ಬುದ್ಧಿಜೀವಿಗಳು ಮತ್ತು ಮಠಾಧೀಶರು

ಸಂಪುಟ: 
10
ಸಂಚಿಕೆ: 
47
date: 
Sunday, 13 November 2016
Image: 

‘ಬುದ್ಧಿಜೀವಿಗಳು ಹಿಂದೂ ಧರ್ಮದ ವಿರೋಧಿಗಳು’ ಎಂದು ಪೇಜಾವರ ಮಠಾಧೀಶರು ಹೇಳಿದರೆಂದು ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಯಿತು. ಇದಕ್ಕೆ ನಾಟಕದ ಪ್ರಸನ್ನ, ಅಕೆಡಮಿಕ್ ಚಿಂತಕರಾದ ಪೃಥ್ವಿ ದತ್ತ ಚಂದ್ರಶೋಭಿ ತಮ್ಮ ಪತ್ರಿಕಾ ಅಂಕಣಗಳಲ್ಲಿ ಸುದೀರ್ಘ ಪ್ರತಿಕ್ರಿಯೆ ನೀಡಿ ದಲಿತರು ಮತ್ತು ಜಾತಿಶೋಷಿತರ ಪರವಾಗಿ ಸ್ಪಂದಿಸುವ ಬುದ್ಧಿಜೀವಿಗಳು ಮಾನವೀಯತೆಯನ್ನು ಆಧರಿಸಿ ಯೋಚಿಸುವ ಪ್ರಗತಿಪರರು, ಮತ್ತು ವೈಚಾರಿಕ ನೆಲೆಯುಳ್ಳವರು. ಪೇಜಾವರರಿಗೆ ದಲಿತರ ನೋವನ್ನು ಅರ್ಥಮಾಡಿಕೊಳ್ಳಬಲ್ಲ ಸಂವೇದನಾಶೀಲತೆ ಬೇಕು ಎಂದು ಹೇಳಿದರು. ಕರಿಕಲ್ಲಿನಲ್ಲಿ ಪ್ರೇಮದ ಪ್ರತೀಕವಾದ ಕೃಷ್ಣನ್ನು ಭಾವಿಸುವ ಮನಸ್ಸಿಗೆ ಸಮಾಜದ ಸಹಜೀವಿಗಳಲ್ಲಿನ ಜಾತಿ ಭೇದದ ಅವಮಾನ ನೋವು, ನರಳಿಕೆ, ಕ್ರೋಧಗಳನ್ನು ಪ್ರೀತಿ-ವಿಶ್ವಾಸ-ನಂಬಿಕೆ-ಸಮಾನತೆಗಳ ಹಂಬಲವನ್ನು ಭಾವಿಸುವುದು ಕಷ್ಟವೆ? ಕಷ್ಟ ಎಂದಾದರೆ, ಭಾವಿಸುವ ಮನಸ್ಸನ್ನು ವೈಧಾನಿಕವಾಗಿ ಪೂಜಿಸುವ ಕಲ್ಲಿನೊಂದಿಗೆ ಕಲ್ಲಾಗಿಸುವ ತರ್ಕಬದ್ಧತೆಯನ್ನು ಕೊಳೆತ ಕುಂಬಳಕಾಯಿಯಂತೆ ತಿಪ್ಪೆಗೆಸೆಯಬೇಕು, ಅಲ್ಲವೆ?

ಸಿದ್ಧಾರ್ಥ ಜ್ಞಾನೋದಯವಾಗಿ ಗೌತಮ ಬುದ್ಧನಾದ ಮೇಲೆ ಅಲ್ಲಿ ಇಲ್ಲಿ ಸಂಚರಿಸುತ್ತಾ ಹೊಲ ಉಳುತ್ತಿರುವ ಬ್ರಾಹ್ಮಣನೊಬ್ಬನನ್ನು ಅನ್ನಕ್ಕಾಗಿ ಯಾಚಿಸುತ್ತಾನೆ. ಶ್ರಮಪಟ್ಟು ದುಡಿದು ಅನ್ನ ತಿನ್ನುತ್ತಿರುವ ತಾನು, ಏನೂ ಮಾಡದೆ ಭಿಕ್ಷೆ ಯಾಚಿಸುತ್ತಿರುವ ಬುದ್ಧನಿಗೆ ಯಾಕೆ ಅನ್ನ ನೀಡಬೇಕೆಂದು ಆ ಬ್ರಾಹ್ಮಣ ಬುದ್ಧನನ್ನು ನೇರವಾಗಿ ಕೇಳುತ್ತಾನೆ. ಬುದ್ಧ ತಾನೂ ಶ್ರಮಪಡುತ್ತಿದ್ದೇನೆಂದೂ, ದೈಹಿಕ ಶ್ರಮದಲ್ಲಿ ತನ್ನನ್ನು ತೊಡಗಿಸಿಕೊಂಡ ಬ್ರಾಹ್ಮಣ ತಾನು ಉಣ್ಣುವುದಲ್ಲದೆ ಸಮಾಜಕ್ಕೂ ಉಪಕಾರಿಯಾಗಿರುವಂತೆ ತನ್ನನ್ನು ಬೌದ್ಧಿಕ ಶ್ರಮದಲ್ಲಿ ತೊಡಗಿಸಿಕೊಂಡು ಜ್ಞಾನವನ್ನು ಹಂಚುವ ಮೂಲಕ ಸಮಾಜಕ್ಕೆ ಉಪಕಾರಿಯಾಗಿರುವೆನೆಂದು, ಆದ್ದರಿಂದ ತಾನೂ ಅನ್ನ ಪಡೆಯಲು ಅರ್ಹನೆಂದು ತನ್ನ ಯಾಚನೆಯನ್ನು ಬುದ್ಧನು ಸಮರ್ಥಿಸಿಕೊಳ್ಳುತ್ತಾನೆ. ಗೌತಮ ಬುದ್ಧ ಭಾರತದ ಚರಿತ್ರೆಯಲ್ಲಿ ಗಮನಾರ್ಹ ಸ್ಥಾನ ಪಡೆದಿರುವ ಜ್ಞಾನಜೀವಿ ಅಥವಾ ಆಧುನಿಕ ಪರಿಭಾಷೆಯಲ್ಲಿ ಹೇಳುವ ಬುದ್ಧಿಜೀವಿ.

ಬುದ್ಧನಿಗೂ ಮೊದಲಿದ್ದ ವೈದಿಕ ಸಮಾಜದ ಜ್ಞಾನಜೀವಿಗಳು ಅರಣ್ಯವಾಸಿಗಳಾಗಿ ಬದುಕುತ್ತಾ ಜ್ಞಾನಾರ್ಜನೆ ಮತ್ತು ಜ್ಞಾನಪ್ರಸರಣದಲ್ಲಿ ತೊಡಗಿದ್ದ ಸನಾತನ ಬುದ್ಧಿಜೀವಿಗಳು. ಅವರು ತಮ್ಮ ಅಧ್ಯಯನ, ಚಿಂತನೆ, ಮತ್ತು ಅನ್ವೇಷಣೆಗಳ ಮೂಲಕ ಪಡೆದ ತಿಳಿವನ್ನು ಅವರ ಬಳಿಗೆ ಬಂದ ಜ್ಞಾನದಾಹಿಗಳೊಂದಿಗೆ ಉಚಿತ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದರು. ಅವರ ದೈನಂದಿನ ಜೀವನ ನಿರ್ವಹಣೆಗೆ ಅರಣ್ಯದ ಉತ್ಪನ್ನಗಳ ಸಂಗ್ರಹಣೆ, ಸೀಮಿತ ಮಟ್ಟದ ಕೃಷಿ, ಪಶುಸಂಗೋಪನೆಗಳನ್ನಲ್ಲದೆ ಹತ್ತಿರದ ರಾಜರು ಕೊಡಮಾಡುತ್ತಿದ್ದ ಧನ-ಧಾನ್ಯ ಸಹಾಯವನ್ನು ನೆಚ್ಚಿದ್ದರು. ಅಂದಿನ ನಗರವಾಸಿಗಳಿಗೆ ಹೋಲಿಸಿದರೆ ಕನಿಷ್ಠತಮ ಜೀವನಾಗತ್ಯಗಳ ಪೂರೈಕೆಯಿಂದ ನಡೆಸಬಹುದಾದ ಸರಳ ಜೀವನವನ್ನು ನಡೆಸುತ್ತಿದ್ದರು. ಇಂದಿನ ಆದಿವಾಸಿ ಜನರಂತೆ ಬಂಡೆಗಲ್ಲುಗಳ ನಡುವಿನ ಗುಹೆ, ಅರಣ್ಯಜನ್ಯ ವಸ್ತುಗಳಿಂದ ನಿರ್ಮಿಸಿದ ಎಲೆಮನೆಗಳು, ಜೋಪಡಿ, ಕುಟೀರ ಮುಂತಾಗಿ ತಾವೇ ನಿರ್ಮಿಸಿಕೊಂಡ ವಾಸಸ್ಥಳಗಳಲ್ಲಿ ತಮ್ಮ ಕಾಯಕವನ್ನು ನಡೆಸುತ್ತಿದ್ದರು. ಹೆಂಡತಿ, ಮಕ್ಕಳು, ಶಿಷ್ಯರ ಯೋಗಕ್ಷೇಮದ, ಅತಿಥಿ-ಅಭ್ಯಾಗತರನ್ನು ಸತ್ಕರಿಸುವ ಹೊಣೆಹೊತ್ತ ಸಾಂಸಾರಿಕರಾಗಿದ್ದರು. 

ನಗರವಾಸಿಗಳಾದ ಉಚ್ಚ ವರ್ಣದ ಜನರು ಎಂಟು ವರ್ಷಕ್ಕೆ ವಟುಗಳಾಗಿ ಪ್ರಾರಂಭಿಸಿ 12 ವರ್ಷಗಳ ಕಾಲ ಗುರುಕುಲದಲ್ಲಿ ವಿದ್ಯಾರ್ಜನೆ ಮಾಡುವಾಗ ಬ್ರಹ್ಮಚಾರಿಗಳೆಂದು ಕರೆಸಿಕೊಳ್ಳುತ್ತಿದ್ದರು. ವಿದ್ಯಾಭ್ಯಾಸ ಮುಗಿಸಿ ಸ್ನಾತಕರಾಗಿ ಕುಟುಂಬ ನಿರ್ವಹಣೆ, ಸಂತಾನವನ್ನು ಮುಂದುವರೆಸುವ ಜವಾಬ್ದಾರಿಯನ್ನು ಹೊತ್ತಾಗ ಸಂಸಾರಿಗಳೆಂದು ಗುರುತಿಸಿಕೊಳ್ಳುತ್ತಿದ್ದರು. ಇಳಿ ವಯಸ್ಸಿನಲ್ಲಿ, ಕುಟುಂಬದ ಜವಾವಾಬ್ದಾರಿಗಳನ್ನು ನಿರ್ವಹಿಸಿ ಸಾಕಾದಮೇಲೆ ಆಸ್ತಿ ಹಕ್ಕು ಮತ್ತು ಹಣದ ವಹಿವಾಟಿನ ಜವಾಬ್ದಾರಿಗಳನ್ನು ಹಿರಿಯ ಮಕ್ಕಳಿಗೆ ವಹಿಸಿ ಕಾಡಿನಲ್ಲಿ ವಾಸಿಸುವಾಗ ವಾನಪ್ರಸ್ಥರೆನಿಸಿಕೊಳ್ಳುತ್ತಿದ್ದರು. ಸಾವಿಗೆ ಹತ್ತಿರವಾಗಿ ಜೀವಿಸುತ್ತಾ, ಆಯುಷ್ಯ ಕ್ಷೀಣಿಸಿ ‘ಸಾಯುವ ಸ್ಥಿತಿ’ ತಲುಪಿ ಬದುಕಿನ ಬವಣೆಗಳಿಂದ ಬಿಡುಗಡೆ ಪಡೆದಾಗ ‘ಸಂನ್ಯಾಸಿ’ ಎನಿಸಿಕೊಳ್ಳುತ್ತಿದ್ದರು. ಹೀಗೆ ಗುರುತಿಸುವ ನಾಲ್ಕು ಬಗೆಯ ಜೀವನಕ್ರಮಗಳನ್ನು ‘ಆಶ್ರಮಗಳು’ ಎನ್ನುತ್ತಿದ್ದರು. 

ಆಧುನಿಕ ‘ಆಶ್ರಮ’ಗಳು

ಆಧುನಿಕ ಕಾಲದಲ್ಲಿ 7 ನೇ ವಯಸ್ಸಿನಲ್ಲಿ ಶಾಲೆಗೆ ಸೇರುವುದರಿಂದ ಪ್ರಾರಂಭಿಸಿ 10+02+03 ರ 15 ವರ್ಷಗಳ ಶಿಕ್ಷಣ ಪಡೆಯುವುದು ಮೊದಲ ಹಂತ. ಉದ್ಯೋಗದ ಹಂತ ಎರಡನೆಯದು. ನಿವೃತ್ತಿ ಮೂರನೆಯ ಹಂತ. ಈ ಮೂರು ಹಂತಗಳು ಸನಾತನ ಹಿಂದೂ ಜೀವನಕ್ರಮದ ಮೊದಲ ಮೂರು ಆಶ್ರಮಗಳಿಗೆ ಸಂವಾದಿಯಾಗಿವೆ. 

ಸ್ನಾತಕೋತ್ತರ ಅಧ್ಯಯನ, ಪದವಿಗಳು, ನಿವೃತ್ತಿಯಾದ ನಂತರವೂ ಜನರು ಕೈಗೊಳ್ಳುವ ವಿವಿಧ ಉದ್ಯೋಗಗಳು ಆಧುನಿಕ ಸಮಾಜದ ಜೀವನಕ್ರಮಗಳಿಗೆ ಸೇರ್ಪಡೆಯಾದ ಈಚಿನ ಬೆಳವಣಿಗೆಗಳು. ವಟು ಎಂದರೆ ಜುಟ್ಟು-ಜನಿವಾರಗಳನ್ನು ಧರಿಸಿ ಸಂಸ್ಕøತ ಕಲಿಯುವ ಬಾಲಕನೆಂದು, (ಬಾಲಕಿಗೆ ಇಂಥ ಸೌಕರ್ಯವಿಲ್ಲ), ಬ್ರಹ್ಮಚಾರಿಯೆಂದರೆ ಮದುವೆಯಾಗದ-ಮದುವೆಯೊಲ್ಲದ ಒಂಟಿ ಬದುಕಿನ ಮನುಷ್ಯರೆಂದು, ಸಂನ್ಯಾಸಿಯೆಂದರೆ ಸಾಂಸಾರಿಕ ಜವಾಬ್ದಾರಿಗಳನ್ನು ಹೊರಲೊಲ್ಲದೆ ಅಥವಾ ಕಳಚಿಕೊಂಡು, ಲೈಂಗಿಕ ಬಯಕೆಗಳಿಂದ ಮುಕ್ತವಾಗಿ, ಕಾವಿಧಾರಿಯಾಗಿ ಮೋಕ್ಷವನ್ನು ಬಯಸುತ್ತಾ, ಸಾಂಕೇತಿಕವಾಗಿ ‘ಸತ್ತು’ ಲೋಕ ಕಲ್ಯಾಣಕ್ಕಾಗಿ ಜೀವಿಸುವ ಸರಳಜೀವಿಗಳೆಂದು ಅರ್ಥಾಂತರವಾಗಿದೆ. ಸಂನ್ಯಾಸಿಯಾಗುವುದೆಂದರೆ ಸಾಂಕೇತಿಕವಾಗಿ ಸತ್ತು ತನ್ನ ಶ್ರಾದ್ಧವನ್ನು ತಾನೇ ಮಾಡಿಕೊಂಡು, ಹಳೆಯ ಸಂಬಂಧಗಳನ್ನು ಮುರಿದುಕೊಂಡು, ಹೊಸ ಜನ್ಮವನ್ನು ಪಡೆದು, ಹೊಸ ಹೆಸರನ್ನು ಪಡೆಯುವ ವೈಧಾನಿಕ ಕ್ರಮವನ್ನು ಅನುಸರಿಸುವುದು. ವೈದಿಕ ಪದ್ಧತಿಗಳನ್ನು ಅನುಸರಿಸುತ್ತಿದ್ದ ಸನಾತನ ಸಮಾಜದಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಗಳೆಂಬ ನಾಲ್ಕು ಜೀವನ ವಿಧಾನಗಳನ್ನು ಗುರುತಿಸಲು ಬಳಕೆಯಾಗುತ್ತಿದ್ದ ‘ಆಶ್ರಮ’ ಪದದ ಅರ್ಥ, ಆಧುನಿಕ ಕಾಲದ ಸಾಧು-ಸನ್ಯಾಸಿಗಳು ಜೀವಿಸುವ ಸ್ಥಳವೆಂದು ಅರ್ಥಾಂತರವಾಗಿದೆ. ಹಿಂದಿನಂತೆ ಪ್ರಾಣಿ-ಪಕ್ಷಿಗಳು ಸಂಚರಿಸುವ ಅರಣ್ಯಗಳಲ್ಲಿ ಆಶ್ರಮ ಕಟ್ಟಿಕೊಂಡು ಜೀವಿಸುವ ಬದಲು, ತಾವಿರುವ ಪ್ರದೇಶಗಳಲ್ಲಿಯೇ ಮರಗಿಡಗಳನ್ನು ಬೆಳೆಸುವುದು, ಪ್ರಾಣಿ-ಪಕ್ಷಿಗಳನ್ನು ತಂದು ಸಾಕುವುದು ಮುಂತಾದ ಕೃತಕ ವಿಧಾನಗಳಲ್ಲಿ ಅರಣ್ಯದಂತೆ ತೋರುವ ಪರಿಸರದ ಆಶ್ರಮವನ್ನು ನಿರ್ಮಿಸಿಕೊಳ್ಳುವ ವಿಧಾನ ಬಳಕೆಗೆ ಬಂದಿದೆ. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಆಹಾರವನ್ನು ಸಂಪಾದಿಸಿಕೊಳ್ಳುವುದರ ಬದಲು, ‘ಭಿಕ್ಷೆ’ ಕೊಡುವವರೇ ಆಶ್ರಮಕ್ಕೆ ಬಂದು ಆಹಾರಕ್ಕಾಗಿ ಏರ್ಪಾಟು ಮಾಡುವುದು, ಅಥವಾ ಅದರ ವೆಚ್ಚಕ್ಕಾಗಿ ದಾನ-ಧರ್ಮದ ರೂಪದಲ್ಲಿ ಧನ-ಧಾನ್ಯಗಳನ್ನು ಕೊಡುವುದು ಈ ಕಾಲದಲ್ಲಿ ಜಾರಿಯಲ್ಲಿರುವ ಕ್ರಮ. 

ಶಂಕರ ಮೊದಲ ‘ಬಾಲಸನ್ಯಾಸಿ’

ವೈದಿಕ ಸಮಾಜದಲ್ಲಿ ಋಷಿ-ಮುನಿ ಎಂಬ ಪದಗಳಿಗೆ ವರ್ಣ, ಜಾತಿ, ಮತ, ಸಿದ್ಧಾಂತ ಅಥವಾ ಜ್ಞಾನಶಾಖೆಗಳ ನಿರ್ದಿಷ್ಟ ಕಟ್ಟುಪಾಡುಗಳಾಗಲಿ, ಆಹಾರ-ಪಾನೀಯ ಪದ್ಧತಿಯ ನಿರ್ಬಂ ಧ, ಮಡಿವಂತಿಕೆಗಳಾಗಲಿ ಇರಲಿಲ್ಲ. ವೇದಾಂತ ಮೂಲದ ಚಿಂತನೆ-ಪ್ರತಿಪಾದನೆ ಮಾಡಿದ ವಸಿಷ್ಠ-ವಿಶ್ವಾಮಿತ್ರ-ವ್ಯಾಸರು ಋಷಿಗಳು. ಕಾಮಸೂತ್ರವನ್ನು ರಚಿಸಿದ ವಾತ್ಸಾಯನನೂ ಋಷಿಯೇ. ಕಾಡಿನಲ್ಲಿ ಸಿಗುತ್ತಿದ್ದ ಕಂದ ಮೂಲಗಳನ್ನು, ಹಣ್ಣು-ಹಂಪಲುಗಳನ್ನು ತಿಂದು ಜೀವಿಸುತ್ತಿದ್ದ ತಾಪಸಿಗಳೂ ಋಷಿಗಳೇ. ಆಡಿನ ರೂಪದಲ್ಲಿದ್ದ ವಾತಾಪಿಯನ್ನು ತಿಂದು ಜೀರ್ಣಿಸಿಕೊಂಡ ಅಗಸ್ತ್ಯನೂ ಋಷಿಯೇ. ಮೃಚ್ಛಕಟಿಕದಲ್ಲಿ ಕಳ್ಳನ ಪಾಲಿಗೆ ತಾನು ಕನ್ನ ಕೊರೆಯುವ ಮುಂಚೆ ನೆನೆದು ವಂದಿಸುವ ತನ್ನ ಗುರು ತಸ್ಕರಾಚಾರ್ಯನೂ ಋಷಿಯೇ.  

ವೈದಿಕ ಧರ್ಮಕ್ಕೆ ಆಧಾರಸ್ತಂಭವೆನಿಸಿರುವ ತತ್ವ, ತರ್ಕ, ವಿಚಾರ, ವಾದಗಳನ್ನು ಮಂಡಿಸುವ ಪ್ರಾಚೀನ ಗ್ರಂಥಗಳನ್ನು, ಕಾವ್ಯ, ಪುರಾಣಗಳನ್ನು ರಚಿಸಿದರೆಂದು ಹೇಳಲಾಗುವ ಯಾವೊಬ್ಬ ಋಷಿ-ಮುನಿಯೂ ಆಧುನಿಕ ಕಾಲದ ಅರ್ಥದಲ್ಲಿ ಬ್ರಾಹ್ಮಣ ಜಾತಿಗೆ ಸೇರಿದವರಲ್ಲ. ಬ್ರಾಹ್ಮಣರೆಂದರೆ ಸತ್ಯ ಹೇಳುವವರು, ಸರಳ ಜೀವನ ನಡೆಸುವವರು, ದಯೆಯುಳ್ಳವರು ಮತ್ತು ಬ್ರಹ್ಮಜ್ಞಾನವನ್ನು ತಿಳಿದವರು, ಅಭ್ಯಸಿಸುವವರು ಎಂಬ ವಿವರಣೆ ಮಹಾಭಾರತದಲ್ಲಿ ಸಿಗುತ್ತದೆ. ಬ್ರಾಹ್ಮಣ ಎಂಬ ಪದ ಈ ಅರ್ಥದಲ್ಲಿ ಆಧುನಿಕ ಕಾಲದಲ್ಲಿ ಬಳಕೆಯಾಗುತ್ತಿಲ್ಲ. ಬ್ರಾಹ್ಮಣ ಎಂದರೆ ಕನಿಷ್ಠ ಜನಿವಾರ ಧರಿಸಿದ ವ್ಯಕ್ತಿಯ ಜಾತಿ ಸೂಚಕ ಪದ ಅಷ್ಟೆ.

ಬುದ್ಧನಿಗೂ ಹಿಂದೆ ವೈದಿಕಧರ್ಮದಲ್ಲಿ ಯಾವ ವಯಸ್ಸಿನಲ್ಲಿ ಯಾರು ಬೇಕಾದರೂ ಸನ್ಯಾಸಿಯಾಗುವ ಸೌಲಭ್ಯ ಇದ್ದಂತೆ ತೋರುವುದಿಲ್ಲ. ಬಾಲ ಸನ್ಯಾಸಿಗಳಂತೂ ಇರಲೇ ಇಲ್ಲ. ಬುದ್ಧನ ಉಪದೇಶದಿಂದ ಆಕರ್ಷಿತರಾಗಿ ಸನ್ಯಾಸಿಯಾದವರಿಂದ ಹಿಡಿದು, ಜೀವನದ ವೈಫಲ್ಯಗಳನ್ನು ಎದುರಿಸಲಾರದೆ ಹೊಣೆಗಾರಿಕೆಯಿಂದ ಪಲಾಯನ ಮಾಡಿದವರು,  ಸಾಲ ತೀರಿಸಲಾಗದೆ ತಪ್ಪಿಸಿಕೊಂಡು ಸಂಘದ ಆಶ್ರಯ ಪಡೆದು ಸನ್ಯಾಸಿಗಳಾಗಿ ಬದುಕುತ್ತಿದ್ದವರ ವರೆಗೆ ನಾನಾ ಕಾರಣಗಳಿಗಾಗಿ ಬೌದ್ಧಭಿಕ್ಷುಗಳಾದ ಜನರು ಬುದ್ಧನ ಅನುಯಾಯಿಗಳಾಗಿದ್ದರು ಎಂದರೆ ಉತ್ಪ್ರೇಕ್ಷೆಯಾಗದು. ಬುದ್ಧ ಬಿಕ್ಷುಗಳು ಸಾಂಘಿಕವಾಗಿ ತಂಗಲು ಅನುವಾಗುವಂತೆ ಬೌದ್ಧವಿಹಾರಗಳನ್ನು ಬೌದ್ಧಮತದ ಅನುಯಾಯಿಗಳಾದ ರಾಜ ಮಹಾರಾಜರು ಕಟ್ಟಿಸಿಕೊಡುವುದಲ್ಲದೆ ದತ್ತಿಗಳನ್ನೂ ಕೊಡಮಾಡಿದರು.

ಒಂದು ಕಾಲದಲ್ಲಿ ಅಸ್ಪೃಶ್ಯತೆಯ ಆಚರಣೆಗಾಗಿ ಕುಪ್ರಸಿದ್ಧವಾಗಿದ್ದ ಕೇರಳದ ನಂಬೂದರಿ ಬ್ರಾಹ್ಮಣ ಪಂಗಡಕ್ಕೆ ಸೇರಿದ ಶಂಕರಾಚಾರ್ಯರು ನಮಗೆ ಗೊತ್ತಿರುವ ಮೊದಲ ಬಾಲ ಸನ್ಯಾಸಿ. ಎಂಟು ವರ್ಷಕ್ಕೇ (ವಟುವಾಗುವ ಬದಲು) ಜ್ಞಾನಸಿಂಧುವಾದ ಸನ್ಯಾಸಿಯಾದನೆಂದು ಹೇಳಲಾಗುವ ಅಸಾಮಾನ್ಯ ಪ್ರತಿಭೆಯ ಈ ಬಾಲಕ ತನ್ನ ಎಂಟನೆಯ ವರ್ಷದಲ್ಲಿ ಮೊಸಳೆಗೆ ಬಲಿಯಾಗಿ ‘ಸತ್ತು’ ‘ಸಂನ್ಯಾಸಿ’ಯೆನಿಸಿದ ಮಿತ್ ಇದಕ್ಕೆ ಆಧಾರವೋ ಎಂದು ನಿರ್ಣಯಿಸುವುದು ಈಗ ಸಾಧ್ಯವಿಲ್ಲ. ಆದರೆ ಪ್ರತಿವಾದಿಗಳಿಂದ ‘ಪ್ರಚ್ಛನ್ನ ಬೌದ್ಧ’ರೆಂದು ಕರೆಸಿಕೊಂಡ ಶಂಕರಾಚಾರ್ಯರು ಭಾರತದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದರೆಂದು ಹೇಳಲಾಗುವ ‘ಮಠ’ಗಳು, ಬೌದ್ಧವಿಹಾರಗಳ ಮಾದರಿಯನ್ನು ಅನುಸರಿಸಿ ಕಟ್ಟಿದವುಗಳು ಎಂಬುದು ಇಲ್ಲಿ ಪ್ರಸ್ತುತ. ತಾತ್ವಿಕವಾಗಿ ಎಲ್ಲಾ ಭೇದಗಳನ್ನು ನಿರಾಕರಿಸುವ ಅದ್ವೈತಮತವನ್ನು ಪ್ರಚುರಪಡಿಸುವ ಉದ್ದೇಶಕ್ಕಾಗಿ ಸ್ಥಾಪಿಸಿದ ಈ ಮಠಗಳು ಇಂದು ಶಿಷ್ಯಕೋಟಿಯ ನೆಪವೊಡ್ಡಿ ಪೂಜೆ-ಪುನಸ್ಕಾರ, ಯಾಗ-ಹೋಮಗಳ ಮೂಢ ಕ್ರಿಯೆಗಳಲ್ಲಿ ಮುಳುಗಿ ಜಾತಿ ಆಧಾರಿತ ಉತ್ತಮಿಕೆಯ ಬ್ರಾಹ್ಮಣಿಕೆಯ ಮುದ್ರೆಯೊತ್ತುವ ಜಾತಿ ನೋಂದಣಿಯ ಧಾರ್ಮಿಕ ಕೇಂದ್ರಗಳಾಗಿವೆ.

‘ರಾಮಕೃಷ್ಣ ಆಶ್ರಮ’ ಮಾದರಿ

ವೈಧಾನಿಕವಾಗಿ ‘ಸಂನ್ಯಾಸ’ ಪಡೆಯದೆಯೂ ಚತುರ ಬುದ್ಧಿಜೀವಗಳಾದವರು ಯಾರು ಬೇಕಾದರೂ ಸಾಧು, ಸಂತ, ಭೈರಾಗಿ, ಬಾಬಾ, ಅವಧೂತ, ಸದ್ಗುರು, ಯತಿ ಎಂಬ ಹೆಸರಿಟ್ಟುಕೊಂಡು ಎಲ್ಲೋ ಕುಳಿತು ಜನರ ಬೆವರಿನ ಗಳಿಕೆಯಲ್ಲಿ ತಮ್ಮ ಶಕ್ತ್ಯಾನುಸಾರ ಸುಲಭ ಅಥವಾ ಐಷಾರಾಮೀ ಜೀವನ ನಡೆಸಬಹುದಾದ ಸೌಲಭ್ಯ ಈ ಆಧುನಿಕ ಕಾಲದಲ್ಲಿದೆ. ಮೌಢ್ಯದಿಂದ ಹೊರಬರಲಾಗದ ಜನಸಾಮಾನ್ಯರ ಮಾನಸಿಕ ಅಸಮತೋಲನಗಳನ್ನು, ಭೌತಿಕ ಕಷ್ಟಗಳನ್ನು ನಗದೀಕರಿಸಿ ರಾಜ್ಯದ ಮುಖ್ಯಮಂತ್ರಿಗಳಿಗಿಂತಾ ಹೆಚ್ಚಿನ ಅಧಿಕಾರ ಚಲಾಯಿಸುವ ಧಾರ್ಮಿಕ ಕೇಂದ್ರಗಳ ‘ಧರ್ಮಾಧಿಕಾರಿ’ಗಳು ಸನ್ಯಾಸಿಯಾಗದೆಯೂ, ಶುಭ್ರ ಶ್ವೇತಾಂಬರಧಾರಿಯಾಗಿ ವೈರಾಗ್ಯ ನಿಧಿಯಂತೆ ಕಂಗೊಳಿಸಬಹುದು. ಇಷ್ಟಾದರೂ, ಜಾತಿಯಿಂದ ಬ್ರಾಹ್ಮಣರಲ್ಲದವರಿಗೆ ಸನ್ಯಾಸಿಯಾಗುವ ಅಧಿಕಾರವಿಲ್ಲ ಎಂದು ಹಿಂದೂ ಪುರೋಹಿತಶಾಹಿ ತಕರಾರು ತೆಗೆದು ಜಾತಿಯಿಂದ ಕಾಯಸ್ಥರಾದ ‘ವೀರ ಸನ್ಯಾಸಿ’ ವಿವೇಕಾನಂದರಿಗೆ ಕಿರುಕುಳ ಕೊಟ್ಟರು. ಆಗ ಅವರು ಬ್ರಹ್ಮಜ್ಞಾನ ಇದ್ದದ್ದೇ ಅಬ್ರಾಹ್ಮಣರ ಕೈಯಲ್ಲಿ. ಅದನ್ನು ಬ್ರಾಹ್ಮಣರು ಕ್ಷತ್ರಿಯರಿಂದ ಪಡೆದುಕೊಂಡರಾದ್ದರಿಂದ ಜಾತಿ ಬ್ರಾಹ್ಮಣರಾದ ಪುರೋಹಿತರಿಗೆ ಸನ್ಯಾಸಕ್ಕೆ ಯಾರು ಯೋಗ್ಯರು ಎಂಬ ಬಗ್ಗೆ ನಿರ್ಣಯಿಸುವ ಅಧಿಕಾರವೇ ಇಲ್ಲ ಎಂದು ತಿರುಗೇಟು ನೀಡಿದರು.

ಪಶ್ಚಿಮದ ಕ್ರೈಸ್ತ ಮಿಷಿನರಿಗಳ ಧಾರ್ಮಿಕ ಸೇವಾಕೇಂದ್ರಗಳ ಮಾದರಿಯನ್ನು ಅನುಸರಿಸಿ ಭಾರತದಲ್ಲಿ ರಾಮಕೃಷ್ಣ ಮಠವನ್ನು ವಿವೇಕಾನಂದರು ಸ್ಥಾಪಿಸಿದರು. ಕ್ರೈಸ್ತ ಮಿಷಿನರಿಗಳ ಕ್ರಿಸ್ತ ಮಠಗಳ ಮಾದರಿಯಂತೆ ದೇವರಿಗೆ ಸೇವೆ ಮಾಡುವುದೆಂದರೆ ದೀನ-ದಲಿತರಿಗೆ ಸೇವೆ ಮಾಡುವುದು ಎಂದು ಪ್ರತಿಪಾದಿಸುವ ರಾಮಕೃಷ್ಣ ಮಠದ ಮುಖ್ಯ ಕೇಂದ್ರದ ಆಡಳಿತ ನಿಯಂತ್ರಣಕ್ಕೊಳಪಟ್ಟು, ಅಧಿಕೃತ ಮಾನ್ಯತೆ ಪಡೆದ ಮಠದ ಉಪಕೇಂದ್ರಗಳು ಭಾರತದ ಎಲ್ಲೆಡೆ, ವಿದೇಶಗಳಲ್ಲೂ ಸ್ಥಾಪಿತಗೊಂಡು ಜನರ ಸೇವೆಗೆಂದು ಹಣ ಸಂಗ್ರಹ, ಆಸ್ತಿ ಸಂಗ್ರಹ ಮಾಡುತ್ತಿವೆ. ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಸೇವೆ, ಸಂತ್ರಸ್ತರಿಗೆ ಪರಿಹಾರ ಕೇಂದ್ರ ಹೀಗೆ ಅಮೂರ್ತವಾದ ತತ್ವಾನ್ವೇಷಣೆಯನ್ನು ಸಾಮಾಜಿಕ ಸೇವೆಗಳಿಗೆ ವಿಸ್ತರಿಸುತ್ತಾ, ಕಾಲಕ್ರಮೇಣ ಪರಿಷ್ಕೃತ ಹಿಂದೂ ಸಮಾಜದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಚಾರದಿಂದ ಲಾಭ ತಂದುಕೊಡುವಂಥ ಸೇವಾ ವ್ಯಾಪಾರದಲ್ಲಿ ತೊಡಗಿವೆ.

ಇವನ್ನು ಅನುಸರಿಸಿ, ಸನಾತನವಾದ ಮತ್ತು ದ್ವೈತಮತವನ್ನು ಪೋಷಿಸಿ ಪ್ರಚಾರ ಮಾಡುವ ಮಡಿವಂತ ಬ್ರಾಹ್ಮಣ ಮಠಗಳು ಧರ್ಮಪ್ರಚಾರವೆಂದರೆ ವೈದಿಕಧರ್ಮದ ಪ್ರಚಾರವೆಂದೂ, ಸಮಾಜದ ಸಾಂಸ್ಕೃತಿಕ ಉತ್ಥಾನವೆಂದರೆ ಕೆಳಜಾತಿಗಳ ಬ್ರಾಹ್ಮಣೀಕರಣವೆಂದೂ ಗ್ರಹಿಸಿ ಶಿಕ್ಷಣ, ವೈದ್ಯಕೀಯ ಸೇವೆ, ಬಡವರ ಉದ್ಧಾರದ ಹೆಸರಿನಲ್ಲಿ ಹಣ ಮಾಡಲು, ಆಸ್ತಿ ಸಂಗ್ರಹಿಸಿ, ಆರ್ಥಿಕವಾಗಿ ಬಲಿಷ್ಠವಾಗಿವೆ. ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರ ಪ್ರಬಲ ಸಂಘಟನೆಯಾಗಿ ಬ್ರಾಹ್ಮಣರ ಸಾಂಸ್ಕೃತಿಕ ಉತ್ತಮಿಕೆ, ಅನ್ಯಕೋಮಿನ ದ್ವೇಷ ಮತ್ತು ಹಿಂದೂ ಐಕ್ಯತೆಯ ಹೆಸರಿನಲ್ಲಿ ರಾಜಕೀಯ ಅಧಿಕಾರಕ್ಕಾಗಿ ಕೆಲಸಮಾಡುವ ಸಂಘಪರಿವಾರಕ್ಕೆ, ಮಠಮಾನ್ಯಗಳ ಈ ಭೂಮಿಕೆ ವರದಾನದಂತೆ ಒದಗಿ ಬಂತು. ಹೀಗಾಗಿ ಎಲ್ಲೆಲ್ಲಿ ದೇವರು, ಧರ್ಮ, ಸಂಸ್ಕೃತಿ ಕೇಂದ್ರಿತ ಚಟುವಟಿಕೆಗಳು ನಡೆಯುತ್ತವೋ ಅಲ್ಲಿ ಸಂಘಪರಿವಾರ, ವ್ಯಾಪಾರಿ ಹಿತಾಸಕ್ತಿಯ ಪರವಾದ ತನ್ನ ರಾಜಕೀಯವನ್ನು, ಅದನ್ನು ಮುಂದೊತ್ತುವ ವ್ಯಕ್ತಿಗಳನ್ನು ಪ್ರತಿಷ್ಠಾಪಿಸುತ್ತಾ ಬಂದಿದೆ. ತನ್ನ ಹಿಂದುತ್ವದ ಅಜೆಂಡಾವನ್ನು ಗಟ್ಟಿಯಾಗಿ ನೆಲೆಗೊಳಿಸುತ್ತಾ ಬಂದಿದೆ.

ಬ್ರಾಹ್ಮಣ ಮಠಗಳನ್ನು ಅನುಸರಿಸಿ ಇತರ ಜಾತಿಯ ಮಠಗಳು ಧಾರ್ಮಿಕ ಉತ್ಥಾನ ಮತ್ತು ಜನಸೇವೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿವೆ. ಕರ್ನಾಟಕದಲ್ಲಿ ಸರ್ಕಾರವನ್ನು ಅಧಿಕಾರಕ್ಕೆ ತರಬಲ್ಲಷ್ಟು-ಕೆಳಗಿಳಿಸಬಲ್ಲಷ್ಟು ವೀರಶೈವ-ಲಿಂಗಾಯತ ಮಠಗಳು ಪಕ್ಷರಾಜಕೀಯದ ಮೆದು ಕೇಂದ್ರಗಳೂ ಆಗಿವೆ. ಸಂಘಪರಿವಾರದ ಹಿಂದೂ ಮಹಾ ಸಭಾ, ವಿಶ್ವ ಹಿಂದೂ ಪರಿಷತ್, ಮುಂತಾದ ಧಾರ್ಮಿಕ ಮುಖದ ರಾಜಕೀಯ ಸಂಘಟನೆಗಳಲ್ಲಿ ವಿವಿಧ ಜಾತಿ ಮತಗಳ ಮಠಾಧೀಶರು ಮತ್ತು ಮಠಮಾನ್ಯಗಳ ಮುಖ್ಯಸ್ಥರು ಸಕ್ರಿಯರಾಗಿ ಭಾಗವಹಿಸಿಯೂ ತಮಗೆ ಮಾತೃಸಂಸ್ಥೆಯಾದ ರಾಷ್ಟ್ರೀಯ ಸೇವಾ ಸಂಘದ ಜೊತೆ ಯಾವ ಸಂಬಂಧವೂ ಇಲ್ಲ ಎಂದು ಸುಳ್ಳು ಹೇಳುತ್ತಾರೆ. ‘ನಾವು ಸಮಾನ ಮನಸ್ಕರು’ ಎಂದು ರಾಜಕಾರಣಿಗಳ ಭಾಷೆಯಲ್ಲಿ, ಸುಳ್ಳು-ನಿಜಗಳ ‘ಕಂದು ನೆಲೆ’ಯಲ್ಲಿ ನಿಂತು ನುಣಿಚಿಕೊಳ್ಳುತ್ತಾರೆ. 

ಪೇಜಾವರ ಮತ್ತು ಪಂಕ್ತಿಭೇದ

‘ಬುದ್ಧಿಜೀವಿಗಳು ಹಿಂದೂ ಧರ್ಮದ ವಿರೋಧಿಗಳು’ ಎಂದು ಪೇಜಾವರ ಮಠಾಧೀಶರು ಹೇಳಿದರೆಂದು ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಯಿತು. ಇದಕ್ಕೆ ನಾಟಕದ ಪ್ರಸನ್ನ, ಅಕೆಡಮಿಕ್ ಚಿಂತಕರಾದ ಪೃಥ್ವಿ ದತ್ತ ಚಂದ್ರಶೋಭಿ ತಮ್ಮ ಪತ್ರಿಕಾಅಂಕಣಗಳಲ್ಲಿ ಸುದೀರ್ಘ ಪ್ರತಿಕ್ರಿಯೆ ನೀಡಿ ದಲಿತರು ಮತ್ತು ಜಾತಿಶೋಷಿತರ ಪರವಾಗಿ ಸ್ಪಂದಿಸುವ ಬುದ್ಧಿಜೀವಿಗಳು ಮಾನವೀಯತೆಯನ್ನು ಆಧರಿಸಿ ಯೋಚಿಸುವ ಪ್ರಗತಿಪರರು, ಮತ್ತು ವೈಚಾರಿಕ ನೆಲೆಯುಳ್ಳವರು. ಪೇಜಾವರರಿಗೆ ದಲಿತರ ನೋವನ್ನು ಅರ್ಥಮಾಡಿಕೊಳ್ಳಬಲ್ಲ ಸಂವೇದನಾಶೀಲತೆ ಬೇಕು ಎಂದು ಹೇಳಿದರು. ಮಾಮೂಲಿನಂತೆ ಪೇಜಾವರರು ಎಲ್ಲ ‘ಬುದ್ಧಿಜೀವಿಗಳೂ ಹಿಂದೂ ಧರ್ಮದ ವಿರೋಧಿಗಳು ಎಂದು ನಾನು ಹೇಳಿಲ’್ಲ ಎಂಬ ಸ್ಪಷ್ಟೀಕರಣ ನೀಡಿದರು. ಅಂದರೆ ಎಡಪಂಥೀಯ ಬುದ್ಧಿಜೀವಿಗಳು ಹಿಂದೂ ಧರ್ಮದ ವಿರೋಧಿಗಳು ಎಂಬುದು ಅವರ ಇಂಗಿತ. ಎಡಪಂಥೀಯ ಬುದ್ಧಿಜೀವಿಗಳು ‘ಹಿಂದುತ್ವದ ವಿರೋಧಿಗಳು’ ಎಂಬ ವರ್ಗಹಿತಾಧಾರಿತ ತೀರ್ಮಾನ ಅವರ ಮನದಾಳದಿಂದ ಹೊರಬರುವಾಗ ‘ಹಿಂದೂಧರ್ಮದ ವಿರೋಧಿಗಳು’ ಎಂದಾಗುತ್ತದೆ. ಏಕೆಂದರೆ ಅವರು ಸಂಘಪರಿವಾರದ ರಾಜಕೀಯ ಅಜೆಂಡಾ ಆದ ‘ಹಿಂದುತ್ವವನ್ನು’ ತರ್ಕದ ಚೆಂಡನ್ನಾಗಿಸಿ ಸಂಘಪರಿವಾರದ ಭಾವನಾರಹಿತ ಅಧಿಕಾರದ ಗೋಲಿನ ಕಡೆಗೇ ಹೋಗುವಂತೆ ತಡೆಯೊಡ್ಡುತ್ತಾ ಎದುರಾಳಿಗಳ ದಿಕ್ಕು ತಪ್ಪಿಸುವ ಚತುರ. ಎಡಪಂಥೀಯರು ವೈಚಾರಿಕವಾಗಿ ಮಂಡಿಸುವ ಮಾನವೀಯತೆಯ ತಡೆಗಳನ್ನು ತಪ್ಪಿಸಿ ಹಿಂದುತ್ವದ ಗೋಲಿನತ್ತ ತಮ್ಮ ಚೆಂಡನ್ನು ತೂರಿಸಲೆತ್ನಿಸುವ ಕಾಲ್ಚೆಂಡಿನ ಪಟುತ್ವದ ಬುದ್ಧಿಜೀವಿ.

ಮಹಾಭಾರತದಲ್ಲಿ ಯಕ್ಷನು ಹುಟ್ಟಿನಿಂದ ಬ್ರಾಹ್ಮಣನಾಗಿ ಪ್ರವೃತ್ತಿಯಲ್ಲಿ ಶೂದ್ರನಾಗಿದ್ದರೆ ಅಂಥವನು ಬ್ರಾಹ್ಮಣನೆ? ಹುಟ್ಟಿನಿಂದ ಶೂದ್ರನಾಗಿ ಪ್ರವೃತ್ತಿಯಲ್ಲಿ ಬ್ರಾಹ್ಮಣನಾಗಿದ್ದರೆ ಅಂತವನು ಶೂದ್ರನೆ? ಎಂದು ಕೇಳುವ ಪ್ರಶ್ನೆಗಳಿಗೆ, ಬ್ರಾಹ್ಮಣತ್ವ ಮತ್ತು ಶೂದ್ರತ್ವಗಳನ್ನು ವ್ಯಕ್ತಿಯ ಪ್ರವೃತ್ತಿಯಿಂದಲೇ ನಿರ್ಧರಿಸಬೇಕು ಎಂದು ಧರ್ಮರಾಯ ಉತ್ತರಿಸುತ್ತಾನೆ. ಛಾಂದೋಗ್ಯೋಪನಿಷತ್ತಿನಲ್ಲಿ ಅರೆಶಿಕ್ಷಣ ಪಡೆದು ಗುರುಕುಲದಿಂದ ಮರಳುವ ಶ್ವೇತಕೇತುವನ್ನು ಅವನ ತಂದೆಯು ನಮ್ಮ ವಂಶದಲ್ಲಿ ಹೆಸರಿಗೆ ಮಾತ್ರ ಬ್ರಾಹ್ಮಣರಾಗಿದ್ದವರು ಇರಲಿಲ್ಲ. ಆದ್ದರಿಂದ ನಿಜವಾಗಿ ಬ್ರಾಹ್ಮಣನೆನಿಸಲು ಬ್ರಹ್ಮಜ್ಞಾನವನ್ನು ಸರಿಯಾಗಿ ಅರಿತುಕೊ ಎಂದು ಅವನಿಗೆ ಬ್ರಹ್ಮಜ್ಞಾನವನ್ನು ವಿವರಿಸಿ ಹೇಳುತ್ತಾನೆ. 

ಪೇಜಾವರ ಸ್ವಾಮಿಗಳು ಪಂಕ್ತಿಭೇದದ ಅಗತ್ಯವನ್ನು ವಿವರಿಸುತ್ತಾ ಬೇರೆ ಪಂಕ್ತಿ ಬಯಸುವ ಮಡಿವಂತ ಬ್ರಾಹ್ಮಣರಿಗೆ ಮಠದಲ್ಲಿ ಪ್ರತ್ಯೇಕ ಅವಕಾಶ ಕಲ್ಪಿಸುವುದು ಪಂಕ್ತಿಭೇದ ಅಲ್ಲ ಎನ್ನುತ್ತಾರೆ. ಈ ಮಡಿವಂತ ಬ್ರಾಹ್ಮಣರು ಯಾವ ಅರ್ಥದಲ್ಲಿ ಬ್ರಾಹ್ಮಣರು? ಬ್ರಾಹ್ಮಣರೆನಿಸಲು ಜುಟ್ಟು-ಜನಿವಾರ-ಅಂಗಾರ-ಗೋಪಿಚಂದನಗಳು ಸಾಕೆ?

ಪೇಜಾವರರು ತಮ್ಮ ಮಠಕ್ಕೆ ಭೇಟಿಕೊಡುವ ಎಷ್ಟೋ ಬ್ರಾಹ್ಮಣರು ಖಾಸಗಿಯಾಗಿ ಮಾಂಸ ತಿನ್ನುವುದರಿಂದ, ಹೆಂಡ ಕುಡಿಯುವುದರಿಂದ ತಾವು ಮಠಕ್ಕೆ ಬರುವ ಬ್ರಾಹ್ಮಣರೊಡನೆಯೂ ಊಟಕ್ಕೆ ಕೂರುವುದಿಲ್ಲ ಎಂದು ತಮ್ಮ ಪಂಕ್ತಿ ಭೇದವನ್ನು ಸಮರ್ಥಿಸುತ್ತಾರೆ. ಆ ಮಾಂಸ ತಿನ್ನುವ, ಹೆಂಡ ಕುಡಿಯುವ ಬ್ರಾಹ್ಮಣರು ಯಾವ ಅರ್ಥದಲ್ಲಿ ಬ್ರಾಹ್ಮಣರು? ಅಂಥವರು ಮಠಕ್ಕೆ ಬಂದಾಗ ಜುಟ್ಟು-ಜನಿವಾರ-ಅಂಗಾರ-ಗೋಪಿಚಂದನಗಳನ್ನು ಧರಿಸಬಹುದೆ?

ಪೇಜಾವರರು ಅಷ್ಟಮಠಗಳ ಇತರ ಯತಿಗಳೊಂದಿಗೆ, ಮಠದಲ್ಲೇ ಇರುವ ತಮ್ಮ ಖಾಸಾ ಶಿಷ್ಯರೊಂದಿಗೆ ಊಟ ಮಾಡುತ್ತಾರೆಯೆ? ಅವರ ವೈಯಕ್ತಿಕ ನೀತಿ-ನಡವಳಿಕೆಗಳ ಬಗ್ಗೆ ಎಂದೂ ಸಂದೇಹ ಮೂಡುವುದಿಲ್ಲವೆ?

ಪೇಜಾವರರೆ ಹೇಳುವಂತೆ, ಮಠದಲ್ಲೇ ವಿವಿಧ ಕಾರಣಗಳಿಗಾಗಿ ಬೇರೆ ಬೇರೆ ಪಂಕ್ತಿಗಳಲ್ಲಿ ಕೂತು, ಊಟ ಮಾಡುವ ಬೇರೆ ಬೇರೆ ಹಿನ್ನೆಲೆಯ ಎಲ್ಲರಿಗೂ ಒಂದೇ ಬಗೆಯ, ಒಂದೇ ಗುಣ ಮಟ್ಟದ, ಖಾದ್ಯಗಳನ್ನು ಒಂದೇ ಭಾವನೆಯಿಂದ ಬಡಿಸಲಾಗುತ್ತದೆಯೆ? ಹಾಗಿಲ್ಲದಿದ್ದರೆ ಖಾದ್ಯಗಳ, ಭಾವನೆಗಳ ಭೇದ ಯಾಕಾಗಿ ಆಗುತ್ತದೆ?    

ಮಠಕ್ಕೆ ಸೇರಿರುವ ಗದ್ದೆಗಳಲ್ಲಿ ದುಡಿದು ದವಸ-ಧಾನ್ಯಗಳನ್ನು, ಗುಳ್ಳ, ಕುಂಬಳ, ತರಕಾರಿಗಳನ್ನು ಮಠಕ್ಕೆ ಒದಗಿಸುವ ಶ್ರಮಜೀವಿಗಳ ಶ್ರಮಶಕ್ತಿ ಯಾವಜಾತಿ? ದೇಶದ ಯಾವುದೋ ಮೂಲೆಗಳಿಂದ ಮಠಕ್ಕೆ ಸರಬರಾಜಾಗುವ ದ್ರಾಕ್ಷಿ, ಗೋಡಂಬಿ, ಕಲ್ಲುಸಕ್ಕರೆ, ಜೇನುತುಪ್ಪ, ಹಾಲು ಮೊಸರುಗಳನ್ನು ಸರಬರಾಜು ಮಾಡುವ ಜನರು ಯಾವ ಜಾತಿ, ಯಾವ ಕುಲ, ಏನು ತಿಂದಿರುತ್ತಾರೆ, ಏನು ಕುಡಿದಿರುತ್ತಾರೆ ಎಂದು ತಿಳಿದು ಅವರು ಸರಬರಾಜು ಮಾಡುವ ವಸ್ತುಗಳನ್ನು ಮಠದಲ್ಲಿ ಬಳಸಲಾಗುತ್ತದೆಯೆ? ಪಾದಪೂಜೆ ಮಾಡುವ ಭಕ್ತರು ಕೊಡುವ ಹಣಕ್ಕೆ ಜಾತಿ ಇದೆಯೆ? ದೇಶ ವಿದೇಶಗಳ ಭಕ್ತರು ಭಕ್ತಿಯಿಂದ ಮಠಕ್ಕೆ ಅರ್ಪಿಸುವ ವಂತಿಗೆ-ದಾನ-ಧರ್ಮಗಳ ಮೌಲ್ಯವನ್ನು ಯಾರು ಸೃಷ್ಟಿಸುತ್ತಾರೆ? ಎಲ್ಲೋ ಸುರಿದ ಮಳೆ, ಕಾದ ಬಿಸಿಲು, ಯಾರೋ ಹಾಕಿದ ಶ್ರಮ, ಎಲ್ಲೋ ಯಾರೋ ಬೆಳೆದ, ಅರೆದ ಕಬ್ಬಿನಿಂದ ಮಾಡಿದ ಸಕ್ಕರೆ, ಎಲ್ಲೋ ಬೆಳೆದ ಬೇಳೆಕಾಳು, ಅಕ್ಕಿ, ಗೋಧಿ, ಉದ್ದು, ಹೆಸರು ಮುಂತಾದವುಗಳಿಂದಲ್ಲವೇ ನಮ್ಮ ಮೈ, ಮನಸ್ಸು, ಬುದ್ಧಿ, ವಿವೇಕಗಳು ರೂಪುಗೊಂಡು ಕೆಲಸ ಮಾಡುವುದು? ಇದರಲ್ಲಿ ಜಾತಿ ಮತಗಳನ್ನು ಗುರುತಿಸುವುದು ಸಾಧ್ಯವೆ? ಯಾವ ಮಡಿವಂತರು, ಯಾವ ಜ್ಞಾನಿಗಳು ಇದನ್ನು ಮಾಡಬಲ್ಲರು?

ಮಧ್ವಾಚಾರ್ಯರು ಪ್ರತಿಪಾದಿಸಿದ ಪಂಚಮಹಾಭೇದ ವ್ಯಕ್ತಿ, ಪ್ರಕೃತಿ, ಜಗತ್ತು ಮತ್ತು ದೈವಿಕತೆಯ ಪರಿಕಲ್ಪನೆಗಳ ನಡುವಿನ ಭಾವನಾತ್ಮಕ ಸಂಬಂಧಗಳನ್ನು ತಾತ್ವಿಕವಾಗಿ ಅರ್ಥಮಾಡಿಕೊಳ್ಳುವ ಒಂದು ವೈಚಾರಿಕ ವಿಧಾನ. ನಮ್ಮ ಅನುಭವವನ್ನು ಆಧರಿಸಿ ಹುಟ್ಟುವ ಆಲೋಚನೆಗಳನ್ನು ಸಂಗತವಾಗುವ ರೀತಿಯಲ್ಲಿ ಜೋಡಿಸುವುದು ತರ್ಕದ ಉದ್ದೇಶ. ತರ್ಕವು ಆಲೋಚನೆಗಳನ್ನು, ಆಲೋಚನೆಗಳು ಸಂಬಂಧಗಳನ್ನು ನಿರಾಕರಿಸಿದರೆ ತರ್ಕವೇ ಅಂತಿಮ ಕಾಣ್ಕೆಯಾಗಿ ವಿಜೃಂಭಿಸುತ್ತದೆ. ಭಾವನೆಗಳು ಕಾಣಿಸುವುದೇ ಇಲ್ಲ. ಭಗವಂತನು ಭಾವಗೋಚರ ಎನ್ನುವುದು ಇದಕ್ಕೇ. ಕರಿಕಲ್ಲಿನಲ್ಲಿ ಪ್ರೇಮದ ಪ್ರತೀಕವಾದ ಕೃಷ್ಣನ್ನು ಭಾವಿಸುವ ಮನಸ್ಸಿಗೆ ಸಮಾಜದ ಸಹಜೀವಿಗಳಲ್ಲಿನ ಜಾತಿ ಭೇದದ ಅವಮಾನ ನೋವು, ನರಳಿಕೆ, ಕ್ರೋಧಗಳನ್ನು ಪ್ರೀತಿ-ವಿಶ್ವಾಸ-ನಂಬಿಕೆ-ಸಮಾನತೆಗಳ ಹಂಬಲವನ್ನು ಭಾವಿಸುವುದು ಕಷ್ಟವೆ? ಕಷ್ಟ ಎಂದಾದರೆ, ಭಾವಿಸುವ ಮನಸ್ಸನ್ನು ವೈಧಾನಿಕವಾಗಿ ಪೂಜಿಸುವ ಕಲ್ಲಿನೊಂದಿಗೆ ಕಲ್ಲಾಗಿಸುವ ತರ್ಕಬದ್ಧತೆಯನ್ನು ಕೊಳೆತ ಕುಂಬಳಕಾಯಿಯಂತೆ ತಿಪ್ಪೆಗೆಸೆಯಬೇಕು, ಅಲ್ಲವೆ?

ಪ್ರೊ. ವಿ.ಎನ್. ಲಕ್ಷ್ಮೀನಾರಾಯಣ