ಸಮಾಜವಾದಿ ಕ್ರಾಂತಿಯತ್ತ ಸಾಗಲು ಎಡಪಂಥೀಯರು ಹೊಸ ಪರಿಭಾಷೆ ರೂಪಿಸಬೇಕಾಗಿದೆ: ಬರಗೂರು

ಸಂಪುಟ: 
10
ಸಂಚಿಕೆ: 
47
Sunday, 13 November 2016

ಸಮಾಜವಾದಿ ಶತಮಾನೋತ್ಸವ ವರ್ಷಾಚರಣೆ ಸಂಭ್ರಮದ ಉದ್ಘಾಟನೆ

“ಎಡಪಂಥೀಯರೆಂದೂ ಜಡಪಂಥೀಯರಾಗ ಬಾರದು. ಎಡ-ಬಲ ಅಲ್ಲದೇ ಎಡ-ಜಡಪಂಥೀಯರ ನಡುವೆಯೂ ನಮ್ಮ ಸಂಘರ್ಷವನ್ನು ಮಾಡಬೇಕಿದೆ. ಎಡಪಂಥೀಯತೆ ಎಂದಿಗೂ ಜಡವಾಗಕೂಡದು. ಜನರನ್ನು ಬದಲಾಯಿಸುವ ಭಾಷೆ ಮೊದಲು ನಮ್ಮ ಒಳಗೆ ತರಬೇಕಿದೆ. ನಮ್ಮ ಮೂಲ ತತ್ವ ಸಿದ್ಧಾಂತಗಳನ್ನು ಬದ್ಧತೆಗಳನ್ನು ಬಿಟ್ಟುಕೊಡದೆ, ಸಮಾಜವಾದಿ ತಾತ್ವಿಕತೆ ಜನರನ್ನು ತಲುಪುವ ಹೊಸ ಪರಿಭಾóಷೆ ರೂಪಿಸಬೇಕಾಗಿದೆ. ಮೂಲಭೂತವಾದವನ್ನು ವಿರೋಧಿಸುವುದು ಮಾತ್ರ ಎಡ-ಬಲಪಂಥೀಯೆತೆಗಳ ನಡುವಿನ ಪ್ರಧಾನ ವ್ಯತ್ಯಾಸ ಅಲ್ಲ, ಬದಲಾಗಿ ಅದು ಒಂದು ಭಾಗ. ಇಂದು ಆರ್ಥಿಕತೆಯ ಕೇಂದ್ರೀಕರಣ ಹೆಚ್ಚಾಗುತ್ತಿದೆ. ಭಯೋತ್ಪಾದನೆ, ಯುದ್ಧೋನ್ಮಾದ ಪ್ರಧಾನವಾಗುತ್ತಿದೆ. ರಾಜಕೀಯ ಎಂಬ ಶಬ್ದವೇ ಇಂದು ಹೊಲಸಾಗಿದೆ. ಬಾಷೆಯಲ್ಲೂ ಎಚ್ಚರ ವಹಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಏನೇ ಮಾತಾಡಲಿ ಅನ್ಯಾರ್ಥ, ಅಪಾರ್ಥಗಳನ್ನು ಕಲ್ಪಿಸಿ ಅನರ್ಥಕ್ಕೆ ಕಾರಣವಾಗುತ್ತದೆ.” ಎಂದು ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪರವರು ಎಚ್ಚರಿಕೆ ನೀಡಿದರು.

ಅವರು ನವೆಂಬರ್ 6 ರಂದು ಸಮಾಜವಾದಿ ಕ್ರಾಂತಿ ಶತಮಾನೋತ್ಸವ ವರ್ಷ ಆಚರಣಾ ಸಮಿತಿಯು ಬೆಂಗಳೂರಿನ ಸಚಿವಾಲಯ ನೌಕರರ ಕ್ಲಬ್‍ನಲ್ಲಿ ಹಮ್ಮಿಕೊಂಡಿದ್ದ ವರ್ಷಪೂರ್ತಿ ಆಚರಣೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ದಿನ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು. ಮುಂದುವರೆದು ಮಾತನಾಡಿದ ಬರಗೂರು ಅವರು “ಇಂದಿಗೂ ಸಹ ವ್ಯಾಖ್ಯಾನವನ್ನು ಬದಲಿಸುವ ಕೆಲಸ ಆಗುತ್ತಿಲ್ಲ. ನಮ್ಮ ಮನಸ್ಸು ಮತ್ತು ದೇಹ ಎರಡ ಆಲೋಚನೆಯನ್ನು ಹೊಸ ಮಾರ್ಗದೆಡೆಗೆ ಬದಲಿಸುವ ಅವಶ್ಯಕತೆ ಇದೆ. ಭಾವೈಕ್ಯತೆ ಮೂಲಕ ಏಕತೆ ಸಾಧಿಸಲು ಸಾಧ್ಯವಿದೆ. ಈಗೀನ ಕಾಲದಲ್ಲಿ ಹೊಸ ಪರಿಭಾಷೆಯನ್ನು ಕಂಡುಹಿಡಿಯಬೇಕಿದೆ. ಹೊಸ ಯೋಚನೆಗಳನ್ನು ನಾವು ಮಾಡಬೇಕಿದೆ. ಆ ಮೂಲಕ ಕ್ರಾಂತಿಗೆ ಕೊಂಡ್ಯೊಯ್ಯಲು, ಬದಲಾವಣೆ ತರಲು ಸಾಧ್ಯವಿದೆ.” ಎಂದರು. 

ರಷ್ಯಾದ ಕ್ರಾಂತಿಯೂ ಬಂಡವಾಳಶಾಹಿ ಸಮಾಜಕ್ಕೆ ಸಮಾಜವಾದಿ ಪರ್ಯಾಯವನ್ನು ರೂಪಿಸಿತು.  ರಷ್ಯಾದ ಕ್ರಾಂತಿ ವಿಶ್ವದ ಎಲ್ಲೆಡೆ ಪ್ರಭಾವ ಬೀರಿದೆ. ನಮ್ಮ ದೇಶದಲ್ಲೂ ರವೀಂದ್ರನಾಥ್ ಟ್ಯಾಗೋರ್, ಕುವೆಂಪು, ಹಲವರು ಮಾರ್ಕ್ಸ್ ವಾದಿಗಳಲ್ಲದವರ ಮೇಲೂ ಗಾಢವಾದ ಪ್ರಭಾವ ಬೀರಿದೆ. ಟ್ಯಾಗೋರ್ ಅವರಂತೂ ಶಿಕ್ಷಣದಲ್ಲಿ ಸೋವಿಯೆಟ್ ಒಕ್ಕೂಟದಲ್ಲಿ ನಡೆದ ಅಗಾಧ ಬದಲಾವಣೆಗಳನ್ನು ಬಹಳಷ್ಟು ಮೆಚ್ಚಿಕೊಂಡಿದ್ದರು. ಬಂಡವಾಳಶಾಹಿ ಸಹ ಸಾಕಷ್ಟು ಪರಿಷ್ಕರಣಗಳನ್ನು ಮಾಡಬೇಕಾಯಿತು ಎಂದು ಬರಗೂರು ಅವರು ಹೇಳಿದರು.

ಬರಗೂರು ಅವರು ತಮ್ಮ ಉದ್ಘಾಟನಾ ಭಾಷಣದ ಮೊದಲು, ಪುಸ್ತಕಪ್ರೀತಿಯ ‘ಅಕ್ಟೋಬರ್ ಕ್ರಾಂತಿ-100 ಪ್ರಕಟಣೆ ಮಾಲೆ’ಯ ನಾಲ್ಕು ಪುಸ್ತಕಗಳಾದ `ಅಕ್ಟೋಬರ್ ಕ್ರಾಂತಿ - ಮನುಕುಲಕ್ಕೆ ಹೊಸ ಹಾದಿ', `ನೆನೆ ಆ ದಿನಗಳ - ಅಕ್ಟೋಬರ್ ಕ್ರಾಂತಿಯ ರೋಚಕ ಕಥೆ', `ಅಕ್ಟೋಬರ್ ಕ್ರಾಂತಿ - ವಾಸ್ತವವಾಗಿ ನಡೆದದ್ದೇನು' (ಕಾಮಿಕ್ಸ್ ರೂಪದಲ್ಲಿ), `ಸೋವಿಯತ್ ಒಕ್ಕೂಟ - ನಿಮಗೆ ತಿಳಿದಿರಲಿ' ಎಂಬ ಪುಸ್ತಕಗಳನ್ನು ಸಾಹಿತಿ ಬಿಡುಗಡೆಗೊಳಿಸಿದರು.

ಮೊದಲ ಆದ್ಯತೆ ಹಸಿವು ಮುಕ್ತ ಭಾರತ

1900ರ ಇಸವಿಯಲ್ಲೇ ಲೆನಿನ್‍ರವರು ಕಾರ್ಮಿಕ ಹೋರಾಟಗಳು ಕೇವಲ ತುಟ್ಟಿ ಭತ್ಯೆ, ಸೌಲಭ್ಯಗಾಗಿ ಅಷ್ಟೆ ಅಲ್ಲ. ಒಟ್ಟಾರೆ ಸಮಾಜದ ಬದಲಾವಣೆಗೆ ಕಾರ್ಮಿಕರು ಮುಂದಾಗಬೇಕು ಆ ಮೂಲಕ ಕ್ರಾಂತಿಯಾಗಲು ಸಾಧ್ಯವಿದೆ ಎಂದು ಹೇಳಿದರು. ಅಂತಹ ಕ್ರಾಂತಿ 70ಕ್ಕೂ ವರ್ಷಗಳ ನಂತರ 90ರ ದಶಕದಲ್ಲಿ ಬಾಹ್ಯ ಹಾಗೂ ಆಂತರಿಕ ಕಾರಣಗಳಿಂದಾಗಿ ಅಂತ್ಯಗೊಂಡಿತು. ಕ್ರಾಂತಿಯ ಪರಿಕಲ್ಪನೆಯಲ್ಲಿ ದೋಷ ಇಲ್ಲಿರಲಿಲ್ಲ. ಕ್ರಾಂತಿಯ ನಂತರದಲ್ಲಿ ಆಗುವ ಬದಲಾವಣೆಗೆ ಸರಿಯಾದ ಪ್ರತಿಕ್ರಿಯೆಗಳು ಬೇಕಾಗುತ್ತವೆ. ನಿಜವಾದ ಅರ್ಥದಲ್ಲಿ ಸಮಾನತೆ ಅಲ್ಲಿ ಇತ್ತು. ಆದರೆ ನಂತರದಲ್ಲಿ ಅಂತರ್ ಶಕ್ತಿ ಕುಗ್ಗುತ್ತಾ ಹೋಯಿತು. ಇದು ಯಾಕೆ ಆಯಿತು? ಬಾಹ್ಯ ಶಕ್ತಿಗಳ ಪ್ರಭಾವ ಬೀರುವುದರೊಟ್ಟಿಗೆ ಬಾಹ್ಯದಲ್ಲಿ ಆಗುತ್ತಿದ್ದ ಕಾರಣಗಳನ್ನು ಗುರುತಿಸಲು ಎದುರಿಸಲು ಸಾಧ್ಯವಾಗಲಿಲ್ಲವೇ? ಎಂಬುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಎಂದು ಬರಗೂರು ಅವರು ಒತ್ತಿ ಹೇಳಿದರು. 

ಖಾಕಿ ಮತ್ತು ಕಾವಿಗೂ, ವಿಧಾನಸೌಧಕ್ಕೂ ಮಠಕ್ಕೂ ಇಂದು ವ್ಯತ್ಯಾಸ ಇಲ್ಲದಂತಾಗಿದೆ. ಸ್ವಚ್ಛ ಭಾರತ ಬೇಕಿರುವುದು ಬೀದಿಗಿಂತ ಹೆಚ್ಚಾಗಿ ರಾಜಕಾರಣಿಗಳ ಬಾಯಿಗೆ ಆಗಬೇಕಿದೆ. ಎಲ್ಲರಿಗೂ ಭೂಮಿ ಬೇಕಿದೆ. ಹಸಿವು ಮುಕ್ತ ಭಾರತ ಆಗಬೇಕು. 25 ವರ್ಷಗಳ ಹಿಂದೆ 7-8 ಜನ ಇದ್ದ ಬಂಡವಾಳದಾರರು ಇಂದು 100-200 ಜನಕ್ಕೆ ಒಳಗೊಂಡಿದೆ. ಜಗತ್ತಿನ 5ನೇ ಒಂದು ಭಾಗ ಬಡವರು ಭಾರತದಲ್ಲೇ ಇದ್ದಾರೆ. ನಮ್ಮ ಮೊದಲ ಆದ್ಯತೆ ಹಸಿವು ಮುಕ್ತ ಭಾರತ, ದಲಿತರಿಗೆ ಭೂಮಿ, ಆರ್ಥಿಕ ದೃಢತೆ ಆಗಬೇಕಾಗಿದೆ ಎಂದು ಅವರು ಹೇಳಿದರು.

“ಪ್ರತಿಗಾಮಿಗಳು ತೋಡಿದ ನಾವು ಖೆಡ್ಡಕ್ಕೆ ಬೀಳಬಾರದು. ಜನಗಳನ್ನು ನಮ್ಮವರನ್ನಾಗಿ ಮಾಡಿಕೊಳ್ಳಬೇಕು. ಕೋಮುವಾದವನ್ನು ಎದುರಿಸಲು ಸಾಂಸ್ಕೃತಿಕ ಕೆಲಸವೂ ಆಗಬೇಕಿದೆ. ಸಾವಧಾನದ ಚಿಂತನೆಗಳು ನಮ್ಮ ಒಳಗೂ ಬರಬೇಕಿದೆ. ಎಡ ಪಂಥ, ಪ್ರಗತಿಪರರು ಎಲ್ಲರಲ್ಲೂ ಬಿಕ್ಕಟ್ಟು ಇದೆ. ಅವೆಲ್ಲವನ್ನು ಪರಿಹರಿಸಿಕೊಂಡು ಜನರ ಬಳಿಗೆ ಹೋಗಬೇಕಿದೆ. ಈಗಿನಿಂದ ಪ್ರಾರಂಭವಾಗಿ ವರ್ಷಪೂರ್ತಿ ಪ್ರತಿ ತಿಂಗಳು ನಡೆಯುವ ಕಾರ್ಯಕ್ರಮಗಳು ಸಮಾಜವಾದಿ ಪರ್ಯಾಯ ರೂಪಿಸುವತ್ತ ಸಾಗಲಿ ಎಂದು ಬರಗೂರು ರಾಮಚಂದ್ರಪ್ಪನವರು ಹಾರೈಸಿದರು. ಅಂದಿನ ಕಾರ್ಯಕ್ರಮದ ರೂಪುರೇಷೆ ಮತ್ತು 

ಕ್ಯಾಲೆಂಡರ್, ಲಾಂಛನ ಬಿಡುಗಡೆ 

ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಚಿರಂಜೀವಿ ಸಿಂಗ್‍ರವರು ಶತಮಾನೋತ್ಸವ ನೆನಪಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಚಲನಚಿತ್ರ ನಿರ್ದೇಶಕರಾದ ಎಂ.ಎಸ್.ಸತ್ಯುರವರು ಕೃಷ್ಣ ರಾಯಚೂರು ರವರು ರಚಿಸಿಕೊಟ್ಟ `ಅಕ್ಟೋಬರ್ ಕ್ರಾಂತಿ ಶತಮಾನೋತ್ಸವ'ದ ಲಾಂಛನ ಬಿಡುಗಡೆ ಮಾಡಿದರು. 

ಎಂ.ಎಸ್.ಸತ್ಯುರವರು ಮಾತನಾಡಿ ``ಕ್ರಾಂತಿ ಎಂಬುದು ಬಹಳಷ್ಟು ಕಳೆದುಕೊಂಡು ಬಹಳಷ್ಟು ಗಳಿಸಿಕೊಳ್ಳುತ್ತದೆ. ನಮ್ಮಲ್ಲಿ ಕಾಲಕ್ಕೆ ತಕ್ಕ ಹಾಗೇ ಬದಲಾವಣೆಗಳು ಆಗಬೇಕಿದೆ. ಬಂಡವಾಳಶಾಹಿ ಒಳಗೂ ಕ್ರಾಂತಿಯ ನಂತರ ಹಲವು ಬದಲಾವಣೆಗಳು ಸಂಭವಿಸಿದೆ. ಕಾರ್ಪೋರೇಟ್ ಕಂಪನಿಗಳಿಗೂ ಕಾರ್ಮಿಕರ ಬೆಳವಣಿಗೆ ಬಗ್ಗೆ ಗಮನ ಕೊಡಬೇಕಾಗಿ ಬಂದಿದೆ. ಇಂದು ಯಾರು ದೇಶಭಕ್ತರು, ಯಾರು ಅಲ್ಲ ಎಂಬ ಪ್ರಶ್ನೆಯಾಗಿದೆ. ಇತ್ತೀಚಿಗೆ ಇಂದೋರ್‍ನಲ್ಲಿ ನಡೆದ ‘ಇಪ್ಟಾ’ದ ರಾಷ್ಟ್ರೀಯ ಸಮ್ಮೇಳನದಲ್ಲಿ ಸಂಘ ಪರಿವಾರದವರು ಅಲ್ಲಿ ನಾಟಕ ಪ್ರದರ್ಶನ ಆಗದಂತೆ ದಾಂಧಲೆ ಎಬ್ಬಿಸಿ ತಮ್ಮ ಅಟ್ಟಹಾಸ ಪ್ರದರ್ಶಿಸಿದರು.” ಎಂದರು.

ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಕಾಂಗ್ರೆಸಿಗೆ ವಿರೋ ಧ ಪಕ್ಷವಾಗಿ ಕಮ್ಯೂನಿಸ್ಟರು ಮಾತ್ರ ಇದ್ದುದ್ದು. ಕೇರಳದಲ್ಲಿ ಇಎಂಎಸ್ ಅವರ ಮೊದಲ ಕಮ್ಯುನಿಸ್ಟ್ ಸರ್ಕಾರ ವಜಾ ಆದ ಸಂದರ್ಭ. ನನಗೆ ಪರಿಚಯವಿದ್ದ ಆಗಿನ ಕಾಂಗ್ರೆಸ್ ಅಧ್ಯಕ್ಷ ಇಂದಿರಾಗಾಂಧಿರವರನ್ನು ಭೇಟಿ ಮಾಡಿದ್ದಾಗ ಕಮ್ಯೂನಿಸ್ಟ್ ಸರ್ಕಾರ ಇದ್ದರೆ ದೇಶಕ್ಕೆ ಒಳ್ಳೆಯದು. ಕಾಂಗ್ರೆಸ್ ಕಮ್ಯುನಿಸ್ಟರಿಂದ ಕಲಿಯಲು ಸಾಧ್ಯವಿದೆ ಎಂದಿದ್ದೆ. ಮಾಕ್ರ್ಸಿಸಂನ ಮೊದಲ ಆದ್ಯತೆ ಶಿಕ್ಷಣ, ಶಿಕ್ಷಣ ಮನುಷ್ಯನಿಗೆ ಅತ್ಯಂತ ಅವಶ್ಯಕ, ಈಗಲೂ ಎಲ್ಲಾ ಕಮ್ಯೂನಿಸ್ಟ್ ಪಕ್ಷಗಳು ಒಟ್ಟುಗೂಡಿ ಕೆಲಸ ಮಾಡುವ ಅವಶ್ಯಕತೆ ಇದೆ. ಹೋರಾಟಗಳು ಒಟ್ಟುಗೂಡಬೇಕಿದೆ ಎಂದು ಎಂ.ಎಸ್.ಸತ್ಯುರವರು ಒತ್ತಿ ಹೇಳಿದರು. ಅವರು ಟಿಪ್ಪು ಸುಲ್ತಾನ್ ಜಯಂತಿ ವಿವಾದದ ಬಗ್ಗೆ ಅವರು ಮಾತನಾಡಿ, ``ಸ್ವಾತಂತ್ರ್ಯ ಹೋರಾಟದಲ್ಲಿ ಹಲವರು ಭಾಗವಹಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ, ಸಂಗೊಳ್ಳಿ ರಾಯಣ್ಣ ಇತ್ಯಾದಿ. ಅವೆರಲ್ಲರೂ ದೇಶಭಕ್ತರೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಟಿಪ್ಪು ಸುಲ್ತಾನ್ ಸಹ ಬ್ರಿಟಿಷರ ವಿರುದ್ಧ ಹೋರಾಡಿದ್ದರೂ ಅವನನ್ನು ದೇಶಭಕ್ತನಾಗಿ ನೋಡುತ್ತಿಲ್ಲ. ಟಿಪ್ಪುನನ್ನು ವಿರೋಧಿಸುವುದು ಆತ ಮುಸ್ಲಿಂ ಎಂಬ ಕಾರಣದಿಂದ ಮಾತ್ರ. ಆತ ಹಿಂದೂವಾಗಿದ್ದರೆ ದೇಶಭಕ್ತನಾಗಿ ಬಿಡುತ್ತಿದ್ದ. ದೇಶ ಭಕ್ತಿ ಎಲ್ಲರಲ್ಲೂ ಇದೆ. ರೈತ-ಕಾರ್ಮಿಕರಲ್ಲೂ ಇದೆ.” ಮುಂದುವರೆದು ಕೊಡವರ ಮೇಲೆ ನಡೆದ ‘ದೌರ್ಜನ್ಯ’ ಮತ್ತು ‘ಮತಾಂತರ’ದ ಬಗ್ಗೆ ಆರೆಸ್ಸೆಸ್ ಮಾಡುತ್ತಿರುವ ಅಪಪ್ರಚಾರವನ್ನು ಐತಿಹಾಸಿಕ ಸತ್ಯಗಳನ್ನು ಮುಂದಿಡುತ್ತಾ ಬಲವಾಗಿ ಅಲ್ಲಗಳೆದರು.

ಗತವೈಭವದ ಹಳಹಳಿಕೆಯಲ್ಲ, ಉತ್ತಮ ಸಮಾಜವಾದಿ ಸಮಾಜ ಕಟ್ಟಲು

“ಈಗ ಪತನಗೊಂಡಿರುವ ಅಕ್ಟೋಬರ್ ರಶ್ಯನ್ ಕ್ರಾಂತಿಯ ಶತಮಾನೋತ್ಸವವನ್ನು ಯಾಕೆ ಆಚರಿಸಬೇಕು? ಇದು ಗತವೈಭವದ ಬಗ್ಗೆ ಹಳಹಳಿಕೆಯೇ? ಎಂದು ಬಹಳ ಜನ ನಮ್ಮನ್ನು ಕೇಳಬಹುದು, ಕೇಳುತ್ತಾರೆ ಕೂಡಾ. ಮಹಾನ್ ಅಕ್ಟೋಬರ್ ರಶ್ಯನ್ ಕ್ರಾಂತಿಯ ನೆನಪು ಮೈನವಿರೇಳಿಸುವಂತಹುದು ಎಂಬುದಕ್ಕೆ ಸಂಂಶಯವಿಲ್ಲ. ಆದರೆ ನಾವು ಶತಮಾನೋತ್ಸವವನ್ನು ಆಚರಿಸುತ್ತಿರುವುದು ಇಡೀ ಜಗತ್ತಿನ ಮೇಲೆ ಬೀರಿದ ಇನ್ನೂ ಬೀರುತ್ತಿರುವ ಪರಿಣಾಮಗಳ ಬಗ್ಗೆ, ಅದರ ಅಗಾಧ ಸಾಧನೆಗಳನ್ನು ನೆನಪು ಮಾಡಿಕೊಳ್ಳಲು. ಹಾಗೂ ಅದಕ್ಕೆ ಹಿಂಜರಿತ ಏಕೆ ಉಂಟಾಯಿತು ಎಂದು ತಿಳಿದುಕೊಳ್ಳಲು ಕೂಡಾ. ಇದರಿಂದ ಈ ಮಹಾನ್ ಸಮಾಜವಾದಿ ಪ್ರಯೋಗದ ಅಗಾಧ ಸಾಧನೆಗಳನ್ನು ಮುಂದೊಯ್ಯಲು ಹಾಗೂ ಅದರ ನ್ಯೂನತೆ ತಪ್ಪುಗಳನ್ನು ಸರಿಪಡಿಸಿಕೊಂಡು, ನಾವು ಒಂದು ಇನ್ನೂ ಉತ್ತಮ ಸಮಾಜವಾದಿ ಸಮಾಜವನ್ನು ಕಟ್ಟಲು ಸಾಧ್ಯ.” ಎಂದು ಸಿಪಿಐ(ಎಂ) ಪಾಲಿಟ್‍ಬ್ಯೂರೋ ಸದಸ್ಯರಾದ ಕಾ. ಎಂ.ಎ.ಬೇಬಿ ಅವರು ಮಾರ್ಮಿಕವಾಗಿ ನುಡಿದರು. 

ಮಹಿಳಾ ಸಮಾನತೆ, ವಿಜ್ಞಾನ-ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅಗಾಧ ಸೋವಿಯೆಟ್ ಸಾಧನೆಗಳ ಬಗ್ಗೆ ನಿರ್ದಿಷ್ಟವಾಗಿ ಕಾ. ಬೇಬಿ ಅವರು ಮಾತನಾಡಿದರು. ಈ ಎಲ್ಲಾ ಕ್ಷೇತ್ರಗಳಲ್ಲಿ ಸೋವಿಯೆಟ್ ಒಕ್ಕೂಟ ಅಭಿವೃದ್ಧ ಬಂಡವಾಳಶಾಹಿ ದೇಶಗಳು ಸುಮಾರು 3-4 ಶತಮಾನಗಳಲ್ಲಿ ಸಾಧಿಸಿದ್ದನ್ನು ಕೇವಲ 4-5 ದಶಕಗಳಲ್ಲಿ ಸಾಧಿಸಿತು ಅಥವಾ ಅದನ್ನು ಮೀರಿಸಿತು. ಪ್ರಮುಖ ಬಂಡವಾಳಶಾಹಿ (ಬ್ರಿಟನ್, ಫ್ರಾನ್ಸ್, ಜರ್ಮನಿ ಇತ್ಯಾದಿ) ದೇಶಗಳಲ್ಲಿ ಮಹಿಳೆಯರಿಗೆ ಸಾರ್ವತ್ರಿಕ ಮತದಾನದ ಹಕ್ಕು ಸಿಕ್ಕಿದ್ದು ಕ್ರಾಂತಿಯ ನಂತರ ರಶ್ಯನ್ ಮಹಿಳೆಯರಿಗೆ ಸಾರ್ವತ್ರಿಕ ಮತದಾನದ ಹಕ್ಕು ಸಿಕ್ಕಿದ ನಂತರವೇ. ವಿಜ್ಞಾನ-ತಂತ್ರಜ್ಞಾನದಲ್ಲಿ ಅತ್ಯಂತ ಮುಂದಿದ್ದ ಅಮೆರಿಕ್ಕಿಂತ ಮೊದಲು ಬಾಹ್ಯಾಕಾಶ ವಿಜ್ಞಾನ-ತಂತ್ರಜ್ಞಾನಗಳಲ್ಲಿ ಹಲವು _ ಮೊದಲ ಉಪಗ್ರಹ (ಸ್ಪುಟ್ನಿಕ್), ಬಾಹ್ಯಾಕಾಶದಲ್ಲಿ ಮೊದಲ ಪ್ರಾಣಿ, ಮನುಷ್ಯ - ಪ್ರಥಮಗಳನ್ನು ಸಾಧಿಸಿತು. ಅಣು, ಕ್ಷಿಪಣಿ ಮತ್ತು ಇತರ ರಕ್ಷಣಾ ತಂತ್ರಜ್ಞಾನಗಳಲ್ಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಸೊವಿಯೆಟ್ ಗಳು ಮುಂದಿದ್ದು, ಅಮೆರಿಕ ಸರಿಗಟ್ಟಲು ಹರಸಾಹಸ ಪಡಬೇಕಾಯಿತು. ಕೆಲವೇ ವರ್ಷಗಳಲ್ಲಿ ಪೂರ್ಣ ಸಾಕ್ಷರತೆ ಸಾಧಿಸಿ, ಉಚ್ಛ ಶಿಕ್ಷಣದಲ್ಲೂ ಅಮೆರಿಕವನ್ನು ಸರಿಗಟ್ಟಿತು. ಶಿಕ್ಷಣ ಗುಣಮಟ್ಟದಲ್ಲಿ ಅಮೆರಿಕವನ್ನು ಮೀರಿಸಿತ್ತು. 1960-70ರ ದಶಕಗಳಲ್ಲಿ ಜಗತ್ತಿನಲ್ಲೇ ಪ್ರಚಲಿತವಿದ್ದ ‘ಜಾನ್ ಗಿಂತ ಇವಾನ್ ಗೆ ಹೆಚ್ಚು ಜ್ಞಾನ ಇದೆ (‘ವಾಟ್ ಜಾನ್ ಡಸ್ ನೊಟ್ ನೋ, ಇವಾನ್ ನೋಸ್ : ಇಲ್ಲಿ ಜಾನ್ ಸರಾಸರಿ ಪಾಶ್ಚಿಮಾತ್ಯ ವಿದ್ಯಾರ್ಥಿ, ಇವಾನ್ ಸರಾಸರಿ ಸೋವಿಯೆಟ್ ವಿದ್ಯಾರ್ಥಿ). ಈ ರೀತಿ ಅವರು ನಿರ್ದಿಷ್ಟ ಉದಾಹರಣೆಗಳೊಂದಿಗೆ ಸೋವಿಯೆಟ್ ಸಾಧನೆಗಳನ್ನು ವಿವರಿಸಿ, ಸೋವಿಯೆಟ್ ಪತನಕ್ಕೆ ಕಾರಣಗಳನ್ನು ಸ್ಥೂಲವಾಗಿ ಸಂಕ್ಷಿಪ್ತವಾಗಿ ವಿವರಿಸಿದರು.

“ಸಮಾನತೆ ಸಾಧ್ಯವಿದೆ” ಎಂದು ತೋರಿಸಿದ ಕ್ರಾಂತಿ

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕಾ. ಜಿ.ವಿ.ಶ್ರೀರಾಮರೆಡ್ಡಿರವರು ಮಾತನಾಡಿ ``ವಿಶ್ವದಲ್ಲಿ ಮೊಟ್ಟ ಮೊದಲನೆಯದಾಗಿ 1789ರಲ್ಲಿ ಫ್ರಾನ್ಸ್ ನಲ್ಲಿ ಕ್ರಾಂತಿ ನಡೆದಿದೆ. ಅದು ಉಳಿಗಮಾನ್ಯ ಪದ್ಧತಿ ವಿರುದ್ಧ ಬಂಡವಾಳಶಾಹಿಯ ಕ್ರಾಂತಿಯಾಗಿತ್ತು. ಹಲವು ತತ್ವಜ್ಞಾನಿಗಳು ಜಗತ್ತಿನಲ್ಲಿ ಮುಂದೆ ಯಾವುದೇ ಬದಲಾವಣೆ ಇಲ್ಲ ಎಂದಿದ್ದರೂ, 1917ರಲ್ಲಿ ಕಾರ್ಮಿಕರ ನೇತೃತ್ವದಲ್ಲಿ ರಷ್ಯಾದಲ್ಲಿ ಮೊದಲ ಸಮಾಜವಾದಿ ಕ್ರಾಂತಿ ನಡೆಯಿತು. ಕಾರ್ಲ್ ಮಾರ್ಕ್ಸ್ ರವರು ಬಂಡವಾಳಶಾಹಿಯೂ ಬದಲಾವಣೆ ಆಗಲಿದೆ ಎಂದು ತಿಳಿಸಿದರು. ಲೆನಿನ್‍ರವರು ಅದನ್ನು ಅಕ್ಟೋಬರ್ ಕ್ರಾಂತಿ ಮೂಲಕ ಕಾರ್ಯರೂಪಕ್ಕೆ ತಂದರು. ಬದಲಾವಣೆ ಜಗತ್ತಿನ ನಿಯಮ, ಬದಲಾಗುತ್ತಲೇ ಇರುತ್ತದೆ. ಸಮಾಜವಾದ ವ್ಯವಸ್ಥೆ ನಂತರ ಸಮತಾವಾದ. ಸಮತಾವಾದವೂ ಬದಲಾಗಬಹುದು” ಎಂದರು. 

“ಸಮಾನತೆ ಸಾಧ್ಯವಿದೆ” ಎಂದು ಅಕ್ಟೋಬರ್ ಕ್ರಾಂತಿ ಮೊದಲ ಬಾರಿಗೆ ಜಗತ್ತಿಗೇ ತೋರಿಸಿಕೊಟ್ಟಿತು. ಇಂದು ಅಸಮಾನತೆಯನ್ನು ವೈಭವೀಕರಣ ಮಾಡಲಾಗುತ್ತಿದೆ. ಭಾರತದಲ್ಲಿ ಅದು ಹೆಚ್ಚಾಗುತ್ತಿದೆ. ಸಮಾನತೆಯ ವಿರುದ್ಧ ದಾಳಿಗಳು ಹೆಚ್ಚಾಗುತ್ತಿದೆ. ಸೋವಿಯೆಟ್ ಒಕ್ಕೂಟದ ಕುಸಿತದ ನಂತರ, ಸಮಾಜವಾದ ಸತ್ತಿತು. ಚರಿತ್ರೆ ಮುಗಿಯಿತು. ಬಂಡವಾಳಶಾಹಿಯೇ ಮಾನವ ಸಮಾಜದ ಕೊನೆಯ ಹಂತ ಎಂದು ಸಾರಿದ್ದ ಬಂಡವಾಳಶಾಹಿ-ಪರ ಬುದ್ಧಿಜೀವಿಗಳು ಈಗಲೂ ಸಮಾಜವಾದದ ಮೇಲೆ ಮಾರ್ಕ್ಸ್ ವಾದದ ಮೇಲೆ ದಾಳಿ-ಟೀಕೆ ಮಾಡುತ್ತಲೇ ಇದ್ದಾರೆ. ಇದರ ಅರ್ಥ - ಅವರ ಹೇಳಿಕೆಗಳನ್ನು ಅವರೇ ನಂಬುತ್ತಿಲ್ಲ. ಈಗಲೂ ಅವರಿಗೆ ಸಮಾಜವಾದದ ಮಾಕ್ರ್ಸ್‍ವಾದದ ಬಗ್ಗೆ ಭಯವಿದೆ, ಆತಂಕವಿದೆ. ಯಾಕೆಂದರೆ ಬಂಡವಾಳಶಾಹಿ ಬಿಕ್ಕಟ್ಟುಗಳಿಗೆ ಒಳಗಾಗುತ್ತಲೇ ಇರುತ್ತದೆ.” ಎಂದು  ಮಾಕ್ರ್ಸ್‍ವಾದದ ಟೀಕಾಕಾರರಿಗೆ ಉತ್ತರಿಸಿದರು.

ಸ್ಟಾಲಿನ್ ಒಂದು ರೀತಿಯ ಸರ್ವಾಧಿಕಾರಿ ಎಂದು ಬಿಂಬಿಸಲಾಗಿದೆ. ಆದರೆ ಸ್ಟಾಲಿನ್ ಎರಡನೇ ಮಹಾಯುದ್ಧದ ಫ್ಯಾಸಿಸ್ಟ್-ವಿರೋಧಿ ಸಮರದಲ್ಲಿ ಅವರ ಧೀರ ನಾಯಕತ್ವ ಇಲ್ಲದಿದ್ದರೆ ಇಂದು ಜಗತ್ತಿನ ರಾಷ್ಟ್ರಗಳು ಸ್ವತಂತ್ರವಾಗಿ ಉಳಿಯಲು ಸಾಧ್ಯವಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಆ ಯುದ್ಧದ ಪರಿಣಾಮದಿಂದಾಗಿ. ಸೋವಿಯೆಟ್ ಕೆಂಪು ಸೈನ್ಯಕ್ಕೆ ಹಿಟ್ಲರ್ ಸೋಲದಿದ್ದರೆ ಜಗತ್ತು ಫ್ಯಾಸಿಸ್ಟ್ ದಮನದಲ್ಲಿ ನರಳಬೇಕಿತ್ತು. ಇಂದು ಸೋವಿಯೆಟ್ ಒಕ್ಕೂಟ ಇಲ್ಲ. ಭಾರತದಲ್ಲಿ ಜಗತ್ತಿನಲ್ಲಿ ಬಲಪಂಥೀಯ, ಫ್ಯಾಸಿಸಂ ಶಕ್ತಿಗಳ ಆರ್ಭಟ ಹೆಚ್ಚಾಗುತ್ತಿದೆ. ನವ ಉದಾರವಾದಿ ನೀತಿಗಳನ್ನು ಬೆಂಬಲಿಸಿದ ಬಂಡವಾಳದಾರರೇ ಇಂದು ಕೋಮುವಾದಿಗಳಿಗೆ ಬೆಂಬಲವಾಗಿ ನಿಂತುಕೊಂಡಿದ್ದಾರೆ ಅವರ ವಿರುದ್ಧ ಹೋರಾಡಬೇಕು ಎಂದು ಕರೆ ಕೊಟ್ಟರು.

ಸಭೆಯ ಮೊದಲಿಗೆ ಸಿಐಟಿಯು ಬೆಂ. ದಕ್ಷಿಣ ಜಿಲ್ಲಾ ಅಧ್ಯಕ್ಷರಾದ ಕೆ. ಪ್ರಕಾಶ್‍ರವರು ಪ್ರಾಸ್ತಾವಿಕವಾಗಿ -ಅಕ್ಟೋಬರ್ ಕ್ರಾಂತಿ; ಜಗತ್ತಿನ ಮೇಲೆ ಅದರ ಪರಿಣಾಮ; ಸಾರ್ವತ್ರಿಕ ಶಿಕ್ಷಣ, ಪೂರ್ಣ ಉದ್ಯೋಗ, ಪೂರ್ಣ ಆರೋಗ್ಯ, ಮಹಿಳಾ ಸಮಾನತೆ, ವಿಜ್ಞಾನ-ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಮಾಜವಾದಿ  ರಷ್ಯಾದ ಮಹಾನ್ ಸಾಧನೆಗಳು; ಬಾಹ್ಯಾಕಾಶ ವಿಜ್ಞಾನ-ತಂತ್ರಜ್ಞಾನದಲ್ಲಿ ಬೃಹತ್ ಬೆಳವಣಿಗೆಗಳ - ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾ. ಎಂ.ಎಸ್.ಮೀನಾಕ್ಷಿ ಸುಂದರಂ ರವರು ಮಾತನಾಡಿ ``ಈ ಕಾರ್ಯಕ್ರಮವೂ ಈಗೀನ ಒಂದು ದಿನದ ಕಾರ್ಯಕ್ರಮವಲ್ಲ, ಬದಲಾಗಿ ವರ್ಷ ಪೂರ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಿಂಗಳಿಗೊಂದು ವಿಚಾರ ಸಂಕಿರಣಗಳ ಮೂಲಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದು ಆ ಮೂಲಕ ಸಮಾಜವಾದಿ ಕ್ರಾಂತಿಯ 100ನೇ ವರ್ಷದ ಆಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿ ಬಂಡವಾಳಶಾಹಿ ವಿರುದ್ಧ ಸಮಾಜವಾದ ಸಾಧ್ಯವಿದೆ ಎಂಬ ಸಂದೇಶವನ್ನು ನಾವೆಲ್ಲರೂ ಕೂಡಿ ಘಂಟಘೋಷವಾಗಿ ತಿಳಿಸಲು ಮುಂದಾಗೋಣ ಎಂದು ಹೇಳಿದರು.

ಸಾಹಿತಿ ಡಾ. ವಿಜಯ ರವರು ಕುವೆಂಪುರವರ `ಲೆನಿನ್', ವೀ.ಸೀತಾರಾಮಯ್ಯನವರ `ಕ್ರೋಧಕೇತನ' ಸು.ರಂ.ಎಕ್ಕುಂಡಿರವರ “ಅಂಡರ್‍ಸನ್ ಬೀದಿಯಲ್ಲಿ” ಎಂಬ ಕವನ ವಾಚನ ಮಾಡಿದರು. ಅಲ್ಲದೇ ಭೂಮ್ತಾಯಿ ಬಳಗದವರು ಕ್ರಾಂತಿಗೀತೆ, ತತ್ವಗೀತೆ, ಹೋರಾಟದ ಹಾಡುಗಳನ್ನು ಹಾಡಿದರು.

ಹಾಡುಗಳ ಸಂದರ್ಭದಲ್ಲಿ ಚಿತ್ರ ಕಲಾವಿದರಾದ ಡಾ. ವಿ.ಜಿ.ಅಂದಾನಿರವರು ಒಂದು ಅದ್ಭುತವಾದ ಚಿತ್ರವನ್ನು ರಚಿಸಿದರು. ಆ ಚಿತ್ರವನ್ನು ಸಿಪಿಐ(ಎಂ) ಪಾಲಿಟ್‍ಬ್ಯೂರೋ ಸದಸ್ಯರಾದ ಕಾಂ||ಎಂ.ಎ.ಬೇಬಿ ರವರಿಗೆ ಅರ್ಪಿಸಲಾಯಿತು. ಮಧ್ಯಾಹ್ನದ ನಂತರ `ಜಗತ್ತನ್ನು ತಲ್ಲಣಗೊಳಿಸಿದ ಹತ್ತು ದಿನಗಳು' ಎಂಬ ಪ್ರಸಿದ್ಧ ನಿರ್ದೇಶಕ ಸರ್ಜಿ ಐಸೆನ್ ಸ್ಟೈನ್ ನಿರ್ದೇಶಿಸಿದ ರಷ್ಯನ್ ಚಿತ್ರವನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದ ಸ್ವಾಗತವನ್ನು ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮರವರು ಮತ್ತು ನಿರೂಪಣೆಯನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್‍ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿವಿಧ ಭಾಗಗಳಿಂದ ಕಾರ್ಯಕರ್ತರು, ಕಾರ್ಮಿಕರು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಸಭಾಂಗಣ ತುಂಬಿ ತುಳುಕುತ್ತಿತ್ತು.   

ಪ್ರತಿ ತಿಂಗಳ ಕಾರ್ಯಕ್ರಮದ ವಿವರಗಳು

ಸಮಾಜವಾದಿ ಕ್ರಾಂತಿ ಮತ್ತು ತತ್ವಶಾಸ್ತ್ರಿಯ ಮೀಮಾಂಸೆ                         ಡಿಸೆಂಬರ್ 2016 

ಸಮಾಜವಾದಿ ಕ್ರಾಂತಿ ಮತ್ತು ಕಾರ್ಷಿಕ ಕ್ರಾಂತಿ, ರೈತಾಪಿ ಜನತೆ.               ಜನವರಿ 2017    

ಸಮಾಜವಾದಿ ಕ್ರಾಂತಿ ಮತ್ತು ನ್ಯಾಯ ಶಾಸ್ತ್ರ                                       ಫೆಬ್ರವರಿ 2017 

ಸಮಾಜವಾದಿ ಕ್ರಾಂತಿ ಮತ್ತು ಮಹಿಳಾ ಸಮಾನತೆ                                 ಮಾರ್ಚ್ 2017

ಸಮಾಜವಾದಿ ಕ್ರಾಂತಿ ಮತ್ತು ಸಾಮಾಜಿಕ ನ್ಯಾಯ                                 ಏಪ್ರಿಲ್ 2017                       

ಸಮಾಜವಾದಿ ಕ್ರಾಂತಿ ಮತ್ತು ಕಾರ್ಮಿಕ ವರ್ಗ                                       ಮೇ 2017 

ಸಮಾಜವಾದಿ ಕ್ರಾಂತಿ ಮತ್ತು ವಿಜ್ಞಾನ -ತಂತ್ರಜ್ಞಾನ-ಜನಾರೋಗ್ಯ               ಜೂನ್ 2017   

ಸಮಾಜವಾದಿ ಕ್ರಾಂತಿ ಮತ್ತು ಶಿಕ್ಷಣ                                                  ಜುಲೈ 2017  

ಸಮಾಜವಾದಿ ಕ್ರಾಂತಿ ಮತ್ತು ಕನ್ನಡ ಸಾಹಿತ್ಯ                                       ಆಗಸ್ಟ್ 2017   

ಸಮಾಜವಾದಿ ಕ್ರಾಂತಿ ಮತ್ತು ಯುವಜನ, ಉದ್ಯೊಗ                               ಸೆಪ್ಟಂಬರ್ 2017  

ಸಮಾಜವಾದಿ ಕ್ರಾಂತಿ ಮತ್ತು ಯೋಜನಾಬದ್ದ ಆರ್ಥಿಕತೆ, ಸ್ವಾವಲಂಬನೆ      ಅಕ್ಟೋಬರ್ 2017 

ಸಮಾರೋಪ                                                                            ನವಂಬರ್,04,05-2017