ಬಿಡುಗಡೆಯಾದ ಪುಸ್ತಕಗಳು

ಸಂಪುಟ: 
10
ಸಂಚಿಕೆ: 
47
Sunday, 13 November 2016
  • ‘ಅಕ್ಟೋಬರ್ ಕ್ರಾಂತಿ - ಮನುಕುಲಕ್ಕೆ ಹೊಸ ಹಾದಿ’ ರಶ್ಯನ್ ಕ್ರಾಂತಿಯ ಹಿನ್ನೆಲೆ, ಘಟನಾವಳಿ ಹೇಳುತ್ತಾ, ಭಾರತದ ಮತ್ತು ಜಗತ್ತಿನ ಮೇಲೆ ಅದರ ಪರಿಣಾಮಗಳು, ಸಾಧನೆಗಳು, ಅದರ ಪತನಕ್ಕೆ ಕಾರಣಗಳು, ಅದರ ಚಿರಂತನ ಮಹತ್ವ ಮತ್ತು ಇಡೀ ಮನುಕುಲಕ್ಕೆ ಅದು ತೋರಿಸಿದ ಹಾದಿ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತದೆ. ಸಿಪಿಐ(ಎಂ) ಕೇಂದ್ರ ಪ್ರಕಟಿಸಿರುವ ಇಂಗಿಷ್ ಪುಸ್ತಕದ ಮತ್ತು ಕಾ. ಸೀತಾರಾಂ ಯೆಚುರಿ ಅವರ ವಿಶೇಷ ಲೇಖನಗಳು ಇದರಲ್ಲಿವೆ. ಈ ಅನುವಾದಗಳನ್ನು ವೇದರಾಜ ಎನ್.ಕೆ. ಮತ್ತು ಎಂ.ಜಿ.ವೆಂಕಟೇಶ ಮಾಡಿದ್ದಾರೆ.
  • ‘ರಶ್ಯನ್ ಕಾಂತಿ-ವಾಸ್ತವವಾಗಿ ನಡೆದದ್ದೇನು?’ ರಶ್ಯನ್ ಕ್ರಾಂತಿಯ ಹಿನ್ನೆಲೆ, ಘಟನಾವಳಿಗಳನ್ನು ಕಾಮಿಕ್ಸ್ ರೂಪದಲ್ಲಿ ಹೊಸ ಓದುಗರಿಗೆ ಕೊಡುವ ಪ್ರಯತ್ನ. ಇದು 1914ರಿಂದ 1922 ವರೆಗಿನ ಸೋವಿಯೆಟ್ ಒಕ್ಕೂಟದ ರಚನೆ ವರೆಗಿನ ಘಟನಾವಳಿಗಳನ್ನು ವಿವರವಾಗಿ ಸಚಿತ್ರವಾಗಿ ಮುಂದಿಡುತ್ತದೆ. 
  • ಚಿಂತನ ಪುಸ್ತಕ ಪ್ರಟಿಸಿರುವ ‘ಸೋವಿಯೆಟ್ ಒಕ್ಕೂಟ - ನಿಮಗೆ ತಿಳಿದಿರಲಿ’ (ಲೇಖಕ ವಸಂತರಾಜ್ ಎನ್.ಕೆ.) ಎಂಬ ಪುಸ್ತಕ 1917ರಿಂದ 1991ರಲ್ಲಿ ಸೋವಿಯೆಟ್ ಒಕ್ಕೂಟದ ಪತನದ ಮತ್ತು ಆ ಮೇಲಿನ ಬೆಳವಣಿಗೆಗಳ ಒಂದು ನೋಟವನ್ನು ಕೊಡುತ್ತದೆ. ಸೋವಿಯೆಟ್ ಒಕ್ಕೂಟದ ಸುಮಾರು ಏಳು ದಶಕಗಳ ಮತ್ತು ನಂತರದ ಅವಧಿಗಳನ್ನು ಸುಮಾರು 10 ಅವಧಿಗಳಾಗಿ ಗುರುತಿಸಿ ಆಯಾ ಘಟ್ಟದ ಸಾಧನೆ, ವೈಫಲ್ಯ, ಸವಾಲುಗಳನ್ನು ವಸ್ತುನಿಷ್ಟವಾಗಿ ಕೊಡಲಾಗಿದೆ. ಇದರಲ್ಲಿ ಸೋವಿಯೆಟ್ ಒಕ್ಕೂಟದ ಪತನಕ್ಕೆ ಕಾರಣಗಳೂ, ಆ ನಂತರದ ಬಂಡವಾಳಶಾಹಿ ಮರುಸ್ಥಾಪನೆ ಪತನದ ಬಗ್ಗೆಯೂ ಇದೆ.
  • ‘ನೆನೆ ನೆನೆ ಆ ದಿನಗಳ - ಅಕ್ಟೋಬರ್ ಕ್ರಾಂತಿಯ ರೋಚಕ ಕತೆ’ ರಶ್ಯನ್ ಕ್ರಾಂತಿಯ ಹಿನ್ನೆಲೆ, ಘಟನಾವಳಿಗಳು, ಕ್ರಾಂತಿಯ ನಂತರ ನಡೆದ ಸಾಮ್ರಾಜ್ಯಶಾಹಿ ದಾಳಿ, ಆಂತರಿಕ ಯುದ್ಧ, ಸಮಾಜವಾದಿ ಪ್ರಭುತ್ವದ ಅಂತಿಮ ವಿಜಯದ ಬಗ್ಗೆ ಸ್ವಲ್ಪ ವಿಸ್ತಾರವಾಗಿಯೇ ನಿರೂಪಿಸುತ್ತದೆ. ಎ.ಎಸ್.ಆಚಾರ್ಯ ಬರೆದ ‘ಅಕ್ಟೋಬರ್ ಕ್ರಾಂತಿಯತ್ತ’ 1905ರ ಕ್ರಾಂತಿಯಿಂದ 1914ರ ವರೆಗಿನ ಘಟನಾವಳಿಗಳನ್ನು ನಿರೂಪಿಸುತ್ತದೆ. ಅವರೇ ಬರೆದ ‘ಮಹಾನ್ ಅಕ್ಟೋಬರ್ ಸಮಾಜವಾದಿ ಕ್ರಾಂತಿ’ 1914ರಿಂದ 1917 ಅಕ್ಟೋಬರ್ ವರೆಗಿನ ಮೈ ನವಿರೇಳೀಸುವ ಘಟನೆಗಳನ್ನು ರೋಚಕವಾಗಿ ಹೇಳುತ್ತದೆ. ಅಕ್ಟೋಬರ್ ಕ್ರಾಂತಿಯ ಪ್ರತ್ಯಕ್ಷದರ್ಶಿ ಬೆಸ್ಸಿ ಬಿಯೆಟ್ಟಿ ಎಂಬ ಅಮೆರಿಕನ್ ಪತ್ರಕರ್ತೆ ಅವರು ಬರೆದ ಪುಸ್ತಕದ ಒಂದು ರೋಚಕ ಭಾಗ ‘ನವೆಂಬರ್ 1917ರ ಆ ಒಂದು ರಾತ್ರಿ’ ಇಲ್ಲಿದೆ. ವೇದರಾಜ ಎನ್,ಕೆ. ಅವರು ಬರೆದ “ವರ್ಗಶತ್ರುಗಳೊಡನೆ ಸೆಣಸಿ ಬಳೆದ ಕ್ರಾಂತಿಶಿಶು’ 1917 ಅಕ್ಟೋಬರ್ ನಿಂದ 1922 ವರೆಗೆ ನಡೆದ ಅಂತರ್ಯುದ್ಧದ ಅಷ್ಟಾಗಿ ಗೊತ್ತಿಲ್ಲದ ಅಪಾರ ಬಲಿದಾನಗಳ ರಕ್ತಸಿಕ್ತ ಅಧ್ಯಾಯವನ್ನು ನಿರೂಪಿಸುತ್ತದೆ. ಅವರೇ ಬರೆದ ಕೊನೆಯ ಅಧ್ಯಾಯ 1922ರಲ್ಲಿ ನಡೆದ  ‘ಸೋವಿಯೆಟ್ ಒಕ್ಕೂಟದ ರಚನೆ’ಯ ಪ್ರಕ್ರಿಯೆ ಬಗ್ಗೆ ಹೇಳುತ್ತದೆ.

ಅಕ್ಟೋಬರ್ ಕ್ರಾಂತಿ 100 ಪ್ರಕಟಣೆ ಮಾಲೆ (ಪ್ರಕಾಶಕರ ಮಾತುಗಳ ಆಯ್ದ ಭಾಗಗಳು)

20ನೇ ಶತಮಾನದ ಉದ್ದಕ್ಕೂ ರಶ್ಯನ್ ಕ್ರಾಂತಿ ಮತ್ತು ಸಮಾಜವಾದಿ ವ್ಯವಸ್ಥೆ ವಿರುದ್ಧ ಬಂಡವಾಳಶಾಹಿ ಅಪಪ್ರಚಾರ ಮಾಡುತ್ತಾ ಬಂದಿದೆ. ರಶ್ಯನ್ ಕ್ರಾಂತಿ ಮತ್ತು ಸಮಾಜವಾದಿ ವ್ಯವಸ್ಥೆಯ ಸಾಧನೆಗಳನ್ನು ಅಲ್ಲಗಳೆದು ಅಥವಾ ನಿರ್ಲಕ್ಷಿಸಿ, ಕೆಲವು ನ್ಯೂನತೆಗಳನ್ನು ಬೆಟ್ಟದಷ್ಟು ದೊಡ್ಡದು ಮಾಡುವುದು ಈ ಅಪಪ್ರಚಾರದ ಭಾಗವಾಗಿದೆ. ಇದಕ್ಕೆ ಜಾಗತಿಕ ಕಮ್ಯುನಿಸ್ಟ್ ಮತ್ತು ದುಡಿಯುವ ಜನತೆಯ ಚಳುವಳಿಗಳು ಉತ್ತರ ಕೊಡುತ್ತಾ ರಶ್ಯನ್ ಕ್ರಾಂತಿ ಮತ್ತು ಸಮಾಜವಾದಿ ವ್ಯವಸ್ಥೆಯ ಸಾಧನೆಗಳ ಬಗ್ಗೆ ತಿಳುವಳಿಕೆ ನೀಡುತ್ತಾ ಬಂದಿವೆ. 20ನೇ ಶತಮಾನದ ಉತ್ತಾರಾರ್ಧದಲ್ಲಿ ಜಗತ್ತಿನ ಮೂರನೇ ಒಂದು ಭಾಗ ಜನ ಸಮಾಜವಾದಿ ವ್ಯವಸ್ಥೆ ಆರಿಸಿಕೊಂಡಾಗ, ಈ ಅಪಪ್ರಚಾರದ  ‘ಶೀತ ಸಮರ’ ತಾರಕಕ್ಕೇರಿತ್ತು. ಈ ಅಪಪ್ರಚಾರವನ್ನು ಬಯಲಿಗೆಳೆದು ದುಡಿಯುವ ಜನತೆಗೆ ಸರಿಯಾದ ತಿಳುವಳಿಕೆ ನೀಡುವುದು ತಮ್ಮ ಪ್ರಾಥಮಿಕ ಕರ್ತವ್ಯ ಎಂದು ಜಾಗತಿಕ ಕಮ್ಯುನಿಸ್ಟ್ ಮತ್ತು ದುಡಿಯುವ ಜನತೆಯ ಚಳುವಳಿಗಳು ಭಾವಿಸಿ ಅದನ್ನು ನಿರ್ವಹಿಸುತ್ತಾ ಬಂದಿವೆ. ಸೋವಿಯೆಟ್ ಒಕ್ಕೂಟದ ಪತನದ ನಂತರ ಈ ಅಪಪ್ರಚಾರ ಹೊಸ ಆಯಾಮಗಳನ್ನೂ ಅವತಾರಗಳನ್ನೂ ಕಂಡಿದೆ. ಸಮಾಜವಾದಿ ವ್ಯವಸ್ಥೆ ಎಂಬುದು ಒಂದು ಸುಂದರ ಕನಸು. ಕಾರ್ಯಸಾಧ್ಯ ವ್ಯವಸ್ಥೆಯಲ್ಲ. ಸೋವಿಯಟ್ ಒಕ್ಕೂಟ ಮಾತ್ರವಲ್ಲ, ಎಲ್ಲಾ ಸಮಾಜವಾದಿ ವ್ಯವಸ್ಥೆಗಳೂ ಬಿದ್ದು ಹೋಗುತ್ತವೆ. ಬಂಡವಾಳಶಾಹಿ ವ್ಯವಸ್ಥೆಯೊಂದೇ ಅಂತಿಮ ಆದರ್ಶ ವ್ಯವಸ್ಥೆ ಎಂಬುದು ಈ ಅವಧಿಯ ಅಪಪ್ರಚಾರದ ಹೂರಣ.  

ಇಂದಿನ ಪರಿಸ್ಥಿತಿಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯೊಂದೇ ಅಂತಿಮ ಆದರ್ಶ ವ್ಯವಸ್ಥೆ ಎಂಬ ಪ್ರಚಾರ ನಂಬಲರ್ಹವಾಗಿ ಉಳಿದಿಲ್ಲ. ಆದರೆ ಅದಕ್ಕೆ ಬದಲಿ ಕಾರ್ಯಸಾಧ್ಯ ವ್ಯವಸ್ಥೆ ಇದೆ ಮತ್ತು ಅದು ಸಮಾಜವಾದಿ ವ್ಯವಸ್ಥೆ ಎಂಬ ಪ್ರಚಾರ ತೀವ್ರವಾಗಿ ಪರಿಣಾಮಕಾರಿಯಾಗಿ ಆಗಬೇಕಾಗಿದೆ. ರಶ್ಯನ್ ಕ್ರಾಂತಿಯ ಶತಮಾನೋತ್ಸವದ ಮತ್ತು ಬಂಡವಾಳಶಾಹಿಗೆ ದುಡಿಯುವ ಜನ ಬದಲಿ ವ್ಯವಸ್ಥೆ ಹುಡುಕುತ್ತಿರುವ ಇಂದಿನ ಸಂದರ್ಭದಲ್ಲಿ, ಈ ಮೂರೂ ಅವಧಿಯ ಎಲ್ಲಾ ಅಪಪ್ರಚಾರದ ಆಯಾಮಗಳು, ವಿಷಯಗಳು, ತಂತ್ರಗಳೂ ಹೊಸ ಅವತಾರಗಳಲ್ಲಿ ಕಾಣಿಸಿಕೊಳ್ಳಲಿವೆ. ಬಂಡವಾಳಶಾಹಿಯ ಅಪಪ್ರಚಾರದ ನಿರೀಕ್ಷಿತ ಮಹಾಪೂರಕ್ಕೆ ಉತ್ತರ ಕೊಡುವ ಅಗತ್ಯ ಇದೆ. ರಶ್ಯನ್ ಕ್ರಾಂತಿಯ (ಹಿನ್ನೆಲೆ, ಅದರಲ್ಲಿ ದುಡಿಯುವ ಜನರ ಪಾತ್ರ ಸೇರಿದಂತೆ) ಧೀರ ರೋಚಕ ಚರಿತ್ರೆಯನ್ನು ನಿರೂಪಿಸುವುದು; ಆರ್ಥಿಕ ಸಾಮಾಜಿಕ ವೈಜ್ಞಾನಿಕ ಮುಂತಾದ ಹಲವು ಕ್ಷೇತ್ರಗಳಲ್ಲಿ ಸೋವಿಯೆಟ್ ಒಕ್ಕೂಟದ ಸಾಧನೆಗಳು ಮತ್ತು ಅದು ಎದುರಿಸಿದ ಸವಾಲುಗಳ ಸತ್ಯ ಸಂಗತಿಗಳನ್ನು ಹೇಳುವುದು; ಸಮಾಜವಾದಿ ವ್ಯವಸ್ಥೆಯನ್ನು ಹೊಸಕಿ ಹಾಕಲು ಈ ನೂರು ವರ್ಷಗಳಲ್ಲಿ ಬಂಡವಾಳಶಾಹಿ ನಡೆಸಿದ ಹುನ್ನಾರಗಳು ಪಿತೂರಿಗಳನ್ನು ಬಯಲು ಮಾಡುವುದು; ಸೋವಿಯೆಟ್ ಒಕ್ಕೂಟದ ಪತನಕ್ಕೆ ನಿಜವಾದ ಕಾರಣಗಳನ್ನು ಶೋಧಿಸುವುದು; ಸಮಾಜವಾದಿ ವ್ಯವಸ್ಥೆ ಕಟ್ಟುವಲ್ಲಿ ನಡೆದ ಹಲವು ತಪ್ಪುಗಳಿಂದ ಸಮಾಜವಾದಿ ಒಂದು ಕಾರ್ಯಸಾಧ್ಯ ವ್ಯವಸ್ಥೆ ಅಲ್ಲ ಎಂದು ತೀರ್ಮಾನಿಸಬೇಕಿಲ್ಲ ಎಂದು ಸಾಧಿಸಿ ತೋರಿಸುವುದು; ಸಮಾಜವಾದಿ ವ್ಯವಸ್ಥೆ ಒಂದು ಕಾರ್ಯಸಾಧ್ಯ ಮತ್ತು ಬಂಡವಾಳಶಾಹಿಗೆ ಅನಿವಾರ್ಯ ಬದಲಿ ವ್ಯವಸ್ಥೆ ಎಂದು ಸಾಧಿಸಿ ತೋರಿಸುವುದು - ಇವೇ ಮುಂತಾದವುಗಳನ್ನು ಒಳಗೊಂಡ ಪುಸ್ತಕಗಳನ್ನು ಪ್ರಕಟಣೆಗಳನ್ನು ರಶ್ಯನ್ ಕ್ರಾಂತಿಯ ಶತಮಾನೋತ್ಸವ  ವರ್ಷದ ಉದ್ದಕ್ಕೂ ತಂದು ಪ್ರಚಾರ ಮಾಡಬೇಕಾಗಿದೆ.

ಶತಮಾನೋತ್ಸವ ಸಮಿತಿಯ ವರ್ಷಾಚರಣೆಯ ಯೋಜನೆ

ವರ್ಷವಿಡಿ ಪ್ರತಿ ತಿಂಗಳಿಗೆ ಒಂದರಂತೆ ಒಂದು ವಿಷಯ ಕುರಿತು ವಿಚಾರ ಸಂಕಿರಣವನ್ನು ಸಂಘಟಿಸಲು ಉದ್ದೇಶಿಸಿದೆ. ಈ ಮೂಲಕ ಸಮಾಜವಾದಿ ಕ್ರಾಂತಿ ಕುರಿತು ಎಡ ಚಳುವಳಿಯ ಕಾರ್ಯಕರ್ತರಿಗೆ, ಸಾಮೂಹಿಕ ಸಂಘಟನೆಗಳ ಸದಸ್ಯರಿಗೆ ಅದರ ಕುರಿತು ಸಮಗ್ರ ಕಣ್ಣೋಟ ಕಟ್ಟಿಕೊಡಲು, ಸಮಾಜವಾದವೆ ಪರ್ಯಾಯ ಎಂಬುದರಲ್ಲಿನ ವಿಶ್ವಾಸವನ್ನು ಅಚಲಗೊಳಿಸಲು, ಪ್ರಸ್ತುತ ಬಂಡವಾಳಶಾಹಿ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಸಮಾಜವಾದದ ಪರ್ಯಾಯವನ್ನು ಜನತೆಯ ಮುಂದಿಡಲು ಸ್ಥಳೀಯ ಪರಂಪರೆಯನ್ನು ಅದಕ್ಕೆ ಅಣಿನೆರೆಸಲು ಯತ್ನಿಸುವುದು ಇದರ ಉದ್ದೇಶವಾಗಿದೆ. ಈ ಪ್ರಕ್ರಿಯೆಯಲ್ಲಿ ರಾಜ್ಯದ ವಿವಿಧ ಎಡ ಪ್ರಜಾಸತ್ತಾತ್ಮಕ, ಪ್ರಗತಿಪರ ಶಕ್ತಿಗಳು, ವ್ಯಕ್ತಿಗಳನ್ನು ಅಣಿನೆರೆಸಲು ಯತ್ನಿಸಲು ಅಂದಾಜಿಸಿದೆ.

ಶತಮಾನೋತ್ಸವ ಸಮಾರೋಪವನ್ನು ನವಂಬರ್ 5, 2017ರಂದು ಕನಿಷ್ಠ 10 ಸಾವಿರ ಜನರನ್ನು ಕುಟುಂಬ ಸಮೇತ ಅಣಿನೆರೆಸುವ ಮೂಲಕ ಸಂಘಟಿಸಲು, ಅದನ್ನು ಮತ್ತಷ್ಟು ವೈವಿಧ್ಯಮಯವಾಗಿ ದಿನವಿಡಿ ಸಾಧ್ಯವಾದಲ್ಲಿ 2 ದಿನ ಸಂಘಟಿಸಲು ಯೋಜಿಸುವುದು.