ಕರ್ನಾಟಕ 60: ಅಭಿವೃದ್ಧಿ ನಡೆ

ಸಂಪುಟ: 
10
ಸಂಚಿಕೆ: 
45
date: 
Sunday, 30 October 2016

ಕರ್ನಾಟಕ ರಾಜ್ಯ ರಚನೆಯಾಗಿ 60 ವರ್ಷಗಳಾಗುತ್ತಿವೆ (1956-2016). ಏಕೀಕೃತ ಕರ್ನಾಟಕದ ವಜ್ರ ಮಹೋತ್ಸವನ್ನು 2016ರಲ್ಲಿ ಆಚರಿಸಲಾಗುತ್ತಿದೆ. ಒಂದು ಪ್ರದೇಶ/ದೇಶದ ಚರಿತ್ರೆಯಲ್ಲಿ 60 ವರ್ಷ ದೀರ್ಘ ಕಾಲಾವಧಿಯೇನಲ್ಲ. ಆದರೂ ರಾಜ್ಯವು ಕಳೆದ 60 ವರ್ಷಗಳಲ್ಲಿ ಸಾಧಿಸಿಕೊಂಡ ಸಾಧನೆಗಳನ್ನು ಮತ್ತು ಎದುರಿಸಿದ ವೈಫಲ್ಯಗಳನ್ನು ಮತ್ತು ಅದರ ಅಭಿವೃದ್ಧಿ ನಡೆಯನ್ನು ಮೌಲ್ಯಮಾಪನ ಮಾಡುವ ಒಂದು ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಭಾರತದ ಸಂದರ್ಭದಲ್ಲಿ ಕರ್ನಾಟಕಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಅಭಿವೃದ್ಧಿ ಸೂಚಿಗಳಿಗೆ ಸಂಬಂಧಿಸಿದಂತೆ ನಮ್ಮ ರಾಜ್ಯದ ಸಾಧನೆಯು ಅಖಿಲ ಭಾರತದ ಸಾಧನೆಗಳಿಂತ ಉತ್ತಮವಾಗಿದೆ. ಆದರೆ ಕರ್ನಾಟಕವು ಇಂದು ಅನೇಕ ತೀವ್ರ ಸ್ವರೂಪದ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದು ಏನು ಸಾಧನೆ ಮಾಡಿದೆಯೋ ಅವೆಲ್ಲವನ್ನು ಅದು ಎದುರಿಸುತ್ತಿರುವ ವೈಫಲ್ಯಗಳು ತಿಂದು ಹಾಕುತ್ತಿವೆ.

ಜನಸಂಖ್ಯೆಯ ಬೆಳವಣಿಗೆ ನಡೆ

ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವುದರಲ್ಲಿ ಕರ್ನಾಟಕದ ಸಾಧನೆಯು ಅನುಕರಣೀಯವಾಗಿದೆ. ಅದರ ಬೆಳವಣಿಗೆ ಪ್ರಮಾಣ 2001 ರಿಂದ 2011ರ ದಶಕದಲ್ಲಿ ಶೇ. 15.6 ರಷ್ಟಿತ್ತು. ಇದೇ ಅವಧಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಶೇ17.6. ಕರ್ನಾಟಕದಲ್ಲಿ ಒಟ್ಟು ಸಂತಾನೋತ್ಪತ್ತಿ ಪ್ರಮಾಣ 2014-15ರಲ್ಲಿ 1.9(ಪ್ರತಿ ಮಹಿಳೆಗೆ ಹುಟ್ಟುವ ಮಕ್ಕಳ ಸಂಖ್ಯೆ).  ರಾಜ್ಯದಲ್ಲಿ 0-6 ವಯೋಮಾನದ ಮಕ್ಕಳ ಸಂಖ್ಯೆ 2001ರಲ್ಲಿ 71.82 ಲಕ್ಷವಿದ್ದುದು 2011ರಲ್ಲಿ ಅದು 71.61 ಲಕ್ಷಕ್ಕಿಳಿದಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 0-6 ವಯೋಮಾನದ ಮಕ್ಕಳ ಪ್ರಮಾಣ 2001ರಲ್ಲಿ ಶೇ. 13.6ರಷ್ಟಿದ್ದುದು 2011ರಲ್ಲಿ ಅದು ಶೇ. 11.7 ಕ್ಕಿಳಿದಿದೆ. ಇಂದು ಕರ್ನಾಟಕದಲ್ಲಿ ಜನಸಂಖ್ಯೆಯ ಬೆಳವಣಿಗೆಯು ಸಮಸ್ಯೆಯಾಗಿ ಉಳಿದಿಲ್ಲ.  ಅದೊಂದು ಸಮಸ್ಯೆಯೆಂದು ಯಾರಾದರೂ ವಾದಿಸಿದರೆ ಅವರಿಗೆ ವಾಸ್ತವ ಸ್ಥಿತಿಯ ಪರಿಜ್ಞಾನವಿಲ್ಲವೆಂದು ಹೇಳಬೇಕಾಗಿದೆ. ಕರ್ನಾಟಕದಲ್ಲಿ ದುಡಿಯುವ ವಯೋಮಾನದ(15-59 ವರ್ಷಗಳು) ಯುವ ಜನಸಂಖ್ಯೆಯ ಪ್ರಮಾಣ ಶೇ. 64.22ರಷ್ಟಿದ್ದರೆ ಅಖಿಲ ಭಾರತ ಮಟ್ಟದಲ್ಲಿ ಇದು ಶೇ. 62.50ರಷ್ಟಿದೆ. ನಮ್ಮ ರಾಜ್ಯದ ಜನಸಂಖ್ಯೆಯಲ್ಲಿನ ಅವಲಂಬಿತರ ಪ್ರಮಾಣ 2011ರಲ್ಲಿ ಶೇ. 35.8ರಷ್ಟಿದ್ದರೆ ಅಖಿಲ ಭಾರತ ಮಟ್ಟದಲ್ಲಿ ಅದು ಶೇ. 37.5ರಷ್ಟಿದೆ. ಇದು ಅಭಿವೃದ್ಧಿಯ ದೃಷ್ಟಿಯಿಂದ ಅನುಕೂಲಕರ ಸಂಗತಿಯಾಗಿದೆ. ಇದನ್ನೇ ಜನಸಂಖ್ಯಾಶಾಸ್ತ್ರದಲ್ಲಿ ‘ಪಾಪ್ಯುಲೇಶನ್ ಡಿವಿಡೆಂಡ್’ (ಜನಸಂಖ್ಯಾ ಪ್ರಯೋಜನ) ಎಂದು ಕರೆಯುತ್ತಾರೆ. ಈ ಯುವ ಸಮುದಾಯಕ್ಕೆ ಹೇಗೆ ಉದ್ಯೋಗವನ್ನು ಒದಗಿಸಲಾಗುತ್ತದೆ' ಎಂಬುದು ಕರ್ನಾಟಕದ ಮುಂದಿರುವ ಒಂದು ಜನಸಂಖ್ಯಾ ಸವಾಲಾಗಿದೆ.

ಕರ್ನಾಟಕವು ಇಂದು ಜನಸಂಖ್ಯೆಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಮುಖ್ಯ ಗಂಡಾಂತರವೆಂದರೆ ಮಿತಿಮೀರಿದ ಜನವಲಸೆ. ರಾಜ್ಯದಲ್ಲಿ ಗ್ರಾಮೀಣ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ 2001-2011ರಲ್ಲಿ ಕೇವಲ ಶೇ7.4 ರಷ್ಟಿದೆ. ಆದರೆ ನಗರ ಪ್ರದೇಶದ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಶೇ 31.4 ರಷ್ಟಿದೆ. ಇಲ್ಲಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವ ಜನರ ಪ್ರಮಾಣ ಅತ್ಯಧಿಕವಾಗಿದೆ. ದೊಡ್ಡ ಪ್ರಮಾಣದಲ್ಲಿ ವಲಸೆ ಬರುತ್ತಿರುವ ದುಡಿಯುವ ವರ್ಗಕ್ಕೆ ನಗರ ಪ್ರದೇಶದಲ್ಲಿ ಉದ್ಯೋಗವನ್ನು ಒದಗಿಸುವುದು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ವಲಸೆಯಿಂದ ನಗರ ಪ್ರದೇಶದ ಮೂಲಸೌಕರ್ಯಗಳಾದ ಕುಡಿಯುವ ನೀರು, ವಸತಿ, ಸಾರಿಗೆ ಮುಂತಾದ ಸಂಗತಿಗಳ ಮೇಲೆ ವಿಪರೀತ ಒತ್ತಡ ಉಂಟಾಗುತ್ತಿದೆ. ಇದು ನಾವು ಇಂದು ಎದುರಿಸುತ್ತಿರುವ ಮತ್ತೊಂದು ಸವಾಲಾಗಿದೆ. 

ಕುಸಿಯುತ್ತಿರುವ ಕೃಷಿ ವಲಯ   

ತನ್ನ ಏಕೀಕರಣದ ವಜ್ರ ಮಹೋತ್ಸವವನ್ನು ಆಚರಿಸುತ್ತಿರುವ ಕರ್ನಾಟಕ ಇಂದು ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆಯೆಂದರೆ ಕೃಷಿಯಲ್ಲಿನ ಬಿಕ್ಕಟ್ಟು. ಕೃಷಿ ವಲಯ ಪೂರ್ಣವಾಗಿ ನೆಲಕಚ್ಚಿದೆ. ಅದರ ಕೆಲವು ಸೂಚಿಗಳು ಹೀಗಿವೆ:

 1. ಕೃಷಿಯನ್ನು ಅವಲಂಬಿಸಿಕೊಂಡಿರುವ ದುಡಿಯುವ ವರ್ಗದ ಪ್ರಮಾಣ 2001ರಲ್ಲಿ ಶೇ. 55.7ರಷ್ಟಿದ್ದುದು 2011ರಲ್ಲಿ ಅದು ಶೇ. 49.3 ಕ್ಕಿಳಿದಿದೆ. 
 2. ಕೃಷಿಯಲ್ಲಿನ ಸಾಗುವಳಿಗಾರರ ಸಂಖ್ಯೆ 68.8 ಲಕ್ಷದಿಂದ 65.8 ಲಕ್ಷಕ್ಕಿಳಿದಿದೆ.
 3. ಆಹಾರೋತ್ಪಾದನೆಯು 2010-11ರಲ್ಲಿ 140 ಲಕ್ಷ ಟನ್ನುಗಳಷ್ಟಿದ್ದುದು 2014-15ರಲ್ಲಿ ಅದು 110 ಲಕ್ಷ ಟನ್ನುಗಳಿಗಿಳಿದಿದೆ. 
 4. ನಮ್ಮ ದೇಶದಲ್ಲ್ಲಿ ಒಣಭೂಮಿ ಕೃಷಿಯನ್ನು ಅತಿಯಾಗಿ ಹೊಂದಿರುವ ಎರಡನೆಯ ದೊಡ್ಡ ರಾಜ್ಯ ಕರ್ನಾಟಕ. ಈ ಹಿನ್ನೆಲೆಯಲ್ಲಿ ಕೃಷಿಯ ಬಿಕ್ಕಟ್ಟ್ಟನ್ನು ಪರಿಗಣಿಸುವ ಅಗತ್ಯವಿದೆ. 
 5. ಕೃಷಿ ವಲಯದಲ್ಲಿ ತಲಾ ಆಂತರಿಕ ಉತ್ಪನ್ನವು 2012-13ರಲ್ಲಿ ರೂ. 13,645 ರಷ್ಟಿದ್ದರೆ ಉದ್ದಿಮೆ ಮತ್ತು ಸೇವಾ ವಲಯದಲ್ಲಿ ಅದು ಕ್ರಮವಾಗಿ ರೂ. 17,267 ಮತ್ತು ರೂ. 46,148ದಷ್ಟಿದೆ. ಇಲ್ಲಿನ ಅಸಮಾನತೆಯ ಪ್ರಮಾಣವನ್ನು ಹೇಳಬೇಕಾದ ಅಗತ್ಯವಿಲ್ಲ. 
 6. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಕೃಷಿಯ ಕೊಡುಗೆ 1993-94ರಲ್ಲಿ ಶೇ. 38.1 ರಷ್ಟಿದ್ದುದು 2012-13ರಲ್ಲಿ ಅದು ಶೇ. 17.7 ಕ್ಕಿಳಿದಿದೆ. 
 7. ರಾಜ್ಯದಲ್ಲಿ ಗ್ರಾಮೀಣವಾಸಿಗಳ ಪ್ರಮಾಣ 2001ರಲ್ಲಿ ಶೇ. 77ರಷ್ಟಿದ್ದುದು 2011ರಲ್ಲಿ ಅದು ಶೇ62ಕ್ಕಿಳಿದಿದೆ. 
 8. ನದಿ ನೀರಿನ ಅಂತರರಾಜ್ಯ ಹಂಚಿಕೆ ವಿವಾದಗಳಿಂದಾಗಿಯೂ ನಮ್ಮ ಕೃಷಿ ಗಂಡಾಂತರವನ್ನು ಎದುರಿಸುತ್ತಿದೆ. 
 9. ಈ ಎಲ್ಲ ಬದಲಾವಣೆಗಳ ಸೂಚನೆಯೇನೆಂದರೆ ಕರ್ನಾಟಕವು ಕೃಷಿ ಪ್ರಧಾನ ಆರ್ಥಿಕತೆಯಾಗಿ ಮತ್ತು ಗ್ರಾಮೀಣ ಆರ್ಥಿಕತೆಯಾಗಿ ಉಳಿದಿಲ್ಲ.

ಈ ಸಮಸ್ಯೆಯನ್ನು ನಾವು ಗಂಭಿರವಾಗಿ ಎದುರಿಸದಿದ್ದರೆ ನಮಗೆ ತೀವ್ರ ಅಪಾಯ ತಪ್ಪಿದ್ದಲ್ಲ. ಕೃಷಿಯ ಪುನಶ್ಚೇತನವನ್ನು ಯುದ್ದ ಸಿದ್ದತೆಯೋಪಾದಿಯಲ್ಲಿ ನಿರ್ವಹಿಸುವ ಅಗತ್ಯವಿದೆ. 

ಕೃಷಿ ವಲಯದ ಕುಸಿತಕ್ಕೂ ಮತ್ತು ನಗರ ಪ್ರದೇಶಕ್ಕೆ ನಡೆಯುತ್ತಿರುವ ಬೃಹತ್ ಗುಳೆಗೂ ನಡುವೆ ವಿಲೋಮ ಸಂಬಂಧವಿದೆ. ಕೇವಲ ನಗರ ಪ್ರದೇಶದಲ್ಲಿ ಬೆಳವಣಿಗೆಗೆ ಕ್ರಮ ತೆಗೆದುಕೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ವಿಸ್ತರಿಸಬೇಕು. ಇಲ್ಲದಿದ್ದರೆ ಯಾವುದನ್ನು ‘ಪಾಪ್ಯುಲೇಶನ್ ಡಿವಿಡೆಂಡ್’ (ಜನಸಂಖ್ಯಾ ಪ್ರಯೋಜನ) ಎಂದು ಕರೆಯುತ್ತಿದ್ದೇವೆಯೋ ಅದು ‘ಪಾಪ್ಯುಲೇಶನ್ ಡಿಸಾಸ್ಟ್‍ರ್’ (ಜನಸಂಖ್ಯಾ ಪ್ರಕೋಪ) ಆಗಿ ಬಿಡಬಹುದು. 

ಖಾಸಗೀಕರಣವೆಂಬ ಮಹಾಮಾರಿ 

ನಾವು 1991ರಲ್ಲಿ ಅಳವಡಿಸಿಕೊಂಡ ಹೊಸ ಆರ್ಥಿಕ ನೀತಿಯ (ಜಾಗತೀಕರಣ) ಪರಿಣಾಮವಾಗಿ ಖಾಸಗಿ ಕಾರ್ಪೊರೇಟ್ ವಲಯ ತೀವ್ರ ಗತಿಯಲ್ಲಿ ಬೆಳೆಯುತ್ತಾ ನಡೆದಿದೆ. ಅದು ನಮ್ಮ ಖಾಸಗಿ ಬದುಕನ್ನು ಬಿಟ್ಟಿಲ್ಲ. ಇದಕ್ಕೆ ನಮ್ಮೆದುರಿಗಿರುವ ಒಂದು ನಿದರ್ಶನವೆಂದರೆ ನಮ್ಮ ಶಾಲಾ ಶಿಕ್ಷಣದಲ್ಲಿ ನಡೆಯುತ್ತಿರುವ ಖಾಸಗೀಕರಣ. ಇದಕ್ಕೆ ಸಂಬಂಧಿಸಿದ ಅಂಕಿಅಂಶಗಳು ಹೀಗಿವೆ:

ಕರ್ನಾಟಕದಲ್ಲಿ ಪ್ರಾಥಮಿಕ-ಪ್ರೌಢ ಶಿಕ್ಷಣ: 2015-16

 • ಒಟ್ಟು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಖ್ಯೆ: 76,013 
 • ಸರ್ಕಾರಿ ಶಾಲೆಗಳ ಸಂಖ್ಯೆ: 50,014 (ಶೇ. 65.80) 
 • ಖಾಸಗಿ ಶಾಲೆಗಳ ಸಂಖ್ಯೆ: 25,821 (ಶೇ. 33.97)
 • ಇತರೆ ಶಾಲೆಗಳ ಸಂಖ್ಯೆ: 178 (ಶೇ. 0.23)
 • ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಒಟ್ಟು ಶಿಕ್ಷಕರ ಸಂಖ್ಯೆ: 3,93,994
 • ಸರ್ಕಾರಿ ಶಾಲಾ ಶಿಕ್ಷಕರ ಸಂಖ್ಯೆ: 2,10,093 (ಶೇ. 53.32)
 • ಖಾಸಗಿ ಶಾಲಾ ಶಿಕ್ಷಕರ ಸಂಖ್ಯೆ: 1,82,262 (ಶೇ. 46.26)
 • ಇತರೆ ಶಾಲಾ ಶಿಕ್ಷಕರ ಸಂಖ್ಯೆ: 1639 (ಶೇ. 0.42)
 • ಮೂಲ: ಕರ್ನಾಟಕ ಆರ್ಥಿಕ ಸಮೀಕ್ಷೆ: 2015-16 (ಪುಟಗಳು : 532 ಮತ್ತು 538)

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಾಯಿಕೊಡೆಗಳಂತೆ ಖಾಸಗಿ ವಿಶ್ವವಿದ್ಯಾಲಯಗಳೂ ತಲೆಯೆತ್ತುತ್ತಿವೆ. ಹಣವಿರುವವರೆಲ್ಲ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಹಗಲು-ರಾತ್ರಿ ಅನ್ನುವುದರೊಳಗಾಗಿ ‘ಶಿಕ್ಷಣ ತಜ್ಞರು’ ಎಂದು ತಮ್ಮನ್ನು ತಾವೇ ಘೋಷಿಸಿಕೊಳ್ಳುತ್ತಿದ್ದಾರೆ. ಸರ್ಕಾರವೂ ಕೂಡ ಆರೋಗ್ಯ ಕ್ಷೇತ್ರದಲ್ಲಿ ಕಾಂಟ್ರಾಕ್ಟ್ ಮತ್ತು ಹೊರಗುತ್ತಿಗೆ ಕಾರ್ಮಿಕ ಪದ್ದತಿಯನ್ನು ಪ್ರೋತ್ಸಾಹಿಸುತ್ತಿದೆ. ಅದರ ಅನೇಕ ಯೋಜನೆಗಳು ಅಪ್ರತ್ಯಕ್ಷವಾಗಿ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಒದಗಿಸುತ್ತಿವೆ. ಖಾಸಗೀಕರಣವು ಸಮಾಜದ ದುಡಿಯುವ ವರ್ಗದ ರಕ್ತ ಹೀರಿ ಸಮೃದ್ಧವಾಗಿ ಬೆಳೆಯುತ್ತಿದೆ. ಇಂದು ಕಾರ್ಮಿಕ ಕಲ್ಯಾಣ ಅನ್ನುವುದು ಚರಿತ್ರೆಗೆ ಸಂಬಂಧಿಸಿದ ಸಂಗತಿಯಾಗಿ ಕಾರ್ಮಿಕ ಸುಧಾರಣೆ ಅನ್ನುವುದು ಕ್ರಮಬದ್ಧವಾದ ಸಂಗತಿಯಾಗಿದೆ. 

ಜನರನ್ನು ಒಳಗೊಳ್ಳುವ ಅಭಿವೃದ್ಧಿ

ನಮ್ಮ ಸಂವಿಧಾನದ ಅನುಚ್ಛೇದ 38ರಲ್ಲಿ ಪ್ರಾದೇಶಿಕ ಸಮಾನತೆ ಮತ್ತು ಸಾಮಾಜಿಕ ಗುಂಪುವಾರು ಸಮಾನತೆಯನ್ನು ಮನ್ನಿಸಿದೆ. ‘ವರಮಾನ ಅಸಮಾನತೆಯನ್ನು ತಗ್ಗಿಸಲು ಮತ್ತು ವ್ಯಕ್ತಿ ವ್ಯಕ್ತಿಗಳ ನಡುವಿನ ಹಾಗೂ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ವಿವಿಧ ಉದ್ಯೋಗಗಳಲ್ಲಿ ನಿರತರಾಗಿರುವ ಸಾಮಾಜಿಕ ಗುಂಪುಗಳ ನಡುವಿನ ಅಸಮಾನತೆಗಳನ್ನು ನಿವಾರಿಸಲು ಸರ್ಕಾರವು ತೀವ್ರ ಶ್ರಮಿಸುತ್ತದೆ’ ಎಂಬುದು ಅನುಚ್ಚೇದದ ಪಾಠವಾಗಿದೆ. ರಾಜ್ಯದಲ್ಲಿ ಇಂದು ದಲಿತ ಸಮುದಾಯ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ತೀವ್ರ ರೀತಿಯ ತಾರತಮ್ಯಗಳನ್ನು, ಶೋಷಣೆಯನ್ನು, ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಉದಾಹರಣೆಗೆ ರಾಜ್ಯದಲ್ಲಿ ದಲಿತೇತರರ ಸಾಕ್ಷರತಾ ಪ್ರಮಾಣ 2011ರಲ್ಲಿ ಶೇ. 78.56ರಷ್ಟಿದ್ದರೆ ದಲಿತರ (ಪ.ಜಾ+ಪ.ಪಂ) ಸಾಕ್ಷರತಾ ಪ್ರಮಾಣ ಶೇ. 63.40ರಷ್ಟಿದೆ. ಇಲ್ಲಿನ ಸಾಕ್ಷರತೆಗೆ ಸಂಬಂಧಿಸಿದ ಸಾಮಾಜಿಕ ಅಸಮಾನತೆ ಪ್ರಮಾಣ ಶೇ 15.16 ಅಂಶಗಳಷ್ಟಿದೆ. ಸಮಾಜದಲ್ಲಿರುವ ಸಾಂಪ್ರದಾಯಿಕ ತಾರತಮ್ಯ ಸಂಸ್ಕೃತಿಯ ಕಾರಣವಾಗಿ ದಲಿತರು ಅಪಾರ ನಷ್ಟವನ್ನು ಅನುಭವಿಸಬೇಕಾಗಿದೆ. ಕಳೆದ 60 ವರ್ಷಗಳ ಅವದಿಯಲ್ಲಿ ನಮಗೆ ಸಾಮಾಜಿಕ ತಾರತಮ್ಯಗಳನ್ನು ನಿವಾರಿಸುವುದು ಸಾಧ್ಯವಾಗಿಲ್ಲ. ಅಭಿವೃದ್ಧಿ ಅನ್ನುವುದು ವರಮಾನಕ್ಕೆ, ಆರ್ಥಿಕ ಸಮೃದ್ಧತೆಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಅದು ಜನರ ಬದುಕಿನ ಸಮೃದ್ಧತೆಗೆ, ಘನತೆಯಿಂದ ಕೂಡಿದ ಬದುಕಿಗೆ ಸಂಬಂಧಿಸಿದ ಸಂಗತಿ. ಈ ದಿಶೆಯಲ್ಲಿ ನಮ್ಮ ಸಾಧನೆಯು ಹೇಳಿಕೊಳ್ಳುವಂತಿಲ್ಲ. 

ಲಿಂಗ ತಾರತಮ್ಯದ ವಿಜೃಂಭಣೆ

ನಮ್ಮ ರಾಜ್ಯದಲ್ಲಿನ 2011ರ ಜನಸಂಖ್ಯೆ 6.11 ಕೋಟಿಯಲ್ಲಿ ಮಹಿಳೆಯರ ಸಂಖ್ಯೆ 3.01 ಕೋಟಿ (ಶೇ49.32). ಅತ್ಯಂತ ಆತಂಕಕಾರಿ ಸಂಗತಿಯೆಂದರೆ 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‍ಎಫ್‍ಎಚ್‍ಎಸ್-4) ಪ್ರಕಾರ ರಾಜ್ಯದಲ್ಲಿನ ಗರ್ಭಿಣಿ ಮಹಿಳೆಯರಲ್ಲಿ ಶೇ. 45.4ರಷ್ಟು ಅನಿಮಿಯಾದಿಂದ ನರಳುತ್ತಿದ್ದಾರೆ. ಒಟ್ಟು ಮಹಿಳೆಯರಲ್ಲಿನ ಅನಿಮಿಯಾ ಪ್ರಮಾಣ ಶೇ. 44.8. ರಾಜ್ಯದಲ್ಲಿ 18 ವರ್ಷ ತುಂಬುವುದರೊಳಗೆ ಮದುವೆಯಾಗುವ ಮಹಿಳೆಯರ ಪ್ರಮಾಣ ಶೇ.  20ಕ್ಕಿಂತ ಅಧಿಕವಿದೆ. ಒಂದು ಕಾಲಕ್ಕೆ ವಲಸೆ ಅನ್ನುವುದು ಪುರುಷ ಜಗತ್ತಾಗಿತ್ತು. ಆದರೆ ಇಂದು ದುಡಿಮೆಗಾಗಿ ಮಹಿಳೆಯರೂ ತಂಡೋಪತಂಡವಾಗಿ ನಗರಗಳಿಗೆ ವಲಸೆ ಬರುತ್ತಿದ್ದಾರೆ. ಬೆಂಗಳೂರಿನ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವ ಮಹಿಳೆಯರ ಸಂಖ್ಯೆ ಅಗಾದವಾಗಿದೆ. ಅಲ್ಲಿ ಅವರು ಆರ್ಥಿಕ ತಾರತಮ್ಯ ಮತ್ತು ಜಾತಿ ತಾರತಮ್ಯದ ಜೊತೆಯಲ್ಲಿ ಲಿಂಗ ತಾರತಮ್ಯವನ್ನು ಎದುರಿಸಬೇಕಾಗಿದೆ. ಈ ಮೂರು ಬಗೆಯ ಅಸಮಾನತೆಗಳಿಂದಾಗಿ ಮಹಿಳೆಯರ ಬದುಕು ತೀವ್ರ ದುಸ್ಥಿತಿಗೆ ಒಳಗಾಗಿದೆ.  

ಪ್ರಾದೇಶಿಕ ಅಸಮಾನತೆ

ನಮ್ಮ ರಾಜ್ಯವನ್ನು 1956ರಿಂದಲೂ ಕಾಡುತ್ತಿರುವ ಒಂದು ಸಮಸ್ಯೆಯೆಂದರೆ ಪ್ರಾದೇಶಿಕ ಅಸಮಾನತೆ. ಕರ್ನಾಟಕದ 30 ಜಿಲ್ಲೆಗಳ ಪೈಕಿ 20 ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕ 2014 ರಲ್ಲಿ 0.550ಕ್ಕಿಂತ ಕೆಳಮಟ್ಟದಲ್ಲಿದೆ. ಈ 20 ಕೆಳಮಟ್ಟದ ಮಾನವ ಅಭಿವೃದ್ಧಿ ಜಿಲ್ಲೆಗಳಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಜಿಲ್ಲೆಗಳ ಪಾಲು 11. ಕಲಬುರಗಿ ವಿಭಾಗದ ಎಲ್ಲ ಆರು ಜಿಲ್ಲೆಗಳು ಕೆಳಮಟ್ಟದ ಮಾನವ ಅಭಿವೃದ್ಧಿ ಗುಂಪಿಗೆ ಸೇರಿವೆ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕ 0.550ಕ್ಕಿತ ಅಧಿಕವಿರುವ 10 ಜಿಲ್ಲೆಗಳ ಗುಂಪಿಗೆ ಕಲಬುರಗಿ ವಿಭಾಗದ ಒಂದು ಜಿಲ್ಲೆಯೂ ಸೇರಿಲ್ಲ ಮತ್ತು ಬೆಳಗಾವಿ ವಿಭಾಗದ ಎರಡು ಜಿಲ್ಲೆಗಳು ಮಾತ್ರ ಸದರಿ ಗುಂಪಿನಲ್ಲಿವೆ. ಕೃಷಿಯ ಅವಲಂಬನೆಯು ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ್ಲಿ 2011ರಲ್ಲಿ ಶೇ60ಕ್ಕಿಂತ ಅಧಿಕವಿದ್ದರೆ ಬೆಂಗಳೂರು ಮತ್ತು ಮೈಸೂರು ವಿಭಾಗಗಲ್ಲಿ ಅದು ಶೇ45ಕ್ಕಿಂತ ಕಡಿಮೆಯಿದೆ. ಸರ್ಕಾರವು ಏನೆಲ್ಲ ಕ್ರಮಗಳನ್ನು ತೆಗೆದುಕೊಂಡರೂ ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸುವುದು ಸಾಧ್ಯವಾಗಿಲ್ಲ. 

ಇಂದು ರಾಜ್ಯೋತ್ಸವದ ವಜ್ರಮಹೋತ್ಸವದ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ನಡೆಯ ಬಗ್ಗೆ ಮರುಶೋಧನೆ ಮತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ದಲಿತರ, ಬಡವರ, ದುಡಿಮೆಗಾರರ, ಮಹಿಳೆಯರ ಬದುಕಿನ ಸ್ಥಿತಿಗತಿಯು ಅಭಿವೃದ್ಧಿಯ ಮೌಲ್ಯಮಾಪನದ ಮಾನದಂಡವಾಗಬೇಕು. ಎಸ್‍ಡಿಪಿ, ರಫ್ತು, ಡಿಜಿಟೈಸೇಶನ್, ಸ್ವಚ್ಛತೆ, ಎಕ್ಸಪ್ರೆಸ್ ಹೈವೇಗಳು, ಉಕ್ಕಿನ ಸೇತುವೆಗಳು ಇತ್ಯಾದಿ ಅಭಿವೃದ್ಧಿಯ ಮಾನದಂಡಗಳಲ್ಲ. ಜಾನ್ ರಾಲ್ಸ್ ಹೇಳುವಂತೆ ಅಭಿವೃದ್ದಿ ಅನ್ನುವುದು ವಂಚಿತರಿಗೆ, ಅಂಚಿನಲ್ಲಿರುವವರಿಗೆ, ದಲಿತರಿಗೆ, ಮಹಿಳೆಯರಿಗೆ ಅಭಿಮುಖವಾಗಿರಬೇಕು. ಕಾರ್ಪೊರೇಟ್ ಜಗತ್ತಿನ ಕ್ವಾಟರ್ಲಿ ಲಾಭದ ಪ್ರಮಾಣವಾಗಲಿ, ಸೆನ್ಸೆಕ್ಸ್ಸ್ ಸೂಚ್ಯಂಕವಾಗಲಿ ಅಭಿವೃದ್ಧಿಯ ಸೂಚಿಗಳಲ್ಲ. ಅಭಿವೃದ್ಧಿಯು ಅಭಿಶಾಪವಾಗಬಾರದು. ಇದು ಜನರ ಬದುಕಿನ ಜೀವದ್ರವವಾಗಬೇಕು.

-ಪ್ರೊ. ಟಿ.ಆರ್. ಚಂದ್ರಶೇಖರ