500/ 1000 ನೋಟಿನ ಪರದಾಟ

ಸಂಪುಟ: 
10
ಸಂಚಿಕೆ: 
47
date: 
Sunday, 13 November 2016
Image: 

ಹೌದು, ನೀವು ಹೇಳಿದಂತೆ ತುರ್ತುಪರಿಸ್ಥಿತಿ ಉದ್ಭವಿಸಿರುವುದು ಸತ್ಯ. ಆದರೆ ಪ್ರಧಾನಿ ನರೇಂದ್ರ ಮೋದಿ ಕ್ರಮದಿಂದ ಹಳ್ಳಿಯ ಜೀವಗಳು ಬೆಚ್ಚಿ ಬಿದ್ದಿವೆ. ಹಳ್ಳಿಯ ಹಿರಿಯ ಜೀವಗಳು ಕೂಡಿಟ್ಟುಕೊಂಡಿದ್ದ `ಕುಡಿಕೆ ಹೊನ್ನು' ನಲ್ಲಿರುವ 500 ಮತ್ತು 1000 ರೂಪಾಯಿ ನೋಟುಗಳನ್ನು ಬದಲಿಸಿಕೊಳ್ಳುವುದು ಹೇಗೆ? ಕುರಿ, ಕೋಳಿ, ಮೇಕೆ, ಎತ್ತು, ಎಮ್ಮೆ, ಕಡೆಲೆಕಾಯಿ ಹೀಗೆ ಮಾರಾಟ ಮಾಡಿದ್ದರಿಂದ ಬಂದ ಹಣದಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿರುವ ನೋಟುಗಳು ಇದ್ದರೆ ಅವುಗಳನ್ನು ಬದಲಾವಣೆ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಕೂಲಿ ಕಾರ್ಮಿಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಒಂದು ದಿನ ನೋಟು ಬದಲಾವಣೆಗಾಗಿ ಹೋಬಳಿ, ಪಟ್ಟಣ/ನಗರಗಳಿಗೆ ಹೋದರೆ ಆ ದಿನದ ಕೂಲಿ, ಆ ದಿನದ ಹೊಲದ ಕೆಲಸಗಳು ನಿಂತು ಹೋಗುತ್ತವೆ.

ಅಷ್ಟೇ ಅಲ್ಲ; ದೇಶದ ಶೇಕಡ ಅರ್ಧಕ್ಕೂ ಹೆಚ್ಚು ಕುಟುಂಬಗಳು ಬ್ಯಾಂಕುಗಳಲ್ಲಿ ಖಾತೆ ಹೊಂದಿಲ್ಲ. ಎಷ್ಟೋ ಮಂದಿ ವೃದ್ದರು ಹಳ್ಳಿಗಳಲ್ಲಿ ಇದ್ದಾರೆ. ಅವರು ಪಟ್ಟಣಗಳಿಗೆ ಹೋಗಿ ಬರಲು ಸಾಧ್ಯವಿಲ್ಲ. ಒಂಟಿ ಮಹಿಳೆಯರು, ವಿಧವೆಯರು, ಅಕ್ಷರ ಜ್ಞಾನ ಇಲ್ಲದೆ ಅದೆಷ್ಟೋ ಮಂದಿ ಬ್ಯಾಂಕು, ಪೋಸ್ಟಾಫಿಸುಗಳ ಮುಖವನ್ನೇ ನೋಡಿಲ್ಲ. ಇವರೆಲ್ಲರೂ ಒಂದೆರಡು ನೋಟು ಬದಲಾವಣೆಗೆ ಇಡೀ ದಿನ ಕಾಯಬೇಕಾಗಿ ಬರಬಹುದು. ನವೆಂಬರ್ 11/12ರಂದು ಇದ್ದ ಬದ್ದ ಬ್ಯಾಂಕು ಪೋಸ್ಟಾಫಿಸುಗಳ ಮುಂದೆ ಮೈಲುದ್ದದ ಕ್ಯೂಗಳಿದ್ದವು. ಇದು ಹಲವು ದಿನಗಳ ಕಾಲ ಮುಂದುವರೆಯಬಹುದು.

ಇನ್ನು 70 ವರ್ಷ ಮೇಲ್ಪಟ್ಟ ಪಿಂಚಣಿದಾರರು ಹಳ್ಳಿಗಳಲ್ಲಿ ವಾಸವಾಗಿದ್ದರೆ, ಅವರು ಇಡೀ ಪಿಂಚಣಿ ಹಣವನ್ನು ಒಂದೇ ಬಾರಿಗೆ ಕೊಂಡೊಯ್ದಿರುತ್ತಾರೆ. ಪದೇಪದೇ ಪಟ್ಟಣದ ಬ್ಯಾಂಕಿಗೆ ಹೋಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹೀಗೆ ಮಾಡಿರುತ್ತಾರೆ. ಕಾರಣ ದೇಹಕ್ಕೆ ಆಯಾಸವಾಗಬಹುದು. ಮಂಡಿ ನೋವು ಬರಬಹುದು. ಓಡಾಟದಿಂದ ದೇಹಾಯಾಸವಾಗಬಹುದು ಎಂಬ ಉದ್ದೇಶದಿಂದ ಹೀಗೆ ಮಾಡಿರುತ್ತಾರೆ. ಇಂಥ ವೃದ್ಧರಿಗೂ ತೊಂದರೆಯಾಗುತ್ತದೆ.

ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಕೂಲಿ ಕಾರ್ಮಿಕರು ಕೇಲಸ ಬಿಟ್ಟು ಬ್ಯಾಂಕುಗಳು, ಪೋಸ್ಟಾಫೀಸುಗಳಿಗೆ ತಿರುಗುತ್ತಾ ಕುಳಿತರೆ ಜೀವನ ಸಾಗಿಸುವುದು ಹೇಗೆ? ಹೆಣ್ಣು ಮಗಳ ಮದುವೆ, ಮಗನ ಮದುವೆ, ಮೇಕೆ, ಕುರಿ ಖರೀದಿಸಲು, ನಿತ್ಯದ ವ್ಯವಹಾರ ಮಾಡಲು `ಒಂದಿಷ್ಟು' ಹಣ ಇಟ್ಟುಕೊಂಡಿರುವವರು ಏನು ಮಾಡಬೇಕು?

- ಕೆ.ಇ. ಸಿದ್ದಯ್ಯ