ಟಿಪ್ಪು ಜಯಂತಿ : ಬರಿಯ ಸರಕಾರಿ ಆಚರಣೆ ಸಾಕೆ?

ಸಂಪುಟ: 
10
ಸಂಚಿಕೆ: 
47
date: 
Sunday, 13 November 2016
Image: 

ಟಿಪ್ಪು ಸುಲ್ತಾನ್ ಜಯಂತಿ ವಿವಾದ ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳ ಡಬ್ಬಲ್ ಗೇಮನ್ನು ಬಯಲಿಗೆಳೆದಿದೆ. ಒಂದು ಕಡೆ  ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ ಹಾಗೂ ಆರ್‍ಎಸ್‍ಎಸ್ ಮುಖಂಡರು ಮಂಗಳೂರು, ಮಡಿಕೇರಿ, ಶಿರಸಿ, ಮೈಸೂರು ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದರು. ಶ್ರೀರಂಗಪಟ್ಟಣ ಬಂದ್ ಕರೆ ಕೊಟ್ಟಿದ್ದರು. ಬಿಜೆಪಿ ಸಂಸದರು, ಶಾಸಕರು ಅಧಿಕೃತ ಸಮಾರಂಭಗಳಿಗೆ ಹಾಜರಾಗಲಿಲ್ಲ. ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆ ಸಹ ವಿರೋಧಿಸಿದ್ದರು. ಇನ್ನೊಂದು ಕಡೆ ಟಿಪ್ಪು ಜಯಂತಿಗೆ ಭಾರಿ ವಿರೋ ಧ ವ್ಯಕ್ತಪಡಿಸುತ್ತಿರುವ ಬಿಜೆಪಿಯು ತಾನು ಅಧಿಕಾರದಲ್ಲಿದ್ದ ಅವಧಿಯಲ್ಲಿ ಟಿಪ್ಪು ವೈಭವೀಕರಿಸಿ `ಟಿಪ್ಪು ಸುಲ್ತಾನ್-ಎ ಕ್ರುಸೇಡರ್ ಫಾರ್ ಚೇಂಜ್’ ಎಂಬ ಕೃತಿ ಮುದ್ರಿಸಿರುವುದು ಬೆಳಕಿಗೆ ಬಂತು.  ಕರ್ನಾಟಕ ಗೆಜೆಟಿಯರ್ ಇಲಾಖೆ ಹೊರತಂದಿರುವ ಈ ಪುಸ್ತಕ 2012ರಲ್ಲಿ ಮುದ್ರಣವಾಗಿದೆ. ಇಂಗ್ಲಿಷ್ ಭಾಷೆಯ ಮೂಲ ಕೃತಿಯಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮುನ್ನುಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರ ಮೆಚ್ಚುಗೆಯ ಬರಹವಿದೆ. ತಮ್ಮ ಸಹಿ ಹಾಗೂ ಭಾವಚಿತ್ರ ಇರುವ ಈ ಬರಹಗಳಲ್ಲಿ ಟಿಪ್ಪುವನ್ನು ಇಬ್ಬರೂ ಹಾಡಿ ಹೊಗಳಿದ್ದಾರೆ. ಜಗದೀಶ ಶೆಟ್ಟರು ಅವರು `ಟಿಪ್ಪು ಶ್ರೇಷ್ಠ ಸಮಾಜ ಸುಧಾರಕ, ಮಹಾನ್ ಸೇನಾನಿ, ಪ್ರೇರಕ ಶಕ್ತಿ, ರಾಕೆಟ್ ತಂತ್ರಜ್ಞಾನ ಕಂಡುಹಿಡಿದವ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಯೆಡಿಯೂರಪ್ಪ ಕೆಜೆಪಿ ರಚಿಸಿದಾಗ ಮತ್ತು ಇತರ ಬಿಜೆಪಿ ನಾಯಕರು ಟಿಪ್ಪುವನ್ನು ಸಾರ್ವಜನಿಕವಾಗಿ ಹಾಡಿ ಹೊಗಳಿದ್ದು ಬೆಳಕಿಗೆ ಬಂದು ಬಿಜೆಪಿಯ ರಾಜಕೀಯ ಬಯಲಾಯಿತು.

ಟಿಪ್ಪು ಸುಲ್ತಾನನ ವಿರುದ್ಧ ಬಿಜೆಪಿ/ಆರೆಸ್ಸೆಸ್ ಅಪಪ್ರಚಾರಕ್ಕೆ ಉತ್ತರ ಕೊಡಲು, ಚರಿತ್ರೆ ಗೆ ಅಪಚಾರವಾಗದಂತೆ ನೋಡಿಕೊಳ್ಳಲು ಎಡ ಪ್ರಜಾಸತ್ತಾತ್ಮಕ ಶಕ್ತಿಗಳು ಟಿಪ್ಪು ಜಯಂತಿಯನ್ನು ಬೆಂಬಲಿಸಿದ್ದವು. ಆದರೆ ಅದನ್ನು ಬರಿಯ ಕಾಂಗ್ರೆಸಿನ ಸರಕಾರದ ಆಚರಣೆಗೆ ಮಾತ್ರ ಸೀಮಿತಗೊಳಿಸಬಾರದು ಎಂದು ಹೇಳಿದ್ದವು. ಆದರೆ ಕಾಂಗ್ರೆಸ್ ಸರಕಾರ ಅದನ್ನೇ ಮಾಡಿದೆ. ಬಿಜೆಪಿ/ಆರೆಸ್ಸೆಸ್ ಗಳ ಹಿಂಸಾಚಾರದ ಬೆದರಿಕೆಯ ನೆಪದಲ್ಲಿ ಮೆರವಣಿಗೆ, ಪ್ರತಿಭಟನೆ, ಸಭೆಗಳನ್ನೆಲ್ಲಾ ನಿಷೇಧಿಸಿತು. ಶಾಂತಿಭಂಗವಾಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡಿತು. ಆದರೆ ಟಿಪ್ಪು ಜಯಂತಿ ನಿಜವಾದ ಜನತಾ ಉತ್ಸವ ಆಗುವಂತೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಕೆಲವು ಕಡೆ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಶಾಸಕರೂ, ಸಂಸದರೂ ಗೈರುಹಾಜರಾಗಿದ್ದಾರೆ. ಉದಾಹರಣೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಗೈರಾಗಿದ್ದಾರೆ. ಉಡುಪಿಯಲ್ಲಿ ಸುಮಾರು 20 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಯಿತು. ಜನಪ್ರತಿನಿಧಿಗಳ ಗೈರು ಹಾಜರಿಗೆ ಜಿಲ್ಲಾ ಮುಸ್ಲಿಂ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. `ಜನಪ್ರತಿನಿಧಿಗಳೇ ಕಾರ್ಯಕ್ರಮಕ್ಕೆ ಬರದಿರುವ ಕ್ರಮ ಸರಿಯಲ್ಲ. ಕಾಟಾಚಾರಕ್ಕೆಂದು ಟಿಪ್ಪ್ಪು ಜಯಂತಿ ಆಚರಿಸುವುದು ಬೇಡ’ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಹೇಳಿದ್ದಾರೆ. ಇದು ಹಲವು ಕಾಂಗ್ರೆಸ್ ನಾಯಕರ `ಮೆದು ಹಿಂದುತ್ವ’ ಧೋರಣೆಯನ್ನು ತೋರಿಸುತ್ತದೆ.