ಐಕ್ಯತೆ-ಸೌಹಾರ್ದತೆ ಕಾಪಾಡಬೇಕೆಂದು ಎಸ್‍ಎಫ್‍ಐ ಮನವಿ

ಸಂಪುಟ: 
10
ಸಂಚಿಕೆ: 
45
Sunday, 30 October 2016

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಹಾವೇರಿ ಜಿಲ್ಲಾ ಸಮಿತಿಯು ಜಿಲ್ಲೆಯ ಐಕ್ಯತೆ ಸೌಹಾರ್ದತೆ ಕಾಪಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಾದ ಎಂ.ವಿ.ವೆಂಕಟೇಶರವರಿಗೆ ಅಕ್ಟೋಬರ್ 25ರಂದು ಮನವಿ ಸಲ್ಲಿಸಿದರು.

ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿರುತ್ತಾರೆ ಎಂಬ ಕಾರಣಕ್ಕೆ ಹಿಂದೂ ಧರ್ಮದ ವಿದ್ಯಾರ್ಥಿಗಳು ಕೇಸರಿ ಶಾಲ್‍ನ್ನು ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ. ದೇಶದ ಸಂವಿಧಾನವೇ ಪ್ರತಿಯೊಬ್ಬ ನಾಗರೀಕನಿಗೂ ಅವರದೇ ಆದಂತಹ ಹಕ್ಕುಗಳನ್ನು ನೀಡಿದೆ ಅದರಲ್ಲಿ ಅವರ ಇಷ್ಟದ ಧರ್ಮದ ಧಾರ್ಮಿಕ ಆಚರಣೆಗೂ ಕೂಡಾ ಅವಕಾಶ ನೀಡಲಾಗಿದೆ ಆದರೆ ಕಾಲೇಜಿನಲ್ಲಿ ಏಕರೂಪ ಸಮವಸ್ತ್ರ ನೀತಿ ಜಾರಿಯಲ್ಲಿದ್ದರೂ ಕೂಡಾ ಇಂತಹ ಘಟನೆಗಳು ನಡೆಯುತ್ತಿರುವುದು ವಿಷಾದಕರ ಸಂಗತಿಯಾಗಿದೆ.

ವಿದ್ಯಾರ್ಥಿ ಸಮುದಾಯ, ಕಾಲೇಜಿನ ವಾತಾವರಣ ಸೌಹಾರ್ದತಯುತವಾಗಿ ಕೂಡಿರಬೇಕು. ಅಲ್ಲಿ ಹಿಂದೂ-ಮುಸ್ಲಿಂ ಎಂಬ ಬೇಧ-ಭಾವಗಳು ಬರಕೂಡದು. ಕ್ಯಾಂಪಸ್‍ನೊಳಗೆ ಯಾವುದೇ ಧರ್ಮದ ಅವಹೇಳನವಾಗಲಿ ಅಥವಾ ಧರ್ಮ ಪ್ರಚಾರವಾಗಲಿ ನಡೆಯಬಾರದು. ಕಾಲೇಜು ಅವಧಿ ನಂತರ, ತರಗತಿಗಳಿಂದ ಹೊರಬಂದ ನಂತರದಲ್ಲಿ ವಿದ್ಯಾರ್ಥಿಗಳು ಅವರ ಧಾರ್ಮಿಕ ಆಚರಣೆಗಳನ್ನು ಅವರ ಇಷ್ಟದಂತೆ ಆಚರಿಸಲಿ ಆದರೆ ಅದು ಕಾಲೇಜಿನ ಕ್ಯಾಂಪಸ್‍ನಲ್ಲಿ ನಡೆದರೆ ಅಲ್ಲಿ ವಿದ್ಯಾರ್ಥಿ ಸಮುದಾಯದ ಐಕ್ಯತೆ-ಸೌಹಾರ್ದತೆ ಹಾಳಾಗುತ್ತದೆ.

ಭಾರತ ಸರ್ವ ಧರ್ಮಗಳ ನಾಡು, ಅದರಲ್ಲೂ ಹಾವೇರಿ ಜಿಲ್ಲೆ ಸಂತರ, ಸರ್ವಜ್ಞರು ನೆಲೆಸಿರುವ ಭೂಮಿ ಎಂದೇ ಹೆಸರಾಗಿದೆ, ಶಿಶುನಾಳ ಷರೀಫರು, ಕನಕದಾಸರು, ಸರ್ವಜ್ಞರ  ಭೂಮಿ ಹಾವೇರಿ ಜಿಲ್ಲೆ. ನಾಡಿಗೆ ಸೌಹಾರ್ದತೆಯ ಸಂದೇಶ ಸಾರಿದ ಭೂಮಿ ಇದಾಗಿದೆ. ಐಕ್ಯತೆ-ಸೌಹಾರ್ದತೆಯನ್ನು ಕಾಪಾಡುವ ಕೆಲಸ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಆಗಬೇಕಿದೆ, ಆದರೆ ಅಂತಹ ವಿದ್ಯಾರ್ಥಿಗಳ ಮಧ್ಯೆ ಇಂದು ಕೋಮು ಸೌಹಾರ್ದ ವಾತಾವರಣ ಕದಡುವುದಕ್ಕೆ ಎಸ್‍ಎಫ್‍ಐ ಸಂಘಟನೆ ಬಿಡುವುದಿಲ್ಲ.

ಈ ತರಹದ ಪ್ರಕರಣ ಮಂಗಳೂರು ಜಿಲ್ಲೆಯ ಪುತ್ತೂರಿನ ಕಾಲೇಜೊಂದರಲ್ಲಿ ನಡದಿತ್ತು ಅದು ಈಗ ಹಾವೇರಿ ಜಿಲ್ಲೆಗೆ ಕಾಲಿಟ್ಟಿರುವುದು ಅಪಾಯಕಾರಿಯಾಗಿದೆ. ಈಗಾಗಲೇ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮೂರು ಪದವಿ ಕಾಲೇಜುಗಳಲ್ಲಿ ನಡೆದಿದೆ. ಹಾನಗಲ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯ ಹಾಗೂ ಅಕ್ಕಿಆಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ.

ಅಕ್ಟೋಬರ್ 5ರಂದು ಶಿಗ್ಗಾಂವಿಯ ಬಂಕಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೂ ಕೂಡಾ ಇಂತಹ ಘಟನೆ ನಡೆದಿದೆ. ಹಿರೇಕೆರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಘಟನೆ ಮರುಕಳಿಸಿದ್ದು ಇದು ಇಡೀ ಹಾವೇರಿ ಜಿಲ್ಲೆಯ ಕಾಲೇಜುಗಳಿಗೆ ವ್ಯಾಪಿಸುವ ಮೊದಲು ಜಿಲ್ಲಾಧಿಕಾರಿಗಳು ಪ್ರಾಂಶುಪಾಲರ ಸಭೆ ನಡಸಿ ಕಾಲೇಜಿನ ಕ್ಯಾಂಪಸ್‍ನಲ್ಲಿ ಅಥವಾ ಕ್ಲಾಸ್ ರೂಮಿನಲ್ಲಿ ಕೇಸರಿ ಶಾಲ್ ಹಾಕುವುದನ್ನು ಮತ್ತು ಬುರ್ಖಾ ಧರಿಸುವುದನ್ನು ನಿಷೇಧಿಸಿ, ಏಕರೂಪದ ಸಮವಸ್ತ್ರ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಬೇಕು ಮತ್ತು ತರಗತಿಗಳು ಮುಗಿದ ನಂತರದಲ್ಲಿ ವಿದ್ಯಾರ್ಥಿಗಳು ಅವರ ಧಾರ್ಮಿಕ ಆಚರಣೆಗಳನ್ನು ಹೊರಗೆ ನಡೆಸಲಿ ಎಂದು ತಾವು ಆದೇಶ ನೀಡಬೇಕೆಂದು ಈ ಮೂಲಕ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಹಾವೇರಿ ಜಿಲ್ಲಾ ಸಮಿತಿಯು ತಿಳಿಸಿದೆ.

ಈ ಸಂದರ್ಭದಲ್ಲಿ ಎಸ್‍ಎಫ್‍ಐ ಜಿಲ್ಲಾ ಕಾರ್ಯದರ್ಶಿ ಸುಭಾಸ ಎಂ, ಬಸನಗೌಡ ಭತಮಗೌಡ್ರ, ಸುಲೇಮಾನ ಹಲಗೇರಿ, ಮಾಲತೇಶಸಿಂಗ್ ಕಹಾರ, ಹೊನ್ನಪ್ಪ ನುಗ್ಗಿಮರದ ಇದ್ದರು.

 

ವರದಿ : ಸುಬಾಸ ಎಂ.