ಕಾರ್ಮಿಕರ ಅಂತರರಾಷ್ಟ್ರೀಯ ಐಕ್ಯತೆಗೆ 17ನೇ WFTU ಸಮ್ಮೇಳನ

ಸಂಪುಟ: 
10
ಸಂಚಿಕೆ: 
47
date: 
Sunday, 13 November 2016
Image: 

ವಿಮೋಚನಾ ಚಳುವಳಿಗಳಲ್ಲಿ ಯಶಸ್ವಿ ಪಡೆದಿರುವ ದಕ್ಷಿಣ ಆಫ್ರಿಕಾದ ದರ್ಬಾನ್‍ನಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ (World Federation of Trade Union) ದ 17ನೇ ಸಮ್ಮೇಳನ ಅಕ್ಟೋಬರ್ 5 ರಿಂದ 8ರ ತನಕ ನಡೆಯಿತು. ಈ ಸಮ್ಮೇಳನಕ್ಕೆ 5 ಖಂಡಗಳ, 111 ದೇಶಗಳಲ್ಲಿರುವ 244 ಕೇಂದ್ರ ಕಾರ್ಮಿಕ ಸಂಘಟನೆಗಳ 1500 ಜನಪ್ರತಿನಿಧಿಗಳು ಮತ್ತು ವೀಕ್ಷಕರು ಪಾಲ್ಗೊಂಡಿದ್ದರು. ಅಕ್ಟೋಬರ್ 5ರಂದು ಬೆಳಿಗ್ಗೆ 9.00 ಗಂಟೆಗೆ ಉದ್ಘಾಟನಾ ಸಮಾರಂಭ ಪ್ರಾರಂಭವಾಯಿತು. ದಕ್ಷಿಣ ಆಫ್ರಿಕಾದ ಕಾರ್ಮಿಕ ಸಂಘಟನೆಯ ಅಧ್ಯಕ್ಷರಾದ ಸಿದ್ದುಂ ದಾಲ್ಮಿನ್ ಸ್ವಾಗತಿಸಿದರು. “ಬಂಡವಾಳಶಾಹಿ ಸೃಷ್ಟಿಸಿದ ಬಡತನ ಮತ್ತು ಯುದ್ಧಗಳ ವಿರುದ್ಧ ಮತ್ತು ಪ್ರಸ್ತುತ ಕಾರ್ಮಿಕ ವರ್ಗದ ಅಗತ್ಯಗಳನ್ನು ಪಡೆದುಕೊಳ್ಳಲು ಕಾರ್ಮಿಕರ ಅಂತರರಾಷ್ಟ್ರೀಯ ಐಕ್ಯತೆ” ಈ ಘೋಷಣೆಯಡಿ 17ನೇ WFTU ಸಮ್ಮೇಳನ ಸಂಘಟಿಸಲಾಗಿತ್ತು.

ದಕ್ಷಿಣ ಆಫ್ರಿಕಾ ಸರ್ಕಾರದ ಅಧ್ಯಕ್ಷರಾದ ಜಾಕೋಬ್ ಜುಮಾರವರು ಉದ್ಘಾಟನೆ ಮಾಡಿದರು. ಬಂಡವಾಳಶಾಹಿ ವ್ಯವಸ್ಥೆ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಬಿಗಡಾಯಿಸುತ್ತಾ ಹೋಗುತ್ತದೆ. ಉದ್ಯೋಗಗಳು ಅಭದ್ರತೆಯಲ್ಲಿವೆ. ಹೊಸ ಹೊಸ ತಂತ್ರಜ್ಞಾನಗಳಿಂದ ಉದ್ಯೋಗಗಳ ಸೃಷ್ಟಿಯ ಬದಲಿಗೆ ಉದ್ಯೋಗಗಳ ಕಡಿತ ಹೆಚ್ಚಾಗುತ್ತಿದೆ. ಆದ್ದರಿಂದ ತಂತ್ರಜ್ಞಾನಗಳಿಂದ ಯಾವ ಬದಲಾವಣೆಯೂ ಆಗದು ಎಂದು ವಿವರಿಸಿದರು.

“ಕಾರ್ಮಿಕರು ಹೋರಾಟಕ್ಕಿಳಿದರೆ ಅವರ ಕೈಗಳಲ್ಲಿನ ಸಂಕೋಲೆಗಳ ಹೊರತು ಕಳೆದುಕೊಳ್ಳಲು ಬೇರೇನೂ ಇಲ್ಲ” ಎಂಬ ಪ್ರಸಿದ್ದ ತತ್ವಜ್ಞಾನಿ ಕಾರ್ಲ್‍ಮಾಕ್ರ್ಸ್‍ರ ಮಾತುಗಳನ್ನು ನೆನಪಿಸಿದರು. ನಂತರ ಪ್ರಾರಂಭವಾದ ಅಧಿವೇಶನದಲ್ಲಿ WFTU ವಿನ ಪ್ರಧಾನ ಕಾರ್ಯದರ್ಶಿಗಳಾದ ಕಾಂ.ಮಾವ್ರಿಕೋಸ್‍ರವರು ವರದಿ ಮಂಡನೆ ಮಾಡಿದರು. ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಈ ಸಮ್ಮೇಳನದಲ್ಲಿ ಎಲ್ಲಾ ದೇಶಗಳಲ್ಲಿರುವ ಕಾರ್ಮಿಕರ ಸಮಸ್ಯೆಗಳು, ಸರ್ಕಾರಗಳ ನೀತಿಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಚಳುವಳಿಯ ಅಗತ್ಯತೆಗಳ ಬಗ್ಗೆ ಒತ್ತಿ ವಿವರಿಸಿದರು. ಅವರ ವರದಿಯ ಕೆಲವು ಪ್ರಮುಖ ಅಂಶಗಳು ಕೆಳಗಿವೆ:

ಜಾಗತಿಕ ಕಾರ್ಮಿಕ ವರ್ಗದ ಪರಿಸ್ಥಿತಿ

ಯುರೋಪ್ :

ಗ್ರೀಸ್, ಪೋರ್ಚುಗಲ್, ಇಟಲಿ, ಸ್ಪೈನ್‍ಗಳ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯುರೋಪಿಯನ್ ಒಕ್ಕೂಟದ ದೇಶಗಳ ನಡುವೆಯೇ ಸ್ಪರ್ಧೆ ಹೆಚ್ಚುತ್ತಿದೆ. ಐಎಂಎಫ್, ಯುರೋಪಿಯನ್ ಒಕ್ಕೂಟ, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‍ಗಳ ಪ್ರೇರಿತ ನೀತಿಗಳು ಕಾರ್ಮಿಕರ ಗಳಿಕೆ ಮೇಲೆ ದಾಳಿ ಮಾಡಿವೆ. ಅಧಿಕ ತೆರಿಗೆ, ವೇತನ ಕಡಿತ, ನಿರುದ್ಯೋಗ ದರದಲ್ಲಿ ಹೆಚ್ಚಳ, ಪಿಂಚಣಿ ಕಡಿತ, ಸಾರ್ವಜನಿಕ ಸೇವೆಗಳ ಖಾಸಗೀಕರಣ ಮುಂತಾದ ವಿದ್ಯಮಾನಗಳು ಕಂಡು ಬರುತ್ತಿವೆ. ಇತ್ತೀಚೆಗಿನ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರ ನಡೆಯಬೇಕೆಂಬ ಜನಾಭಿಪ್ರಾಯ ತೀರ್ಪು ಕೂಡ ಯುರೋಪಿಯನ್ ಒಕ್ಕೂಟದ ಕಾರ್ಮಿಕ ವಿರೋಧಿ ನೀತಿಗಳಿಗೆ ತಡೆ ಒಡ್ಡಿಲ್ಲ.

ಆಫ್ರಿಕಾ :

ಆರ್ಥಿಕ ಬೆಳವಣಿಗೆ ಹೆಚ್ಚಳವನ್ನು ತೋರಿಸುತ್ತಿದೆ. ಆದರೆ ಕಾರ್ಮಿಕರ ಬದುಕಿನ ಬವಣೆಗಳು ಹೆಚ್ಚುತ್ತಿವೆ. ಒಂದೆಡೆ ಏಕಸ್ವಾಮ್ಯ ಬಂಡವಾಳಗಾರರಿಂದ ನಿಸರ್ಗ ಸಂಪತ್ತಿನ ಹಾಗೂ ಆರ್ಥಿಕ ಸಂಪತ್ತಿನ ಲೂಟಿ ನಿರಂತರವಾಗಿ ನಡೆದಿದೆ. ಮತ್ತೊಂದೆಡೆ ಕಾರ್ಮಿಕರು ಆಹಾರ, ಸುರಕ್ಷಿತ ವಸತಿ, ಆರೋಗ್ಯ, ಶಿಕ್ಷಣ ಮುಂತಾದ ವಿಚಾರಗಳಲ್ಲಿ ದೊಡ್ಡ ಬವಣೆ ಅನುಭವಿಸುತ್ತಿದ್ದಾರೆ. ಮನುಷ್ಯನ ಜೀವಿತಾವಧಿ ಆಫ್ರಿಕ ದೇಶಗಳಲ್ಲಿ ಕಡಿಮೆ ಇದೆ.

ಏಷ್ಯಾ :

ಕಾರ್ಮಿಕರ ಜೀವನಮಟ್ಟ ಅಧೋಗತಿಯಲ್ಲಿದೆ. ಮಿಲಿಯಾಂತರ ಜನ ಕಾರ್ಮಿಕರು ದಿನಕ್ಕೆ 2 ಅಮೆರಿಕನ್ ಡಾಲರ್ ಆದಾಯದಲ್ಲಿ ಬದುಕು ದೂಡುತ್ತಿದ್ದಾರೆ. ಜೀವನಾವಶ್ಯಕ ಅಗತ್ಯಗಳು ದಿನೇ ದಿನೇ ದುಬಾರಿಯಾಗುತ್ತಿವೆ. ಭಾರತದಲ್ಲಿ ಮಿಲಿಯಾಂತರ ಜನತೆ ವಸತಿ ಸೌಕರ್ಯವಿಲ್ಲದೆ ನಿಕೃಷ್ಟ ಜೀವನ ನಡೆಸುತ್ತಿದ್ದಾರೆ. ಬಾಲ ಕಾರ್ಮಿಕ ಪದ್ಧತಿ, ಮಹಿಳೆಯರಿಗೆ ತಾರತಮ್ಯ ವ್ಯಾಪಕವಾಗಿದೆ. ಮತ್ತೊಂದೆಡೆ ಕಾಪೋರೇಟ್ ಕಂಪನಿಗಳ ಬಹುರಾಷ್ಟ್ರೀಯ ಕಂಪನಿಗಳ ಆದಾಯ ತೀವ್ರವಾಗಿ ಏರುತ್ತಿದೆ.

ಲ್ಯಾಟಿನ್ ಅಮೆರಿಕಾ ಮತ್ತು ಕೆರೆಬಿಯನ್ ದೇಶಗಳು : 

ಸಂಪದ್ಭರಿತವಾದ ಮಣ್ಣು, ಹೇರಳ ಕೃಷಿ ಉತ್ಪಾದನೆಯಿದ್ದರೂ ದುಡಿಯುವ ಜನರ ಬದುಕು ಉತ್ತಮವಾಗಿಲ್ಲ. ಬಡವರು ಮತ್ತು ಶ್ರೀಮಂತರ ನಡುವಿನ ಅಗಾಧ ಅಂತರ ಇನ್ನೂ ಮುಂದುವರಿದೇ ಇದೆ. ಕಡು ಬಡತನ ನಿವಾರಣೆ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳಿಂದಾಗಿ ಹಲವು ದೇಶಗಳಲ್ಲಿ ಕಾರ್ಮಿಕರ ವೇತನದಲ್ಲಿ ಹೆಚ್ಚಳವಾಗಿದೆ. ಆದರೂ ಈ ಏರಿಕೆ ಸಾಲದಾಗಿದೆ. ವಸತಿ ಸಮಸ್ಯೆ ಅಲ್ಲದೆ ವಿದ್ಯುತ್ ಸೌಕರ್ಯ ಇಲ್ಲದ ಪರಿಸ್ಥಿತಿ ಮುಂದುವರಿದಿದೆ.

ಕೋಲಂಬಿಯಾ, ಮಧ್ಯ ಅಮೆರಿಕ ದೇಶಗಳು ಮತ್ತು ಮೆಕ್ಸಿಕೋ :

ಕಾರ್ಮಿಕ ಚಳುವಳಿ ಹಾಗೂ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ. 9000ಕ್ಕೂ ಜನರು ರಾಜಕೀಯ ಖೈದಿಗಳಾಗಿ ಜೈಲುಗಳಲ್ಲಿದ್ದಾರೆ. ಅದರಲ್ಲಿ WFTU ಮುಖಂಡರು ಸೇರಿದ್ದಾರೆ. ಪ್ರತಿವರ್ಷವೂ ಹತ್ತಾರು ಕಾರ್ಮಿಕ ಮುಖಂಡರನ್ನು ಕೊಲೆಗೈಯುತ್ತಾ ಬರಲಾಗಿದೆ.

ಕ್ಯೂಬಾ:

ಒಂದೆಡೆ ಅಮೆರಿಕದ ಒತ್ತಡ, ಮತ್ತೊಂದೆಡೆ ದೀರ್ಘ ಕಾಲದ ದಿಗ್ಭಂದನದ ಪರಿಣಾಮ ಇನ್ನೂ ಇದೆ. ಅಮೆರಿಕದ ಬಂಧನದಲ್ಲಿಟ್ಟಿದ್ದ `5 ಜನ ಕ್ಯೂಬನ್ ವೀರ’ರನ್ನು ಬಿಡುಗಡೆ ಮಾಡಬೇಕೆಂಬ ಚಳುವಳಿ ಕೊನೆಗೂ ಯಶಸ್ಸು ಕಂಡಿತು.

ಉತ್ತರ ಅಮೆರಿಕ:

ನಿರುದ್ಯೋಗ ಪ್ರಮಾಣ ಅತ್ಯಧಿಕವಿದೆ. ಜೀವನ ವೆಚ್ಚಕ್ಕೆ ಹೋಲಿಸಿದರೆ ವೇತನ ಕಡಿಮೆ ಇದೆ. ಅಮೆರಿಕದಲ್ಲಿ ಶಿಕ್ಷಣ, ಆರೋಗ್ಯ ಸೌಕರ್ಯಗಳು, ಆಯಕಟ್ಟಿನ ಉದ್ದಿಮೆಗಳ ಖಾಸಗೀಕರಣವು ಜನಜೀವನವನ್ನು ದುರ್ಬರಗೊಳಿಸಿವೆ. ಸಾಮಾಜಿಕ ಅಸಮಾನತೆ, ಆಫ್ರೋ ಅಮೆರಿಕನ್ನರಿಗೆ ತಾರತಮ್ಯದ ಜನಾಂಗೀಯ ನೀತಿಗಳು ಮುಂದುವರೆದಿವೆ.

ವರದಿಯ ಮೇಲೆ ಚರ್ಚೆ

ಈ ವರದಿಯ ಮೇಲೆ ಎಲ್ಲಾ ಪ್ರಮುಖ ರಾಷ್ಟ್ರಗಳಾದ ಚೈನಾ, ಡೆನ್ಮಾರ್ಕ್, ಗ್ಯಾಬ್ರಿಯಾ, ಕೊರಿಯಾ, ಇರಾನ್, ಪ್ಯಾಲೇಸ್ಟಿನ್, ಕ್ಯಾಮರೂನ್, ಅಮೆರಿಕಾ, ಗ್ರೀಸ್, ವಿಯೆಟ್ನಾಂ, ಪನಾಮ, ಜಿಂಬಾಬ್ವೆ, ಪೋರ್ಚ್‍ಗಲ್, ಆಸ್ಟ್ರೇಲಿಯಾ, ಬೊಲಿವಿಯಾ, ಈಜಿಪ್ಟ್, ಟುನಿಷಿಯಾ ಇನ್ನೂ ಮುಂತಾದ ದೇಶಗಳಿಂದ ತಲಾ 7 ನಿಮಿಷಗಳ ಕಾಲ 112 ಪ್ರತಿನಿಧಿಗಳು ಮಾತನಾಡಿದರು. ಭಾರತದಿಂದ AITUC, CITU, TUCC, AIUTUC ಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಎಐಟಿಯುಸಿವಿನಿಂದ ಕಾಂ.ಅಮರ್‍ಜಿತ್ ಕೌರ್ ಮತ್ತು ಸಿಐಟಿಯುವಿನಿಂದ ಕಾಂ.ಕೆ.ಹೇಮಲತಾರವರು ಪಾಲ್ಗೊಂಡಿದ್ದರು. ಮೊದಲನೆ ದಿನದ ಅಧ್ಯಕ್ಷೀಯ ಮಂಡಳಿಯಲ್ಲಿ ಭಾರತದ ಸಿಐಟಿಯುವಿನ ಪ್ರತಿನಿಧಿಯಾಗಿ ಕಾಂ.ಕೆ.ಹೇಮಲತಾರವರಿದ್ದರು. ಒಟ್ಟು ವರದಿಯ ಮೇಲೆ ಮಾತನಾಡಿದರು.

ಸಮ್ಮೇಳನದ ಕಾರ್ಯಕಲಾಪಗಳಲ್ಲಿ ಬಂದು ಮಾತನಾಡಿ ಇನ್ನೊಬ್ಬ ಪ್ರತಿನಿಧಿ ವೇದಿಕೆಯ ಮೇಲೆ ಬರುವ ವೇಳೆಗೆ ಅಂತರರಾಷ್ಟ್ರೀಯ ಕ್ರಾಂತಿಗೀತೆಗಳು, ಸಮೂಹ ನೃತ್ಯಗಳು ನಡೆಯುತ್ತಿದ್ದವು. ಸಮೂಹ ನೃತ್ಯಗಳಲ್ಲಿ ವೇದಿಕೆ ಮೇಲಿರುವ, ವೇದಿಕೆ ಕೆಳಗಿರುವ ಎಲ್ಲಾ ಪ್ರತಿನಿಧಿಗಳು ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರು. ಹಾಗಾಗಿ ದಿನಕ್ಕೆ 18 1/2 ಗಂಟೆ ಪ್ರತಿನಿಧಿ ಅಧಿವೇಶನ ನಡೆಯುತ್ತಿದ್ದರೂ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆಗೆ ಹೆಚ್ಚೇನು ಕಷ್ಟವಾಗುತ್ತಿರಲಿಲ್ಲ.

ಸಿಐಟಿಯುವಿನಿಂದ ಕಾಂ.ಸ್ವದೇಶ್ ದೇವರಾಯ್, ಕಾಂ.ಕೆ.ಹೇಮಲತಾ, ಕಾಂ.ಅಮಿತಾವ್ ಗುಪ್ತಾ, ಕಾಂ.ಎಸ್.ವರಲಕ್ಷ್ಮಿ, ಕಾಂ.ಕರೀಂ ಮತ್ತು ಮುತ್ತು ಸುಂದರಂ ಪಾಲ್ಗೊಂಡಿದ್ದರು. ಅಂಗನವಾಡಿ ಫೆಡರೇಷನ್‍ನಿಂದ ಕಾಂ.ಎ.ಆರ್.ಸಿಂಧು, ಬಿಇಎಫ್‍ಐನಿಂದ ಕಾಂ.ಪ್ರದೀಪ್ ಬಿಸ್ವಾಸ್, ತೈಲ ಸಂಘಟನೆಗಳಿಂದ ಕಾಂ.ನೊಗೇನ್, ಕೇಂದ್ರ ಸೇವೆಯಿಂದ ಕಾಂ.ಗಿರಿರಾಜ್‍ಸಿಂಗ್ ಮತ್ತು ಕಾಂ.ಎಂ.ಎಸ್.ರಾಜ, ವಿದ್ಯುತ್ ಕ್ಷೇತ್ರದಿಂದ ಕಾಂ.ಪ್ರಶಾಂತ್ ಚೌದುರಿ, ಸ್ಟೀಲ್ ವರ್ಕರ್ಸ್ ಸಂಘಟನೆಯಿಂದ ಕಾಂ.ಪ್ರದೀಪ್ ಕುಮಾರ್ ದಾಸ್ ಮತ್ತು ಕಾಂ.ರೆಡ್ಡಿ, ಗ್ರಾಮೀಣ ಬ್ಯಾಂಕ್‍ನಿಂದ ಇಬ್ಬರು ಸಂಗಾತಿಗಳು, ಬಂದರು ಕಾರ್ಮಿಕರ ಸಂಘಟನೆಯಿಂದ ಕಾಂ.ಭೂಷಣ್ ಪಾಟೀಲ, ಸಾರಿಗೆಯಿಂದ ಕಾಂ.ದಿವಾಕರ್ ಮುಂತಾದ 23 ಸಂಗಾತಿಗಳು ಪಾಲ್ಗೊಂಡಿದ್ದರು.

ಅಕ್ಟೋಬರ್ 6 ಮತ್ತು 7ರಂದು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮತ್ತು ಸಮಿತಿಗೆ ಚುನಾವಣೆ ನಡೆಯಿತು. ಪ್ರತಿನಿಧಿ ಅಧಿವೇಶನ ನಡೆಯುವಾಗಲೇ 20 ಜನರು ಹೋಗಿ ಮತ ಚಲಾಯಿಸಲು ಸಮಯ ಕೊಡುತ್ತಿದ್ದರು. ಚುನಾವಣೆಯ ಅಂತಿಮ ಫಲಿತಾಂಶದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾಂ.ಮಾವ್ರಿಕೋಸ್‍ರವರು ಬಹುಮತದಿಂದ ಆಯ್ಕೆಯಾದರು. ಅಧ್ಯಕ್ಷರಾಗಿ ದಕ್ಷಿಣ ಆಫ್ರಿಕಾದ ಕೊಸೇಟೋ ಸಂಘಟನೆಯ ನಾಯಕರಾದ ಕಾಂ.ಮೈಕ್‍ರವರನ್ನು ಆಯ್ಕೆ ಮಾಡಲಾಯಿತು.

WFTU ನ ಕಿರುನೋಟ :

1945 ಅಕ್ಟೋಬರ್ 3 ರಂದು ಪ್ಯಾರೀಸ್‍ನಲ್ಲಿ ಜಗತ್ತಿನ ವಿವಿಧ ದೇಶಗಳ ಕಾರ್ಮಿಕ ಸಂಘಗಳು ಸೇರಿ ವಿಶ್ವ ಕಾರ್ಮಿಕ ಸಂಘಟನೆಗಳ ಫೆಡರೇಷನ್‍ನ್ನು ಸ್ಥಾಪಿಸಲಾಯಿತು. ದಮನಿತ ಶ್ರಮಿಕರ ಅಂತರರಾಷ್ಟ್ರೀಯತೆ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಚಳುವಳಿಯ ಐಕ್ಯತೆ ಸಾಧಿಸುವುದು ಇದರ ಸ್ಥಾಪನೆಯ ಉದ್ದೇಶವಾಗಿದ್ದರಿಂದ ಬೇರೆ ಕಾರ್ಮಿಕ ಸಂಘಗಳಿಗಿಂತ ಗುಣಲಕ್ಷಣಗಳಲ್ಲಿ ಇದು ಭಿನ್ನತೆ ಹೊಂದಿತ್ತು. ಸಂಸ್ಥಾಪನಾ ಅಧಿವೇಶನದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಲೂಯೀಸ್ ಸೇಲಂರವರು ತಮ್ಮ ಐತಿಹಾಸಿಕ ಭಾಷಣದಲ್ಲಿ WFTUವಿನ ಹುಟ್ಟು ಮತ್ತು ಉದ್ದೇಶ ಕುರಿತು ಅರ್ಥಗರ್ಭಿತವಾಗಿ ವಿವರಿಸಿದ್ದರು. ಜಗತ್ತಿನ ವಸಾಹತುಶಾಹಿ ಹಿಡಿತದಲ್ಲಿದ್ದ ಜನರ ವಿಮೋಚನೆಗೆ ಮತ್ತು ಶಾಂತಿ ಸ್ಥಾಪಿಸಲು, ಫ್ಯಾಸಿಸಂ ಅಪಾಯದ ವಿರುದ್ಧ ಕಾರ್ಮಿಕರ ಜಂಟಿ ಹೋರಾಟ ಉತ್ತಮ ಜೀವನಮಟ್ಟಕ್ಕೆ ಹೋರಾಡಲು ಮತ್ತು ಯುದ್ಧದಾಹಿ ಹಾಗೂ ಶೋಷಕ ಗುತ್ತೇದಾರಿಗಳ ವಿರುದ್ಧ ಸಮರ ಸಾರುವ ಐಕ್ಯತೆಯ ಕೂಸು WFTU.

WFTU-ICFTU ಗಳ ನಡುವಿನ ವ್ಯತ್ಯಾಸ

ಅಂತರರಾಷ್ಟ್ರೀಯ ವರ್ಗ ಸಹಕಾರಿ ಮನೋಭಾವದವರಿಂದಾದ ಬಿರುಕು ಸಾಮ್ರಾಜ್ಯಶಾಹಿ ಪಿತೂರಿಯ ಭಾಗವಾಗಿ 1949ರಲ್ಲಿ ಸಂಭವಿಸಿತು. ಬಂಡವಾಳಶಾಹಿ ಹಿಂಬಾಲಕರೆಲ್ಲರೂ ಸೇರಿ ICFTU (International Confederation of Trade Union) ಎನ್ನುವುದನ್ನು ಸ್ಥಾಪಿಸಿದರು. WFTU (World Federation of Trade Union) ಪ್ರಪಂಚವನ್ನು ಸಮಾಜವಾದಿ ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲು ಬಯಸಿದರೆ ICFTU ಬಂಡವಾಳಶಾಹಿ ಶೋಷಣಾತ್ಮಕ ಸಾಮಾಜಿಕ ಪದ್ಧತಿಯ ರಕ್ಷಣೆಗೆ ತನ್ನ ಕಾರ್ಯಕ್ರಮಾತ್ಮಕ ಬದ್ಧತೆಯನ್ನು ಹೊಂದಿತು. ಇದು ಇವರೆಡರ ಮೂಲಭೂತ ಭಿನ್ನತೆ. ಸಾಮ್ರಾಜ್ಯಶಾಹಿಗಳ ಜನವಿರೋಧಿ, ಕಾರ್ಮಿಕ ವಿರೋಧಿ, ಕಾರ್ಮಿಕ ಸಂಘ ವಿರೋಧಿಯಾದ ನಿಲುವು ಹಾಗೂ ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆರ್ಥಿಕ ಸಾರ್ವಭೌಮತೆ ನಾಶ ಮಾಡುವ ಶಕ್ತಿಗಳ ವಿರುದ್ಧ ಅಮೂಲಾಗ್ರ ಸಮರ ಸಾರುವುದು WFTU ಮಾತ್ರವೇ.

ಆದ್ದರಿಂದಲೇ WFTUವಿಗೆ ಸಂಯೋಜನೆಯಾಗುವ ಸಂಘಟನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

WFTUವಿನ 16ನೇ ಕಾಂಗ್ರೆಸ್‍ಗೆ ಇದ್ದ ಸದಸ್ಯತ್ವ 7 ಕೋಟಿ 60 ಲಕ್ಷ. ಈಗ 9 ಕೋಟಿ 20 ಲಕ್ಷಕ್ಕೆ ಸದಸ್ಯತ್ವ ಹೆಚ್ಚಾಗಿದೆ. ಹಾಗೇಯೇ ಈ ಕೆಳಗಿನ ಕೈಗಾರಿಕಾವಾರು ಅಂತರರಾಷ್ಟ್ರೀಯ TUIs (Trade Union Internationals) ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ.

1. ಬ್ಯಾಂಕ್-ಎಲ್‍ಐಸಿ, 2. ಕಟ್ಟಡ, 3. ಶಿಕ್ಷಣದ ರಂಗ, 4. ಇಂಧನ, 5. ಹೋಟೆಲ್-ಪ್ರವಾಸೋಧ್ಯಮ, 6. ಸ್ಟೀಲ್ ಮತ್ತು ಗಣಿ ಉದ್ಯಮ, 7. ನಿವೃತ್ತಿ-ಪಿಂಚಣಿದಾರರು, 8. ಸಾರ್ವಜನಿಕ ಸೇವೆ (ರಾಜ್ಯ, ಕೇಂದ್ರ ಸೇವೆಗಳು) 9. ಸಾರಿಗೆ, 10. ಟೆಕ್ಸ್‍ಟೈಲ್ಸ್, ಆಹಾರ, ಕೃಷಿ, ವಾಣಿಜ್ಯ ವಲಯಗಳಿಗೆ ಸಂಬಂಧಿಸಿದ ಕೈಗಾರಿಕೆಗಳು.

ಪ್ರಧಾನ ಕಾರ್ಯದರ್ಶಿಗಳ ವರದಿ ಮೇಲಿನ ಚರ್ಚೆಗೆ ಉತ್ತರ ನೀಡುತ್ತಾ “ಸಂಘಗಳು ಕಾರ್ಮಿಕ ವರ್ಗದ ಶಾಲೆಗಳಾಗಿರಬೇಕು, ನಾಯಕರು ಅಧಿಕಾರಿಗಳಾಗಬಾರದು, ಸಂಘಗಳೂ ಕಂಪನಿಗಳಲ್ಲಿ, ಹೋರಾಟಗಳ ಕೇಂದ್ರವಾಗಬೇಕು. ವರ್ಗದ ಐಕ್ಯತೆ, ವರ್ಗ ಸಂಘಟನೆಯ ಗುರಿಯಾಗಿರಬೇಕು”. 71 ವರ್ಷಗಳ ಇತಿಹಾಸವಿರುವ WFTU ದುಡಿಯುವ ಜನತೆಯ ವೇದಿಕೆ ಮತ್ತು ದುಡಿಯುವ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಎಂಬುದಾಗಿ ಕರೆ ನೀಡಿದರು.

ಅಕ್ಟೋಬರ್ 8 ರಂದು ರಾಲಿಯಲ್ಲಿ ‘ಅಮಾನ್ತಾ’ (ಐಕ್ಯತೆ), ‘ಅಸ್ತಾ’ (ಕೆಂಪುವಂದನೆ), ‘ವಿವಾ’ (ಚಿರಾಯುವಾಗಲಿ) ಎಂಬ ಘೋಷಣೆಗಳೊಂದಿಗೆ ಸಮ್ಮೇಳನ ಮುಕ್ತಾಯವಾಯಿತು.

ಎಸ್. ವರಲಕ್ಷ್ಮಿ