ಸಿದ್ಧರಾಮಯ್ಯನವರೇ! ಕನ್ನಡಕ್ಕೆ ನೀವೇನು ಮಾಡಿದ್ದೀರಿ?

ಸಂಪುಟ: 
10
ಸಂಚಿಕೆ: 
46
date: 
Sunday, 6 November 2016
Image: 

ನವೆಂಬರ್ 1 ರಂದು ಕರ್ನಾಟಕ ಏಕೀಕರಣದ ವಜ್ರ ಮಹೋತ್ಸವದ ಬಂತು ಹೋಯಿತು. ಸರಕಾರದಿಂದಾಗಲಿ ಕನ್ನಡ-ಪರ ಕನ್ನಡ ಜನ-ಪರ ಎಂದು ಹೇಳಿಕೊಳ್ಳುವ ಸಂಘಟನೆಗಳಿಂದಾಗಲಿ ಏಕೀಕರಣದ ಆಶಯಗಳು ಸಾಕಾರವಾಗಿವೆಯೇ? ಆಗಿರದಿದ್ದರೆ ಏಕಿಲ್ಲ ಎಂಬುದರ ಬಗ್ಗೆ ಚಿಂತನ-ಮಥನ ನಡೆಯಲಿಲ್ಲ. ಆತ್ಮಾವಲೋಕನ ಆಗಲಿಲ್ಲ. ಕರ್ನಾಟಕದ ಕನ್ನಡ ಜನತೆಯ ಸಮಗ್ರ ಬೆಳವಣಿಗೆ ಬಗ್ಗೆ ಇರಲಿ, ಕನಿಷ್ಟ ಕನ್ನಡ ಮಾಧ್ಯಮ ಶಿಕ್ಷಣ ಮತ್ತು ಆಡಳಿತ ಭಾûಷೆ ಜಾರಿಯ ವೈಫಲ್ಯತೆ ಬಗಗೆ ಸಹ ಆತ್ಮಾವಲೋಕನ, ಚಿಂತನ-ಮಥನ ನಡೆಯಲಿಲ್ಲ. ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಆದ್ದರಿಂದ, ಪ್ರಧಾನಿ ನರೇಂದ್ರಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು ಎಂದು ಹೇಳುವ ಮೂಲಕ. ಸಿದ್ಧರಾಮಯ್ಯನವರು ಸಮಸ್ಯೆಯನ್ನು ಮೋದಿಗೆ ಕೇಂದ್ರ ಸರಕಾರಕ್ಕೆ ದಾಟಿಸಿದರು. 

ಈ ಬಗ್ಗೆ ಸುಪ್ರೀಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಇದು ಆಗಬೇಕಾಗಿದೆ. ನಿಜ. ಆದರೆ ಇಂತಹ ಪರಿಸ್ಥಿತಿಗೆ ಕಾರಣವಾದ ನೀತಿಗಳಿಗೆ ಕ್ರಮಗಳಿಗೆ ಕಾರಣರು ಯಾರು? ಕಾಂಗ್ರೆಸ್ ಮತ್ತು ಇತರ ಬೂಜ್ರ್ವಾ-ಭೂಮಾಲಕ ಪಕ್ಷಗಳ ಸರಕಾರಗಳಲ್ಲವೆ? ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಸೊರಗಿಸಿ ಕಾನ್ವೆಂಟ್ ಶಾಲೆಗಳ ಮೋಹ ಬೆಳೆಯುವಂತೆ ಮಾಡಿದ್ದು, ಇಂಗ್ಲಿಷ್ ಗುಣಮಟ್ಟ ಶಿಕ್ಷಣದ ನೆಪದಲ್ಲಿ ಪ್ರಬಲ ಖಾಸಗಿ ಶಿಕ್ಷಣ ಲಾಬಿ ಬೆಳೆದು ಅದೇ ಸರಕಾರಕ್ಕೆ ನಿರ್ದೇಶಿಸುವ ಪರಿಸ್ಥಿತಿ ಉಂಟಾಗಿದ್ದು, ಕನ್ನಡವನ್ನು ಉಚ್ಛ ಶಿಕ್ಷಣದವರೆಗೆ ಮಾಧ್ಯಮವಾಗಿ ಬೆಳೆಸದೆ ಹೋಗಿದ್ದು, ಕನ್ನಡದಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗ ಒದಗಿಸುವ ಬಗ್ಗೆ ಏನೂ ಮಾಡದ್ದು- ಕಳೆದ ಹಲವು ದಶಕಗಳ ಸರಕಾರಿ ನೀತಿಗಳಲ್ಲವೇ? ಈಗಿನ ಸ್ಥಿತಿಯಲ್ಲೂ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಸಮರೋಪಾದಿಯಲ್ಲಿ ಉತ್ತಮ ಪಡಿಸುವುದಕ್ಕೆ ಕಿರುಬೆರಳು ಎತ್ತಿದ್ದೀರಾ? ಆರ್.ಟಿ.ಇ. ಕಾನೂನನ್ನು ಕಟ್ಟಿನಿಟ್ಟಾಗಿ ಜಾರಿ ಮಾಡಿದ್ದೀರಾ? ಈಗಲೂ ಸರಕಾರಿ ಶಾಲೆಗಳನ್ನು ಮುಚ್ಚಲು ಹತ್ತು ಹಲವು ಉಪಾಯಗಳನ್ನು ಮಾಡುವುದನ್ನು ನಿಲ್ಲಿಸಿದ್ದೀರಾ? ಸಮಾನ ಗುಣಮಟ್ಟದ ಶಿಕ್ಷಣ ಜಾರಿ ಮಾಡಲು ಶಾಲಾ ಶಿಕ್ಷಣದ ರಾಷ್ಟ್ರೀಕರಣದ ದೃಢ ನಿರ್ಣಯ ಕೈಗೊಳಲು ಸಿದ್ದರಿದ್ದೀರಾ?

ಇದೇ ಮಾತನ್ನು ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿ ಮಾಡುವುದಕ್ಕೆ ಸಂಬಂಧಿಸಿ ಹೇಳಬಹುದು. ಈಗಲೂ ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿ ಮಾಡಲು ಬೇಕಾದ ರಾಜಕೀಯ ಇಚ್ಛಾಶಕ್ತಿ ಇದ್ದಂತಿಲ್ಲ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆಯ ಬಗ್ಗೆ ಸ್ಟಾಂಡರ್ಡೈಸೇಶನ ಪ್ರಯತ್ನಗಳ ಮತ್ತು ಸಮಗ್ರ ಬೆಳವಣಿಗೆಯ ಅಭಾವದಿಂದ, ಇ-ಆಡಳಿತ ಬಂದ ಮೇಲಂತೂ, ಕನ್ನಡದ ಬಳಕೆಯ ಮಟ್ಟ ಇನ್ನಷ್ಟು ಕೆಳಕ್ಕೆ ಹೋಗಿದೆ ಎನ್ನಬಹುದು. ಇಲ್ಲಂತೂ ಸರಕಾರಕ್ಕೆ, ಯಾರನ್ನೂ ದೂರಲು ಯಾವ ಸಬೂಬು ಹೇಳಲೂ ಅವಕಾಶ ಇಲ್ಲ. 

ಇನ್ನೂ 29 ತಾಲ್ಲೂಕುಗಳಲ್ಲಿ ಬರ ಘೋಷಣೆ

ರಾಜ್ಯದಲ್ಲಿ ಇನ್ನೂ 29 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಿಂದಿನ 110 ತಾಲೂಕುಗಳನ್ನು ಸೇರಿಸಿ ಈಗ ಒಟ್ಟು 139 ತಾಲೂಕುಗಳನ್ನು ಬರ ಇದೆ. ಕೇಂದ್ರಕ್ಕೆ ಅನುದಾನಕ್ಕೆ ಕೋರಿಕೆ ಸಲ್ಲಿಸಿದ್ದು, ಕೆಂದ್ರದ ಅಧ್ಯಯನ ತಂಡ ರಾಜ್ಯದ ಪ್ರವಾಸ ಮಾಡುತ್ತಿದೆ. ಬರಿಯ ಬರ ಘೋಷಣೆಯಿಂದ, ಕೇಂದ್ರಕ್ಕೆ ಅನುದಾನಕ್ಕೆ ಕೋರಿಕೆಗಳಿಂದ ಯಾವುದೇ ಪ್ರಯೋಜನವಿಲ್ಲ. ವಾಸ್ತವವಾಗಿ ಬರಸ್ಥಿತಿಯ ಮೇಲೆ ಸತತ ನಿಗಾ ಇಟ್ಟಿದ್ದು ಘೋಷಣೆ ಜತೆಗೆ ಬೆಳೆ ಪರಿಹಾರ, ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಆಗಬೇಕಾಗಿತ್ತು. ಅದು ಆಗುತ್ತಿಲ್ಲ. ಈಗ ಇರುವ ಬೆಳೆ ಪರಿಹಾರದ ಮೊತ್ತ ಏನೇನೂ ಸಾಲದು. ಅದನ್ನು ಏರಿಸಬೇಕಾಗಿದೆ. ಬರಪರಿಹಾರ ಕ್ರಮಗಳು ಸಮರೋಪಾದಿಯಲ್ಲಿ ನಡೆಯಬೇಕಾಗಿದೆ.

ಆತಂಕಕಾರಿ ಪ್ರತ್ಯೇಕತಾ ಕೂಗು

ಕರ್ನಾಟಕ ರಾಜ್ಯೋತ್ಸವದಂದು ಎಲ್ಲರ ಗಮನ ಎಂ.ಇ.ಎಸ್. ಬೆಳಗಾವಿಯಲ್ಲಿ `ಕರಾಳದಿನ’ ಆಚರಿಸಿದ್ದರ ಮೇಲಿದ್ದರೆ, ಈ ಬಾರಿಯೂ ಪ್ರತ್ಯೇಕತಾವಾದಿ ಚಳುವಳಿಗಳು ಪ್ರತ್ಯೇಕ ರಾಜ್ಯ ಆಗಬೇಕು ಎಂದು ಹಲವು ಕಡೆ ಪ್ರದರ್ಶನ ಮಾಡಿವೆ. ಕೊಡಗು ಜಿಲ್ಲೆಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದು ಆಗ್ರಹಿಸಿ ನ. 1 ರಂದು ನವದೆಹಲಿಯ ಜಂತರ್ ಮಂತರ್‍ನಲ್ಲಿ `ನವದೆಹಲಿ ಚಲೋ ಸತ್ಯಾಗ್ರಹ’ವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಏರ್ಪಡಿಸಿದೆ ಎಂದು ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ಅವರು ತಿಳಿಸಿದರು. ಲಡಾಖ್, ಬೋಡೋಲ್ಯಾಂಡ್, ಗೂರ್ಖಾಲ್ಯಾಂಡ್ ಮಾದರಿಯಲ್ಲಿ ಕೊಡಗಿಗೆ ಸ್ವಾಯತ್ತತೆ ನೀಡಬೇಕು. ಸಂವಿಧಾನದ 340 ಮತ್ತು 342ನೇ ವಿಧಿಪ್ರಕಾರ ಕ್ಷಾತ್ರ ಬುಡಕಟ್ಟು ಜನಾಂಗದ ಸ್ಥಾನಮಾನವನ್ನು ಕೊಡವರಿಗೆ ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಅದೇ ರೀತಿ ಪ್ರತ್ಯೇಕ ತುಳುನಾಡು ಮತ್ತು ಕಲ್ಯಾಣ ರಾಜ್ಯ ಬೇಕೆಂದು, ಅನುಕ್ರಮವಾಗಿ ದಕ್ಷಿಣಕನ್ನಡ ಹಾಗೂ ಕಲಬುರಗಿಯಲ್ಲಿ ಪ್ರದರ್ಶನ ನಡೆದ ವರದಿ ಬಂದಿದೆ. ಇದು ಈಗ ಸಣ್ಣ ಪ್ರಮಾಣದಲ್ಲಿದ್ದರೂ, ಪ್ರಾದೇಶಿಕ ಅಸಮಾನತೆ ಮತ್ತು ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತಾ ಹೋದಂತೆ ಇದಕ್ಕೆ ಜನಬೆಂಬಲ ಸಿಗುವ ಸಾಧ್ಯತೆ ಇದೆ. ಪ್ರತ್ಯೇಕ ಕೊಡಗು ಮತ್ತು ಕಲ್ಯಾಣ ರಾಜ್ಯದ ಚಳುವಳಿ ಹಿಂದೆ ಬಿಜೆಪಿಯಕೈ ಇದೆ ಎಂದು ತಿಳಿದು ಬಂದಿದೆ. ಬಿಜೆಪಿ ಭಾಷಾವಾರು ರಾಜ್ಯಗಳ ಪರಿಕಲ್ಪನೆಗೆ ಮೊದಲಿನಿಂದಲೂ ವಿರೋಧಿಸಿದ್ದು ಸಣ್ಣರಾಜ್ಯಗಳಿಗೆ ಬೆಂಬಲ ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ ಇದೇನು ಆಶ್ವಯವೇನು ಅಲ್ಲ, ಆದರೆ ಆತಂಕದ ಸಂಗತಿ. 

ಅಹಿಂದ ಮಠಗಳಿಗೆ ಭೂದಾನ

ಅರಣ್ಯ ಇಲಾಖೆಯ ವಿರೋಧದ ನಡುವೆಯೂ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಮಾಚೋಹಳ್ಳಿಯ 96 ಎಕರೆ 12 ಗುಂಟೆ ಮೀಸಲು ಅರಣ್ಯವನ್ನು  ಕಾಗಿ ನೆಲೆ ಮಹಾಸಂಸ್ಥಾನ ಕನಕಗುರುಪೀಠ, ಹೊಸದುರ್ಗದ ಕುಂಚಿಟಿಗರ ಮಹಾಸಂಸ್ಥಾನ ಮಠ ಸೇರಿದಂತೆ ಹಿಂದುಳಿದ ಜಾತಿಗಳ ಸಂಘಸಂಸ್ಥೆಗಳಿಗೆ ಗುತ್ತಿಗೆ ನೀಡಲು ರಾಜ್ಯಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಒಟ್ಟು 31 ಸಂಸ್ಥೆಗಳಿಗೆ ಜಾಗ ನೀಡಲು ಬೆಂಗಳೂರು ಉತ್ತರ ತಹಶೀಲ್‍ದಾರ್ ಪಟ್ಟಿ ಸಿದ್ಧಪಡಿಸಿದ್ದು, ಕಾಗಿನೆಲೆ ಮಠಕ್ಕೆ 5 ಎಕರೆ ಗುತ್ತಿಗೆಗೆ ನೀಡಲಾಗುತ್ತದೆಯಂತೆ. 

ಬಿಜೆಪಿ ಬ್ರಾಹ್ಮಣಮಠ-ಸಂಘಟನೆಗಳಿಗೆ ಭೂಮಿ ಹಂಚಿದಂತೆ ಕಾಂಗ್ರೆಸ್ ಸರ್ಕಾರ `ಅಹಿಂದ’ ಮಠ-ಸಂಘಟನೆಗಳಿಗೆ ಭೂಮಿ ಹಂಚಲು ಹೊರಟಿರುವುದು ಸ್ಪಷ್ಟ. ಇದಕ್ಕೆ ಬಹುಶಃ `ಸಾಮಾಜಿಕ ನ್ಯಾಯ’ದ ಸಮಜಾಯಿಷಿ ಕೊಡಲಾಗುತ್ತದೆ. ಸರಕಾರಕ್ಕೆ `ಸಾಮಾಜಿಕ ನ್ಯಾಯ’ದ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ, ಲಕ್ಷಾಂತರ ಬಗರ್ಹುಕುಂ ಸಾಗುವಳಿದಾರರ (ಇವರಲ್ಲಿ `ಅಹಿಂದ’ರೇ ಬಹುಭಾಗ) ಜಮೀನುಗಳಿಗೆ ಹಕ್ಕುಪತ್ರ ಕೊಡಲಿ. ದಲಿತರಿಗೆ ಕಾಯ್ದಿರಿಸಿದ ಜಮೀನನ್ನು ಕಬಳಿಸಿದವರ ಜಮೀನು ವಾಪಸು ಪಡೆದು ಹಂಚಲಿ. ಇದಕ್ಕೆ ಬೇಕಾದ ಕಾನೂನು ತಿದ್ದುಪಡಿಗಳನ್ನು ಮಾಡಲಿ. ಮಠ-ಸಂಘಟನೆಗಳಿಗೆ (ಅದು ಯಾವುದೇ ಅಥವಾ ಎಲ್ಲಾ ಸಮುದಾಯಗಳಿಗೆ ಸೇರಿದ್ದಾಗಿರಲಿ) ಕೊಟ್ಟ ಜಮೀನು ಪ್ರತಿಗಾಮಿ ಶಕ್ತಿಗಳನ್ನು ಬಲಪಡಿಸುತ್ತದೆ. ಈ ಮಠ-ಸಂಘಟನೆಗಳು ಗೇಣಿಗೆ ಕೊಟ್ಟು ರೈತರನ್ನು ಶೋಷಿಸುತ್ತವೆ. ಇಲ್ಲವೆ ರೀಯಲ್ ಎಸ್ಟೇಟ್ ದಂಧೆ ನಡೆಸುತ್ತವೆ. ಧರ್ಮಸ್ಥಳ, ರಾಮಚಂದ್ರಮಠ ಮತ್ತಿತರ ಪ್ರಬಲ ಮಠಗಳು ಇದನ್ನೇ ಮಾಡುತ್ತಿರುವುದು. ಸರಕಾರದ ಈ ಕ್ರಮ ಸಾಮಾಜಿಕ ನ್ಯಾಯದತ್ತ ನಡೆಯೂ ಅಲ್ಲ. ಅಹಿಂದರನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಗಟ್ಟಿಗೊಳಿಸುವ ನಡೆಯೂ ಅಲ್ಲ.