ನ.18ಕ್ಕೆ ರೈತರಿಂದ ಜೈಲ್‍ಭರೋ ಚಳುವಳಿ

Thursday, 20 October 2016

ಬಡ ಬಗರ್‍ಹುಕುಂ ಸಾಗುವಳಿದಾರರಿಗೆ ಭೂಮಿ ಸಿಗಬೇಕಾದರೆ ಪ್ರಸ್ತುತ ಕಾನೂನಿಗೆ ತಿದ್ದುಪಡಿ ಮಾಡಲೇಬೇಕು. ಅದಕ್ಕಾಗಿ ಜೈಲು ಭರೋದಂತ ನಿರ್ಣಾಯಕ ಹೋರಾಟಕ್ಕೆ ಮುಂದಾಗಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‍ಎಸ್) ದ ನೇತೃತ್ವದಲ್ಲಿ ಇಂದು ಬೆಂಗಳೂರಿನ ಕಾನಿಷ್ಕ ಹೋಟೆಲ್‍ನಲ್ಲಿ ನಡೆದ “ಭೂಮಿಯ ಹಕ್ಕಿಗಿರುವ ಕಾನೂನಿನ ಸಮಸ್ಯೆಗಳು’ ದುಂಡುಮೇಜಿನ ಸಭೆಯಲ್ಲಿ ಬಂದ ನಿರ್ಣಯ.

ದುಂಡುಮೇಜಿನ ಸಭೆಯನ್ನು ಉಧ್ಘಾಟಿಸಿ ಮಾತನಾಡಿದ ಅಖಿಲ ಭಾರತ ಕಿಸಾನ್ ಸಭಾದ ಉಪಾಧ್ಯಕ್ಷರಾದ ಕೆ.ವರದರಾಜನ್ ಶೇಕಡ 72 ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿ ಬದುಕುಸಾಗಿಸುತ್ತಿದ್ದು ಅವರೆಲ್ಲರೂ ಭೂಮಿಯನ್ನೇ ನಂಬಿಕೊಂಡಿದ್ದಾರೆ. ಹಿಂದಿನ ಕಾಂಗ್ರೇಸ್ ಸರ್ಕಾರ ಮತ್ತು ಈಗಿನ ಬಿಜೆಪಿ ಸರ್ಕಾರ ತರುತ್ತಿರುವ ನೀತಿಗಳು ಬಡ ರೈತರಿಂದ ಭೂಮಿಯನ್ನು ಕಿತ್ತುಕೊಳ್ಳಲು ಪೂರಕವಾಗಿವೆ ಮತ್ತು ಕೈಗಾರಿಕೆಗಳ ಉದ್ದೇಶಕ್ಕಾಗಿ ಖಾಸಗೀ ಬಹುರಾಷ್ಟ್ರೀಯ ಕಂಪನಿಗಳು ಅಗತ್ಯಕ್ಕಿಂತ ಹೆಚ್ಚುವರಿ ಭೂಮಿಯನ್ನು ಸ್ವಾಧಿನ ಪಡಿಸಿಕೊಂಡು ರೈತರನ್ನು ಕೃಷಿಯಿಂದ ಹೊರದಬ್ಬಲಾಗುತ್ತಿದೆ. ದೇಶದ ಶೇಕಡ 42 ರಷ್ಟು ರೈತರು ಕೃಷಿಯನ್ನು ಮುಂದುವರೆಸಲಾಗದ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಮುಖ್ಯವಾಗಿ ರೈತವಿರೋಧಿ ನೀತಿಗಳಿಂದ ಸರ್ಕಾರಗಳು ಯಾವಾಗಬೇಕಾದರೂ ಭೂಮಿಯನ್ನು ಕಿತ್ತುಕೊಳ್ಳಬಹುದೆಂಬ ಅಭದ್ರತೆ ಉಂಟಾಗಿದೆ. ಪ್ರಸ್ತುತ ಇಂತಹ ಕಾರ್ಷಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲ ರೈತ ಪರ ಮತ್ತು ಪ್ರಗತಿಪರ ಸಂಘಟನೆಗಳು ಒಟ್ಟಿಗೆ ಸೇರಿ ಚಳುವಳಿಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರ ಒಟ್ಟು ಅಭಿಪ್ರಾಯದ ಭಾಗವಾಗಿ ರಾಜ್ಯದಲ್ಲಿ ಸರ್ಕಾರಿ ಮತ್ತು ಅರಣ್ಯ ಭೂಮಿಯನ್ನು ಉಳುಮೆ ಮಾಡುತ್ತಿರುವ ಲಕ್ಷಾಂತರ ಉಳುಮೆದಾರರು ಅರ್ಜಿ ನಮೂನೆ 50 ಮತ್ತು 53 ರ ಅಡಿಯಲ್ಲಿ ಭೂ ಮಂಜುರಾತಿಗೆ ಅರ್ಜಿ ಸಲ್ಲಿಸಿದ್ದರೂ ಸುಮಾರು 13 ಲಕ್ಷದಷ್ಟು ಅರ್ಜಿಗಳು ಪ್ರಸ್ತುತ ಕಾನೂನಿನ ಅಡಿಯಲ್ಲಿ ತಿರಸ್ಕøತಗೊಂಡಿವೆ ಮತ್ತು ಬಹುತೇಕ ಅರ್ಜಿಗಳು ನೆನೆಗುದಿಗೆ ಬಿದ್ದಿವೆ. ಇಂತಹ ಲಕ್ಷಾಂತರ ಬಡ ಭೂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಸರ್ಕಾರಗಳು ಮುಂದಾಗಿವೆ. ಇಂತಹವರಿಗೆ ಭೂಮಿಯನ್ನು ಹಂಚಿಕೆ ಮಾಡಬೇಕಾದರೆ ಪ್ರಸ್ತುತ ಕರ್ನಾಟಕ ಭೂಕಂದಾಯ ಕಾನೂನಿಗೆ ತಿದ್ದುಪಡಿ ತಂದು ಪ್ರತಿ ಗ್ರಾಮದಲ್ಲಿ ನೂರು ರಾಸುಗಳಿದ್ದರೆ 30 ಎಕ್ಕರೆ ಭೂಮಿಯನ್ನು ಗೋಮಾಳಕ್ಕೆಂದು ಮೀಸಲಿಡಬೇಕು ಎನ್ನುವ ಕಾನೂನಿಗೆ ತಿದ್ದುಪಡಿ ತರಬೇಕು. ಜೊತೆಗೆ ನಗರ ಸಭೆ, ಪಟ್ಟಣ ಪಂಚಾಯಿತಿ ಮತ್ತು ಪುರ ಸಭೆಗಳ ವ್ಯಾಪ್ತಿಯಲ್ಲಿ 10, 5 ಕಿಲೋಮೀಟರ್ ಒಳಗಿರುವ ಸಾಗುವಳಿಯನ್ನು ಮಂಜೂರು ಮಾಡದಿರುವ ನೀತಿಯನ್ನು ಕೈಬಿಡಬೇಕು ಮತ್ತು ರಾಜ್ಯದ ಎಲ್ಲಾ ಮನೆ ರಹಿತರಿಗೆ ವಸತಿ ನಿವೇಶನವನ್ನು ನೀಡಬೇಕೆಂದು ಒತ್ತಾಯಿಸಿ ನವೆಂಬರ್ 18 ರಂದು ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ನಡೆಸಲುವ ಮೂಲಕ ಜೈಲ್‍ಭರೋ ಚಳುವಳಿಯನ್ನು ನಡೆಸಬೇಕೆಂದು ತೀರ್ಮಾನಿಸಲಾಯಿತು.

ದುಂಡುಮೇಜಿನ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಮರುತಿ ಮಾನ್ಪಡೆ ವಹಿಸಿದ್ದರು, ಸಭೆಯಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿಗಳಾದ ವಿಜೂಕೃಷ್ಣನ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ಗಂಗಾಧರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ) ಸಂಚಾಲಕರಾದ ಮಾವಳ್ಳಿ ಶಂಕರ್, ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜು, ಮಾಜಿ ಶಾಸಕರೂ ಮತ್ತು ಕೆಪಿಆರ್‍ಎಸ್‍ನ ರಾಜ್ಯ ಉಪಾಧ್ಯಕ್ಷರಾದ ಜಿ.ವಿ.ಶ್ರೀರಾಮರೆಡ್ಡಿ, ರೈತ ಕೂಲಿಕಾರ ಸಂಘದ ಮುಖಂಡರಾದ ಶಿವಪ್ರಕಾಶ್, ಆದಿವಾಸಿ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕರಾದ ಎಸ್.ವೈ.ಗುರುಶಾಂತ್, ದಲಿತ ಹಕ್ಕುಗಳ ಸಮಿತಿಯ ಗೋಪಾಲಕೃಷ್ಣ ಅರಳಹಳ್ಳಿಯವರು ಮಾತನಾಡಿದರು. ಮತ್ತು ವಿವಿಧ ಜಿಲ್ಲೆಗಳಿಂದ ಪ್ರಾಂತ ರೈತ ಸಂಘದ ಪಧಾಧಿಕಾರಿಗಳು ಭಾಗವಹಿಸಿದ್ದರು.  

 

 

ವರದಿ : ಹೆಚ್.ಆರ್.ನವೀನ್ ಕುಮಾರ್