ಆಕ್ರಮಣಕಾರಿ ಕೋಮುವಾದದ ವಿರುದ್ಧ ಎಡಪಕ್ಷಗಳ ಸಮಾವೇಶ

ಸಂಪುಟ: 
10
ಸಂಚಿಕೆ: 
48
Sunday, 20 November 2016

ಆಕ್ರಮಣಕಾರಿ ಕೋಮುವಾದದ ವಿರುದ್ಧ ಸಾಕಷ್ಟು ಪ್ರತಿರೋಧ ಎದ್ದು ಬರಬೇಕಿದೆ. ಪ್ರತಿರೋಧ ಇಲ್ಲದಿರುವುದರಿಂದಲೇ ಅದು ಅಷ್ಟು ಆಕ್ರಮಣಕಾರಿಯಾಗಿದೆ. ನಮ್ಮ ದೇಶ ಸಹನಶೀಲ ದೇಶ, ಕೋಮುವಾದಕ್ಕೆ ಸರ್ಕಾರದಿಂದಲೂ ಕುಮ್ಮಕ್ಕು ಇದೆ ಎಂದು ಹಿರಿಯ ಚಿಂತಕ ಡಾ|. ಜಿ.ರಾಮಕೃಷ್ಣರವರು ಟೀಕಿಸಿದರು.

ಅವರು ನವೆಂಬರ್ 12ರಂದು ಬೆಂಗಳೂರಿನ ಸಚಿವಾಲಯ ಸಭಾಂಗಣದಲ್ಲಿ ಸಿಪಿಐ(ಎಂ), ಸಿಪಿಐ, ಎಸ್‍ಯುಸಿಐ(ಸಿ) ಮತ್ತು ಸಿಪಿಐ(ಎಂ.ಎಲ್) ನೇತೃತ್ವದ ಎಡಪಕ್ಷಗಳು ಜಂಟಿಯಾಗಿ ಹಮ್ಮಿಕೊಂಡಿದ್ದ `ಕರ್ನಾಟಕದಲ್ಲಿ ಆಕ್ರಮಣಕಾರಿ ಕೋಮುವಾದದ ವಿರುದ್ಧ' ರಾಜ್ಯ ಸಮಾವೇಶವನ್ನು ಉದ್ಘಾಟಿಸುತ್ತಾ ಮಾತನಾಡಿದರು. ಸಚಿವಾಲಯ ಸಭಾಂಗಣ ಕಿಕ್ಕಿರಿದು ತುಂಬಿತ್ತು.

ಮುಂದುವರೆದು ಮಾತನಾಡಿದ ಅವರು ``ಕೋಮುವಾದದ ಬಗ್ಗೆ ಪ್ರಸಿದ್ಧ ಇತಿಹಾಸಕಾರ ಬಿಪನ್ ಚಂದ್ರ ರವರ ಪುಸ್ತಕವೊಂದರ ಮರುಮುದ್ರಣ ಮಾಡದಿರಲು ನ್ಯಾಷನಲ್ ಬುಕ್ ಟ್ರಸ್ಟ್ ನಿರ್ಧರಿಸಿದೆ. ಇದಕ್ಕೆ ಸಾವಿರಾರು ಸಂಖ್ಯೆಯಲ್ಲಿರುವ ಚರಿತ್ರೆ ಅಧ್ಯಾಪಕರ ಪ್ರತಿರೋಧ ಅಗತ್ಯವಿದ್ದಷ್ಟು ಪ್ರಬಲವಾಗಿರಲಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ, ಸರ್ಕಾರಿ ನಿರ್ವಹಣೆಯ ಕೇಂದ್ರಗಳಲ್ಲಿ ಕೋಮುವಾದ ವ್ಯಾಪಕವಾಗಿ ಹರಡಿದೆ. ಪ್ರಾಧ್ಯಾಪಕ ವರ್ಗದಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿಲ್ಲ. ಬಾಯಿಗೆ ಬೆಣ್ಣೆ ಹಾಕಿಕೊಂಡು ಕೂತಿದ್ದಾರೆ. ಇಂದು ಅಲ್ಪಸಂಖ್ಯಾತರ ಮೇಲೆ ದಾಳಿಗಳಲ್ಲಿ, ಗೋಮಾತೆ ರಕ್ಷಣೆಯಲ್ಲಿ ತೊಡಗಿದವರು, ಭಾರತ ಮಾತಾಕಿ ಜೈ ಮತ್ತು ಜೈಶ್ರೀರಾಮ್ ಘೋಷಣೆ ಹಾಕುವವರು ದೊಡ್ಡ ದೇಶಭಕ್ತರು. ಇಲ್ಲದಿದ್ದರೆ, ದೇಶದ್ರೋಹಿಗಳು. ಆರ್‍ಎಸ್‍ಎಸ್ ಬಗ್ಗೆ ಮಾತನಾಡುವ ಹಾಗೇ ಇಲ್ಲ.” ಎಂದರು.

ಮತಾಂಧತೆ ಹೆಚ್ಚುತ್ತಿರುವ ಬಗ್ಗೆ ಜನತೆ ತಿಳಿಸಬೇಕು. ಅಚಾರಿಕ, ಅವೈಚಾರಿಕತೆಯ ಅಂಶಗಳು ಹೆಚ್ಚಾಗುತ್ತಿದೆ. ನಮ್ಮದು ವೈವಿದ್ಯಮಯ ಸಂಸ್ಕøತಿ, ಎಲ್ಲರನ್ನೂ ಎಲ್ಲ ರೀತಿಯಲ್ಲೂ ನಾವು ಬೆಳೆಸಿಕೊಳ್ಳಬೇಕು. ಬರೀ ಮಾತುಗಾರಿಕೆ, ಪಾಂಡಿತ್ಯದ ಪ್ರದರ್ಶನ ಮಾತ್ರ ಆಗುತ್ತಿದೆ. ಜನತೆಯ ಮಧ್ಯೆ ಹೋಗಬೇಕು, ಪ್ರಚಾರ ಮಾಡಬೇಕು. ನಮ್ಮ ಕೆಲಸ ಮೂಲಕ ಜನರಿಗೆ ಅರ್ಥ ಆಗುವ ಭಾಷೆಯಲ್ಲಿ ತಿಳಿಸಬೇಕು ಎಂದು ಅವರು ಒತ್ತಿ ಹೇಳಿದರು.

ನಾವು ಎಂದಿಗೂ ಹತಾಶರಾಗಬೇಕಿಲ್ಲ. ಬೌದ್ಧಿಕ ವಲಯಗಳಲ್ಲಿ ಇಂದಿಗೂ ಕೋಮುವಾದ ಪ್ರಧಾನವಾಗಿಲ್ಲ. ಇಂದಿಗೂ ಹಲವೆಡೆ ವಿಚಾರವಂತ ಕಾರ್ಯಕ್ರಮಗಳು ನಡೆಯುತ್ತಿವೆ. ಅಕಾಡೆಮಿಕ್ ಕೇಂದ್ರಗಳಿಂದ ಅವು ಜನರ ಬಳಿಗೆ ತಲುಪಿಸುವ ಕೆಲಸ ನಾವು ಮಾಡಬೇಕು. ನೈಜತೆಯನ್ನು ರೂಢಿಸಿಕೊಳ್ಳಬೇಕು. ನಾಲ್ಕು ಗೋಡೆಯ ಮಧ್ಯೆಯ ಸಭೆಗಳಿಂದ ಹೊರ ಬಂದು, ನಿರಂತರವಾಗಿ ಸಾರ್ವಜನಿಕ ಚರ್ಚೆಗಳಲ್ಲಿ ತೊಡಗಬೇಕಿದೆ'' ಎಂದು ಡಾ. ಜಿ.ರಾಮಕೃಷ್ಣರವರು ತಿಳಿಸಿದರು.

ಹಿಂದುತ್ವದ ಬಗ್ಗೆ ಸಂವಿಧಾನ ಪೀಠ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ರವರು ಮಾತನಾಡಿ `` ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟಿಷ್ ಅಧಿಕಾರಿ ``ಭಾರತದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ರಾಜಕೀಯದಲ್ಲಿ ಧರ್ಮ ಬೆರೆಸಿದರೆ, ಪ್ರಜಾಪ್ರಭುತ್ವಕ್ಕೆ ವಿಷ ಉಣಿಸಿದಂತೆ. ಇತರೆ ಧರ್ಮಗಳು ಅಲ್ಪಸಂಖ್ಯಾತರಾಗಿಯೇ ಉಳಿಯುತ್ತಾರೆ. ಎಂದಿದ್ದರು. ಭಾರತವು ಇಂದು ಜಾತ್ಯಾತೀತ ಸಂವಿಧಾನವನ್ನು ಒಪ್ಪಿಕೊಂಡಿದೆ. ಪ್ರಜಾತಂತ್ರದಲ್ಲಿ ಯಾವ ಸನ್ನಿವೇಶದಲ್ಲೂ ಧರ್ಮ, ಜಾತಿ, ಭಾಷೆ ಬೆರೆಸಬಾರದು. ರಾಮಜನ್ಮಭೂಮಿ-ಬಾಬ್ರಿ ಮಸೀದಿ ಚಳುವಳಿಯ ನಂತರ ಚುನಾವಣಾ ರಾಜಕೀಯದಲ್ಲಿ ನೇರವಾಗಿ ಧರ್ಮದ ಬಳಕೆ ಆಗುತ್ತಿದೆ. ಮಹಾರಾಷ್ಟ್ರದಲ್ಲಿ ಧರ್ಮದ ಆಧಾರದಲ್ಲಿ ಚುನಾವಣೆ ಎದುರಿಸಿದ ಶಿವಸೇನೆ ವಿರುದ್ಧ ದಾವೆಗಳನ್ನು ಹೂಡಲಾಗಿತ್ತು. ಅವರ ವಿರುದ್ಧ ತೀರ್ಪುಗಳೂ ಬಂದಿದ್ದವು.” ಎಂದು ಕೋಮುವಾದಿ ರಾಜಕಾರಣದ ಬಗ್ಗೆ ಮಾತನಾಡುತ್ತಾ ಹೇಳಿದರು.

ನಂತರದಲ್ಲಿ ನ್ಯಾಯಾಂಗದಲ್ಲಿ ಆದ ಕೆಲವು ಪ್ರಮುಖ ಬದಲಾವಣೆಗಳು ಕೋಮುವಾದ ಬಲಗೊಳ್ಳಲು ಕಾರಣವಾಗಿವೆ 1. ನ್ಯಾಯಮೂರ್ತಿಗಳ ನೇಮಕಾತಿ ಕಾರ್ಯಾಂಗದ ವ್ಯಾಪ್ತಿಯಿಂದ ನ್ಯಾಯಾಂಗಕ್ಕೆ ಹಸ್ತಾಂತರವಾಯಿತು. ನ್ಯಾಯಮೂರ್ತಿಗಳೇ, ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಪರಿಸ್ಥಿತಿ ಬಂದಿದೆ. 2. ಆಯೋಧ್ಯೆ ಬಗ್ಗೆ ಬಂದ ತೀರ್ಪುಗಳು: ನ್ಯಾ. ಜೆ.ಎಸ್.ವರ್ಮ ಹಿಂದುತ್ವ ಧರ್ಮವೇ ಅಲ್ಲ, ಜೀವನ ವಿಧಾನ ಎಂದು ಪ್ರತಿಪಾದಿಸಿದರು. ರಾಜಕೀಯದಲ್ಲಿ ಧರ್ಮದ ಬಳಕೆ ಹೆಚ್ಚಾಗುತ್ತಾ ಹೋಯಿತು. ನ್ಯಾಯಾಲಯದ ತೀರ್ಪುಗಳು ಸಹ ರಾಜಕೀಯ ಬದಲಾವಣೆಗೆ ರೂಪ ನೀಡಿತು. ಇದು ಗಂಭೀರವಾಗಿದ್ದು 1996ರ ಏಪ್ರಿಲ್ 16ರಂದು ಜೆ.ಎಸ್.ವರ್ಮರವರು ಹಿಂದುತ್ವದ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್‍ನ ಸಂವಿಧಾನ ಪೀಠಕ್ಕೆ ವರ್ಗ ಮಾಡಿದರು. ಹಿಂದುತ್ವದ ಬಗ್ಗೆ ಅಂತಿಮ ತೀರ್ಪು ಇನ್ನೂ ಬಂದಿಲ್ಲ. ಹಾಗೇಯೇ ಉಳಿದಿದೆ. ಎಡಪಕ್ಷಗಳು ಈ ನ್ಯಾಯಾಂಗ ತೀರ್ಪಿನ ಬದಲಾವಣೆ ಬಗ್ಗೆ ಗಂಭಿರವಾಗಿ ಗಮನ ಹರಿಸಲಿಲ್ಲ. ಇದು ರಾಜಕಾರಣದ ಕೋಮುವಾದೀಕರಣ ತಡೆಯಲು ಮುಖ್ಯ ಎಂದು ಪ್ರೊ. ರವಿವರ್ಮ ಕುಮಾರ್ ಅವರು ಬಲವಾಗಿ ಪ್ರತಿಪಾದಿಸಿದರು. 

ಮೋದಿ ಸರಕಾರ ನ್ಯಾಯಾಂಗ ನೇಮಕ ಬಗ್ಗೆ ತಂದ ಆದೇಶ ದೇಶಕ್ಕೆ ಮಾರಕವಾದದ್ದು. ಚುನಾವಣೆಯಲ್ಲಿ ಕೋಮುವಾದ, ಧರ್ಮದ ಬಳಕೆಗಳು ಇರುವುದರಿಂದ ಅದನ್ನು ತೊಡೆದು ಹಾಕಲು ಸಾಧ್ಯವಾಗುತ್ತಿಲ್ಲ. ಧರ್ಮದ ಹೆಸರಿನಲ್ಲಿ ಆಗುತ್ತಿರುವ ಕೊಲೆಗಳು ಅತಿ ಹೆಚ್ಚು ನಮ್ಮ ದೇಶದಲ್ಲಿದೆ. ದೇಶದ ರಾಜಕೀಯದಲ್ಲಿ ಪ್ರಧಾನವಾಗಿರುವ ಆಳುವ ಪಕ್ಷ ಬಿಜೆಪಿ ಪಕ್ಷದ ಕೋಮುವಾದೀಕರಣದ ವಿರುದ್ಧ ಎಲ್ಲಾ ವಿರೋಧ ಪಕ್ಷಗಳು ಒಂದಾಗಲೇಬೇಕಿದೆ ಎಂದು ಪ್ರೊ. ಕುಮಾರ್ ಕರೆ ನೀಡಿದರು.

ಜಿಲ್ಲಾ ತಾಲೂಕು ಸಮಾವೇಶ ಸಂಘಟಿಸಿ: ಜಿ.ವಿ.ಶ್ರೀರಾಮರೆಡ್ಡಿ

ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಕಾ. ಜಿ.ವಿ.ಶ್ರೀರಾಮರೆಡ್ಡಿರವರು ಮಾತನಾಡಿ ``ಮುಖ್ಯವಾಗಿ ಇಂದು ನವ ಉದಾರೀಕರಣ ಮತ್ತು ಕೋಮುವಾದ ಆಕ್ರಮಣಕಾರಿಯಾಗಿ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದ ನಂತದಲ್ಲಿ ಆಗುತ್ತಿರುವ ಕೋಮು ಭಾವನೆಗಳ ಬೆಳವಣಿಗೆ ಬಗ್ಗೆ ಗಮನಿಸಬಹುದು. ನಮ್ಮ ಈ ಸಭೆ ‘ಆಕ್ರಮಣಕಾರಿ ಕೋಮುವಾದ’ದ ವಿರುದ್ಧ ಎಂದು ಇದ್ದು, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ಬಂದಿದ್ದಾರೆ. ಅವರು ಕೋಮುವಾದದ ಬದಲು ನಾವು ‘ಆಕ್ರಮಣಕಾರಿ’ ಎಂದು ಭಾವಿಸಿದಂತಿದೆ. ಇದು ಕೋಮುವಾದದ ಬಗ್ಗೆ ಕಾಂಗ್ರೆಸ್ ಸರಕಾರದ ಧೋರಣೆಯ ಪ್ರತಿಬಿಂಬ ಇದ್ದಂತಿದೆ” ಎಂದರು.

“ರಾಜ್ಯದ ಕಾಂಗ್ರೆಸ್ ಸರ್ಕಾರ ಕೋಮುವಾದವನ್ನು ನಿರ್ಣಾಯಕವಾಗಿ ಎದುರಿಸಲು ಮುಂದಾಗುತ್ತಿಲ್ಲ. ಆಡಳಿತ ಯಂತ್ರ ಕೈಯಲ್ಲಿದ್ದರೂ ಸಹ ಕೋಮುವಾದ ಹರಡುವಿಕೆ ಹೆಚ್ಚಾಗುತ್ತಲೇ ಇದೆ. ಕಾಂಗ್ರೆಸ್ ಸರ್ಕಾರ ಕೋಮುವಾದ ವಿಚಾರದಲ್ಲಿ ಒಂದೇ ಒಂದು ಕಠಿಣ ಕ್ರಮ ಕೈಗೊಂಡಿಲ್ಲ. ಕರಾವಳಿ, ತುಮಕೂರು, ಬೆಂಗಳೂರು ಇತ್ಯಾದಿ ಕಡೆ ನಡೆದ ಘಟನೆಗಳ ಬಗ್ಗೆ ಸರಕಾರದ ಧೋರಣೆಗಳಿಂದ ಇದನ್ನು ತಿಳಿಯಬಹುದು. ತುಮಕೂರು ವಿದ್ಯಾರ್ಥಿ ಬಂಧನ ಖಂಡಿಸಿ ಮತ್ತು ಕರಾವಳಿಯ ಪ್ರಬಾಕರ್ ಭಟ್ ಬಂಧನ ಆಗಬೇಕೆಂದು ಎರಡು ಬಾರಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ, ಮಾತನಾಡಿದರು. ಯಾವುದೇ ಪ್ರಯೋಜನ ಆಗಲಿಲ್ಲ.” ಎಂದು ಕಾ. ಜಿ.ವಿ.ಎಸ್. ಟೀಕಿಸಿದರು.

“ರಾಜ್ಯದಲ್ಲಿ ಬಿಜೆಪಿ ಈಗಾಗಲೇ ಅಧಿಕಾರದ ಗುಂಗಿನಲ್ಲಿದೆ. ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ಹೊರಟಿದೆ. ಆರ್.ಎಸ್.ಎಸ್. ಅಣತಿಯಂತೆ ಸಂವಿಧಾನದ ಪೀಠಿಕೆಯಲ್ಲಿರುವ ಮೂಲಭೂತ ಆಶಯಗಳನ್ನು ತೆಗೆದು ಹಾಕಲು ಪ್ರಯತ್ನಿಸುತ್ತಿದೆ. ನಾವೆಲ್ಲಾ ಒಟ್ಟುಗೂಡಿ ಹೋರಾಟ ನಡೆಸಬೇಕು. ಸಕಾರಾತ್ಮಕವಾಗಿ ಆಲೋಚಿಸಬೇಕಿದೆ. ಇಂದಿನ ಸಮಾವೇಶ ಉದ್ಘಾಟನಾ ಸಮಾವೇಶವಾಗಿದ್ದು ಡಿಸೆಂಬರ್ ಕೊನೆ ವಾರದ ಹೊತ್ತಿಗೆ ಎಲ್ಲಾ ಜಿಲ್ಲಾ ತಾಲ್ಲೂಕು ಸಮಾವೇಶಗಳನ್ನು ಸಂಘಟಿಸಿ ಕೋಮುವಾದದ ವಿರುದ್ಧ ಪ್ರಬಲವಾದ ಸಂಘಟಿತ ಜಂಟಿ ಹೋರಾಟಕ್ಕೆ ಮುಂದಾಗಲು ತೀರ್ಮಾನಿಸಲಾಗಿದೆ.'' ಎಂದು ವಿವರಿಸಿದರು.

ಪ್ರಬಲ ಸಾಂಸ್ಕೃತಿಕ ಚಳುವಳಿ ರೂಪಿಸಬೇಕು

ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಕಾ. ಪಿ.ವಿ.ಲೋಕೇಶ್ ರವರು ಮಾತನಾಡಿ ``ಕೋಮುವಾದಕ್ಕೆ ಬಲಿಯಾಗಿರುವ ಜನರನ್ನೇ ನಮ್ಮ ವಿರುದ್ಧ ಬಳಸಲಾಗುತ್ತಿದೆ. ನಾವು ಕೆಲಸ ಮಾಡುವ ಕಡೆಗಳಲ್ಲಿ ಕೋಮುವಾದದ ಬಗ್ಗೆ ತಿಳಿಸಬೇಕು. ಗಂಭೀರವಾಗಿರುವ ಬರ ಪರಿಸ್ಥಿತಿ ಬಗ್ಗೆಯೂ ತಿಳಿಸಬೇಕು. ಜನತೆಯಲ್ಲಿ ವರ್ಗ ಜಾಗೃತಿಯನ್ನು ಮೂಡಿಸಬೇಕು. ಕೋಮುವಾದದ ವಿರುದ್ಧ ಹೋರಾಟದಲ್ಲಿ ಜನತೆಯ ಸಮಸ್ಯೆಗಳನ್ನು ತೆಗೆದುಕೊಂಡು ಸಂಘಟಿಸಬೇಕಿದೆ. ಯಶಸ್ವಿ ಸೆ.2 ಮಹಾ ಮುಷ್ಕರ ಮvಯಿತರ ದುಡಿಯುವ ಜನರ ಬೇಡಿಕೆಗಳಿಗೆ ನಿರಂತರವಾಗಿ ಹೋರಾಡುತ್ತಿರುವ ಎಡಪಕ್ಷಗಳ ವಿರುದ್ಧ ಬಲಪಂಥಿಯ ಬುದ್ಧಿಜೀವಿಗಳು, ಮತ್ತು ಆಳುವ ವರ್ಗ ನಿರಂತರವಾದ ಅಪಪ್ರಚಾರವನ್ನು ಕೈಗೊಂಡಿದೆ. ಕೋಮುವಾದದ ವಿರುದ್ಧ ದುಡಿಯುವ ಜನರ ನಡುವೆ ಐಕ್ಯ ಚಳುವಳಿಗೆ ಎಡಪಕ್ಷಗಳು ಮುಂದಾಗಬೇಕು'' ಎಂದು ಕರೆ ನೀಡಿದರು.

ಎಸ್.ಯು.ಸಿ.ಐ.(ಸಿ) ಪಕ್ಷದ ರಾಜ್ಯ ಕಾರ್ಯದರ್ಶಿ ಕಾ. |ಕೆ. ರಾಧಾಕೃಷ್ಣ ಮಾತನಾಡಿ ``ನೋಟಿನ ಸಮಸ್ಯೆ ಇಂದು ದೇಶದಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ನೋಟು ಬದಲಾವಣೆಯಿಂದ ಕಪ್ಪು ಹಣ, ಭ್ರಷ್ಟಾಚಾರ ತೊಡೆದುಹಾಕಲು ಸಾಧ್ಯವಿಲ್ಲ. ಇದು ಸ್ವಪ್ರಚಾರದ ಗೀಳಿನ ಕ್ರಮವಾಗಿದೆ. ಬ್ರಿಟಿಷರ ವಿರುದ್ಧ ಹೋರಾಡದವರು ಇಂದು ದೇಶವನ್ನು ಆಳುತ್ತಿದ್ದಾರೆ. ಕೋಮುವಾದದ ವಿರುದ್ಶ ಪ್ರಬಲ ಸಾಂಸ್ಕøತಿಕ ಚಳುವಳಿ ರೂಪಿಸಬೇಕಿದೆ ಎಂದು ತಿಳಿಸಿದರು.

ಸಿಪಿಐ(ಎಂಎಲ್) ಪಕ್ಷದ ಮುಖಂಡರಾದ ಕಾ. |ಮಾರುತಿ ರವರು ಮಾತನಾಡಿ ``ಆರ್.ಎಸ್.ಎಸ್.ನವರು ಭಾರತ ಮಾತಾಕಿ ಜೈ ಘೋಷಣೆ ಇಟ್ಟುಕೊಂಡು ಹಲವೆಡೆ ಆತಂಕ ಹುಟ್ಟಿಸುತ್ತಿದ್ದಾರೆ. ರಾಮದೇವ್ ಒಮ್ಮೆ ಕಾನೂನು ಇಲ್ಲದಿದ್ದರೆ ಘೋಷಣೆ ಕೂಗದವರ ತಲೆ ಚೆಂಡಾಡುವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾರೆ. ಸಂವಿಧಾನವನ್ನು ರಕ್ಷಣೆ ಮಾಡುವ ಕೇಂದ್ರಗಳು ಇಂದು ಕೋಮುವಾದೀಕರಣಗೊಂಡಿದೆ. ಯಡಿಯೂರಪ್ಪ ಕಾಲದಲ್ಲಿ ದಾಖಲಾದ ಕೋಮುವಾದಿ ಪ್ರಕರಣಗಳನ್ನು ವಜಾ ಮಾಡಲಾಗಿದೆ. ಬಂಡವಾಳ, ಸಂಘಪರಿವಾರ, ಮಠಾಧಿಪತಿಗಳು ಒಂದಾಗಿ ಕೆಲಸ ಮಾಡುತ್ತಿದ್ದಾರೆ.  ಕಾರ್ಮಿಕ ಹೋರಾಟವನ್ನು ಸಂಘಟಿಸಬೇಕಿದೆ. ಅವರ ಒಂದೊಂದು ಅಂಶಗಳನ್ನು ತೆಗೆದುಕೊಳ್ಳಬೇಕಿದೆ. ಎಂದು ತಿಳಿಸಿದರು.

ಕಾರ್ಯಕ್ರಮದ ಮೊದಲಿಗೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾ. ಜಿ.ಎನ್.ನಾಗರಾಜ್‍ರವರು ಕೋಮುವಾದದ ಬೆಳವಣಿಗೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಕೋಮುವಾದವು ವಿರಾಟ್ ಸ್ವರೂಪ ಪಡೆದ ಬಗ್ಗೆ, ಕೋಮುವಾದಿಗಳು ಪ್ರಮುಖವಾಗಿ ವೈಚಾರಿಕತೆ ಮೇಲೆ, ಅಲ್ಪಸಂಖ್ಯಾತ, ದಲಿತರ ಮೇಲೆ, ಎಡಪಂಥೀಯರ ಮೇಲೆ ಮಾಡುತ್ತಿರುವ ನಿರಂತರ ದಾಳಿಗಳ ಬಗ್ಗೆ ಪ್ರಸ್ತಾವನೆ ಮಂಡಿಸಿದರು.

ಪ್ರೊ. ಕುಮಾರ್ ಅವರು ಪ್ರಸ್ತಾವಿಸಿದ ಬಿಜೆಪಿಯೇತರ ಪಕ್ಷಗಳ ಐಕ್ಯತೆಯನ್ನು ಎಡಪಕ್ಷಗಳು ಒಪ್ಪುವುದಿಲ್ಲ. ಕೋಮುವಾದಿ-ವಿರೋಧಿ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷ, ಸಂಘಟನೆ, ಶಕ್ತಿ, ವ್ಯಕ್ತಿಗಳ ಐಕ್ಯತೆ ಅಗತ್ಯ. ಆದರೆ ಕಾಂಗ್ರೆಸ್ ಮತ್ತಿತರ ಬೂಜ್ರ್ವಾ-ಭೂಮಾಲಕ ಪಕ್ಷಗಳು ಧೃಢ ಕೋಮುವಾದಿ-ವಿರೋಧಿ ತಳೆಯುವುದಿಲ್ಲ. ಅವುಗಳನ್ನು ಕೋಮುವಾದಿ-ವಿರೋಧಿ ಹೋರಾಟದಲ್ಲಿ ನೆಚ್ಚಿಕೊಳ್ಳಲು ಸಾಧ್ಯವಿಲ್ಲ ಎಂದು ಕಾ. ವಿಜೆಕೆ ನಾಯರ್ ಅಧ್ಯಕ್ಷೀಯ ಭಾಷಣ ಮಾಡುತ್ತಾ ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಮಂಡಳಿ ರಚಿಸಲಾಯಿತು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾ. ವಿ.ಜೆ.ಕೆ.ನಾಯರ್, ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾ. ಸಿದ್ಧನಗೌಡ ಪಾಟೀಲ್, ಎಸ್.ಯು.ಸಿ.ಐ.(ಸಿ)ನ ಕಾ. ಕೆ.ಉಮಾ, ಸಿಪಿಐ(ಎಂಎಲ್)ನ ಕಾ. ಅಪ್ಪಣ್ಣ ಅಧ್ಯಕ್ಷೀಯ ಮಂಡಳಿಯಲ್ಲಿ ಇದ್ದು ಸಮಾವೇಶವನ್ನು ನಡೆಸಿಕೊಟ್ಟರು.

ವಿನೋದ, ಶ್ರೀರಾಮಪುರ