ಈ ಖಳ ನಟರ ಸಾವೇ ಅಂತಿಮವಾಗಲೀ

ಸಂಪುಟ: 
10
ಸಂಚಿಕೆ: 
47
date: 
Sunday, 13 November 2016
Image: 

21ನೇ ದಶಕದ ಮಧ್ಯಭಾಗದ ಈ ಸನ್ನಿವೇಶದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಹೊಸ ಹೊಸ ಪ್ರಯೋಗಗಳು ಚಿತ್ರ ರಂಗದಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಿರುವಾಗ ಕನ್ನಡ ಚಲನಚಿತ್ರ ರಂಗದ ಇಬ್ಬರು ಉದಯೋನ್ಮುಖ ಮತ್ತು ಭರವಸೆಯ ಖಳನಟರ ದುರಂತ ಸಾವು ಕೆಲವು ಪ್ರಶ್ನೆಗಳನ್ನು ಮೂಡಿಸಿವೆ.

ಕ್ಲಾಸ್ ಮತ್ತು ಮಾಸ್ ಎಂಬ ಪ್ರೇಕ್ಷಕ ವರ್ಗವನ್ನು “ದೃಷ್ಟಿ”ಸಿರುವ ಇದೇ ರಂಗವು, ಪ್ರೇಕ್ಷಕರು ಬಯಸುತ್ತಿರುವ ಹೊಸತನವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲವೆಂಬುದು ಸೋಜಿಗ. ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಸಂದರ್ಭಲ್ಲಿ ಖಳನಟರಾದ ಉದಯ್ ರಾಘವ್ ಮತ್ತು ಅನಿಲ್ ಸಾಹಸ ಸನ್ನಿವೇಶವನ್ನು ಸೆರೆಹಿಡಿಯುವ ಸನ್ನಿವೇಶದಲ್ಲಿ ದುರಂತ ಘಟಿಸಿ ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಂಡಿದ್ದಾರೆ. ಆದರೆ ಈ ಸಾವುಗಳಿಗೆ ಕೇವಲ ‘ಕಾಲ’ನನ್ನೆ ಗುರಿಯಾಗಿಸಿ ಆಡುತ್ತಿರುವ ಮಾತುಗಳು ಖೇದಕರ ಎಂಬುದೇ ನನ್ನ ಭಾವನೆ. ಇದೇ ಸಮಯದಲ್ಲಿ ನಟ ದುನಿಯಾ ವಿಜಯ್ ರವರು ಕೂಡಾ ಇದ್ದರು ಅವರಿಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದ ಚಿತ್ರತಂಡ ಖಳನಟರ ಜೀವದ ಬಗ್ಗೆ ಯಾವುದೇ ಕ್ರಮವಹಿಸದೇ ಇರುವುದು ಸಹ ಕಲಾವಿದರನ್ನು ಸಿನಿಮಾ ರಂಗವೂ ನೋಡುವ ದೃಷ್ಟಿ ಮತ್ತು ಅದರಲ್ಲೂ ಇರುವ ತಾರತಮ್ಯವನ್ನು ಪುನರುಚ್ಛರಿಸಿದಂತಿದೆ. ಕನ್ನಡ ಸಿನಿಮಾಗಳಲ್ಲಿ ಹಲವಾರು ವರ್ಷಗಳಿಂದ ಸಹ ನಟರಾಗಿ, ಸಾಹಸ ಕಲಾವಿದರಾಗಿ ತಮ್ಮ ವೃತ್ತಿನೆಲೆಯನ್ನು ಕಂಡುಕೊಳ್ಳುತ್ತಿದ್ದ ಇವರುಗಳು ಪ್ರೈಮ್ ಲೈನ್ ನಟರಾದ ಕಾರಣಕ್ಕಾಗಿಯೇ ಅವರ ಸಾವಿನ ಬಗ್ಗೆ ಚಿತ್ರರಂಗ, ಮಾಧ್ಯಮ ವಲಯ ಸೇರಿದಂತೆ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಬಹು ಚರ್ಚೆಗಳು ನಡೆಯುತ್ತಿದೆ. ಅದೇ ಅವರು ಕೇವಲ ಸಾಹಸ ಕಲಾವಿದರಾಗಿದ್ದರೇ ಅಥವ ದಿನಗೂಲಿ ನಟರಾಗಿದ್ದರೆ, ಕೇವಲ ಚಲನ ಚಿತ್ರ ವಾಣಿಜ್ಯ ಮಂಡಳಿಯು ನೀಡುವ ಹಣ ಸಹಾಯದಿಂದಲೇ, ಈ ದುರಂತವನ್ನು ಈ ಘಟನೆ ನಡೆಯಲೇ ಇಲ್ಲ ಎಂಬಂತೆ ಸುಖಾಂತ್ಯ ಕಾಣಿಸುತಿತ್ತು.! 

ತೆರೆಯ ಮೇಲೆ ನಾವು ನೋಡುವ 2 ಗಂಟೆ 30 ನಿಮಿಷದ ಸಿನಿಮಾಗೆ ತಮ್ಮ ಅಮೂಲ್ಯ ಜೀವ ಮತ್ತು ಜೀವನವನ್ನೇ ಮುಡಿಪಾಗಿಟ್ಟು ಕೆಲಸ ಮಾಡುವ ಹಲವಾರು ವಿಭಾಗದ ತಂತ್ರಜ್ಷರು, ಕೆಲಸಗಾರರು ಕೇವಲ ದಿನಗೂಲಿ, ಅರೆ ಕೂಲಿಗೆ ದುಡಿಯುತ್ತಿದ್ದಾರೆ. ಈ ಕಲಾವಿದರ ಜೀವನದ ರಕ್ಷಣೆಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಇದುವರೆಗೂ ವಾಣಿಜ್ಯ ಮಂಡಳಿಗಾಗಲೀ, ಕಾರ್ಮಿಕ ಒಕ್ಕೂಟಕ್ಕಾಗಲೀ ಸಾಧ್ಯವಾಗಿಲ್ಲ. 2 ವರ್ಷಗಳ ಹಿಂದೆ ಇವರ ಮೂಲಭೂತ ಸೌಕರ್ಯಗಳಿಗಾಗಿ ಭಾರೀ ಹೋರಾಟದ ಮುನ್ಸೂಚನೆ ನೀಡಿದ್ದ ಮಂಡಳಿ ಅಧ್ಯಕ್ಷರಾದ ಹಿರಿಯ ನಟ ಅಶೋಕ್ ರವರು ನಂತರದ ದಿನಗಳಲ್ಲಿ ಮೌನವಾಗಿದ್ದು ಅಸಹಜವಲ್ಲ. ಐದು ನಿಮಿಷದ 10 ನಿಮಿಷದ ಸಾಹಸ ದೃಶ್ಯಗಳಿಗಾಗಿ ದಿನದ ಬಾಡಿಗೆಯಲ್ಲಿ ಬಂದು ಅಭಿನಯಿಸುವ ಕಲಾವಿದರು ಅಂತಹ ಸಮಯದಲ್ಲಿ ಅವಘಡಗಳು ಸಂಭವಿಸಿದರೂ ಅವರ ವೈದ್ಯಕೀಯ ವೆಚ್ಚಕ್ಕೆ ಸಾಲ ರೂಪದಲ್ಲಿ ಕನಿಷ್ಟ ಮೊತ್ತವನ್ನು ಪಡೆದು ಗುಣಮುಖರಾದ ನಂತರ ಅದನ್ನು ಅವರೇ ತೀರಿಸುವ ಪರಿಸ್ಥಿತಿಯಿದೆ ಎಂದು ಹಿರಿಯ ಸಾಹಸ ನಿರ್ದೇಶಕರು ವಿವರಿಸುತ್ತಾರೆ. ಇದಕ್ಕೆ ಕಾರಣ ಈ ಕಲಾವಿದರ ಸಂಘದಲ್ಲಿ ಯಾವುದೇ ಮಾರ್ಗದರ್ಶಕ ಸೂತ್ರಗಳನ್ನು ಅಳವಡಿಸಿಕೊಳ್ಳದೇ ಇರುವುದು ಕಾರಣವಾಗಿದೆ. ಜೊತೆಯಲ್ಲಿ ಕಲಾವಿದರಿಗೆ ತಮ್ಮ ಉದೋಗದ ಅಭದ್ರತೆಯ ಕಾರಣವೂ ಅವರನ್ನು ಹೆಚ್ಚಿನ ಪ್ರಶ್ನೆಗಳನ್ನು ಕೇಳಲು ಮತ್ತು ಸಂಘಟನೆಯನ್ನು ಭದ್ರ ಮಾಡಲು ಬಿಡುತ್ತಿಲ್ಲ ಎಂಬುದೇ ಹೇಳಲಾಗದ ಸತ್ಯ ಸಂಗತಿ. 

ಕೇವಲ ಮಾಸ್ ಚಿತ್ರಗಳೇ ಸಿನಿಮಾ ಇಂಡಸ್ಟ್ರಿಯನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಸಮಯದಲ್ಲಿ ಹೊಸ ದಿಕ್ಕನ್ನು ತೋರಿಸಿದ ಮುಂಗಾರು ಮಳೆ, ಚೆಲುವಿನ ಚಿತ್ತಾರ ದಂತಹ ಸಿನಿಮಾಗಳು ಕನ್ನಡ ಸಿನಿ ಪ್ರೇಕ್ಷಕರಿಗೆ ಹೊಸ ಅಲೋಚನೆಯ ಜೊತೆಗೆ ಟ್ರೇಂಡ್ ಸೆಟ್ ಮಾಡಿದ್ದವು. ಅ ಕುರಿತು ಅಲೋಚಿಸದೆ ಸಿನಿಮಾ ರಂಗ ತಮ್ಮ ಹಳೆಯ ಶೈಲಿಯ ‘ಹೊಡಿ-ಬಡಿ’ ಮಾದರಿಯನ್ನು ಅದರಲ್ಲಿ ಹೊಸ-ಹೊಸ ಪ್ರಯೋಗಗಳ ಮೂಲಕ ತಮ್ಮ ತಮ್ಮಲ್ಲೇ ಹೆಣೆದುಕೊಂಡಿರುವ ಅಲಿಖಿತ ಸಂಘರ್ಷವೇ ಇಂತಹ ಹೊಸ ಪ್ರಯೋಗಗಳನ್ನು ನಡೆಸಿ, ತಮ್ಮ ನೆಲೆಯನ್ನು ಭದ್ರಮಾಡಿಕೊಳ್ಳಲು ನಡೆಸುತ್ತಿರುವ ಪ್ರಯತ್ನಗಳೇ ಈ ದುರಂತಕ್ಕೆ ಕಾರಣವಾಗಿರಬಹುದು. 

ಕೇವಲ ಹೊಡಿ-ಬಡಿ ಸಿನಿಮಾಗಳಿಂದ ಮಾತ್ರವೇ ಸಿನಿಪ್ರಿಯರನ್ನು ರಂಜಿಸಲು ಸಾಧ್ಯವೆಂದು ನಂಬಿದ್ದ ನಿರ್ಮಾಪಕ, ನಿರ್ದೇಶಕರಿಗೆ ಸೆಡ್ಡು ಹೊಡೆತಿದ್ದು ಸಾಮಾಜಿಕ ಕಳಕಳಿಯ ಮತ್ತು ಹಳ್ಳಿಸೋಗಡಿನ ಹೊಸ ಪ್ರಯೋಗದ ಚಿತ್ರಗಳು ಅದರಲ್ಲೂ 2015, 2016ರ ವರ್ಷಗಳಲ್ಲಿ ತೆರೆಕಂಡ ರಂಗಿತರಂಗ, ಯು-ಟರ್ನ್, ತಿಥಿ, ಗೋಧಿಬಣ್ಣ ಸಾಧಾರಣ ಮೈಕಟ್ಟು, ಇದೊಳ್ಳೆ ರಾಮಾಯಣ, ರಾಮ ರಾಮ ರೆ ಚಿತ್ರಗಳು ಕೇವಲ ಕಥೆ, ಸಂಭಾಷಣೆಗಳಲ್ಲದೆ, ಸೀಮಿತ ಸ್ಥಳಗಳಲ್ಲಿ, ಸೀಮಿತ ಅವಧಿಯಲ್ಲಿ ಕಡಿಮೆ ವೆಚ್ಚಗಳಲ್ಲಿ ಸಿನಿಮಾಗಳನ್ನು ನಿರ್ಮಿಸಿ ಯಶಸ್ವಿಯಾಗಿರುವ ಉದಾಹಣೆಗಳು ಮುಂದಿವೆ. ಈ ಚಿತ್ರಗಳು ಚಿತ್ರ ವಿಮರ್ಶಕರು, ನಿರ್ಮಾಪಕರು, ನಿರ್ದೇಶಕರಲ್ಲದೇ, ಪ್ರೇಕ್ಷಕರಲ್ಲಿ ಬದಲಾವಣೆಗಳನ್ನು ಮೂಡಿಸಿವೆ. ಇನ್ನಾದರೂ ಕನ್ನಡ ಸಿನಿಮಾ ರಂಗ ತಮ್ಮ ಸಂಪ್ರದಾಯಿಕ ಶೈಲಿಯನ್ನು ಬಿಟ್ಟು ಹೊಸ ದೃಷ್ಟಿಯಲ್ಲಿ ಸಿನಿಮಾರಂಗವನ್ನು ರೂಪಿಸಲು ಸಿದ್ಧರಾಗಬೇಕು. 

ಶಿವು ಹೊಸಹಳ್ಳಿ