ಉಡುಪಿ ಚಲೋ, ಮುಂದೇನು?

ಸಂಪುಟ: 
10
ಸಂಚಿಕೆ: 
46
date: 
Sunday, 6 November 2016
Image: 

ನಮ್ಮ ಕೊಳಕುಮಂಡಲ ಮಾಧ್ಯಮಗಳಿಂದಾಗಿ ಇಡೀ ಉಡುಪಿ ಚಲೋ ಕಾರ್ಯಕ್ರಮವನ್ನು ಪೇಜಾವರರೊಂದಿಗೆ ಸಂವಾದವನ್ನಾಗಿ ಮಾಡಿಬಿಡಲಾಗಿದೆ. ಅಥವಾ ಶುದ್ಧೀಕರಣದ ಬಗ್ಗೆ ವಿವಾದವನ್ನಾಗಿಸಲಾಗಿದೆ. ಇದೆಲ್ಲದರಲ್ಲಿ ನಾವು ನಮ್ಮ ಶಕ್ತಿಯನ್ನು ವ್ಯಯಮಾಡುವುದು ಬೇಡ. ಹೊಸದಾಗಿ ಮೂಡಿದ ದಲಿತ ಪ್ರಜ್ಞೆಯು ಮೂರ್ತವಾದ ಒಳ್ಳೆಯ ರಾಜಕೀಯ ಕಾರ್ಯಕ್ರಮಗಳಿಂದ ಮಾತ್ರ ಗಟ್ಟಿಯಾಗಿ ಬೆಳೆಯಬಲ್ಲದು.

ಅರವತ್ತರ ಆಸುಪಾಸಿನ ನಮ್ಮಂಥವರಿಗೆ ಯಾರೋ ಮರುಜೇವಣಿಯಿಂದ ಮತ್ತೊಂದು ಜನ್ಮ ಕೊಟ್ಟಂತಾಗಿತ್ತು. ಉಡುಪಿ ಚಲೋ ಕಾರ್ಯಕ್ರಮದ ಭಾಗವಾಗಿ ಆ ಊರಿನ ಬೀದಿಗಳಲ್ಲಿ ಏರು ಬಿಸಿಲಿನಲ್ಲಿ ಮೆರವಣಿಗೆಯಲ್ಲಿ ನಡೆಯುವುದೆಂದರೆ ಎಲ್ಲೋ ಹೊಸ ಮನ್ವಂತರಕ್ಕೆ ಹೆಜ್ಜೆ ಇಡುತ್ತಿದ್ದೇವೆ ಅನ್ನಿಸಿತು. ನಂತರದ ಸಮಾವೇಶದಲ್ಲಿ ಎಲ್ಲರಲ್ಲೂ ಒಂದು ಹೊಸ ಆಸೆ, ಭರವಸೆ ಮತ್ತು ಹುಮ್ಮಸ್ಸು. ಕಾರಣವಿಷ್ಟೆ. ಅದು ಅಪ್ಪಟ ಯುವಶಕ್ತಿಯ ಕಾರ್ಯಕ್ರಮವಾಗಿತ್ತು. ಕಾರ್ಯಕ್ರಮವನ್ನು ಯೋಜಿಸಿದವರು, ರೂಪಿಸಿದವರು, ನಡೆಸಿದವರು ಹಾಗೂ ಅಂದು ವೇದಿಕೆಯಲ್ಲಿ ಮಾತನಾಡಿದವರು ಮುಖ್ಯವಾಗಿ ಮೂಲತಃ ಯುವಕರೇ ಆಗಿದ್ದರು. ಹೊಸದಾದ ದಲಿತ ಪ್ರಜ್ಞೆಯೊಂದು ಈ ದೇಶದಲ್ಲಿ ಹುಟ್ಟಿಕೊಂಡಿದೆ.  ರೋಹಿತ ವೇಮುಲ, ಜೆ.ಎನ್.ಯು. ವಿದ್ಯಾರ್ಥಿಗಳು ಸಾಮಾಜಿಕ ತಾಣದಲ್ಲಿ ಬಲಪಂಥೀಯರೊಂದಿಗೆ ಮಹಾಯುದ್ಧದಲ್ಲಿಯೇ ತೊಡಗಿರುವವರು, ಅಂಬೇಡ್ಕರ್‍ರಲ್ಲಿ ಇಂದಿನ ಜಗತ್ತಿನ ಸಮಸ್ಯೆಗಳಿಗೆ ಉತ್ತರ ಹುಡುಕುತ್ತಿರುವವರು ಇವರೆಲ್ಲ ಈ ಹೊಸ ದಲಿತ ಪ್ರಜೆಯ ಹರಿಕಾರರು. ಹೊಸ ಚಿಂತನೆ, ಹೊಸ ಪರಿಭಾಷೆ ಪ್ರಾಮಾಣಿಕತೆ ಇವುಗಳು ಯಾವೂ ಇಲ್ಲದೆಯೇ ಬರಿ ತೌಡು ಕುಟ್ಟುತ್ತಿರುವ ಹಳೆಯ ತಲೆಮಾರಿನ ದಲಿತ ನಾಯಕರು ಈಗ ಒಣಗಿದ ಎಲೆಗಳಂತೆ ಕಳಸಿಹೋಗುತ್ತಿರುವುದು ಆರೋಗ್ಯಕರವಾದ ಸಂಗತಿಯಾಗಿದೆ. ಅವರು ಕ್ರಾಂತಿಕಾರಿಗಳ ಬದಲಾಗಿ ಕೋಡಂಗಿಗಳಾಗಿ ಕಾಣುತ್ತಿದ್ದಾರೆ. ಪೇಜಾವರರಿಗೆ ಸಾಷ್ಟಾಂಗ ಬೀಳುವ ಕ್ರಾಂತಿಕಾರಿ ದಲಿತ ಕವಿ, ಎಡ ಬಲಗಳ ತಿರುಗಣಿಯಲ್ಲಿ ಬಿದ್ದಿರುವ ಮಾಜಿ ದಲಿತ ಬರಹಗಾರರು, ಅಂದಿನ ಕಾಲದ ದಲಿತ ಚಳುವಳಿಯ ಹ್ಯಾಂಗ್ ಓವರ್‍ನಲ್ಲಿಯೇ ಇರುವ ಮಂದಿ ಇವರನ್ನೆಲ್ಲಾ ಗುಡಿಸಿ ಸಾರಿಸಿ ಆಚೆಗೆ ತಳ್ಳುವ ಶಕ್ತಿ ಈ ಹೊಸ ಪ್ರಜ್ಞೆಯ ಯುವಶಕ್ತಿಗೆ ಇದೆ. ಇದರ ಸಂಕೇತವಾಗಿ ಹಿಂದುತ್ವದ ಪ್ರಯೋಗಾಲಯವೆಂದು ಕುಖ್ಯಾತವಾದ ಗುಜರಾತ್ ರಾಜ್ಯದ ಸರಕಾರವನ್ನು ಮಂಡಿ ಊರಿಸಿದ ಜಿಗ್ನೇಶ್ ಮೇವಾನಿ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ‘ಗೋವಿನ ಬಾಲ ನೀವೇ ಇಟ್ಟುಕೊಳ್ಳಿ, ನಮಗೆ ಭೂಮಿ ಕೊಡಿ’ ಎನ್ನುವ ಘೋಷಣೆಯಾಗಲಿ ‘ನಾವು ಇನ್ನು ಅವಮಾನ ತರುವ ಯಾವ ಚಾಕರಿಯನ್ನೂ ಮಾಡುವುದಿಲ್ಲ’ ಎನ್ನುವ ದಲಿತರ ಪ್ರತಿಜ್ಞೆಯಾಗಲಿ ಅದೆಷ್ಟು ಅಪಾರ ಸಾಧ್ಯತೆಗಳನ್ನು ಹೊಂದಿವೆಯೆಂದರೆ ಅಂಬೇಡ್ಕರ್ ಆರಂಭಿಸಿದ್ದ ಕ್ರಾಂತಿಯನ್ನು ಅವು ಪೂರ್ಣಗೊಳಿಸಬಲ್ಲವು.

‘ಹಿಂದುತ್ವದ ಕಾಲಾಳುಗಳು ಹಿಂದಕ್ಕೆ ಬನ್ನಿ’

ಇಡೀ ಸಮಾವೇಶದಲ್ಲಿ ನನ್ನನ್ನು ಆವರಿಸಿಕೊಂಡ ಎರಡು ಸಂಗತಿಗಳೆಂದರೆ ಒಂದು ಪ್ರಾಸ್ತಾವಿಕವಾಗಿ ಮಾತನಾಡಿದ ಅನೇಕ ಯುವ ಸಂಗಾತಿಗಳು “ಹಿಂದುತ್ವದ ಕಾಲಾಳುಗಳಾಗಿ ದುಡಿಯುತ್ತಿರುವವರು ದಲಿತ ಹಾಗೂ ಹಿಂದುಳಿದ ಜಾತಿಗಳ ಯುವಕರು, ನಮ್ಮ ಸಮಾವೇಶ ಅವರನ್ನು ಎಚ್ಚರಿಸುವ ಉದ್ದೇಶಕ್ಕಾಗಿಯೂ ಇದೆ” ಎಂದು ಹೇಳಿದ್ದು. ಇದು ಅತ್ಯಂತ ಮಹತ್ವದ ವಿಷಯ. ಬ್ರಾಹ್ಮಣರು, ಬನಿಯಾ ವರ್ಗಗಳು ಹಿಂದುತ್ವದ ಸಮರ್ಥಕರಾಗಿರುವುದು ಆಶ್ಚರ್ಯದ ವಿಷಯವೇ ಅಲ್ಲ. ಅದೇ ರೀತಿ ಈ ದೇಶದ ಕಾರ್ಮಿಕರು ರೈತರು ಸುರಿಸಿದ ಬೆವರಿನಿಂದ ಉನ್ನತ ಶಿಕ್ಷಣ ಪಡೆದು ಐಟಿ, ಬಿಟಿಗಳಲ್ಲಿರುವ ಜನದ್ರೋಹಿ ಯುವ ಜನಾಂಗವು ಹಿಂದುತ್ವದ ಬೆಂಬಲಿಗರಾಗಿರುವುದು ಅನಿರೀಕ್ಷಿತವೇನಲ್ಲ. ಏಕೆಂದರೆ ಶಿಕ್ಷಿತ “ನಾಗರೀಕ” ವರ್ಗಗಳು ಮನುಷ್ಯತ್ವದ ಪರವಾಗಿ ಇದ್ದ ಒಂದೇ ಉದಾಹರಣೆಯು ಈ ದೇಶದ ಇತಿಹಾಸದಲ್ಲಿಯೇ ಇಲ್ಲ. ಆದರೆ ಆತಂಕದ ವಿಷಯವೆಂದರೆ ಇಂದು ಮೇಲ್ಜಾತಿಯ ಯುವಕ ಯುವತಿಯರು ಉತ್ತಮ ಶಿಕ್ಷಣ ಪಡೆದು ವಿದೇಶಗಳಲ್ಲಿ ನೆಲೆಸಿ ಅಲ್ಲಿಂದಲೇ ಸಾಮಾಜಿಕ ತಾಣಗಳಲ್ಲಿ ಹಿಂದುತ್ವದ ವಿಷವನ್ನು ಕಕ್ಕುತ್ತ ತಮ್ಮ ದೇಶಪ್ರೇಮವನ್ನು ಸಾರುತ್ತಿದ್ದರೆ’ ದಲಿತ ಹಿಂದುಳಿದ ಜಾತಿಯ ಯುವಜನರು ಬಲಪಂಥೀಯ ಅಮಲನ್ನು ಏರಿಸಿಕೊಂಡು ಸಾಂಸ್ಕೃತಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮೆದುರಿಗಿನ ಅತಿ ಮುಖ್ಯ ಕಾರ್ಯಸೂಚಿಯೆಂದರೆ ದಾರಿತಪ್ಪ್ಪಿದ ದಲಿತ ಯುವಕರನ್ನು ಹಿಂದುಳಿದ ಜಾತಿಯ ಯುವಕರನ್ನು ಮತ್ತೆ ಮನೆಗೆ ಕರೆತರುವುದಾಗಿದೆ. ಉಡುಪಿ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ ಯುವಕರು ತಮ್ಮ ಅಣ್ಣ ತಮ್ಮಂದಿರನ್ನು ಪ್ರೀತಿ ಮತ್ತು ಆತಂಕದಿಂದ ಸಂಭೋದಿಸಿದ್ದು ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿತ್ತು. ಬ್ರಾಹ್ಮಣಶಾಹಿಯ ವಿರುದ್ಧ ಅದೇ ಹಳೆಯ ಡೈಲಾಗ್ ಹೊಡೆಯುವವರಿಗಿಂತ ಭಿನ್ನ ಕಳಕಳಿಯು ಅದರಲ್ಲಿತ್ತು. ಗುಜರಾತ್‍ನಲ್ಲಿ ನಡೆದ ಗಲಭೆಗಳಲ್ಲಿ ಸೆರೆಸಿಕ್ಕು ಈಗ ವಿಚಾರಣಾಧೀನ ಕೈದಿಗಳಾಗಿ ಕೊಳೆಯುತ್ತಿರುವವರು ದಲಿತ ಹಾಗೂ ಹಿಂದುಳಿದ ಯುವಕರೇ ಎಂದು ಅಂಕಿಸಂಖ್ಯೆಗಳನ್ನು ಬಿಚ್ಚಿಟ್ಟ ಜಿಗ್ನೇಶ್ ಮೇವಾನಿಯವರೂ ಇದೇ ದಿಕ್ಕಿನಲ್ಲಿ ಸಮಾವೇಶವು ಚಿಂತಿಸುವಂತೆ ಮಾಡಿದರು. 

ಮೂರ್ತವಾದ ಕಾರ್ಯಕ್ರಮಗಳು ಬೇಕು

ಜಿಗ್ನೇಶ್ ಅವರ ಮಾತುಗಳಿಂದ ಹೊಳೆದದ್ದೆಂದರೆ ಅವರು ಕೇವಲ ದಲಿತ ಪ್ರಜ್ಞೆಯ ಬಗ್ಗೆ ಚಿಂತಿಸುತ್ತಿಲ್ಲ. ಅವರ ಮಾತುಗಳು ಮೂರ್ತವಾದ ಕಾರ್ಯಕ್ರಮಗಳ ಬಗ್ಗೆ ಇದ್ದವು. ದಲಿತರಿಗೆ ಭೂಮಿ ಕೊಡಿ ಎಂದರೆ ಭೂಮಿ ಎಲ್ಲಿದೆ ಎಂದು ಕೇಳಿದವರಿಗೆ ಖಖಿI ಮೂಲಕ ಪಡೆದ ವಿವರಗಳನ್ನು ಒದಗಿಸಿ ನೋಡಿ ಇಲ್ಲಿದೆ ಎಂದು ತೋರಿಸಿದ್ದು; ಭೂಸುಧಾರಣೆ ಕಾನೂನುಗಳ ದುರ್ಬಳಕೆ ಅಥವಾ ಅಲಕ್ಷದಿಂದ ಭೂಮಿ ಬಲಿಷ್ಠ ಜಾತಿ-ವರ್ಗಗಳ ಪಾಲಾದದ್ದನ್ನು ತೋರಿಸಿ ಕೊಟ್ಟಿದ್ದು; ಸಫಾಯಿ ಕರ್ಮಚಾರಿಗಳನ್ನು ಗುತ್ತಿಗೆ ಕೂಲಿಗಳಂತೆ ಪರಿಗಣಿಸುವುದನ್ನು ನಿಲ್ಲಿಸಬೇಕೆಂದೂ ಯಶಸ್ವಿಯಾಗಿ ಪ್ರತಿಭಟಿಸಿದ್ದು - ಹೀಗೆ ಒಂದಾದ ಮೇಲೊಂದು ಕಾರ್ಯಕ್ರಮಗಳನ್ನು ಅವರು ವಿವರಿಸಿದರು. ಇದೆಲ್ಲದಕ್ಕೆ ಕಿರೀಟದಂತೆ ಹೇಳಿದ್ದೆಂದರೆ ದಲಿತರಿಗೆ ಭೂಮಿ ಕೊಡುವಾಗ ಅದನ್ನು ದಲಿತ ಪುರುಷರ ಹೆಸರಲ್ಲಿ ಅಲ್ಲ ದಲಿತ ಮಹಿಳೆಯರ ಹೆಸರಲ್ಲಿ ನೊಂದಣಿ ಮಾಡಿಸಿ ಎಂದು ಹೇಳಿದ್ದು.

‘ಚಲೋ ಉಡುಪಿ, ಮುಂದೇನು’ ಎಂದು ಯೋಚಿಸುವಾಗ ನನಗೆ ಅನ್ನಿಸಿದ್ದು ನಮ್ಮ ತುರ್ತು ಅವಶ್ಯಕತೆಯೆಂದರೆ ಮೂರ್ತವಾದ ಕಾರ್ಯಕ್ರಮಗಳು. ಅಂದರೆ ಸರಕಾರವು ತಕ್ಷಣವೇ ಮಾಡಲೇಬೇಕಾದ ಕಾರ್ಯಗಳ ಪಟ್ಟಿಗೆ ಒತ್ತಾಯಿಸುವ ಕೆಲಸಗಳು. ಜಿಗ್ನೇಶ್‍ರವರು ಕರ್ನಾಟಕ ಸರಕಾರವು ಭೂಸುಧಾರಣೆ, ದಲಿತರಿಗೆ ಭೂ ಹಂಚಿಕೆ ಕುರಿತು ಶ್ವೇತ ಪತ್ರವನ್ನು ಪ್ರತಿಭಟಿಸಬೇಕೆಂದು ಒತ್ತಾಯಿಸಿದ್ದು ಸರಿಯಾಗಿತ್ತು. ಇದೆಲ್ಲ ಯಾಕೆ ಮುಖ್ಯವೆಂದರೆ ನಮ್ಮ ಕೊಳಕುಮಂಡಲ ಮಾಧ್ಯಮಗಳಿಂದಾಗಿ ಇಡೀ ಉಡುಪಿ ಚಲೋ ಕಾರ್ಯಕ್ರಮವನ್ನು ಪೇಜಾವರರೊಂದಿಗೆ ಸಂವಾದವನ್ನಾಗಿ ಮಾಡಿಬಿಡಲಾಗಿದೆ. ಅಥವಾ ಶುದ್ಧೀಕರಣದ ಬಗ್ಗೆ ವಿವಾದವನ್ನಾಗಿಸಲಾಗಿದೆ. (ಅಂದ ಹಾಗೆ ನಾನು ಉಡುಪಿಗೆ ಹೋದಾಗ ಬಿಟ್ಟುಬಂದ ಪಾದದ ಧೂಳಿಯನ್ನು ತೊಳೆದು ಸಾಂಕೇತಿಕವಾಗಿ ನನ್ನ ಪಾದಪೂಜೆಯನ್ನು ಸೂಲಿಬೆಲೆ ಆ್ಯಂಡ್ ಕಂಪನಿಯವರು ಮಾಡುವುದಾದರೆ ನಾನೇಕೆ ಪ್ರತಿಭಟಿಸಲಿ!?) ಇದೆಲ್ಲದರಲ್ಲಿ ನಾವು ನಮ್ಮ ಶಕ್ತಿಯನ್ನು ವ್ಯಯಮಾಡುವುದು ಬೇಡ. ಹೊಸದಾಗಿ ಮೂಡಿದ ದಲಿತ ಪ್ರಜ್ಞೆಯು ಮೂರ್ತವಾದ ಒಳ್ಳೆಯ ರಾಜಕೀಯ ಕಾರ್ಯಕ್ರಮಗಳಿಂದ ಮಾತ್ರ ಗಟ್ಟಿಯಾಗಿ ಬೆಳೆಯಬಲ್ಲದು.

ಪ್ರೊ. ರಾಜೇಂದ್ರ ಚೆನ್ನಿ