ದಲಿತರ ವಿರುದ್ಧದ ಘಟನೆಗಳು ನೋವುಂಟು ಮಾಡುತ್ತಿವೆ-ಡಿಎಸ್‍ಎಂಎಂ

ಸಂಪುಟ: 
10
ಸಂಚಿಕೆ: 
44
Sunday, 23 October 2016

ದೇಶದ ಹಲವೆಡೆಗಳಲ್ಲಿ ದಲಿತರ ವಿರುದ್ಧ ಇತ್ತೀಚೆಗೆ ನಡೆದಿರುವ ಘಟನೆಗಳ ಬಗ್ಗೆ ‘ದಲಿತ ಶೋಷಣ ಮುಕ್ತಿ ಮಂಚ್’(ಡಿಎಸ್‍ಎಂಎಂ) ತನ್ನ ಅತೀವ ನೋವನ್ನು ವ್ಯಕ್ತಪಡಿಸಿದೆ.

ಗುಜರಾತಿನ ಜುನಾಗಡ ಜಿಲ್ಲೆಯಲ್ಲಿ ಪರ್ವತ್ ಪರ್ಮಾರ್ ಎಂಬ ದಲಿತ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಉನಾಕ್ಕೆ ಬಹಳ ಸಮೀಪವಿರುವ ಜಾಗ. ಸಂಧಾ ಗ್ರಾಮದ ದಲಿತ ರೈತರು ತಾವು ಉಳುಮೆ ಮಾಡುವ ಜಮೀನಿನ ಕಾನೂನು ಹಕ್ಕುಗಳನ್ನು ಪಡೆಯಲು ಕಳೆದ 25 ವರ್ಷಗಳಿಂದ ಹೋರಾಡುತ್ತಿದ್ದಾರೆ. ಆದರೆ ಸರಕಾರ ಮತ್ತು ಸ್ಥಳೀಯ ಆಡಳಿತ ಭೂಮಾಲಕರ ಪ್ರಭಾವದಿಂದಾಗಿ ಇದನ್ನು ಮಾಡಿಲ್ಲ. ಅವರು ದಲಿತರು ಊರು ಬಿಟ್ಟು ಹೋಗುವಂತೆ ಕೂಡ ಮಾಡುವಲ್ಲಿ ಹಲವೆಡೆ ಯಶಸ್ವಿಯಾಗಿದ್ದಾರೆ. ಅಕ್ಟೋಬರ್ 17 ರಂದು ಇಂತಹ ದಲಿತರು  ತಮ್ಮ ಜಮೀನನ್ನು ವಾಪಾಸು ಪಡೆಯಲು ಕಲೆಕ್ಟರ್ ಕಚೇರಿಯೆದುರು ಧರಣಿ ಕೂತಿದ್ದರು. ಈ ಸಂದರ್ಭದಲ್ಲಿ ಮೂವರು ದಲಿತ ರೈತರು ಹತಾಶೆಯಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಒಬ್ಬ ಅಸು ನೀಗಿದ್ದಾನೆ ಎಂದು ವರದಿಯಾಗಿದೆ. ಬಹಳ ಕಾಲದಿಂದ ದಲಿತರು ಉಳುಮೆ ಮಾಡುತ್ತಿದ್ದ ಜಮೀನನ್ನು ಅವರ ಸ್ವಾಧೀನಕ್ಕೆ ಕೊಡಬೇಕು, ಪರ್ಮಾರ್ ಕುಟುಂಬಕ್ಕೆ ಹಣಕಾಸು ನೆರವು ಒದಗಿಸಬೇಕು ಎಂದು ಡಿಎಸ್‍ಎಂಎಂ ಆಗ್ರಹಿಸಿದೆ.

ಬಿಹಾರದಲ್ಲಿ ನಡೆದ ಘಟನೆ ಇನ್ನಷ್ಟು ಆಘಾತಕಾರಿ. ಮುಝಫ್ಫರ್ಪುರ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ದಲಿತ ವಿದ್ಯಾರ್ಥಿಗಳು ಮೇಲ್ಜಾತಿ ವಿದ್ಯಾರ್ಥಿಗಳಿಗಿಂತ ಹೆಚ್ಚು ಅಂಕ ಪಡೆದ ಕಾರಣಕ್ಕಾಗಿ ರ್ಯಾಗಿಂಗ್, ಹಲ್ಲೆ ಅನುಭವಿಸಬೆಕಾಯಿತು. ಕೇಂದ್ರೀಯ ವಿದ್ಯಾಲಯದಲ್ಲೇ ಇಂತಹ ಪರಿಸ್ಥಿತಿಯಿದ್ದರೆ ನಮ್ಮ ಶೈಕ್ಷಣಿಕ ಸಂಸ್ಥೆಗಳು ಭವಿಷ್ಯದ ನಾಗರಿಕರನ್ನು ರೂಪಿಸುತ್ತಿರುವ ಪರಿಯಾದರೂ ಎಂತಹದು ಎಂದು ಡಿಎಸ್‍ಎಂಎಂ ಆಘಾತ ವ್ಯಕ್ತಪಡಿಸಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ನಿಲ್ಲಿಸಲು ಭಾರತ ಸರಕಾರ ಮತ್ತು ಈ ಸಂಸ್ಥೆಗಳ ಆಡಳಿತ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವವ ಶಕ್ತಿಗಳು ಆಗ್ರಹಿಸುತ್ತಿರುವ ದಲಿತ ವಿದ್ಯಾರ್ಥಿಗಳಿಗೆ ಪಕ್ಷಪಾತದಿಂದ ರಕ್ಷಣೆ ಕೊಡುವ ಒಂದು ವಿಶೇಷ ಕಾನೂನು, ರೋಹಿತ್ ವೆಮುಲಾ ಕಾನೂನನ್ನು ತರಬೇಕು ಎಂದು ಡಿಎಸ್‍ಎಂಎಂ ಆಗ್ರಹಿಸಿದೆ. 

ಮತ್ತೊಂದು ಘಟನೆ ಆಂಧ್ರಪ್ರದೇಶದ ತಿರುಪತಿಯಿಂದ ವರದಿಯಾಗಿದೆ. ಅಲ್ಲಿಯ ಸಬ್-ಕಲೆಕ್ಟರನೇ ಸ್ವತಃ ದಲಿತ ರೈತರ ಜಾತಿನಿಂದನೆಗೆ ಇಳಿದಿದ್ದಾನೆ. ಕುಂದುಕೊರತೆಗಳನ್ನು ಆಲಿಸಬೇಕಾದ ದಿನದಂದು ರೈತರು ಆತನನ್ನು ಭೇಟಿಯಾದಾಗ ಅವರ ದೂರುಗಳನ್ನು ತಾಳ್ಮೆಯಿಂದ ಕೇಳುವ ಬದಲು ಈ ಸರಕಾರೀ ಅಧಿಕಾರಿ ಅವರ ಜಾತಿನಿಂದನೆ ಮಾಡಿ ಅವರ ಬ್ಯಾನರನ್ನು ನಾಶ ಮಾಡಿರುವುದಾಗಿ ವರದಿಯಾಗಿದೆ. ಇಂತಹ ಬೇಜವಾಬ್ದಾರಿ ವರ್ತನೆಯಿಂದ ದೇಶದ ಸಂವಿಧಾನವನ್ನು ಉಲ್ಲಂಘಿಸಿರುವ ಈ ಅಧಿಕಾರಿಯ ವಿರುದ್ದ ಆಂಧ್ರ ಪ್ರದೇಶ ಸರಕಾರ ಎಸ್‍ಸಿ/ಎಸ್‍ಟಿ ಅತ್ಯಾಚಾರ ತಡೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಿಎಸ್‍ಎಂಎಂ ಆಗ್ರಹಿಸಿದೆ.