ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮ

ಸಂಪುಟ: 
10
ಸಂಚಿಕೆ: 
46
Sunday, 6 November 2016

ಮಂಗಳೂರು ಉಳ್ಳಾಲ ಕ್ಷೇತ್ರದ ಮುನ್ನೂರು ಗ್ರಾಮ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಗಾಂಜಾ, ಅಪೀಮು ಇತರ ಮಾದಕ ವಸ್ತುಗಳ ಸೇವನೆಯ ವಿರುದ್ಧ ಡಿವೈಎಫ್‍ಐ ಸಂಘಟನೆ ನೇತೃತ್ವದಲ್ಲಿ ಅಕ್ಟೋಬರ್ 23ರಂದು ಕಾರ್ಯಕ್ರಮ ನಡೆಸಲಾಯಿತು. ಡಿವೈಎಫ್‍ಐ ಜಿಲ್ಲಾಧ್ಯಕ್ಷರು ಹಾಗೂ ಮಂಗಳೂರು ನಗರ ಪಾಲಿಕೆ ಸದಸ್ಯರಾದ ದಯಾನಂದ ಶೆಟ್ಟಿರವರು ಗ್ರಾಮದ ಕುತ್ತಾರ್ ಜಂಕ್ಷನ್‍ನಲ್ಲಿ ಜಾಥಾವನ್ನು ಶ್ವೇತ ಪತಾಕೆಯನ್ನು ಗ್ರಾಮ ಸಂಚಾಲಕರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ದಯಾನಂದ ಶೆಟ್ಟಿರವರು ಮಾತನಾಡಿ ``ಜಿಲ್ಲೆಯಲ್ಲಿ ಆಗಾಗ ನಡೆಯುವ ಕೋಮುಗಲಭೆ, ಅಪರಾಧ ಪ್ರಕರಣ, ಆಶಾಂತಿ ಸೃಷ್ಠಿಯ ಹಿಂದೆ ನಿಷೇಧಿತ ಮಾದಕ ವಸ್ತುಗಳ ಕೈವಾಡವಿದೆ. ಇದನ್ನು ತಡೆಯಬೇಕಾದರೆ ಜನರ ಮನಪರಿವರ್ತನೆ ಮಾಡುವ ಕಾರ್ಯಕ್ರಮಗಳು ಆಯೋಜಿಸಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಉಳ್ಳಾಲ ಪೊಲೀಸ್ ಠಾಣೆಯ ನಿರೀಕ್ಷರಾದ ಶಿವಪ್ರಕಾಶ್ ಮಾದಕ ವ್ಯಸನ ಮಟ್ಟಹಾಕುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆ, ಗ್ರಾಮಗಳಲ್ಲಿ ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಅವಶ್ಯಕ ಎಂದು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಸುದೇಶ್ ದೇರೆಬೈಲ್, ಕಾರ್ಮಿಕ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಡಿವೈಎಫ್‍ಐ ವಲಯ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್, ಎಸ್‍ಎಫ್‍ಐ ಜಿಲ್ಲಾಧ್ಯಕ್ಷರಾದ ನಿತಿನ್ ಕುತ್ತಾರ್, ರಫೀಕ್ ಹರೇಕಳ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬೀದಿನಾಟಕವನ್ನು ಮುರಾರಿ ಕಾಸರಗೋಡು ನಿರ್ದೇಶಿಸಿದ್ದು, ಪ್ರಥಮ ಪ್ರಯೋಗವಾಗಿರುವ ನಾಟಕವನ್ನು ಸೌಹಾರ್ದ ಕಲಾವಿದ ಸದಸ್ಯರಾದ ಉದಯ್ ಮದಕ, ಸಂಕೇತ್ ಕುತ್ತಾರ್, ವಿಕಾಸ್, ಲಿಮಿತ, ಕಾವ್ಯ, ಮಯೂರಿ, ಮನೀಷ್, ಗೌತಮ್, ಸುಶಾಂತ್, ವಿವೇಕ್ ನಟಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮಾರು 50ಕ್ಕೂ ಹೆಚ್ಚಿನ ಬೈಕ್ ರಾಲಿ ಮೂಲಕ ಮುನ್ನೂರು ಗ್ರಾಮದ ಕುತ್ತಾರ್, ಸುಭಾಸ್ ನಗರ, ರಾಣಿಪುರ, ದೆಸೋಡಿ, ಸಂತೋಷ್ ನಗರ, ಪಂಡಿತ್ ಹೌಸ್, ಮದನಿ ನಗರ, ಯೆನೆಪೋಯ ಸಾಗಿ ಕೊನೆಗೆ ತೇವುಲ ಪ್ರದೇಶದಲ್ಲಿ ಸಮಾರೋಪವಾಯಿತು.

ಸಮಾರೋಪ ಸಮಾರಂಭದಲ್ಲಿ ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್ ಕಾರ್ಯಕ್ರಮದ ಬಗ್ಗೆ ಮುಚ್ಚುಗೆ ವ್ಯಕ್ತಪಡಿಸಿದರು. ಜಾಥಾ ಸಂಚಾಲಕರಾದ ಸುನೀಲ್ ತೇವುಲ, ಸಹಸಂಚಾಲಕರಾದ ಭರತ್ ರಾಜ್ ಕೆ., ಸುರೇಶ್ ಪೂಜಾರಿ ತಳೆನೀರು ನೇತೃತ್ವ ವಹಿಸಿದ್ದರು. ಕಾರ್ಮಿಕ ಮುಖಂಡರಾದ ಜನಾರ್ಧನ್ ಕುತ್ತಾರ್ ಮತ್ತು ಸಂಘದ ಮುಖಂಡರಾಧ ಮಹಾಬಲ ಟಿ., ಚಂದ್ರಹಾಸ, ಮಿಥುನ್ ರಾಜ್, ದೀಕ್ಷಿತ್ ತೇವುಲ, ಗಣೇಶ್ ತಲೆನೀರು, ಯೋಗಿಶ್, ಶರತ್, ಅಶ್ವಿತ್, ಕಾರ್ತಿಕ ದೇಸೋಡಿ, ಶ್ರಾವಣ್, ದಿವ್ಯಾನ್, ಅಭಿಷೇಕ್ ಗಾಣದಮನೆ, ಅವಿನಾಶ್ ಮತ್ತಿತರರು ಉಪಸ್ಥಿತರಿದ್ದರು.

ವರದಿ : ಜೀವನ್ ರಾಜ್ ಕುತ್ತಾರ್