ಇನ್ನೂ 3 ಬಿಜೆಪಿ ನಾಯಕರಿಗೆ `ಕ್ಲೀನ್‍ಚಿಟ್ ಭಾಗ್ಯ’

ಸಂಪುಟ: 
10
ಸಂಚಿಕೆ: 
47
date: 
Sunday, 13 November 2016
Image: 

ಕಟ್ಟಾ ಸುಬ್ರಮಣ್ಯ ನಾಯ್ಡು, ಶಾಸಕರಾದ ಎಸ್.ಆರ್.ವಿಶ್ವನಾಥ್ ಮತ್ತು ಎಸ್.ಮುನಿರಾಜು ಅವರುಗಳಿಗೆ ಕ್ಲೀನ್ ಚಿಟ್ ನೀಡಿದೆ. ಪ್ರತ್ಯೇಕ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರಿದ್ದ ಏಕಸದಸ್ಯಪೀಠ ಗುರುವಾರ ಈ ತೀರ್ಪು ಪ್ರಕಟಿಸಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಬಿಬಿಎಂಪಿಯ ಮಾಜಿ ಪಾಲಿಕೆ ಸದಸ್ಯ ಎಂ.ಗೋಪಿ ವಿರುದ್ಧದ ಪ್ರಕರಣವನ್ನೂ ನ್ಯಾಯಾಲಯ ರದ್ದುಗೊಳಿಸಿದೆ. ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 7,8,12,13(1)(ಡಿ) ಅಡಿ ಹಾಗೂ ಐಪಿಸಿ 419,420,471, 120ಬಿ ಅಡಿ ಪ್ರಕರಣ ಹೂಡಲಾಗಿತ್ತು. ಅವರು ತಮ್ಮನ್ನು ಆರೋಪ ಪಟ್ಟಿಯಿಂದ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಲೋಕಾಯುಕ್ತ ಕೋರ್ಟ್ 2013ರ ಏ.29 ರಂದು ವಜಾಗೊಳಿಸಿತ್ತು.

ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧದ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನೂ ಸಹ ರದ್ದುಗೊಳಿಸಿ ಆದೇಶ ನೀಡಿದೆ.

ಲೋಕಾಯುಕ್ತ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್ಪಿಪಿ) ಸ್ಥಾನಕ್ಕೆ ವೆಂಕಟೇಶ್ ದಳವಾಯಿ ರಾಜೀನಾಮೆ ನೀಡಿದ್ದಾರೆ. ಕೆಐಎಡಿಬಿ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸದ ಹಿನ್ನೆಲೆಯಲ್ಲಿ ಸರಕಾರ ಮತ್ತು ಲೋಕಾಯುಕ್ತ ಸಂಸ್ಥೆಯ ಕ್ರಮಕ್ಕೆ ಬೇಸತ್ತು ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ. ಕೆಐಎಡಿಬಿ ಹಗರಣದ 3 ನೇ ಆರೋಪಿಯಾಗಿದ್ದ ಎಸ್.ಕೆ.ಶ್ರೀನಿವಾಸ್ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ 2016ರ ಮಾರ್ಚ್‍ನಲ್ಲೇ ರದ್ದುಪಡಿಸಿತ್ತು. ಆದನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುವಂತೆ ವೆಂಕಟೇಶ್ ಲಿಖಿತ ಅಭಿಪ್ರಾಯ ನೀಡಿದ್ದರು. ಆದರೂ ಸರಕಾರ ಹಾಗೂ ಲೋಕಾಯುಕ್ತ ಸಂಸ್ಥೆಗಳು ಮೇಲ್ಮನವಿ ಸಲ್ಲಿಸಿರಲಿಲ್ಲ. ಇದೀಗ ಶ್ರೀನಿವಾಸ್ ಪ್ರಕರಣ ಆಧರಿಸಿ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧದ ಕೇಸನ್ನೂ ಸಹ ಹೈಕೋರ್ಟ್ ರದ್ದು ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದು ಭ್ರಷ್ಟಾಚಾರದ ವಿರುದ್ಧ ಹೋರಾಟದ ಬಗ್ಗೆ ಕಾಂಗ್ರೆಸ್-ಬಿಜೆಪಿ ಪಕ್ಷಗಳ `ಉಭಯ ಸಹಮತ’ದ ಮಾದರಿ. ಬಿಜೆಪಿ-ಕಾಂಗ್ರೆಸ್ ಗಳ ಸೇರಿಯೇ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕದ ಲೋಕಾಯುಕ್ತ ಸಂಸ್ಥೆಯ ಕತ್ತು ಹಿಸುಕಿವೆ. ಕೇಂದ್ರದಲ್ಲಂತೂ ಬಿಜೆಪಿ ಭರವಸೆ ಕೊಟ್ಟ ಲೋಕಪಾಲ್ ಸುದ್ದಿಯೇ ಇಬ್ಬರೂ ಎತ್ತುತ್ತಿಲ್ಲ.