ಅಸಮರ್ಪಕ ಕಾನೂನುಗಳಲ್ಲಿ ಸಮರೂಪತೆಯಿಂದ ಸಮಾನತೆ ಸಿಗುವುದಿಲ್ಲ-ಎಐಡಿಡಬ್ಲ್ಯುಎ

ಸಂಪುಟ: 
10
ಸಂಚಿಕೆ: 
44
Sunday, 23 October 2016

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯುಎ) ಮೂರು ಬಾರಿ ತಕ್ಷಣ ತಲಾಖ್ ಪದ್ಧತಿಯನ್ನು ರದ್ದು ಮಾಡಬೇಕೆಂಬ ಮುಸ್ಲಿಂ ಮಹಿಳೆಯರ ಆಗ್ರಹವನ್ನು ಸಂಪೂರ್ಣವಾಗಿ ಬೆಂಬಲಿಸಿದೆ. ಈ ಬಗ್ಗೆ ತಾನು ನಡೆಸಿರುವ ಪ್ರಚಾರಗಳಲ್ಲಿ ಮುಸ್ಲಿಂ ಮಹಿಳೆಯರಿಂದ ಭಾರೀ ಬೆಂಬಲ ದೊರೆತಿರುವುದನ್ನು ಅದು ಸ್ಮರಿಸಿಕೊಂಡಿದೆ. ಈ ವಿಷಯದಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನುನು ಮಂಡಳಿಯ ನಿಲುವು ಪ್ರತಿಗಾಮಿ ಎಂದು ಅದು ಬಲವಾಗಿ ವಿರೋಧಿಸಿದೆ. 

ಆದರೆ ಈ ವೇಳೆಯಲ್ಲೇ ಕಾನೂನು ಆಯೋಗ ಸಮಾನ ನಾಗರಿಕ ಸಂಹಿತೆಯ ಕುರಿತು ಪ್ರಶ್ನಾವಳಿ ಹೊರಡಿಸಿರುವುದು ಮತ್ತು ಮೋದಿ ಸರಕಾರದ ಮಂತ್ರಿಗಳು ಪುಂಖಾನುಪುಂಖವಾಗಿ ಈ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುವುದನ್ನೂ ಸಂಘಟನೆ ಬಲವಾಗಿ ಖಂಡಿಸಿದೆ. ಈ ಮೂಲಕ ಅವರು ಮುಸ್ಲಿಮ್ ಸಮುದಾಯದೊಳಗಿನ ಸುಧಾರಣಾವಾದಿಗಳಿಗೆ ಅಪಕಾರ ಮಾಡುತ್ತಿದ್ದಾರೆ ಎಂದು ಎಐಡಿಡಬ್ಲ್ಯುಎ ಹೇಳಿದೆ. 

ಈಗಿನ ಘಟ್ಟದಲ್ಲಿ ಎಲ್ಲ ಸಮುದಾಯಗಳ ಮಹಿಳೆಯರಿಗೆ ಸಮಾನತೆಯ ಗುರಿ ಸಾಧನೆಗೆ ಸಂಬಂಧಪಟ್ಟ ವೈಯಕ್ತಿಕ ಕಾನೂನುಗಳ ಸುಧಾರಣೆಯೇ ಉತ್ತಮ ಮಾರ್ಗ. ಅಸಮರ್ಪಕ ವೈಯಕ್ತಿಕ ಕಾನೂನುಗಳಲ್ಲಿ ಸಮರೂಪತೆ ತಂದರೆ ಅದರಿಂದ ಸಮಾನತೆಯೇನೂ ಸಿಗುವುದಿಲ್ಲ. ಅದೇ ವೇಳೆಗೆ ಪ್ರಸಕ್ತ ಜಾತ್ಯಾತೀತ ಕಾನೂನುಗಳ ಚೌಕಟ್ಟನ್ನು ಉತ್ತಮ ಪಡಿಸಬೆಕು ಮತ್ತು ವಿಸ್ತರಿಸಬೇಕು ಎಂದು ಎಐಡಿಡಬ್ಲ್ಯುಎ ಹೇಳಿದೆ.