ರಮೇಶ್‍ಕುಮಾರ್ ಅವರೇ! ಉಡುಪಿ ನಿಮ್ಮ ಮಂತ್ರಿಗಿರಿ ಒಳಗೆ ಬರುತ್ತಾ?!

ಸಂಪುಟ: 
10
ಸಂಚಿಕೆ: 
46
date: 
Sunday, 6 November 2016
Image: 

ಬಡವರ ಪಾಲಿಗೆ ಇದ್ದೂ ಇಲ್ಲದಂತಿದ್ದ ಖಾಸಗಿ ಆಸ್ಪತ್ರೆ ಚಿಕಿತ್ಸೆ ಇನ್ನು ಮುಂದೆ ಸುಲಭವಾಗಲಿದ್ದು, ಖಾಸಗಿ ಆಸ್ಪತ್ರೆಗಳ ದುಬಾರಿತನಕ್ಕೆ ಬ್ರೇಕ್ ಹಾಕಲು ಶಾಸನ ಜಾರಿಗೆ  ತರುವುದಾಗಿ ಆರೋಗ್ಯ ಸಚಿವ ರಮೇಶ್‍ಕುಮಾರ್ ಅವರು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳ ದುಬಾರಿ ತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಮೇಶ್‍ಕುಮಾರ್ ಅವರು, ಸಚಿವನಾದ ಬಳಿಕ ಸಾಕಷ್ಟು ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ವೇಳೆ ಹಲವು ಮಾಹಿತಿಗಳು ಬೆಳಕಿಗೆ ಬಂದಿದ್ದು, ಬಡವರು ಎನ್ನದೇ ದುಬಾರಿ ಹಣವಸೂಲಿ ಮಾಡಲಾಗುತ್ತಿದೆ. ಸಣ್ಣಪುಟ್ಟ ಚಿಕಿತ್ಸೆಗೂ ದುಬಾರಿ ಸ್ಕ್ಯಾನಿಂಗ್  ಮಾಡಿಸಲಾಗುತ್ತಿದೆ ಎಂದು ಹೇಳಿದರು. ನ್ಯಾಯಮೂರ್ತಿ ವಿಕ್ರಮ್‍ಜೀತ್‍ಸೇನ  ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳ ದುಬಾರಿ ತನದ  ಕುರಿತು ಪರಿಶೀಲನೆ ನಡೆಸಿ 8 ವಾರಗಳಲ್ಲಿ ತನ್ನ ವರದಿ ಸಲ್ಲಿಸಲಿದೆ. ವೈದ್ಯಕೀಯ ಸೇವೆಗೆ ದರ ನಿಗದಿ ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಸಮಿತಿ ನೀಡಲಿದೆ.

ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕಾಯ್ದೆಗೆ ತಿದ್ದುಪಡಿ ತಂದು ಶಾಸನ ಜಾರಿಗೆ ತರಲಾಗುತ್ತದೆ. ಶಾಸನ ಜಾರಿಯಾದ ಬಳಿಕವೂ ಇದು ಮುಂದವರೆದರೆ ಅಂತಹ ಸಂಸ್ಥೆಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುತ್ತದೆ ಎಂದು ರಮೇಶ್‍ಕುಮಾರ ತಿಳಿಸಿದರು.

ಶಾಭಾಶ್! ರಮೇಶ್‍ಕುಮಾರ್ ಅವರೇ! ಆದರೆ ಒಂದು ಸಣ್ಣ ಡೌಟು.?!

ಉಡುಪಿ ಜಿಲ್ಲೆ ಸಹ ನಿಮ್ಮ ಮಂತ್ರಿಗಿರಿ ಒಳಗೆ ಬರುತ್ತಾ? ಕರಾವಳಿ ಜಿಲ್ಲೆಗಳಿಗೆ ಬೇರೆ ಗೃಹಮಂತ್ರಿಗಳು (ಕಲ್ಲಡ್ಕ ಪ್ರಭಾಕರ ಭಟ್) ಇದ್ದ ಹಾಗೆ, ಉಡುಪಿಗೆ ಬೇರೆನೇ ಆರೋಗ್ಯ ಮಂತ್ರಿಗಳು ಇದ್ದಾರಾ? ಇಲ್ಲದಿದ್ದರೆ “ಖಾಸಗಿ ಆಸ್ಪತ್ರೆಗಳ ದುಬಾರಿತನಕ್ಕೆ ಬ್ರೇಕ್ ಹಾಕಲು” ಹೊರಟಿರುವ ನೀವು, ಎಷ್ಟೋ ಸೂಪರ್-ಸ್ಪೆಶಾಲಿಟಿ ಆಸ್ಪತ್ರೆಗಳಿಗಿಂತ ಚೆನ್ನಾಗಿ ಉಚಿತ ಚಿಕಿತ್ಸೆ ಕೊಡುತ್ತಿರುವ ಉಡುಪಿ ಮಕ್ಕಳ/ಮಹಿಳೆಯರ ಆಸ್ಪತ್ರೆಯನ್ನು ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ನಾಗರಿಕರ ತೀವ್ರ ವಿರೋಧದ ಮಧ್ಯೆ ಏಕೆ ಉಡುಗೊರೆ ಕೊಡಲು ಹೊರಟಿದ್ದೀರಿ? ನಾಗರಿಕರ ವಿರೋಧಕ್ಕೆ ಕಾರಣ ನೀವೇ ಹೇಳುವ “ಖಾಸಗಿ ಆಸ್ಪತ್ರೆಗಳ ದುಬಾರಿತನ” ಎಂಬುದನ್ನು ಅರಿಯದಷ್ಟು ದಡ್ಡರೇನು ಅಲ್ಲ ನೀವು. ನಾವೂ ನಿಮ್ಮ ಬೊಗಳೆ ಅರ್ಥವಾಗದ ದಡ್ಡರಲ್ಲ. ಉಡುಪಿ ಆಸ್ಪತ್ರೆ ಖಾಸಗೀಕರಣ ಮೊದಲು ನಿಲ್ಲಿಸಿ. ಆ ಮೇಲೆ ನಿಮ್ಮ ಈ ಶಾಸನ, ಅದರಡಿ ನಿಮ್ಮ ಕಠಿಣ ಕ್ರಮಗಳನ್ನು ನಂಬಬೇಕೋ ಬಿಡಬೇಕೋ ಎಂದು ನಾವು ನಿರ್ಧರಿಸುತ್ತೇವೆ.

ಕಾರ್ಮಿಕರ ಕನಿಷ್ಠ ವೇತನ ವಂಚನೆಗೆ ಹುನ್ನಾರ

ಆಟೋಮೊಬೈಲ್, ಫೌಂಡ್ರಿ, ಪ್ಲೈವುಡ್ ಸೇರಿದಂತೆ ನಾನಾ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕನಿಷ್ಠ ವೇತನ ನಿಗದಿ ಮಾಡಿ ರಾಜ್ಯ ಸರಕಾರ 2015 ರಲ್ಲಿ ಹೊರಡಿಸಿದ್ದ ಆದೇಶಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಕ್ಷರ ಮೋಟಾರ್ಸ್, ಪ್ರೇರಣಾ ಮೋಟಾರ್ಸ್ ಸೇರಿದಂತೆ 86 ಆಟೋಮೊಬೈಲ್ ಸಂಸ್ಥೆಗಳು, ಪ್ಲೈವುಡ್ ಸಂಸ್ಥೆಗಳು ಮತ್ತಿತರರ ಉದ್ದಿಮೆಗಳವರು ಸಲ್ಲಿಸಿದ್ದ ಹಲವು ಅರ್ಜಿಗಳನ್ನು ಆಲಿಸಿ ತೀರ್ಪುಕಾಯ್ದಿರಿಸಿದ್ದ ನ್ಯಾ.ಎ.ಎನ್.ವೇಣುಗೋಪಾಲಗೌಡ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.

ನಿಯಮ ಪಾಲನೆ ಮಾಡದಿರುವುದರಿಂದ ಸರಕಾರ 2015ರ ಜು.30 ಹಾಗೂ ಆ.3ರಂದು ಹೊರಡಿಸಿದ್ದ ಆದೇಶಗಳನ್ನು ರದ್ದುಗೊಳಿಸಲಾಗುವುದು. ನಿಯಮದಂತೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ನ.30ರೊಳಗೆ ಹೊಸ ಅಧಿಸೂಚನೆ ಹೊರಡಿಸಬೇಕು. ಅಲ್ಲಿಯವರೆಗೆ ಸಿಬ್ಬಂದಿಗೆ ಸರಕಾರ ನಿಗದಿಪಡಿಸಿದ್ದ ಹಿಂದಿನ ಆದೇಶದಲ್ಲಿರುವ ಮೊತ್ತದ ಶೇ.75ರಷ್ಟು ವೇತನವನ್ನು ಮಾಲೀಕರು ಪಾವತಿಸಬೇಕು,'' ಎಂದು ಆದೇಶಿಸಿದೆ.

“ನಿಯಮ ಪಾಲನೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ ಎದ್ದು ಕಾಣುತ್ತದೆ. ಅದು ಹಲವು ಗೊಂದಲಗಳಿಗೆ ಕಾರಣವಾಗಿದೆ, ಹಾಗಾಗಿ ತಪ್ಪಿತಸ್ಥ ಅಧಿಕಾರಿಗಳು ಯಾರು ಎಂಬುದನ್ನು ಪತ್ತೆಹಚ್ಚಿ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ 2016ರ ಡಿ.31ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು,” ಎಂದೂ ಮುಖ್ಯ ಕಾರ್ಯದರ್ಶಿಗೆ ನ್ಯಾಯಪೀಠ ಆದೇಶ ನೀಡಿದೆ.

ಇದೊಂದು ಮಹತ್ವದ ತೀರ್ಪು. ಆದೇಶವನ್ನು ಪುನಃ ಹೊರಡಿಸಲು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಗಡುವು ನಿಗದಿ ಮಾಡಿರುವುದು ಸ್ವಾಗತಾರ್ಹ. ಈ ಆದೇಶ ಹೊರಡಿಸುವಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳ `ಕರ್ತವ್ಯಲೋಪ’ ಅಚಾತುರ್ಯದಿಂದ ನಡೆದದ್ದೇನೂ ಅಲ್ಲ. ಇದು ಬೇಕೆಂತಲೇ ಮಾಡಿದ್ದು. ಕಾರ್ಮಿಕರಿಗೆ ಕನಿಷ್ಟ ಕೂಲಿಯನ್ನು ವಂಚಿಸಲು ಮಾಡಿದ ಹುನ್ನಾರ. ಇದರಲ್ಲಿ ಮಾಲಿಕರು, ಕಾರ್ಮಿಕ ಇಲಾಖೆ ಅಧಿಕಾರಿಗಳು, (ಕೆಲವು ಹಿರಿಯ ಮಂತ್ರಿಗಳು ಸೇರಿದಂತೆ) ರಾಜಕಾರಣಿಗಳು ಶಾಮೀಲಾಗಿದ್ದರು ಎಂದು ಹೇಳಲಾಗಿದೆ. ಅವರನ್ನು ಬಯಲಿಗೆಳೆದು ಅವರ ಮೇಲೂ ಕ್ರಮ ಕೈಗೊಳ್ಳಬೇಕಾಗಿದೆ.