ಸತತ 4 ದಿನ ಪ್ರತಿಭಟನೆಯಲ್ಲಿ ಕಂಪ್ಯೂಟರ್ ಆಪರೇಟರ್ಸ್

ಸಂಪುಟ: 
10
ಸಂಚಿಕೆ: 
45
Sunday, 30 October 2016

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸುಮಾರು 11 ವರ್ಷಗಳಿಂದ ಅಂದರೆ 2005ರಿಂದ ಕಂಪ್ಯೂಟರ್ ಆಪರೇಟರ್ಸ್‍ಗಳಾಗಿ ಮತ್ತು ಐಟಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಕೆಲವು ನೌಕಕರಿಗೆ ಗುತ್ತಿಗೆದಾರರು ಇ.ಎಸ್.ಐ. ಹಾಗೂ ಇ.ಪಿ.ಎಫ್. ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವುದು ಮತ್ತು ತಿಂಗಳ ವೇತನ 7ನೇ ತಾರೀಖಿನೊಳಗೆ ನೀಡದಿರುವುದನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಭವನ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಅಕ್ಟೋಬರ್ 24ರಿಂದ ಆರಂಭವಾದ ಧರಣಿಯು 4 ದಿಗಳವರೆಗೆ ಮುಂದುವರೆಯಿತು. ಕಂಪ್ಯೂಟರ್ ಆಪರೇಟರ್‍ಗಳಿಗೆ ಕಳೆದ 6 ತಿಂಗಳ ವೇತನ ನೀಡಿರುವುದಿಲ್ಲ. ಮಾಹಿತಿ ತಂತ್ರಜ್ಞಾನ ವಿಭಾಗದ 34 ನೌಕರರ ವೇತನ ಹೆಚ್ಚಳ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸುಮಾರು 635 ನೌಕರರು ಇದ್ದು ಬಿಬಿಎಂಪಿ ಅಡಿಯ ಹಲವು ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಂಪ್ಯೂಟರ್ ಆಪರೇಟರ್ಸ್ ಯೂನಿಯನ್ ವತಿಯಿಂದ ಕಾರ್ಮಿಕ ಭವನದ ಎದುರು ಅಕ್ಟೋಬರ್ 24, 2016ರಂದು ಮಧ್ಯಾಹ್ನ 2.30ಕ್ಕೆ 6 ತಿಂಗಳ ಬಾಕಿ ವೇತನಕ್ಕಾಗಿ, ಐಟಿ ನೌಕರರ ಒಂದು ತಿಂಗಳು ಮತ್ತು ಕಡಿತ ಮಾಡಿರುವ ವೇತನಕ್ಕಾಗಿ ಆಗ್ರಹಿಸಿ ಧರಣಿ ನಡೆಸಿದರು.

ಇದಲ್ಲದೇ ಕನಿಷ್ಟ ವೇತನ ಬಾಕಿಗೆ ನೌಕರರ ಕ್ಲೇಮ್ ಅರ್ಜಿ ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪವಿಭಾಗ 06ರ ಬಳಿ ಇತ್ಯಾರ್ಥವಾಗದೇ 2012 ರಿಂದ ಬಾಕಿ ಉಳಿದಿದೆ. ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಸಹಿ ಸಂಗ್ರಹವನ್ನು ಮಾಡಲಾಗಿದೆ.

ಕಾರ್ಮಿಕ ಆಯುಕ್ತರು ಬಿಬಿಎಂಪಿ ಅಪರ ಆಯುಕ್ತರನ್ನು ಸಂಪರ್ಕಿಸಿ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಬಿಬಿಎಂಪಿ ಅಪರ ಆಯುಕ್ತರು ಯೂನಿಯನ್ ಮುಖಂಡರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಆಡಳಿತಾಧಿಕಾರಿಗಳಿಗೆ ಒಂದು ತಿಂಗಳ ವೇತನ ಬಿಡುಗಡೆ ಮಾಡಲು ಹೇಳಿದ್ದು, ಉಳಿದ ವೇತನವನ್ನು ಒಂದು ವಾರದಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲು ತಿಳಿಸಿದರು. ಒಪ್ಪಂದವನ್ನು ಮುಂದಿನ ಮೂರು ವರ್ಷಗಳವರೆಗೆ ಮುಂದುವರೆಸಬೇಕೆಂದು ನೌಕರರು ತಿಳಿಸಿದರು.

ಧರಣಿಯನ್ನು ಮುಂದುವರೆಸಲು ನಿರ್ಧರಿಸಲಾಗಿ 4ನೇ ದಿನ ಸಂಜೆ ಕಾರ್ಮಿಕ ಆಯುಕ್ತರು, ನೌಕರರು, ಗುತ್ತಿಗೆದಾರರ ಸಭೆ ಕರೆಯಲಾಗುವುದು ಎಂದು ಧರಣಿ ನಿರತ ಕಂಪ್ಯೂಟರ್ ಆಪರೇಟರ್ಸ್‍ರವರನ್ನು ಉದ್ದೇಶಿಸಿ ಜಿಲ್ಲಾ ಕಾರ್ಮಿಕ ಆಯುಕ್ತರಾದ ಶ್ರೀಪಾದ್ ರವರು ತಿಳಿಸಿದರು. ತಮ್ಮ ಬೇಡಿಕೆಗಳು ಈಡೇರಿಸುವವರೆಗೂ, ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಕಾರ್ಮಿಕ ಇಲಾಖೆ, ನೌಕರರು, ಗುತ್ತಿಗೆದಾರರಾದ ಆರ್‍ಎಂಎಸ್ ಟೆಕ್ನಾಲಜಿಸ್, ಟ್ಸ್ಯಾಟಜಿಕ್ಸ್ ಎಂಟರ್ ಪ್ರೈಸೆಸ್ ಸಮ್ಮುಖದಲ್ಲಿ ಸಭೆ ನಡೆದು ನವೆಂಬರ್ 19 ರ ಒಳಗೆ 6 ತಿಂಗಳ ಸಂಬಳವನ್ನು ಪಾವತಿಸಲು ಒಪ್ಪಂದವಾಗಿದೆ. ಮುಂದಿನ ಸಭೆಯನ್ನು ನವೆಂಬರ್ 21 ರಂದು ಕರೆಯಲಾಗಿದೆ.

ಧರಣಿಯಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಉಪಾಧ್ಯಕ್ಷರಾದ ಹೆಚ್.ಎನ್.ಗೋಪಾಲಗೌಡ, ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್, ಪ್ರತಾಪ್ ಸಿಂಹ, ಯೂನಿಯನ್‍ನ ಅಧ್ಯಕ್ಷರಾದ ತನುಜಾಕ್ಷಿ, ಉಪಾಧ್ಯಕ್ಷರಾದ ಶಾರದ, ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿ ಜೆ.ಕೆ., ಜಂಟಿ ಕಾರ್ಯದರ್ಶಿ ಮಂಜುಳ, ಮುಖಂಡರಾದ ಗೋಪಾಲ್ ಮತ್ತಿತರ ನೌಕರರು ಭಾಗವಹಿಸಿದ್ದರು.

 

 

ವರದಿ : ಪಳನಿಸ್ವಾಮಿ ಜೆ.ಕೆ.