬೇಕಾಗಿತ್ತು. 

ಈ ಕ್ರಮವು ಬಡವರಿಗೆ, ದುಡಿಮೆಗಾರರಿಗೆ, ದಿನಗೂಲಿಯನ್ನೇ ಅವಲಂಬಿಸಿರುವವರಿಗೆ, ಪುಟ್ಟ ವ್ಯಾಪಾರಿಗಳಿಗೆ ನೋಟುಗಳ ಪಡೆಯುವುದಕ್ಕೆ ಸಂಬಂಧಿಸಿದಂತೆ ತೊಂದರೆ ಉಂಟು ಮಾಡುವುದಲ್ಲದೆ ಅಲ್ಪಾವಧಿಯಲ್ಲಿ ಅದು ಆರ್ಥಿಕತೆಯಲ್ಲಿ ಡೀಪ್ಲೇಶನ್‍ಗೆ ಮತ್ತು ಬೇಡಿಕೆ ಹಿಂಜರಿತಕ್ಕೆ(ರಿಸೆಶನ್) ಕಾರಣವಾಗಿ ಅವರ ಬದುಕನ್ನು ಮತ್ತಷ್ಟು ಹೈರಾಣವಾಗಿಸಬಹುದು. ಇವೆಲ್ಲದರ ಪರಿಣಾಮವಾಗಿ ಸಮಗ್ರ ಅನುಭೋಗದ ಬೇಡಿಕೆಯಲ್ಲಿ ತೀವ್ರ ಕುಸಿತ ಉಂಟಾಗುತ್ತದೆ. ಇದು ಮುಂದೆ ಉತ್ಪಾದನೆಯಲ್ಲಿ, ಉದ್ಯೋಗದಲ್ಲಿ ಮತ್ತು ಜಿಡಿಪಿಯಲ್ಲಿ ಕುಸಿತವನ್ನು ಉಂಟು ಮಾಡಬಹುದು. ಈಗಾಗಲೆ ಅಧ್ಯಯನಗಳು ಅಂದಾಜು ಮಾಡುತ್ತಿರುವಂತೆ ಅಸಂಘಟಿತ ವಲಯದಲ್ಲಿ ಶೇ.50 ರಿಂದ ಶೇ.90 ರಷ್ಟು ವರಮಾನ ಕುಸಿದಿದೆ. 

ಕಂಗೆಟ್ಟ ದೇಶೀ ಮಾರುಕಟ್ಟೆ

ನಮ್ಮಲ್ಲಿ ಎರಡು ಆರ್ಥಿಕತೆಗಳಿದ್ದಂತೆ ಎರಡು ಬಗೆಯ ಮಾರುಕಟ್ಟೆಗಳಿವೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳ ಪರಿಣಾಮವಾಗಿ ಸಂಘಟಿತವಾದ ರೀತಿಯಲ್ಲಿ ಮತ್ತು ಆಧುನಿಕ ಡಿಜಿಟೈಸ್ ವಿಧಾನದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಾಲುಗಳು, ಮಾರ್ಟ್‍ಗಳು, ಬಿಗ್ ಬಜಾರುಗಳು, ಸೂಪರ್ ಮಾರ್ಕೆಟ್ಟುಗಳಿವೆ. ಇವು ಈಗಾಗಲೆ ಹೇಳಿದಂತಹ ಪುಟ್ಟ ವ್ಯಾಪಾರಿಗಳ, ಚಿಲ್ಲರೆ ವ್ಯಾಪಾರಗಾರರ, ಕಿರಾಣಿ ವರ್ತಕರ ಬದುಕನ್ನು ಮೂರಾಬಟ್ಟೆ ಮಾಡಿವೆ. ಈ ಬಗೆಯ ಡಿಜಿಟಲ್ ಮಾರುಕಟ್ಟೆಗೆ ಅನಾಣ್ಯೀಕರಣದಿಂದ ಕಿಂಚಿತ್ತೂ ದಕ್ಕೆಯಾಗಿಲ್ಲ. ಇನ್ನೊಂದು ಮಾರುಕಟ್ಟೆಯಿದೆಯಲ್ಲಾ-ಅಸಂಘಟಿತ, ತಳಮಟ್ಟದಲ್ಲಿನ, ಜನಮುಖಿಯಾದ ದೇಶೀ ಮಾರುಕಟ್ಟೆ ಅದು ಅನಾಣ್ಯೀಕರಣದಿಂದ ದಿಕ್ಕೆಟ್ಟು-ಕಂಗೆಟ್ಟು ಹೋಗಿದೆ. 

ಮತ್ತೆ ಮತ್ತೆ ನಮ್ಮದು ಉಳ್ಳವರ ಸರ್ಕಾರ, ಉಳ್ಳವರಿಗಾಗಿರುವ ಸರ್ಕಾರ ಮತ್ತು ಉಳ್ಳವರಿಂದಲೇ ರೂಪಿತವಾಗಿರುವ ಸರ್ಕಾರ ಅನ್ನುವುದನ್ನು ಇಂದು ಆಳುವ ಪಕ್ಷವು ಸಾಬೀತು ಪಡಿಸುತ್ತಿದೆ. ಬಡವರ ಆಹಾರಕ್ಕೆ ಅದು ಆಕ್ಷೇಪವನ್ನೆತ್ತುತ್ತಿದೆ. ದೇಶ ಭಾಷೆಗಳ ಬಗ್ಗೆ ಅದಕ್ಕೆ ಅಪಥ್ಯವಿರುವಂತೆ ಕಾಣುತ್ತಿದೆ. ಬಡವರ ಅಸ್ವಚ್ಛತೆಯ ಬಗ್ಗೆ ಅದಕ್ಕೆ ತಿರಸ್ಕಾರವಿದೆ. ಅನೂಚಾನವಾಗಿ ಸ್ವಚ್ಛತೆ ಕಾಯಕ ಮಾಡಿಕೊಂಡು ಬರುತ್ತಿರುವವರಿಗೆ ಮನ್ನಣೆ ನೀಡುವುದಕ್ಕೆ ಪ್ರತಿಯಾಗಿ ಸಿನಿಮಾ ನಟ-ನಟಿಯರಿಗೆ ಅದು ಸ್ವಚ್ಛತೆಯ ರಾಯಭಾರಿ ಸ್ಥಾನಮಾನ ನೀಡಿದೆ. ಇಂದು ದೇಶದಲ್ಲಿ ದಿಡೀರನೆ ಸ್ವಚ್ಛತೆಯ ಕಾರ್ಯಕರ್ತರು ಹುಟ್ಟಿಕೊಳ್ಳುತ್ತಿದ್ದಾರೆ. ಅವರಿಗೆ ಮನ್ನಣೆ ನೀಡಲಾಗುತ್ತಿದೆಯೇ ವಿನಾ ಲಾಗಾಯ್ತಿನಿಂದ ಕಸ ಗುಡಿಸಿಕೊಂಡು ಬಂದಿರುವ ಸಮುದಾಯದ ಬಗ್ಗೆ ಅಲ್ಲ. ಉನ್ನತ ಜಾತಿಯವರು ಸ್ವಚ್ಛ ಕಾಯಕ ಮಾಡಿದರೆ ಅದಕ್ಕೆ ಮನ್ನಣೆ: ಕೆಳವರ್ಗದವರು ಅದೇ ಕೆಲಸವನ್ನು ಮಾಡಿದರೆ ಅದರ ಬಗ್ಗೆ ಔದಾಸೀನ್ಯ-ತಿರÀಸ್ಕಾರ. ಇದಕ್ಕಾಗಿಯೇ ಹೇಳಿದ್ದು ಅನಾಣ್ಯೀಕರಣವು ಉಳ್ಳವರಿಗೆ ವರವಾಗಿದೆ ಮತ್ತು ಉಳಿದವರಿಗೆ ಶಾಪವಾಗಿದೆ. ಅನಾಣ್ಯೀಕರಣವು ಉಳ್ಳವರ ಬದುಕನ್ನು ಹೈರಾಣವಾಗಿಸುವುದಕ್ಕೆ ಪ್ರತಿಯಾಗಿ ಉಳಿದವರ ದೇಹÀದಿಂದ ಬೆವರು, ಕಣ್ಣೀರು, ರಕ್ತ ಹರಿಸುತ್ತಿದೆ.

ಪ್ರೊ. ಟಿ. ಆರ್. ಚಂದ್ರಶೇಖರ