Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಕಿಸಾನ್ ಸಂಘರ್ಷ ಜಾಥಾ ಕರ್ನಾಟಕದಲ್ಲಿ

ಸಂಪುಟ: 
10
ಸಂಚಿಕೆ: 
47
Sunday, 13 November 2016

ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನೇತೃತ್ವದಲ್ಲಿ ದೇಶದ ಉದ್ದಗಲಕ್ಕೂ ಹಮ್ಮಿಕೊಂಡಿರುವ `ಕಿಸಾನ್ ಸಂಘರ್ಷ ಜಾಥಾ'ವು ಈಗಾಗಲೇ ನವೆಂಬರ್ 2ರಿಂದ ಪ್ರಾರಂಭವಾಗಿದೆ. ಕರ್ನಾಟಕ ಮಾರ್ಗವಾಗಿ ಹಾದು ಹೋಗುವ ಒಂದು ಜಾಥಾವು ತಮಿಳುನಾಡಿನ ವಿಧುರ ನಗರದಲ್ಲಿ ಉದ್ಘಾಟನೆಗೊಂಡು ಹೊರಟಿದ್ದು, ಅದು ನವೆಂಬರ್ 5ರ ಸಂಜೆ ಬೆಂಗಳೂರಿಗೆ ಪ್ರವೇಶ ಪಡೆಯಿತು. 

ಬೆಂಗಳೂರು: ನವೆಂಬರ್ 6ರಂದು ಬೆಂಗಳೂರಿನ ಬನ್ನಪ್ಪ ಪಾರ್ಕ್‍ನಲ್ಲಿ ಆಕರ್ಷಕವಾದ ಬಹಿರಂಗ ಸಭೆ ಮೂಲಕ ಸ್ವಾಗತ ಕೋರಲಾಯಿತು. ಸಭೆಯನ್ನು ಉದ್ದೇಶಿಸಿ ಎಐಕೆಎಸ್‍ನ ಜಂಟಿ ಕಾರ್ಯದರ್ಶಿ ವಿಜು ಕೃಷ್ಣನ್‍ರವರು ಮಾತನಾಡಿ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಆತ್ಮಹತ್ಯೆಯ ಹಾದಿ ತುಳಿದಿದ್ದರೂ, ವೈಜ್ಞಾನಿಕ ಬೆಲೆಗಳನ್ನು ನಿಗದಿ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜು ರವರು ಮಾತನಾಡಿ `ಅರಣ್ಯ ಮತ್ತು ಸರ್ಕಾರಿ ಭೂಮಿಯನ್ನು ರೈತರಿಗೆ ನೀಡಬೇಕಾದರೆ ಅರಣ್ಯ ಕಾಯ್ದೆಗೆ ತಿದ್ದುಪಡಿ ತರುವುದು ಅಗತ್ಯವಾಗಿದೆ. ಸರ್ಕಾರಿ ಮತ್ತು ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕೂಡಲೇ ಸಾಗುವಳಿ ಪತ್ರಗಳನ್ನು ನೀಡಬೇಕು. ಬಹುರಾಷ್ಟ್ರೀಯ ಕಂಪನಿಗಳು ನಡೆಸುತ್ತಿರುವ ಒಪ್ಪಂದ ಕೃಷಿಗೆ ನಿಷೇಧ ಹೇರಬೇಕು ಎಂದು ತಿಳಿಸಿದರು.

ಬಹಿರಂಗ ಸಭೆಯಲ್ಲಿ ಪ್ರಾಂತ ರೈತ ಸಂಘದ ಮುಖಂಡರಾದ ಎನ್.ವೆಂಕಟಾಚಲಯ್ಯ, ಟಿ.ಯಶವಂತ್, ಚಂದ್ರಪ್ಪ ಹೊಸ್ಕೇರಾ, ವನಜಾ, ಮತ್ತಿತರ ಮುಖಂಡರು ಇದ್ದರು.  

ದೇವನಹಳ್ಳಿ: ಅಲ್ಲಿಂದ ಹೊರಟ ಜಾಥಾವು ಟಿಪ್ಪು ಸುಲ್ತಾನ್ ಹುಟ್ಟಿದ ನಾಡು ದೇವನಹಳ್ಳಿ ಪ್ರದೇಶಕ್ಕೆ ಬಂದಾಗ ಜಾಥಾ ಮುಖಂಡರಿಗೆ ಹೂ ಮಾಲೆ ಹಾಕಿ, ಹೂವಿನ ಸುರಿಮಳೆ ಮೂಲಕ ಸ್ವಾಗತಿಸಿದರು. ರೈತರು, ಕೃಷಿ ಕೂಲಿಕಾರರು, ಮಹಿಳೆಯರು, ವಿದ್ಯಾರ್ಥಿ-ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆರ್.ಆರ್.ಮನೋಹರ್, ಹರೀಂದ್ರ, ಆರ್.ಚಂದ್ರತೇಜಸ್ವಿ ಮಂತಾದ ಮುಖಂಡರು ಉಪಸ್ಥಿತರಿದ್ದರು.

ಕೋಲಾರ: ಮರು ದಿನ ಕೋಲಾರಕ್ಕೆ ಆಗಮಿಸಿದ ಜಾಥಾವು ಬಹಿರಂಗ ಸಭೆಯ ಮೂಲಕ ದೇಶ ಹಾಗೂ ರಾಜ್ಯದ ಕೃಷಿ ಮತ್ತು ರೈತರ ಗಂಭೀರ ಸಮಸ್ಯೆಗಳ ಬಗ್ಗೆ ಮುಖಂಡರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಜಿ.ಸಿ.ಬಯ್ಯಾರೆಡ್ಡಿ ಮತ್ತಿತರ ಮುಖಂಡರು ಹಾಜರಿದ್ದರು.

ಮುಳಬಾಗಿಲು: ಜಿಲ್ಲೆಯ ಮುಳಬಾಗಿಲಿಗೆ ಬಂದ ಜಾಥಾವನ್ನು ಕೆಪಿಆರ್‍ಎಸ್ ಜಿಲ್ಲಾ ಅಧ್ಯಕ್ಷರಾದ ಪಿ.ಆರ್.ಸೂರ್ಯನಾರಾಯಣ, ಜಿಲ್ಲಾ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಮುಖಂಡರಾಧ ಪುಣ್ಯಹಳ್ಳಿ ಶಂಕರ್, ವಾಸುದೇವರೆಡ್ಡಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಚಿಕ್ಕಬಳ್ಳಾಪುರದಲ್ಲಿ ಜಾಥಾ

ನವೆಂಬರ್ 8ರಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸಿದಾಗ ರೈತರು ಸ್ವಾಗತ ಕೋರಿದರು. ಮುಖಂಡರಾದ ಮುನಿವೆಂಕಟಪ್ಪ, ಚನ್ನರಾಯಪ್ಪ, ಮತ್ತಿತರರು ಇದ್ದರು. ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಕ್ಕೆ ಹೊರಟ ಜಾಥಾವು ಶಿಡ್ಲಘಟ್ಟದಲ್ಲಿ ಸಮರ್ಪಕ ವಿದ್ಯುತ್ ಸರಬರಾಜಿಗಾಗಿ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಹೋರಾಟವನ್ನು ಉದ್ದೇಶಿಸಿ ಕಾ. ವಿಜು ಕೃಷ್ಣನ್‍ರವರು ಮಾತನಾಡಿದರು.  

ನವೆಂಬರ್ 8ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಂಚರಿಸಿದ ಜಾಥಾವು ಶಿಡ್ಲಘಟ್ಟದಿಂದ ಹೊರಟು ಚಿಕ್ಕಬಳ್ಳಾಪುರ ತಾಲ್ಲೂಕು ಗಡಿ ಗುಡಿಬಂಡೆಯ ವರ್ಲಕೊಂಡದಲ್ಲಿ ರೈತರು ಅತ್ಯಂತ ವಿಜೃಂಭಣೆಯಿಂದ ಸ್ವಾಗತಕೋರಿದರು. ವರ್ಲಕೊಂಡದಿಂದ ಸುಮಾರು 1200-1300 ಬೈಕ್‍ನಲ್ಲಿ ಸುಮಾರು 3.500ಕ್ಕೂ ಹೆಚ್ಚಿನ ಜನತೆ ರೈತ ಹೋರಾಟದ ಸಂಕೇತವಾದ ಕೆಂಪು ಬಾವುಟಗಳನ್ನು ಹಿಡಿದು ಜಾಥಾವನ್ನು ಬರಮಾಡಿಕೊಂಡು ಅಲ್ಲಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 15-16 ಕಿ.ಮೀ. ವರೆಗೆ ಸಾಗಿದ ಬೈಕ್ ರ್ಯಾಲಿಯೂ ಅತ್ಯಂತ ಆಕರ್ಷಣೀಯವಾಗಿ ಇತ್ತು. 

ಅಂದು ಸಂಜೆ 4 ಗಂಟೆಗೆ ಬಾಗೇಪಲ್ಲಿಯಲ್ಲಿ ನಡೆದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಜು ಕೃಷ್ಣನ್ ರವರು ``ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ದೇಶವನ್ನು ಒತ್ತೆ ಹಾಕುವ ಜಾಗತೀಕರಣ ನೀತಿಗಳನ್ನು ಜಾರಿಗೊಳಿಸುತ್ತಿದೆ. ಇದರಿಂದಾಗಿ ದೇಶದಲ್ಲಿ ಗಂಭೀರ ಬಿಕ್ಕಟ್ಟು ಎದುರಾಗುತ್ತಿದೆ. ಇದು ಕೃಷಿ ರಂಗವನ್ನು ತೀವ್ರವಾಗಿ ಬಾಧಿಸುತ್ತಿದ್ದು, ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಉಪಕರಣಗಳ ವೆಚ್ಚಗಳು ಮತ್ತು ಸಾಲದ ಬಡ್ಡಿದರವು ದಿನೇ ದಿನೇ ಹೆಚ್ಚುತ್ತಲೇ ಇವೆ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ದೇಶದ ರೈತರು ಇಂದು ಪ್ರತಿ 26 ನಿಮಿಷಕ್ಕೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆಗಳ ಸಂಖ್ಯೆಯೂ 3.75 ಲಕ್ಷಕ್ಕೆ ಹೆಚ್ಚಳವಾಗಿದೆ. ಏರುತ್ತಿರುವ ಅಗತ್ಯವಸ್ತುಗಳ ಬೆಲೆಗಳು ಮತ್ತು ಆಧುನೀಕರಣದಿಂದಾಗಿ ಕೃಷಿಯಲ್ಲಿ ಕಡಿತಗೊಳ್ಳುತ್ತಿರುವ ಉದ್ಯೋಗದ ಪರಿಣಾಮವಾಗಿ ರೈತರ ಆದಾಯದ ಕೊರತೆ ಉಂಟಾಗಿದೆ ಎಂದು ಆರೋಪಿಸಿದರು.

ಕೆಪಿಆರ್‍ಎಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕರೂ ಆದ ಕಾ. ಜಿ.ವಿ.ಶ್ರೀರಾಮರೆಡ್ಡಿರವರು ಮಾತನಾಡಿ ``ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡೂ ಪಕ್ಷಗಳು ಅನುಸರಿಸುತ್ತಿರುವ ನೀತಿಗಳು ಒಂದೇ ಆಗಿವೆ. ಈ ಎರಡು ಪಕ್ಷಗಳು ರೈತಪರವಾಗಿ ಕೆಲಸ ಮಾಡಲು ಯಾವುದೇ ಅರ್ಹತೆಯನ್ನು ಹೊಂದಿಲ್ಲ. ಒಂದು ನವ ಉದಾರವಾದಿ ನೀತಿಯನ್ನು ವ್ಯವಸ್ಥಿತವಾಗಿ ಜಾರಿ ಮಾಡುತ್ತದೆ. ಮತ್ತೊಂದು ನವ ಉದಾರವಾದಿ, ಜಾಗತೀಕರಣವನ್ನು ಆಕ್ರಮಣಕಾರಿ ಜಾರಿ ಮಾಡುವ ಜೊತೆಗೆ ಕೋಮುವಾದವನ್ನು ವ್ಯಾಪಕವಾಗಿ ಹರಡುವ ಮೂಲಕ ಜನತೆಯನ್ನು ಇನ್ನಷ್ಟು ಸಂಕಷ್ಟಕ್ಕೆ ಇಡೂ ಮಾಡುತ್ತಿದ್ದು, ಇವರಿಬ್ಬರ ನೀತಿಗಳು ಒಂದಕ್ಕೊಂದು ಪೂರಕವಾಗಿ ಇವೆ.

ರಾಜ್ಯದಲ್ಲಿ 142 ತಾಲ್ಲೂಕಿನಲ್ಲಿ ಸತತವಾಗಿ ಬರಗಾಲದ ಪರಿಣಾಮವಾಗಿ ರೈತರು ಕಂಗಾಲಾಗಿದ್ದು, ಒಂದು ಬೆಳೆ ಇಲ್ಲ, ಜೊತೆಗೆ ಬೆಲೆ ನಷ್ಟದ ಪರಿಣಾಮಗಳು ಎದುರಾಗಿದೆ. ಉದ್ಯೋಗ ಖಾತ್ರಿಯಲ್ಲೂ ಸಮಸ್ಯೆಗಳು ಎದುರಾಗಿ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸವಾಗಿ ಟಿಪ್ಪು ಜಯಂತಿ ಬಗ್ಗೆ ಪರ ವಿರೋಧ ಎಂದು ಸಾಕಷ್ಟು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಟಿಪ್ಪು ಮಾತ್ರ ದೇಶದ್ರೋಹಿಯಾಗಿ ಕಾಣಸಿಗುತ್ತಾರೆ. ಬ್ರಿಟಿಷರ ವಿರುದ್ಧ ದೇಶಕ್ಕಾಗಿ ಸ್ವಾತಂತ್ರಕ್ಕಾಗಿ ಹೋರಾಡಿದ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿರಾಣಿ, ಮುಂತಾದ ರಾಜರೂ ಇವರಿಗೆ ದೇಶದ್ರೋಹಿಗಳಾಗಿಲ್ಲ, ಟಿಪ್ಪು ಮಾತ್ರ ದೇಶದ್ರೋಹಿಗಳಾಗಿ ಕಂಡಿದ್ದಾರೆ. ಅಧಿಕಾರದ ಲಾಲಸೆಗೆ ದಿನಕ್ಕೊಂದು ಬಣ್ಣ ಬದಲಿಸಿ ಮಾತನಾಡುವ ಹಂತಕ್ಕೆ ಈ ಎರಡು ಪಕ್ಷಗಳು ಮುಂದಾಗಿವೆ ಎಂದು ಕಟುವಾಗಿ ಟೀಕಿಸಿದರು.

ಕೆಪಿಆರ್‍ಎಸ್ ಪ್ರಧಾನ ಕಾರ್ಯದರ್ಶಿ ಯು.ಬಸವರಾಜುರವರು ಮಾತನಾಡಿ ``ಕೃಷಿ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಅಪೌಷ್ಠಿಕತೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರಕಾಗಳನ್ನು ನಂಬದೇ ತಮ್ಮ ಬದುಕನ್ನು ರೂಪಿಸಿಕೊಳ್ಳು ಮುಂದಾಗಿ ಸರಕಾರಿ ಹಾಗೂ ಅರಣ್ಯ ಜಮೀನುಗಳನ್ನು ಅಭಿವೃದ್ಧಿ ಪಡಿಸಿ ಫಲವತ್ತಾದ ಜಮೀನುಗಳನ್ನಾಗಿ ಮಾಡಿಕೊಂಡು ಬಗರ್‍ಹುಕುಂ ಸಾಗುವಳಿದಾರರಾಗಿ ಸುಮಾರು 40 ಲಕ್ಷ ಜನತೆ ತಮ್ಮ ಜೀವನ ನಿರ್ವಹಣೆ ಮಾಡುತ್ತಿರುವ ಲಕ್ಷಾಂತರ ಕುಟುಂಬಗಳ ಬಡವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಕ್ಕು ಪತ್ರ ನೀಡಿ ರಕ್ಷಣೆ ನೀಡುವ ಬದಲು, ಅವರನ್ನು ಒಕ್ಕಲೆಬ್ಬಿಸುವ ಒತ್ತುವರಿ ಮಾಡಿಕೊಂಡು ಲಕ್ಷಾಂತರ ಜಮೀನುಗಳನ್ನು ಭೂ ಬ್ಯಾಂಕ್ ಹೆಸರಿನಲ್ಲಿ ದೊಡ್ಡ ದೊಡ್ಡ ಕಂಪನಿಗಳಿಗೆ ನೀಡುವ ಹುನ್ನಾರಕ್ಕೆ ಮುಂದಾಗಿದೆ ಎಂದು ತಿಳಿಸಿದರು.

ಬಹಿರಂಗ ಸಭೆಯಲ್ಲಿ 4 ಸಾವಿರಕ್ಕೂ ಹೆಚ್ಚಿನ ರೈತರು ಭಾಗವಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಧಿಕ್ಕಾರವನ್ನು ಕೂಗಿದರು. ಅಖಿಲ ಭಾರತ ಜಾಥಾವನ್ನು ಅತ್ಯಂತ ವೈಭವಯೂತವಾಗಿ ಮುಂದಿನ ಪ್ರದೇಶಕ್ಕೆ ಕಳುಹಿಸಿಕೊಟ್ಟರು.