ಉಡುಪಿ: ಬೀದಿಬದಿ ವ್ಯಾಪಾರಸ್ಥರ ಸಂಘ ಸ್ಥಾಪನೆ

ಸಂಪುಟ: 
10
ಸಂಚಿಕೆ: 
46
Sunday, 6 November 2016

ಸಿಐಟಿಯುಗೆ ಸಂಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಮಾವೇಶವು ಅಕ್ಟೋಬರ್ 21ರಂದು ಉಡುಪಿಯ ಬೈಲೂರು ಕಾಂಪ್ಲೆಕ್ಸ್ ಸಂಭಾಂಗಣದಲ್ಲಿ ಜರಗಿತು.

ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಫೆಡರೇಶನ್ ರಾಜ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ``ಬೀದಿ ಬದಿ ವ್ಯಾಪಾರಸ್ಥರ ಉತ್ತಮ ಬದುಕಿಗಾಗಿ ಮಸೂದೆಯೊಂದು ದೇಶದ ಸಂಸತ್ತಿನಲ್ಲಿ ಅಂಗೀಕಾರಗೊಂಡರೂ ಅದನ್ನು ಯಥಾವತ್ತಾಗಿ ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದೇಟು ಹಾಕುತ್ತಿದೆ. ಮಸೂದೆಯ ಆಧಾರದಲ್ಲಿ ರಾಜ್ಯ ಸರಕಾರಗಳು ವಿಶೇಷ ನಿಯಮಾವಳಿಗಳನ್ನು ರೂಪಿಸಬೇಕೆಂದಿದ್ದರೂ ಈ ಬಗ್ಗೆ ಇನ್ನೂ ರಾಜ್ಯದಲ್ಲಿ ಜಾರಿಯಾಗಿಲ್ಲ ಎಂದು ಖಂಡಿಸಿದರು.

ಬೀದಿಬದಿ ವ್ಯಾಪಾರಿಗಳಿಗೆ ಗುರುತು ಚೀಟಿ ಇರುವವರು ನವೀಕರಣ ಮಾಡಬೇಕು, ಚೀಟಿ ಇಲ್ಲದವವರಿಗೆ ಕೊಡಬೇಕು ಮತ್ತು ಉಡುಪಿ ನಗರಸಭೆ ಅಧಿಕಾರಿಗಳು ತಾನು ಮಾಡಬೇಕಾದ ಕೆಲಸವನ್ನು ಮಾಡದೆ ವಿನಾಕಾರಣ ಬೀದಿ ಬದಿ ವ್ಯಾಪಾರಸ್ಥರ ಮೇಲೆ ದಾಳಿ ನಡೆಸುತ್ತಿದೆ ಇದರ ವಿರುದ್ಧ ಹೋರಾಟ ಮಾಡಲು ಉಡುಪಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ(ಸಿಐಟಿಯು) ಸ್ಥಾಪನೆ ಮಾಡುವುದು ತೀರಾ ಅಗತ್ಯವಿದೆ'' ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಂಘಟನೆ ನೇತೃತ್ವದಲ್ಲಿ ಉಡುಪಿ ನಗರಸಭೆಯ ವಿರುಧ್ಧ ದೌರ್ಜನ್ಯ ಖಂಡಿಸಿ ನವೆಂಬರ್ 02 ಬೃಹತ್ ಪ್ರತಿಭಟನಾ ಮುಷ್ಕರ ಜರಗಿಸಲು ತೀರ್ಮಾನಿಸಲಾಯಿತು. 

ಉಡುಪಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ(ಸಿಐಟಿಯು)ದ ಪದಾಧಿಕಾರಿಗಳು: ಗೌರವ ಅಧ್ಯಕ್ಷ ಕವಿರಾಜ್ ಎಸ್. ಉಡುಪಿ, ವೀರೇಶ್(ಅಧ್ಯಕ್ಷ), ಬಸವರಾಜ(ಪ್ರಧಾನ ಕಾರ್ಯದರ್ಶಿ), ಮಂಜುನಾಥ, ಸುಧಾಕರ (ಉಪಾಧ್ಯಕ್ಷರು), ಬಸವನಗೌಡ, ಕಲಂದರ್(ಕಾರ್ಯದರ್ಶಿಗಳು), ಸಂಗಮೇಶ (ಕೋಶಾಧಿಕಾರಿ), ಪಿ.ವಿಶ್ವನಾಥ ರೈ(ಕಾನೂನು ಸಲಹೆಗಾರರು) ಇವರನ್ನು ಒಳಗೊಂಡಂತೆ 15 ಮಂದಿ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಿಐಟಿಯು ಮುಖಂಡರಾದ ಉಮೇಶ್ ಕುಂದರ್, ವೆಂಕಟೇಶ ಕೋಣಿ, ನಳಿನಿ ಸಭೆಯಲ್ಲಿ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಬಸವರಾಜ್ ಕೊನೆಯಲ್ಲಿ ವಂದಿಸಿದರು.

ವರದಿ : ವೆಂಕಟೇಶ ಕೋಣಿ