ಅರಣ್ಯ ಅತಿಕ್ರಮಣದಾರರ ಸಭೆ

ಸಂಪುಟ: 
10
ಸಂಚಿಕೆ: 
47
Sunday, 13 November 2016

ಹೊಸ ಹೊಸ ಶರತ್ತುಗಳನ್ನು ವಿಧಿಸಿ ಅರಣ್ಯ ಅತಿಕ್ರಮಣ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿರುವ ಸರಕಾರದ ಧೋರಣೆ ವಿರುದ್ಧ ನವೆಂಬರ್ 18ರಂದು ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲೂ ‘ಜೈಲ್ ಭರೋ’ ಚಳುವಳಿಗೆ ಮುಂದಾಗಬೇಕೆಂದು ತಾಲೂಕ ಮಟ್ಟದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಘೋಷಿಸಲಾಯಿತು. ನವೆಂಬರ್ 07ರಂದು ಕೆರೆಕೋಣದ ಸಹಯಾನ ಸಭಾ ಭವನದಲ್ಲಿ ಸಭೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಂತಾರಾಮ ನಾಯಕರವರು ``ಸರ್ಕಾರದ ಅಧಿಕಾರಿಗಳು 1 ಗುಂಟೆ, 2 ಗುಂಟೆ ಹಿಡುವಳಿ ಹೊಂದಿದ್ದರೂ ಅರ್ಜಿ ತಿರಸ್ಕರಿಸುತ್ತಿದ್ದಾರೆ. 75 ವರ್ಷದ ದಾಖಲೆ ಇಲ್ಲ ಎಂದು ಅರ್ಜಿ ತಿರಸ್ಕರಿಸಿ, ಹಿರಿಯ ನಾಗರಿಕರ ಹೇಳಿಕೆ ಮತ್ತು ಅರಣ್ಯ ಹಕ್ಕು ಸಮಿತಿ ಅಭಿಪ್ರಾಯಗಳಿಗೆ ಮಾನ್ಯ ಮಾಡುತ್ತಿಲ್ಲ. ಗ್ರಾಮ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಲೆಕ್ಕಿಸದೆ ಅತಿಕ್ರಮಣ ಅರ್ಜಿಗಳನ್ನು ಸಾವಿರ ಸಾವಿರ ಸಂಖ್ಯೆಯಲ್ಲಿ ತಿರಸ್ಕರಿಸುತ್ತಿದ್ದು, ಹಲವಾರು ದಶಕಗಳಿಂದ ಭೂಮಿ ಸಾಗುವಳಿ ಮಾಡಿ, ಮನೆ ಕಟ್ಟಿಕೊಂಡು ಜೀವಿಸುತ್ತಿರುವ ರೈತಾಪಿ ಜನತೆ ತೀವೃ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಂತ್ರಿ ಕಾಗೋಡ ತಿಮ್ಮಪ್ಪನವರು ಹೇಳುತ್ತಿರುವುದು ಒಂದು, ವಾಸ್ತವವಾಗಿ ನಡೆಯುವುದೇ ಬೇರೆ ಆಗಿದೆ. ಹಾಗಾಗಿ ಉಗ್ರ ಚಳುವಳಿ ನಡೆಸುವ ಅನಿವಾರ್ಯತೆ ಬಂದಿದೆ'' ಎಂದರು.

ಸಭೆಯಲ್ಲಿ ಕಾರ್ಮಿಕ ಮುಖಂಡರಾದ ಯಮುನಾ ಗಾಂವಕರ ಮಾತನಾಡಿ ``2005ರ ವರೆಗಿನ ಎಲ್ಲಾ ಅರಣ್ಯ ಅತಿಕ್ರಮಣ ಮಂಜೂರಿ ಮಾಡಬೇಕೆಂದು ಒತ್ತಾಯಿಸಿ ಜೈಲ್‍ಭರೋ ಹೋರಾಟಕ್ಕೆ ಮುಂದಾಗಬೇಕೆಂದು'' ಕರೆ ನೀಡಿದರು.

ಸಿ.ಐ.ಟಿ.ಯು. ಜಿಲ್ಲಾಧ್ಯಕ್ಷ ತಿಲಕ ಗೌಡ ಮಾತನಾಡಿ ಕಾರ್ಮಿಕರು ಸಹ ಈ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕ ಸಮಿತಿ ಕಾರ್ಯದರ್ಶಿ ಗಣೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆ ಮೇಲೆ ಗಜಾನನ ನಾಯ್ಕ, ಸುಬ್ಬು ಹೆಗಡೆ, ನಾರಾಯಣ ಶೆಟ್ಟಿ, ಮಹಾಬಲ ನಾಯ್ಕ ಮುಂತಾದವರು ಹಾಜರಿದ್ದರು.