ಎಲ್ಲೆಡೆ ಅಕ್ಟೋಬರ್ ಕ್ರಾಂತಿ ಶತಮಾನೋತ್ಸವ

ಸಂಪುಟ: 
10
ಸಂಚಿಕೆ: 
47
Sunday, 13 November 2016

‘ಕ್ರಾಂತಿಯ ಸಾಕಾರಕ್ಕೆ ಪಣ’ 

ಕಲಬುರಗಿ : 

`ನವ ಉದಾರವಾದಿ ಆರ್ಥಿಕ ನೀತಿಯು ಬಂಡವಾಳಶಾಹಿಗಳ ಪರವಾಗಿದೆ. ಇದರಿಂದಾಗಿಯೇ ಜಗತ್ತಿನಲ್ಲಿ ಶೇ.1ರಷ್ಟು ಜನರು ಮಾತ್ರ ಅತ್ಯಂತ ಶ್ರೀಮಂತರಾಗಿದ್ದು, ಕಾರ್ಮಿಕರ ಸ್ಥಿತಿ ಶೋಚನೀಯವಾಗುತ್ತಿದೆ' ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)ದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ||ವಿ.ಜೆ.ಕೆ.ನಾಯರ್‍ರವರು ಹೇಳಿದರು.

ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಕಲಬುರಗಿ ಜಿಲ್ಲಾ ಸಮಿತಿಯಿಂದ ಅಕ್ಟೋಬರ್ 07ರಂದು ನಗರದ ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ `ಅಕ್ಟೋಬರ್ ಕ್ರಾಂತಿ' ಶತಮಾನೋತ್ಸವ ವರ್ಷಾಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ನಮ್ಮ ದೇಶದಲ್ಲಿ ಹೊಸ ಉದಾರವಾದಿ ಆರ್ಥಿಕ ನೀತಿ ಜಾರಿಯಾಗಿ 25 ವರ್ಷಗಳಾಗಿದ್ದು, ಕಾರ್ಮಿಕರ ವೇತನ ಕುಸಿಯುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದರು. 

`ಬಂಡವಾಳಶಾಹಿ ವ್ಯವಸ್ಥೆಗೆ ಸಮಾಜವಾದವೇ ಪರ್ಯಾಯ ಎಂಬ ಘೋಷಣೆ ಜಾಗತಿಕವಾಗಿ ಬಲ ಪಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲ ಉತ್ಪಾದನಾ ಸಾಧನಗಳು ಮತ್ತು ವಿತರಣಾ ವ್ಯವಸ್ಥೆಯನ್ನು ಸಾಮಾಜಿಕರಣಗೊಳಿಸಿದರೆ ಕಾರ್ಮಿಕರ ಶೋಷಣೆ ತಡೆ ಸಾಧ್ಯ ಎಂಬುದು ನಮ್ಮ ಪಕ್ಷದ ಅಚಲ ವಿಶ್ವಾಸ' ಎಂದರು. `ಅಕ್ಟೋಬರ್ ಕ್ರಾಂತಿ ಶತಮಾನೋತ್ಸವ'ವನ್ನು ಇಡೀ ವರ್ಷ ಆಚರಿಸುವ ಮೂಲಕ ರಾಷ್ಟ್ರದಲ್ಲಿಯೂ ಈ ಕ್ರಾಂತಿಯ ಸಾಕಾರಕ್ಕೆ ಪಣತೊಡಲಾಗಿದೆ. ಎಂದು ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಪಾಂಡುರಂಗ, ಅಶೋಕ ಮ್ಯಾಗೇರಿ, ಸಿದ್ಧಲಿಂಗಯ್ಯಸ್ವಾಮಿ ಯಂಪಳ್ಳಿ, ಗಂಗಮ್ಮ ಬಿರಾದಾರ ಇದ್ದರು.

ವೈಚಾರಿಕ-ಸಾಂಸ್ಕೃತಿಕವಾಗಿ ಆಚರಿಸಲು ಚಾಲನೆ

ಕಾರವಾರ: 1917ರ ನವೆಂಬರ್ 7ರಂದು ಪ್ರಥಮ ಬಾರಿಗೆ ದುಡಿಯುವ ಜನತೆಯ ಕೈಗೆ ಅಧಿಕಾರವನ್ನು ತಂದಿತ್ತ ಸಮಾಜವಾದಿ ಕ್ರಾಂತಿಯ ಶತಮಾನೋತ್ಸವವನ್ನು ಉತ್ತರ ಕನ್ನಡ ಜಿಲ್ಲೆಯ ಸಿಐಟಿಯು ಕಾರವಾರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ನವೆಂಬರ್ 07ರಂದು ವಿಭಿನ್ನವಾಗಿ ಆಚರಿಸಿತು.

ಒಡಿಶಾದ ಪುರಿಯಲ್ಲಿ ಇದೇ 26 ರಿಂದ 30ರವರೆಗೆ ಸಿಐಟಿಯು ರಾಷ್ಟ್ರ ಸಮ್ಮೇಳನ ನಡೆಯಲಿದ್ದು, ಇದರ ಯಶಸ್ಸನ್ನು ಹಾರೈಸಿ ನಗರದ ಸಿಐಟಿಯು ಕಛೇರಿ ಮುಂಭಾಗ ಸಂಘಟನೆಯ ಬಾವುಟವನ್ನು ಪೌರಕಾರ್ಮಿಕರ ಜಿಲ್ಲಾ ಮುಖಂಡರಾದ ರಮೇಶಬಾಬು ಆರೋಹಣ ಮಾಡಿದರು. ಶತಮಾನೋತ್ಸವದ ನೆನಪಿನಲ್ಲಿ ಸಿಐಟಿಯು ಕಾರವಾರದಲ್ಲಿ ಪ್ರತಿ ತಿಂಗಳು ಸಂಘಟಿಸುವ ವೈಚಾರಿಕ - ಸಾಂಸ್ಕೃತಿಕ ಕೆಲಸಕ್ಕೆ ಹಿರಿಯ ರಂಗಕರ್ಮಿ ಕಿರಣ ಭಟ್ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಂಕಷ್ಟದಿಂದ ಹೊರಬರಲು ಜನರು ಹೋರಾಟದ ಹಾದಿ ಹಿಡಿದಿದ್ದಾರೆ. ಇದಕ್ಕೆ ಮೊದಲ ಮಹಾಯುದ್ಧದ ಅಂತ್ಯದಲ್ಲಿ ಜನತೆಯ ಕೈಗೆ ಅಧಿಕಾರ ಪಡೆದ ಸಮಾಜವಾದಿ ವ್ಯವಸ್ಥೆ ಸ್ಪೂರ್ತಿ, ಜನತಾ ಸರ್ಕಾರ ರೈತರಿಗೆ ಭೂಮಿ, ನೀಡಿದ ಪ್ರಥಮ ಕಾನೂನು ತಂದಿತು, ಜತೆಗೆ ಶಾಂತಿಗಾಗಿ ಕಾನೂನನ್ನು ರೂಪಿಸಿ ಜಾರಿಗೊಳಿಸಿದ ಕ್ರಮಗಳು ಇಂದಿಗೂ ಜಗತ್ತಿಗೆ ಮಾದರಿ ಎಂದು ಹೇಳಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ್ ಮಾತನಾಡಿ '1789ರ ಫ್ರೆಂಚ್ ಕ್ರಾಂತಿಯಾದಿಯಾಗಿ ಘಟಿಸಿದ್ದ ಹಲವು ಕ್ರಾಂತಿಗಳಿಗಿಂತ ರಷ್ಯದ ಅಕ್ಟೋಬರ್ ಕ್ರಾಂತಿ ಭಿನ್ನವಾದದ್ದು. ಅದುವರೆಗೆ ಶೋಷಿತ ವರ್ಗವಾಗಿದ್ದ ದುಡಿಯುವ ವರ್ಗ ಮತ್ತದರ ಮಿತ್ರರಾದ ಬಡ ರೈತಪಿ ಜನತೆ ಕ್ರಾಂತಿಯನ್ನು ಮುನ್ನಡೆಸಿ ಆಳುವ ಬಂಡವಾಳಶಾಹಿ ಮತ್ತು ಶೋಷಕ ವರ್ಗಗಳನ್ನು ಕಿತ್ತೆಸೆದ ಕಾರಣ ಅದನ್ನು ಜಗತ್ತಿನ ಪ್ರಥಮ ಸಮಾಜವಾದಿ ಕ್ರಾಂತಿ ಎಂದೇ ಕರೆಯಲಾಗಿದೆ.

ಏಳು ದಶಕಗಳ ದೀರ್ಘ ಕಾಲಾವಧಿಯ ಪ್ರಥಮ ಸಮಾಜವಾದಿ ಸಮಾಜಕ್ಕೆ ನಾಂದಿ ಹಾಡಿದ್ದ ಅಕ್ಟೋಬರ್ ಕ್ರಾಂತಿ ಬಲಿಷ್ಠ ರೈತ ಕಾರ್ಮಿಕರ ಸಖ್ಯತೆಯ ಬುನಾದಿಯ ಮೇಲೆ ನಿರ್ಮಿತವಾಗಿತ್ತು. ಮಾನವ ಜನಾಂಗಕ್ಕೆ ಹೊಸ ಪಥವನ್ನು ತೆರೆದಿಟ್ಟಿತ್ತು. ಹಿಂದೆಂದು ಕ್ರಮಿಸದ ಹೊಸ ಜಾಡಿನಲ್ಲಿ ಮೊದಲ ಸಮಾಜವಾದಿ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ತನ್ನನ್ನು ಸುತ್ತವರಿದಿದ್ದ ಬಂಡವಾಳಶಾಹಿ ಪ್ರಭುತ್ವಗಳ ನಡುವೆ ವಿಜ್ಞಾನ ತಂತ್ರಜ್ಞಾನ, ಆರೋಗ್ಯ ಮುಂತಾದರಲ್ಲಿ ಅದರ ಸಾಧನೆ ಅಸಾಧಾರಣವಾದದ್ದು ಅದಾಗ್ಯೂ ಸಮಾಜವಾದಿ ಆರ್ಥಿಕ ವ್ಯವಸ್ಥೆಯನ್ನು ಕುತಂತ್ರದಿಂದ ಪತನಗೊಳಿಸಲಾಯಿತು ಎಂದು ಹೇಳಿದರು.

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ.) ಜಿಲ್ಲಾ ಸಂಚಾಲಕ ಗಣೇಶ ರಾಠೋಡ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತಿನ ಎಲ್ಲೆಡೆ ಕಾರ್ಮಿಕರ, ದುಡಿಯುವ ರೈತಾಪಿ ಜನರ ಹೋರಾಟ, ಚಳವಳಿಗಳಿಗೆ ಇಂದಿಗೂ ಸ್ಪೂರ್ತಿಯ ಸೆಲೆಯಾಗಿರುವದ ಅಕ್ಟೋಬರ್ ಕ್ರಾಂತಿ ಹಲವು ತೃತೀಯ ಜಗತ್ತಿನ ರಾಷ್ಟ್ರಗಳ ಸ್ವತಂತ್ರಕ್ಕೆ, ಸ್ವತಂತ್ರ ನಂತರದ ಸ್ವಾವಲಂಬಿ ಬೆಳವಣಿಗೆಗೆ ಒತ್ತಾಸೆಯಾಗಿ ನಿಂತಿತ್ತು. ಜಗತ್ತನ್ನು ಹಿಟ್ಲರ್‍ನ ಫ್ಯಾಸಿಸ್ಟ್ ಆಕ್ರಮಣದ ಅಪಾಯದಿಂದ ರಕ್ಷಿಸಿದ ಕೀರ್ತಿ ರಷ್ಯದ ಸಮಾಜವಾದಿ ವ್ಯವಸ್ಥೆಗೆ ಸಲ್ಲುತ್ತದೆ ಎಂದರು.

ಸಿಐಟಿಯು ಹಾಗೂ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಮೋಹಿನಿ ನಮ್ಟೇಕರ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಫ್.ಐ.ನ ಮಣಿಕಂಠ, ಗುತ್ತಿಗೆ ಕಾರ್ಮಿಕರ ಸಂಘದ ಮಂಜುನಾಥ, ಬಿಸಿಯೂಟ ನೌಕರರ ಸಂಘದ ಜಯಶ್ರೀ ಗೌಡ ಹಾಜರಿದ್ದರು.

ಪುಸ್ತಕ ಬಿಡುಗಡೆ 

ಹಾಸನ: 

ಸಮಾಜವಾದಿ ಕ್ರಾಂತಿಯ ಶತಮಾನೋತ್ಸವವನ್ನು ಹಾಸನದಲ್ಲಿ ನವೆಂಬರ್ 07ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ರಷ್ಯಾ ಸಮಾಜವಾದಿ ಕ್ರಾಂತಿಯ ಕುರಿತಾದ 4 ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾ. ಎಸ್. ವರಲಕ್ಷ್ಮಿರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಧ್ಯಾಪಕರಾದ ರವೀಂದ್ರ ಬಾಬುರವರು ಸಮಾಜವಾದದ ಪ್ರಸ್ತುತತೆ ಕುರಿತು ಮಾತನಾಡಿದರು. ಹಿರಿಯರಾದ ನಾರಾಯಣದಾಸ್ ಇದ್ದರು ಮತ್ತು ಜಿ.ಪಿ.ಸತ್ಯನಾರಾಯಣ್ ಅಧ್ಯಕ್ಷತೆ ವಹಿಸಿದ್ಧರು. ಧರ್ಮೆಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್.ಆರ್.ನವೀನ್‍ಕುಮಾರ್ ಕಾರ್ಯಕ್ರಮದ ನಿರೂಪಣೆ ಮಾಡಿದರು.