ಸಾರ್ವಜನಿಕ ಉದ್ದಿಮೆ ಉಳಿಸಲು ಒತ್ತಾಯಛಿ ಜೆಎಎಫ್ ನೇತೃತ್ವದಲ್ಲಿ ಕಾರ್ಮಿಕರ ಬೃಹತ್ ಪ್ರತಿಭಟನೆ

ಸಂಪುಟ: 
10
ಸಂಚಿಕೆ: 
46
Sunday, 6 November 2016

ಕೇಂದ್ರ ಸರಕಾರಿ ಸ್ವಾಮ್ಯದ ಕಂಪನಿಗಳಿಂದ ಷೇರು ಹಾಗೂ ಹೂಡಿಕೆಯನ್ನು ಹಿಂತೆಗೆದುಕೊಳ್ಳದಂತೆ ಬಿಇಎಂಎಲ್ ಸಹಿತ ನಾನಾ ಕಾರ್ಖಾನೆಗಳ ಸಿಬ್ಬಂದಿಗಳು ಜಂಟಿ ಕ್ರಿಯಾ ಸಮಿತಿ(ಜೆಎಎಫ್) ನೇತೃತ್ವದಲ್ಲಿ ನವೆಂಬರ್ 3ರಂದು ಬೆಂಗಳೂರಿನ ಟೌನ್‍ಹಾಲ್ ಮುಂಭಾಗ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

`ಸಾರ್ವಜನಿಕ ಉದ್ದಿಮೆ ಉಳಿಸಿ; ಭಾರತ ಉಳಿಸಿ' ಹೆಸರಿನಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರಕಾರ ಕೈಗೊಂಡಿರುವ ನಿಲುವನ್ನು ಪ್ರತಿಭಟನಾಕಾರರು ಖಂಡಿಸಿ ಧಿಕ್ಕಾರದ ಘೋಷಣೆ ಮೊಳಗಿಸಿದರು. ಸಾವಿರಾರು ಕುಟುಂಬಗಳಿಗೆ ಉದ್ಯೋಗ ನೀಡಿರುವ ಸರಕಾರಿ ಸ್ವಾಮ್ಯದ ಕಂಪನಿಗಳನ್ನು ಬಾಗಿಲು ಮುಚ್ಚಲು ಎನ್‍ಡಿಎ ಸರಕಾರ ಚಿತಾವಣೆ ನಡೆಸಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಿ ಸ್ವಾಮ್ಯದ ಕಂಪನಿಗಳು ದೇಶಕಟ್ಟುವಲ್ಲಿ ಹೆಚ್ಚಿನ ಕಾಣಿಕೆ ನೀಡಿವೆ. ಸ್ವಾತಂತ್ರ್ಯಾ ನಂತರ ದೇಶದಲ್ಲಿ ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ, ಆರ್ಥಿಕತೆ ಹೆಚ್ಚಳಕ್ಕೆ ಕಾರಣವಾಗಿದೆ. ಇಂತಹ ಹಿನ್ನೆಲೆಯುಳ್ಳ ಕಂಪನಿಗಳ ಕಾರ್ಯನಿರ್ವಹಣೆಗೆ ಹೆಗಲು ನೀಡದ ಸರಕಾರ, ಕಾರ್ಪೋರೇಟ್ ಲಾಭಿಗೆ ಮಣಿದು ಬೇಜವಾಬ್ದಾರಿ ನಿಲುವನ್ನು ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಮೆಲ್‍ನ ಶೇ.26 ರಷ್ಟು ಷೇರು ಮಾರಾಟ ಮಾಡಲು ಎನ್‍ಡಿಎ ಸರಕಾರ ಮುಂದಾಗಿದೆ. ಲಾಭದಾಯಕ ಸಾರ್ವಜನಿಕ ವಲಯದ ಬಂಡವಾಳ ಹಿಂತೆಗೆದುಕೊಳ್ಳುವ ಹಾಗೂ ಮಾರಾಟ ಮಾಡುವ ನಿಲುವನ್ನು ಕೇಂದ್ರ ಸರಕಾರ ಕೈಗೊಂಡಿದೆ. ಬೆಮಲ್‍ನ ಶೇ.54 ರಷ್ಟಿರುವ ಷೇರು ಬಂಡವಾಳವನ್ನು ಶೇ. 28ಕ್ಕೆ ಇಳಿಸಲು ಮುಂದಾಗಿದೆ. ಇದು ದೇಶ ವಿರೋಧಿ ನೀತಿಯಾಗಿದೆ ಎಂದು ಬೆಮೆಲ್ ಸಂಘದ ಅಧ್ಯಕ್ಷರಾದ ಶ್ರೀನಿವಾಸ ರೆಡ್ಡಿರವರು ತಿಳಿಸಿದರು.

ನಿರ್ಧಾರ ಕೈಬಿಡಲು ಒತ್ತಾಯ :

ಜೆಎಎಫ್ ಸಂಚಾಲಕರಾದ ಕಾಂ||ಮೀನಾಕ್ಷಿ ಸುಂದರಂ ಮಾತನಾಡಿ ``ಎನ್‍ಡಿಎ ಸರಕಾರ ಸರಕಾರಿ ಸ್ವಾಮ್ಯದ ಕಂಪನಿಗಳನ್ನು ಪುನಶ್ಚೇತನಗೊಳಿಸದೆ ಧನಿಕ ಉದ್ದಿಮೆದಾರರಿಗೆ ಮಾರಾಟ ಮಾಡುವ ಚಾಳಿಗೆ ಬಿದ್ದಿದೆ. ಹಿಂದೆ ಪ್ರಧಾನಿ ವಾಜಪೇಯಿ ಅವಧಿಯಲ್ಲಿ ನಷ್ಟದಲ್ಲಿದ್ದ ಕಂಪನಿಗಳಿಂದ ಸರಕಾರಿ ಷೇರು ಹಾಗೂ ಹಣ ಹಿಂತೆಗೆತಗೊಂಡಿದ್ದನ್ನು ನಂತರ ಬಂದಂತಹ ಯುಪಿಎ ಸರಕಾರ ತಡೆ ಹಾಕಿತ್ತು. ಈಗ ಮತ್ತೆ ಎನ್‍ಡಿಎ ಸರಕಾರ ಲಾಭದಲ್ಲಿರುವ ಕಂಪನಿಗಳನ್ನು ಕಾರ್ಪೋರೇಟ್ ಧಣಿಗಳಿಗೆ ಮಾರಾಟ ಮಾಡುವ ಹೀನ ಕೆಲಸದಲ್ಲಿ ನಿರತವಾಗಿದೆ.'' ಎಂದು ದೂರಿದರು.

``ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‍ನಲ್ಲಿ ಸರಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಸರಕಾರ ಹೊಂದಿರುವ 56,500 ಕೋಟಿ ರೂ. ಹೂಡಿಕೆಯನ್ನು ಹಿಂತೆಗೆಯುವುದಾಗಿ ಪ್ರಕಟಿಸಿದೆ. ಇದರ ಜತೆಗೆ ಕಂಪನಿಗಳಿಗೆ ಸೇರಿದ ಭೂಮಿ, ಕಟ್ಟಡ ಹಾಗೂ ಉತ್ಪಾದನಾ ಘಟಕಗಳನ್ನು ಬಿಕರಿ ಮಾಡುವ ಘೋಷಣೆ ಮಾಡಿದೆ. ಇದು ವಿದೇಶಿ ಬಂಡವಾಳ ಹೂಡುವವರಿಗೆ ಅವಕಾಶ ಮಾಡಿಕೊಡಲು ಸರಕಾರ ಕೈಗೊಂಡಿರುವ ಕಾರ್ಮಿಕ ವಿರೋಧಿ ನೀತಿಯಾಗಿದೆ. ಬಂಡವಾಳ ಹೂಡಿಕೆ ಹಿಂತೆಗೆತ ಕೈಬಿಟ್ಟು ಪುನಶ್ಚೇತನಕ್ಕೆ ಮುಂದಾಗದಿದ್ದಲ್ಲಿ ಸರಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು'' ಎಂದು ಎಚ್ಚರಿಕೆ ನಿಡಿದರು.

ಕಾರ್ಮಿಕ ಮುಖಂಡರಾದ ಕಾಂ||ಮಹದೇವನ್, ಕಾಂ|| ಡಿ.ವಿಜಯಕುಮಾರ್, ವಿಮಾ ನೌಕರರ ಸಂಘಟನೆ ಅಧ್ಯಕ್ಷರಾದ ಅಮಾನುಲ್ಲಾ ಖಾನ್ ಮತ್ತಿತರ ಮುಖಂಡರು ಮಾತನಾಡಿದರು. ಪ್ರತಿಭಟನೆಯಲ್ಲಿ ಹೆಚ್‍ಎಎಲ್, ಬಿಇಎಲ್, ಬಿಇಎಂಎಲ್, ಬಿಹೆಚ್‍ಇಎಲ್, ಐಟಿಐ, ಮತ್ತಿತರೇ ಕಾರ್ಖಾನೆಯ ಕಾರ್ಮಿಕರು ಭಾಗವಹಿಸಿದ್ದರು.