ಟ್ರಿಪಲ್ ತಲಾಖ್ . .. ಮತ್ತು ಸಮಾನ ನಾಗರಿಕ ಸಂಹಿತೆ

ಸಂಪುಟ: 
10
ಸಂಚಿಕೆ: 
44
Sunday, 23 October 2016

“ಸುಶೀಲೆಯರಾದ ಸ್ತ್ರೀಯರ ಮೇಲೆ ಯಾರು ಆರೋಪ ಹೊರಿಸುತ್ತಾರೋ ಮತ್ತು ನಾಲ್ಕು ಮಂದಿ ಸಾಕ್ಷಿದಾರರನ್ನು ಅವರು ತರುವುದಿಲ್ಲವೋ ಅವರಿಗೆ 80 ಬಾರೇಟುಗಳನ್ನು ಹೊಡೆಯಿರಿ ಮತ್ತು ಅವರ ಸಾಕ್ಷ್ಯವನ್ನು ಸ್ವೀಕರಿಸಬೇಡಿ-ಅವರೇ ಧರ್ಮಭ್ರಷ್ಟರು’ ಎಂದು 24ನೆ ಸೂರಾದ 4 ನೇ ಆಯತ್ ನಲ್ಲಿ ಹೇಳಲಾಗಿದೆ. ಈ ಸೂರಾದ ಪ್ರಕಾರ ತಲಾಖ್ ಕೊಡುವ ಬಹುಪಾಲು ಗಂಡಸರು 80 ಬಾರೇಟುಗಳಿಗೆ ಅರ್ಹರಾಗಿದ್ದಾರೆ. ಆದರೆ ಒಬ್ಬನೂ ಬಾರೇಟು ತಿಂದ ದಾಖಲೆಯಿಲ್ಲ. ಕುರಾನಿನಲ್ಲಿ ಪುರುಷರು ಮತ್ತು ಸ್ತ್ರೀಯರಿಗೆ ಸಮಾನಾವಕಾಶವಿದೆ. ಪತಿಯು ಪತ್ನೀವೃತನಾಗಿಯೂ ಪತ್ನಿಯು ಪತಿವೃತೆಯಾಗಿಯೂ ಇರಬೇಕೆಂದು ಹೇಳಲಾಗಿದೆ. 2 ನೇ ಸೂರಾದ 187 ನೇ ಆಯತದಲ್ಲಿ ಹೇಳಲಾದ ಹೆಂಡತಿ ಗಂಡನಿಗೆ ಗಂಡ ಹೆಂಡತಿಗೆ ಪೋಷಾಕು ಎಂಬ ಮಾತು ಗಂಡ ಹೆಂಡತಿಯರ ಅನ್ಯೋನ್ಯ ಸಂಬಂಧವನ್ನು ಸೂಚಿಸುತ್ತದೆ, ಅಷ್ಟೆ ಅಲ್ಲದೇ ಸಮಾನತೆಯನ್ನು ಕುರಿತು ಹೇಳುತ್ತದೆ.”

(ರಂಜಾನ್ ದರ್ಗಾರ ತಲಾಖು ಕೊಟ್ಟರೆ ಬಾರೇಟಿನ ಶಿಕ್ಷೆ ಪುಸ್ತಕದಿಂದ)

ನನ್ ಗಂಡ ನನ್ ಬಿಟ್ಟು ಬಹಳ ವರ್ಷ ಆಯ್ತುರೀ..ಆತ ತಲಾಕ್ ಅಂತ ನನ್ ಮುಂದೇನೂ ಹೇಳ್ಲಿಲ್ರೀ.. ..ನನಗೆ ಅದು ಗೊತ್ತೇ ಇಲ್ಲ.. ಕಷ್ಟ ಪಟ್ಟು ದುಡಿದು ಮಕ್ಕಳನ್ನು ಸಾಕಿಕೊಂಡು ಬದುಕ್ತಿದೀನ್ರೀ. ಇದು ಬೀದರ್ ನ ಮುಸ್ಲಿಂ ಮಹಿಳೆಯೊಬ್ಬಳ ಮಾತು.

ಕಳೆದ ಕೆಲವು ವರ್ಷಗಳ ಹಿಂದೆ ಒರಿಸ್ಸಾದಲ್ಲಿ ನಡೆದ ಘಟನೆ ಕುಡಿದು ಬಂದ ಗಂಡ ಕೋಪ ಮತ್ತು ಅಮಲಿನಲ್ಲಿ ಹೆಂಡತಿಗೆ ಮೂರು ಬಾರಿ ತಲಾಖ್ ಹೇಳುತ್ತಾನೆ ಅಮಲು ಇಳಿದ ಮೇಲೆ ಅರಿವಾಗುತ್ತದೆ ತಾನೇನು ತಪ್ಪು ಮಾಡಿದ್ದೇನೆಂದು ಆದರೆ ಮುಸ್ಲಿಂ ವೈಯಕ್ತಿಕ ಕಾನೂನಿನ ತಪ್ಪು ಅರ್ಥೈಸುವಿಕೆಯಿಂದಾಗಿ ಅವರಿಬ್ಬರ ವಿಚ್ಚೇದನವಾಗಿರುತ್ತದೆ.

ಈಗ ಆದುನಿಕ ಯುಗ, ಮೊಬೈಲ್ ಸಂದೇಶಗಳ ಮೂಲಕವೂ ತಲಾಕ್ ಸಂದೇಶ ರವಾನೆಯಾಗುತ್ತಿದೆ. ಷರಿಯತ್ ಅಥವಾ ಕುರಾನ್ ತನಗೆ ತಲಾಕ್ ಕೊಡುವ ಹಕ್ಕು ಕೊಟ್ಟಿದೆ ಎಂದು ಧರ್ಮ ಗ್ರಂಥಗಳ ಉಲ್ಲೇಖಗಳನ್ನು ತಪ್ಪಾಗಿ ಪಾಲಿಸುತ್ತ ಪ್ರತಿಪಾದಿಸುತ್ತ ತನಗೆ ಬೇಕಾದಂತೆಲ್ಲ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ವಿರುದ್ಧ ಹಲವು ದೂರುಗಳು ನ್ಯಾಯಾಲಯಗಳಲ್ಲಿ ಬಾಕಿ ಇವೆ. ಈಗ ಪ್ರಸ್ತುತ ಒಂದು ಅಂಥಹುದೇ ಪ್ರಕರಣ ಸುಪ್ರಿಂ ಕೋರ್ಟಿನಲ್ಲಿ ವಿಚಾರಣೆಗೆ ಬಂದಿದ್ದು ಏಕಪಕ್ಷೀಯ ತಲಾಕ್ ನ್ನು ವಿರೋಧಿಸಿ ಹಲವು ಮುಸ್ಲಿಂ ಮಹಿಳೆಯರು ಕೋರ್ಟಿಗೆ ಹೋಗುತ್ತಿರುವುದಕ್ಕೆ ನಿದರ್ಶನವಾಗಿದೆ. ಅದರ ಜೊತೆಯೇ ಬಹು ಪತ್ನಿತ್ವ ಪದ್ಧತಿಯನ್ನು ಕೂಡ ತಮ್ಮ ಅನುಕೂಲಕ್ಕೆ ತಕ್ಕಂತೆ ಪುರುಷರು ಬಳಸಿಕೊಳ್ಳುತ್ತಿರುವುದು ಮತ್ತು ಸೋಕಾಲ್ಡ್ ಧರ್ಮಪರಿಪಾಲಕರು ಅದಕ್ಕೆ ಅಂಗೀಕಾರ ನೀಡಿರುವುದೂ ಸಾಮಾನ್ಯ ವಿಚಾರವೆಂಬಂತೆ ನಡೆಯುತ್ತಿದೆ. ಈ ಕುರಿತಾದ ಪ್ರಕರಣಗಳೂ ನ್ಯಾಯಾಲಯದ ಮೆಟ್ಟಿಲೇರಿವೆ.

(ಸುಪ್ರಿಂಕೋರ್ಟ ಕೆಲವು ದಿನಗಳ ಹಿಂದೆ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಪ್ರಸ್ತಾಪವನ್ನು ಎತ್ತಿ ಸರ್ಕಾರದ ನಿಲುವನ್ನು ಕೇಳಿದ ನೆನಪು ನಮಗಿದೆ. ಆಗಾಗ ಈ ರೀತಿಯ ಪ್ರಶ್ನೆಗಳನ್ನು ಎತ್ತುವ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿದೆ.) ಈಗ ಕಾನೂನು ಆಯೋಗ ಒಂದು ಪ್ರಶ್ನಾವಳಿಯನ್ನು ಬಿಟ್ಟಿದೆ. ಈ ತೆರನ ವಿಷಯಗಳ ಬಗ್ಗೆ ಚರ್ಚಿಸುವಾಗ ಕೆಲವು ಎಚ್ಚರಗಳನ್ನೂ ವಹಿಸಬೇಕು. ಇಂದಿನ ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ ಕೇಳಿದ ತಕ್ಷಣ ಅಫಿಡೆವಿಟ್ ಸಲ್ಲಿಸಿದ್ದರ ಹಿಂದೆ ಮಹಿಳಾ ಪರವಾದ ಧೋರಣೆಗಿಂತ ಹೆಚ್ಚು ಭಾರತೀಯ ಜನತಾ ಪಕ್ಷದ ಹಳೆಯ ಅಜೆಂಡಾವಾಗಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿದೆ. ಇದರಲ್ಲಿ ಮುಸ್ಲಿಂ ಮಹಿಳೆಯರ ಹಿತಾಸಕ್ತಿಯನ್ನು ಕಾಯುವ ಯಾವ ಒಳ್ಳೆಯತನವನ್ನೂ ಕಾಣಲು ಸಾಧ್ಯವಿಲ್ಲ. ಸುಪ್ರಿಂ ಕೋರ್ಟು ಕೇಳಿದ ತಕ್ಷಣ ಕೇಂದ್ರ ಸರ್ಕಾರ ಅಫಿಡೆವಿಟ್ ಸಲ್ಲಿಸಿದೆ. ಆದರೆ, ಹಿಂದೂ ಮಹಿಳೆಯರಿಗೆ ಸಂಬಂಧಿಸಿದಂಥಹ ಹಲವು ವಿಷಯಗಳು-ದತ್ತಕ, ಸಮಾನ ಆಸ್ತಿ ಹಕ್ಕು, ಜೀವನಾಂಶದಂಥಹ ನೂರಾರು ಪ್ರಕರಣಗಳು ನ್ಯಾಯಾಲಯಗಳಲ್ಲಿ ಕೊಳೆಯುತ್ತಿವೆ. ವರದಕ್ಷಿಣೆಯಂಥಹ ಅಮಾನವೀಯ ಪದ್ಧತಿ, ನಿಷೇಧದ ಕಾನೂನಿನ ನಡುವೆಯೂ ಮಹಿಳೆಯರ ಪಾಲಿಗೆ ಮರಣ ಶಾಸನವಾಗಿ ಚಾಲ್ತಿಯಲ್ಲಿದೆ. ತನ್ನ ಮೇಲೆ ನಡೆಯುವ ದೌರ್ಜನ್ಯ, ವರದಕ್ಷಿಣೆಗಾಗಿನ ಕಿರುಕುಳಗಳ ದೂರು ದಾಖಲಿಸಿದ ಮಹಿಳೆಗೆ ಅದನ್ನು ಸಾಬೀತು ಮಾಡಲು ಸಾಧ್ಯವಾಗದ ನಿಷ್ಟುರ ಸತ್ಯವನ್ನು ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಸುಪ್ರಿಂಕೋರ್ಟ ಚಾಲ್ತಿಯಲ್ಲಿರುವ ಕಾನೂನಿಗೆ ಯಾವುದೇ ತಿದ್ದುಪಡಿಯನ್ನೂ ತರದೇ ಕಾನೂನಿನ ಜಾರಿಯ ಸಂದರ್ಭದಲ್ಲಿ ಕೆಲವು ನಿರ್ದಿಷ್ಟ ನಿಯಮಗಳನ್ನು ಅನುಸರಿಸುವಂತೆ ರಾಜ್ಯಗಳಿಗೆ ಸೂಚಿಸಿದೆ. ಮತ್ತು ತಕ್ಷಣವೇ ಅದು ಜಾರಿಗೂ ಬಂದಿದೆ.!! ಇದೇ ಸುಪ್ರಿಂಕೋರ್ಟ ವಿಶಾಖಾ/ರಾಜಸ್ತಾನ ಆದೇಶದನ್ವಯ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿಗಳನ್ನು ರಚಿಸಲು ಮೊದಲು ಆದೇಶ ಮತ್ತು ನಂತರ ಕಾನೂನು ಜಾರಿಗೊಳಿಸಿದ್ದರೂ ಅದರ ಆದೇಶ ಅಥವಾ ಕಾನೂನನ್ನು ಸರ್ಕಾರದ ಇಲಾಖೆಗಳೇ ಪಾಲಿಸುತ್ತಿಲ್ಲ.  ಕೇಂದ್ರ ಸರ್ಕಾರದ ಕಣ್ಣಿಗೆ ಇದೂ ಕಾಣಬೇಕಲ್ಲವೇ? ಇಲ್ಲಿ ಯಾವುದೇ ಉತ್ಸುಕತೆಯನ್ನು ತೋ ರದ ಕೇಂದ್ರ ಸರ್ಕಾರ ಮುಸ್ಲಿಂ ಕಾನೂನಿನ ಸಂದರ್ಭದಲ್ಲಿ ತೋರುತ್ತಿರುವ ತರಾತುರಿ ಯಾರಿಗೂ ಅರ್ಥವಾಗಬೇಕು.

ಯಥಾ ಪ್ರಕಾರ ಮುಸ್ಲಿಂ ಪುರುಷರ ಅಧಿಪತ್ಯದಲ್ಲಿರುವ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತನ್ನ ವಿರೋಧವನ್ನು ವ್ಯಕ್ತ ಪಡಿಸಿದೆ. ಸ್ವತಃ ಷರಿಯತ್, ಕುರಾನ್ ಗಳನ್ನು ತಮಗೆ ಬೇಕಾದಂತೆ ಅರ್ಥೈಸಿಕೊಂಡು ಮಹಿಳೆಯರನ್ನು ಮನುಷ್ಯರಂತೆ ನೋಡದಿರುವವರಿಗೆ ಸಹಜವಾಗಿಯೇ ಇದು ವಿರೋಧಿಸುವ ಸಂಗತಿಯೇ.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಏಕಪಕ್ಷೀಯ ತ್ರಿವಳಿ ತಲಾಕ್ ಮತ್ತು ಬಹುಪತ್ನಿತ್ವ ಪದ್ಧತಿಯನ್ನು ರದ್ದುಗೊಳಿಸುವಂತೆ ಕೋರುವ ರಾಷ್ಟ್ರೀಯ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದೆ. ದಶಕಗಳ ಕಾಲದಿಂದ ಮುಸ್ಲಿಂ ಮಹಿಳೆಯರ ಬದುಕಿನ ಹಲವು ಪ್ರಶ್ನೆಗಳನ್ನು ಎತ್ತಿಕೊಂಡು ಹೋರಾಟ ನಡೆಸುತ್ತಿರುವ ಸಂಘಟನೆ ಅವಳ ಮೂಲಭೂತ ಹಕ್ಕಿನ ರಕ್ಷಣೆಯ ಪ್ರಶ್ನೆಯಾಗಿ ಇದನ್ನು ಪರಿಗಣಿಸುತ್ತದೆ. ಇದು ಪುರುಷ ಪ್ರಧಾನ ಪಾಳೆಯಗಾರೀ ಮೌಲ್ಯಗಳ ವಿರುದ್ಧ ಮಹಿಳೆಯರ ಪರವಾಗಿ, ಅವರ ನ್ಯಾಯಯುತ ಬೇಡಿಕೆಗಳ ಪರವಾಗಿಯೇ ಹೊರತೂ ಮನುವಾದಿಗಳ ಕುತಂತ್ರದ ನೆಲೆಯಲ್ಲಿ ಅಲ್ಲ. 

ಪುರುಷ ಸಮಾಜ ಸ್ತ್ರೀ ವಿರೋಧೀ ಧೋರಣೆಗಳನ್ನು ಅನೂಚಾನವಾಗಿ ಪಾಲಿಸಿಕೊಂಡು ಬರುತ್ತಿರುವುದು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವೇನೂ ಸೀಮಿತವಾಗಿಲ್ಲ. ಇದರ ವಿರುದ್ಧ ನಡೆಯುವ ಎಲ್ಲ ಚಟುವಟಿಕೆಗಳು ಸಮ ಸಮಾಜದ ಕಲ್ಪನೆಯ ನೆಲೆಯಲ್ಲಿಯೇ.

ಕೆ.ಎಸ್. ವಿಮಲಾ