Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ತಾರತಮ್ಯ ಮಾಡುವವರು ಮಾನವೀಯತೆಯ ಶತ್ರುಗಳು

ಸಂಪುಟ: 
10
ಸಂಚಿಕೆ: 
46
Sunday, 6 November 2016

ಉಡುಪಿ ಜಿಲ್ಲಾ ಕೃಷಿ ಕೂಲಿಕಾರರ ಸಂಘದ ಸಮ್ಮೇಳನದಲ್ಲಿ ನಿತ್ಯಾನಂದಸ್ವಾಮಿ

ಬುದ್ಧಿವಂತರ ಜಿಲ್ಲೆ ಎನಿಸಿರುವ ಉಡುಪಿ ಜಾತಿ, ವಿಚಾರದಲ್ಲಿ ಇನ್ನು ಅನಿಷ್ಠ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವುದು ಸರಿಯಲ್ಲ. ಸಾರ್ವಜನಿಕ ಸ್ಥಳದಲ್ಲಿ ಪಂಕ್ತಿ, ಪ್ರಸಾದ ವಿತರಣೆ ವಿಚಾರದಲ್ಲಿ ಜಾತಿ ತಾರತಮ್ಯ ಮಾಡಬಾರದು.  ಈ ರೀತಿ ಧರ್ಮ, ಜಾತಿ ತಾರತಮ್ಯ ಮಾಡುವವರು ಮಾನವೀಯತೆಯ ಶತ್ರುಗಳು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಆರೋಪಿಸಿದ್ದಾರೆ.

ಅಕ್ಟೋಬರ್ 23ರಂದು ಉಡುಪಿಯ ಸಾಯಿ ರೆಸಿಡೆನ್ಸಿ ಹೋಟೇಲ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯುಯು)ದ ಉಡುಪಿ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ, ಅವರು ಮಾತನಾಡಿದರು. 

ಧರ್ಮ, ಜಾತಿ ಆಧಾರದಲ್ಲಿ ದೇಶವು ಇಂದು ಇಡೀ ಜಗತ್ತಿನ ಎದುರು ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಸ್ಥಳ ಮಠ ಮಂದಿರಗಳಲ್ಲಿ ಜಾತಿ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ನಮ್ಮಲ್ಲಿ ಧರ್ಮದ ವ್ಯತ್ಯಾಸಗಳಿದ್ದರೂ ಅದನ್ನು ತಮ್ಮ ತಮ್ಮ ಮನೆಗಳಲ್ಲಿ ಮಾಡಿಕೊಳ್ಳಬೇಕು. ಧರ್ಮದ ವಿಚಾರದಲ್ಲಿ ಗಲಭೆ ಸೃಷ್ಟಿಸುವವರ ಬಗ್ಗೆ ಜಾಗರೂಕರಾಗಿರಬೇಕಿದೆ ಎಂದರು. 

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಿರ್ನಾಮ ಮಾಡಲು ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರಗಳು ಯತ್ನಿಸುತ್ತಿದ್ದು, ಈ ಯೋಜನೆಗೆ ಅಗತ್ಯ ಹಣಕಾಸು ನೀಡುವ ಬದಲು ಅನುದಾನವನ್ನೇ ಕಡಿತ ಮಾಡಲಾಗುತ್ತಿದೆ. ಜನಪರ ಕಾನೂನುಗಳನ್ನು ಜಾರಿಗೊಳಿಸದೆ ಸರಕಾರಗಳೇ ಕಾನೂನು ಉಲ್ಲಂಘನೆ ಮಾಡುತ್ತಿದೆ. ಭೂಮಿ ಇಲ್ಲದವರಿಗೆ ಭೂಮಿ ಕೊಡುವ ಬದಲು ಭೂಮಿ ಇದ್ದವರಿಗೆ ಭೂಮಿ ಸಿಗುವಂತಹ ಕಾನೂನು ಬದಲಾವಣೆ ಮಾಡುತ್ತಿದೆ. ಈ ಎಲ್ಲಾ ಧೋರಣೆಗಳ ವಿರುದ್ಧ ಬೃಹತ್ ಆಂದೋಲನ ಕಟ್ಟುವ ಅಗತ್ಯ ಎದುರಾಗಿದೆ ಎಂದವರು ಹೇಳಿದರು.

ಪಡಿತರ ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು.  ಹಾಗಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದು ಅಗತ್ಯವಿಲ್ಲ. ಅಧಿಕಾರಿಗಳಿಗೆ ಪಡಿತರ ಚೀಟಿ ಇಲ್ಲದವರನ್ನು ಗುರುತಿಸಿ ಅವರ ಮನೆಗೆ ತೆರಳಿ ನೀಡುವ ಕಾರ್ಯವಾಗಬೇಕು. ಇಲ್ಲದಿದ್ದರೆ ಇದು ಪ್ರಜಾಪ್ರಭುತ್ವ ಅಲ್ಲ. ಇನ್ನೂ ಕೂಡ ದೇಶದಲ್ಲಿ ಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ. ಆರ್ಥಿಕ ಸ್ವಾತಂತ್ರ್ಯ ನಮಗೆ ಬಂದೇ ಇಲ್ಲ ಎಂದವರು ಟೀಕಿಸಿದರು. 

1990 ರ ನಂತರ ಸುಧಾರಣೆ ಹೆಸರಿನಲ್ಲಿ ಸರಕಾರಗಳು ಜಾರಿಗೆ ತಂದ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳಿಂದ ಕೃಷಿ ಹಾಗೂ ಕೃಷಿ ಕೂಲಿಕಾರರ ಬದುಕು ಜರ್ಜರಿತವಾಗಿದೆ. ಈ ಮೂಲಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೂ ಕೃಷಿಯನ್ನು ತೊರೆದು ನಗರಕ್ಕೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ರೈತರ ಬದುಕಿನಲ್ಲಿ ಅನಿಶ್ಚಿತತೆ ಕಾಡುತ್ತಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದರು. 

ಸಂಘದ ಜಿಲ್ಲಾಧ್ಯಕ್ಷ ಯು.ದಾಸಭಂಡಾರಿ ಸಮ್ಮೇಳನದ ಆರಂಭದಲ್ಲಿ ಧ್ವಜಾರೋಹಣ ಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಕಳೆದ 3 ವರ್ಷಗಳ ಚಟುವಟಿಕೆಯ ಕರಡು ವರದಿಯನ್ನು ಮಂಡಿಸಿದ್ದರು. ಸಿಐಟಿಯು ಜಿಲ್ಲಾಧ್ಯಕ್ಷ ಪಿ.ವಿಶ್ವನಾಥ ರೈ ಪ್ರಧಾನ ಕಾರ್ಯದರ್ಶಿ ಕೆ.ಶಂಕರ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಎಚ್.ವಿಠಲ ಪೂಜಾರಿ, ರವಿರಾಜ ಎಸ್. ಉಡುಪಿ, ಕಾರ್ಕಳದ ಪದ್ಮಬೆಳ್ಮಣ್, ದಾಮೋದರ, ನಾಗರತ್ನ ನಾಡ, ರಾಜೀವ ಪಡುಕೋಣೆ, ಉಪಸ್ಥಿತರಿದ್ದರು. 

ನವಂಬರ 18ರ ರಾಜ್ಯ ವ್ಯಾಪಿ ನಿವೇಶನ ರಹಿತರ ಭೂಮಿ ಹಕ್ಕಿನ ಜೈಲ್‍ಬರೋ - ಬಂಧನಕ್ಕೊಳಕ್ಕಾಗುವ ಹೋರಾಟವನ್ನು ಉಡುಪಿ ಜಿಲ್ಲೆಯಲ್ಲೂ ಯಶಸ್ವಿಗೊಳಿಸುವುದು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸಮರ್ಪಕ ಜಾರಿಗೆ, ಬೆಲೆ ಏರಿಕೆ ವಿರೋಧಿಸಿ, ಹಾಗೂ ಮನೆ ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ವಿತರಣೆಗೆ ಒತ್ತಾಯಿಸಿ, ಸಮ್ಮೇಳನದಲ್ಲಿ ಠರಾವು ಮಂಡಿಸಲಾಯಿತು. 

ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಯು.ದಾಸಭಂಡಾರಿ, ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ ಕೋಣಿ, ಕೋಶಾಧಿಕಾರಿಯಾಗಿ ರವಿರಾಜ್ ಎಸ್. ಉಡುಪಿ ಇವರನ್ನು ಒಳಗೊಂಡಂತೆ 25 ಮಂದಿ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. 

ವರದಿ : ವೆಂಕಟೇಶ ಕೋಣಿ