ಕಳೆದ 25 ವರ್ಷಗಳ ‘ಚಿಂತನಾ ವಿನ್ಯಾಸ ಪಲ್ಲಟ’

ಸಂಪುಟ: 
10
ಸಂಚಿಕೆ: 
43
date: 
Sunday, 16 October 2016

ಅದರ ಅರ್ಥ ಇಷ್ಟೆ: ಪ್ರತಿಯೊಂದು ತಾತ್ವಿಕ ಪರಿಕಲ್ಪನೆಯನ್ನೂ ಜಾಗತಿಕ ಬಂಡವಾಳದ ಆಶಯವನ್ನು ಬಿಂಬಿಸುವಂತೆ ಮರುವ್ಯಾಖ್ಯಾನ ಮಾಡುವುದು. ಅನ್ಯಾಯವನ್ನು ಕಾನೂನುಬದ್ಧಗೊಳಿಸಿ ನ್ಯಾಯವೆಂದು ಹೇಳುವುದು. ಎಲ್ಲ ಬಗೆಯ ಅಕ್ರಮಗಳನ್ನು ಸಕ್ರಮಗೊಳಿಸುವುದು. ಅನೈತಿಕತೆಗೆ ನೀತಿಯನ್ನು ಹೊಂದಿಸಿ ತಾತ್ವೀಕರಿಸುವುದು. ಮಾನವೀಯ ಆಸಕ್ತಿ, ಅನುಕಂಪ, ಕರುಣೆಗಳನ್ನು ಕೆಳಗೆ ಹಾಕಿ ಸ್ವಕೇಂದ್ರಿತ ಹಿತಾಸಕ್ತಿಯನ್ನು ವೈಭವೀಕರಿಸಿ ವೃತ್ತಿ ಧರ್ಮವೆಂದು ಸಾರುವುದು. ಸ್ವಾರ್ಥಪರತೆಯನ್ನು ಸಾರ್ಥಕ ಬದುಕೆಂದು,  ಅಸಾಮಾಜಿಕತೆಯನ್ನು ಬುದ್ಧಿವಂತಿಕೆಯೆಂದು ನಿರ್ವಚಿಸುವುದು. ಪೂರ್ಣ ಚಿತ್ರವನ್ನು ಮರೆಮಾಚಿ ಆಂಶಿಕ ಚಿತ್ರವನ್ನು ಸಾಂದರ್ಭಿಕ ಅನುಕೂಲಕ್ಕೆ ತಕ್ಕಂತೆ ತೋರಿಸಿ ಅದೇ ಇಡೀ ಚಿತ್ರವೆಂದು ನಂಬಿಸುವುದು. ತಪ್ಪು-ಸರಿ, ಒಳ್ಳೆಯದು-ಕೆಟ್ಟದ್ದು, ನ್ಯಾಯ-ಅನ್ಯಾಯ, ಉದ್ಯೋಗ-ನಿರುದ್ಯೋಗ, ಬಡತನ-ಸಿರಿತನ, ನೀತಿ-ಅನೀತಿ, ಧರ್ಮ-ಅಧರ್ಮ, ಮಾನವೀಯತೆ-ಅಮಾನವೀಯತೆ, ಮುಂತಾದ ದ್ವಂದ್ವಾತ್ಮಕ ವಿಭಾಗಗಳ ನಡುವಿನ ಗೆರೆಗಳನ್ನು ಅಳಿಸಿಹಾಕುವಂಥ, ಇಲ್ಲವೆ ಮಸುಕುಗೊಳಿಸುವಂತೆ ಸಂಕೀರ್ಣಗೊಳಿಸಿದ ಧೂರ್ತ ವಾದಗಳನ್ನು ತರ್ಕಬದ್ಧವಾಗಿ ಮಂಡಿಸಿ ಜನರ ಯೋಚನಾಲಹರಿಯಲ್ಲೇ ಗೊಂದಲ ಹುಟ್ಟಿಸುವುದು.

ನ್ಯಾಯ, ನೀತಿ, ಧರ್ಮ ಮತ್ತು ಮಾನವೀಯ ಸಂಬಂಧಗಳು ಯಾವುದೇ ನಾಗರಿಕ ಸಮಾಜದ ತಳಹದಿ. ಇವು ಇಲ್ಲದ ಸಮಾಜ ಅನಾಗರಿಕ ಸಮಾಜ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಬಿಳಿಯರು, ಮತ್ತು ಕುಲೀನರು ‘ಅನಾಗರಿಕ’ರೆಂದು ಕರೆಯುವ ಕರಿಯರು, ಆದಿವಾಸಿಗಳು, ವಿವಿಧ ಪ್ರದೇಶಗಳ ಮೂಲ ನಿವಾಸಿಗಳು, ಹಿಂದುಳಿದವರು, ಅಶಿಕ್ಷಿತರು, ಬಡವರು, ಮತ್ತು ಹಳ್ಳಿಗಾಡಿನ ಜನರಲ್ಲಿ ನಿಜವಾದ ನ್ಯಾಯ, ನೀತಿ, ಧರ್ಮ ಮತ್ತು ಮಾನವೀಯ ಸಂಬಂಧಗಳು ಇವೆ. ಹಾಗಿದ್ದರೂ ಅವನ್ನು ‘ನಾಗರಿಕ ಸಮಾಜ’ ದ ಶಿಷ್ಟರು, ವಿದ್ಯಾವಂತರೆನಿಸಿಕೊಂಡವರು, ಒಪ್ಪುವುದಿಲ್ಲ. ಅಂದಮೇಲೆ ಯಾವುದು ನ್ಯಾಯ? ಯಾವುದು ನೀತಿ? ಯಾವುದು ಧರ್ಮ? ಮತ್ತು ಮಾನವೀಯ ಸಂಬಂಧಗಳೆಂದರೆ ಯಾವುವು? ಇವನ್ನು ಸರಿ ಅಥವ ತಪ್ಪೆಂದು ಯಾರು ಹೇಗೆ ನಿರ್ಧರಿಸುತ್ತಾರೆ?

ಆಳುವವರ ಮತ್ತು ಆಳಿಸಿಕೊಳ್ಳುವವರ ನ್ಯಾಯ-ನೀತಿ ಬೇರೆಯೆ?

ಜಗತ್ತಿಗೇ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸಿದರೆಂದು ನಂಬುವ ಬ್ರಿಟಿಷರು ತಮ್ಮ ಆಡಳಿತಕ್ಕೆ ಒಳಪಟ್ಟ ಭಾರತೀಯರನ್ನು ಹುಳುಗಳೆಂಬಂತೆ ನಡೆಸಿಕೊಳ್ಳುತ್ತಿದ್ದುದನ್ನು ಅವರ ಯಾವ ನ್ಯಾಯಾಲಯವೂ ಅನ್ಯಾಯವೆಂದು ಪರಿಗಣಿಸುತ್ತಿರಲಿಲ್ಲ.

ಬ್ರಿಟಿಷ್ ಸಂಜಾತರೇ ಆದ ಕ್ರೂರ ವ್ಯಾಪಾರಿಗಳು ಆಫ್ರಿಕನರನ್ನು ಹಡಗುಗಳಲ್ಲಿ ತುಂಬಿಕೊಡು ಬಂದು ಅಮೆರಿಕದ ಬಿಳಿಯ ಶ್ರೀಮಂತರಿಗೆ ಮಾರಾಟಮಾಡುವುದು,  ಆ ಕಾಲದ ‘ನಾಗರಿಕ’ ಸಮಾಜದ ನ್ಯಾಯ, ನೀತಿ, ಧರ್ಮ ಮತ್ತು ಮಾನವೀಯ ಸಂಬಂಧಗಳಿಗೆ ಅನುಸಾರವಾಗಿಯೇ ಇತ್ತು.

ಎಲ್ಲರೂ ಆಧ್ಯಾತಿಕವಾಗಿ ಸಮಾನರೆಂದು ಸಾರುವ ಬ್ರಾಹ್ಮಣಧರ್ಮವನ್ನು ಆಧರಿಸಿದ ವಿವಿಧ ಹಿಂದೂ ಮತಧರ್ಮಗಳಿಗೆ ಸೇರಿದ ರಾಜರು, ಪಾಳೆಯಗಾರರು, ಧರ್ಮಗುರುಗಳು ವರ್ಣವ್ಯವಸ್ಥೆಯ ಶ್ರೇಣೀಕರಣದಲ್ಲಿ ಕೆಳಜಾತಿಯ ಜನರೆನಿಸಿಕೊಂಡವರನ್ನು, ಬಡವರನ್ನು ಮತ್ತು ಹೆಂಗಸರನ್ನು ಗುಲಾಮರಿಗಿಂತ ಹೀನವಾಗಿ, ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿದ್ದುದು, ಈಗಲೂ ನಡೆಸಿಕೊಳ್ಳುತ್ತಿರುವುದು ಅವರ ಪ್ರಕಾರ ‘ಸರಿ’ಯಾಗಿಯೇ ಇದೆ.

ವಿಶ್ವ ಭ್ರಾತೃತ್ವವನ್ನು ಸಾರುವ ಇಸ್ಲಾಂ ಧರ್ಮವನ್ನು ರಾಷ್ಟ್ರೀಯವಾಗಿ ಅಧಿಕೃತ ಧರ್ಮವೆಂದು ಅನುಸರಿಸುವ ದೇಶಗಳಲ್ಲಿ ಬಡವರು-ಶ್ರೀಮಂತರ ನಡುವೆ ಇರುವ ಸಾಮಾಜಿಕ ಮತ್ತು ಆರ್ಥಿಕ ಅಂತರ ನ್ಯಾಯಸಮ್ಮತವೆಂದೆ ಆ ಸಮಾಜಗಳ ಧರ್ಮಗುರುಗಳು ಮತ್ತು ಆಳುವ ವರ್ಗದ ಜನ ನಂಬುತ್ತಾರೆ.

ಎಲ್ಲರೂ ಸ್ವರ್ಗದಲ್ಲಿರುವ ದೇವರ ಮಕ್ಕಳೇ ಎಂದು ನಂಬುವ ಯಹೂದಿಗಳಿಗೆ, ಕ್ರೈಸ್ತರಿಗೆ, ಭೂಮಿಯ ಮೇಲಿರುವ ಎಲ್ಲರಿಗೂ ಸೇರಿದ ಜೀವನಾವಶ್ಯಕ ವಸ್ತುಗಳ ಒಡೆತನ ಕೆಲವೇ ಜನರ ಕೈಲಿರುವುದು, ಜಗತ್ತಿನ ಬಹುತೇಕ ಜನರು ಎರಡು ಹೊತ್ತಿನ ಕೂಳಿಗೂ ಪಡಬಾರದ ಯಾತನೆ ಪಡುವುದು ದಯಾಮಯನಾದ ದೇವರ ಇಚ್ಛೆಗೆ ಅನುಸಾರವಾಗಿಯೇ ಇದೆ ಎಂದು ತೋರುತ್ತದೆ. ತಾವು ಉಳ್ಳವರಾಗಿದ್ದುಕೊಂಡು ಇಲ್ಲದವರ ಬಗ್ಗೆ ದಯೆ, ಕರುಣೆ  ಅನುಕಂಪಗಳನ್ನು ಇಟ್ಟುಕೊಂಡರೆ ಅವು ಅವರಿಗೆ ಆದರ್ಶಪ್ರಾಯವಾದ ಧಾರ್ಮಿಕ ಮೌಲ್ಯಗಳೆನಿಸುತ್ತವೆ.

ರಾಜಕೀಯವಾಗಿ ಒಂದು ಪ್ರದೇಶದ ಬಲಿಷ್ಠರು ಮತ್ತೊಂದು ಪ್ರದೇಶದ ಜನರನ್ನು ಯುದ್ಧದಲ್ಲಿ ಗೆದ್ದು ಆಳುವುದು, ಅಂದರೆ ಆಯುಧ, ಹಿಂಸೆ, ದಬ್ಬಾಳಿಕೆಗಳ ಮೂಲಕ ಅವರ ಆಸ್ತಿ-ಜೀವಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅಂತಾರಾಷ್ಟ್ರೀಯವಾಗಿ ನ್ಯಾಯಯುತವೆಂದೇ ಪರಿಗಣಿಸಲ್ಪಡುತ್ತಿದೆ. ಬೆರಳೆಣಿಕೆಯ ಸಂಖ್ಯೆಯ ಜಾಗತಿಕ ಶ್ರೀಮಂತರು ದೈತ್ಯ ಉದ್ಯಮಗಳ ಹೆಸರಿನಲ್ಲಿ ಜಗತ್ತಿನ ಜನಸಮುದಾಯಗಳ ಆರ್ಥಿಕತೆಯನ್ನೇ ಬುಡಮೇಲು ಮಾಡುವುದೂ ಸಹ ಆ ಉದ್ಯಮಿಗಳು ತಮಗಾಗಿ, ತಾವೇ ರೂಪಿಸಿಕೊಂಡಿರುವ ಜಾಗತಿಕ ಮಟ್ಟದ ನ್ಯಾಯ, ನೀತಿ, ಧರ್ಮ ಮತ್ತು ಮಾನವೀಯ ಸಂಬಂಧಗಳಿಗೆ ಅನುಸಾರವಾಗಿಯೇ ಇದೆ.

ಅಂದಮೇಲೆ ಎಲ್ಲವೂ ಸರಿಯಾಗಿಯೇ ಇರಬೇಕಲ್ಲ! ಎಲ್ಲ ನಾಗರಿಕ ಸರ್ಕಾರಗಳೂ, ಜನರಿಂದಲೇ ಚುನಾಯಿತವಾಗಿ, ಜನರ ಹೆಸರಿನಲ್ಲಿ ಜಾರಿಗೆ ತಂದಿರುವ ಸಂವಿಧಾನಗಳಲ್ಲಿ ರೂಪಿಸಿರುವ ನ್ಯಾಯ, ನೀತಿ, ಧರ್ಮ ಮತ್ತು ಮಾನವೀಯ ಸಂಬಂಧಗಳ ತಳಹದಿಯ ಮೇಲೇ ನಿಂತಿರುವಾಗ ತೊಂದರೆ ಎಲ್ಲಿದೆ?

ಆದರೆ ಜಗತ್ತಿನ ಜನಸಮುದಾಯದ ದಿನನಿತ್ಯದ ಅನುಭವ ತಲೆ ತಲಾಂತರದಿಂದಲೂ ಬೇರೆಯೇ ಆಗಿದೆ. ಅವರ ಅನುಭವಕ್ಕೆ ಉಳ್ಳವರು ನಿಯಂತ್ರಿಸುತ್ತಿರುವ ನಾಗರಿಕ ಸಮಾಜದ ಈ ನ್ಯಾಯ, ನೀತಿ, ಧರ್ಮ ಮತ್ತು ಮಾನವೀಯ ಸಂಬಂಧಗಳ ಪರಿಕಲ್ಪನೆಗಳು ಹೊಂದುತ್ತಿಲ್ಲ. ಯಾರನ್ನೇ ಕೇಳಿದರೂ ಎಲ್ಲಾ ಕಡೆ ಅನ್ಯಾಯ ಅನೀತಿ ಅಧರ್ಮಗಳೇ ತುಂಬಿವೆಯೆಂದು ಹೇಳುತ್ತಾರೆ. ಮಾನವೀಯತೆ ಎಂಬುದು ಮಾಯವಾಗಿದೆ ಎಂದು ಪರಿತಾಪ ಪಡುತ್ತಾರೆ. ಭಾರತದಲ್ಲಂತೂ ಧರ್ಮ ಕ್ಷೀಣಿಸಿ, ಅಧರ್ಮದ ಕೈ ಮೇಲಾದಾಗ ಭಗವಂತನೇ ಅವತಾರವೆತ್ತಿ ಧರ್ಮಸಂಸ್ಥಾಪನೆ ಮಾಡುತ್ತಾನೆಂದು ಭಗವದ್ಗೀತೆಯಲ್ಲಿ ಹೇಳಿದೆ. ಆದರೆ ಹಾಗೇನೂ ಇಲ್ಲಿಯವರೆಗೆ ಆಗಿಲ್ಲ. ಹಾಗಿದ್ದರೆ ಸಾವಿರಾರು ಜನ ಸಜ್ಜನರು ಶ್ರದ್ಧೆಯಿಂದ ದಿನವೂ ಪಠಿಸುವ ಭಗವದ್ಗೀತೆಯ ಮಾತಿಗೆ ಅರ್ಥವಿಲ್ಲವೆ? ಇದನ್ನೆಲ್ಲಾ ಅರ್ಥಮಾಡಿಕೊಳ್ಳವುದು ಹೇಗೆ?

ಈ ಪ್ರಶ್ನೆಗೆ ಸಿಗುವ ಒಂದು ಉತ್ತರ: ಬಹುಪಾಲು ಬಡವರು, ಅನಕ್ಷರಸ್ಥರೇ ತುಂಬಿರುವ ಜನಸಮುದಾಯದ ಅನುಭವದ ಗ್ರಹಿಕೆಯಲ್ಲೇ ತಪ್ಪಿರಲು ಸಾಧ್ಯ ಎಂಬುದು. ಇನ್ನೊಂದು ಉತ್ತರ: ನ್ಯಾಯ, ನೀತಿ, ಧರ್ಮ ಮತ್ತು ಮಾನವೀಯ ಸಂಬಂಧಗಳು ಎಂಬ ಪದಗಳು ಎಲ್ಲರಿಗೂ ಒಂದೇ ರೀತಿಯಾಗಿ ಕಂಡರೂ ಅವುಗಳ ಅರ್ಥ ಮಾತ್ರ ಆಳುವವರಿಗೆ ಮತ್ತು ಉಳ್ಳವರಿಗೆ ಆಗುವ ರೀತಿಯಲ್ಲೇ ಜನಸಾಮಾನ್ಯರಾದ ಬಡವರು ಮತ್ತು ಆಳಿಸಿಕೊಳ್ಳವವರಿಗೆ ಆಗದಂತೆ ಬಳಕೆಯಾಗುತ್ತಿರಬಹುದು.. ಅಂದರೆ, ಆಳುವವರ ನ್ಯಾಯ-ನೀತಿ, ಆಳಿಸಿಕೊಳ್ಳುವವರ ನ್ಯಾಯ-ನೀತಿ, ಆಗಿಲ್ಲ. ಶ್ರೀಮಂತರ ಧರ್ಮ ಬಡವರ ಧರ್ಮ ಆಗಿಲ್ಲ. ಉದ್ಯಮಿಗಳ ಮಾನವೀಯ ಸಂಬಂಧಗಳು ಬಡವರಿಗೂ ಅನ್ವಯವಾಗಬಲ್ಲ ಮಾನವೀಯ ಸಂಬಂಧಗಳು ಆಗಿಲ್ಲ. ಇದು ಕೇವಲ ಕೆಲವು ಜನರ ಮನಸ್ಸಿನ ಕಲ್ಪನೆಯಾಗಿರದೆ ಸಾವಿರಾರು ವರ್ಷಗಳಿಂದ ಆಳುವವರು ನಾನಾ ರೀತಿಗಳಲ್ಲಿ ಕಾಯ್ದುಕೊಂಡು ಬಂದಿರುವ ಆಳಿಸಿಕೊಳ್ಳುವವರ ಜೊತೆಗಿನ ತಮ್ಮ ಸಂಬಂಧಗಳನ್ನು ಆಧರಿಸಿದ ಪರಿಕಲ್ಪನೆಗಳಾಗಿರಬಹುದು. ಆಳಿಸಿಕೊಳ್ಳುವ ಜನರು ತಮಗೆ ಎಷ್ಟೇ ಕಷ್ಟವಾದರೂ ಬಿಡದೆ ಬದಲಾಯಿಸಲು ಯತ್ನಿಸುತ್ತಿರುವ ಅರ್ಥಗಳಾಗಿರಬಹುದು, ಆದ್ದರಿಂದ ಇವೆಲ್ಲಾ ಚರಿತ್ರೆಯುದ್ದಕ್ಕೂ ನಿರಂತರವಾಗಿ ಘರ್ಷಣೆಗೊಳಗಾಗುತ್ತಲೇ ಬರುತ್ತಿರುವ, ಎರಡು ಪರಸ್ಪರ ವಿರುದ್ಧವಾದ ಜೀವನದೃಷ್ಟಿಗಳ ನಡುವಿನ ಸಂಘರ್ಷ. ಇದನ್ನೇ ಕಾರ್ಲ್ ಮಾಕ್ರ್ಸ್ ವರ್ಗಸಂಘರ್ಷ ಎಂದು ಕರೆದಿದ್ದಾರೆ. ಇಡೀ ಮನುಕುಲದ ಚರಿತ್ರೆ ವರ್ಗ ಸಂಘರ್ಷದ ಚರಿತ್ರೆ ಎಂದು ಅವರು ಹೇಳಿದ್ದಾರೆ. ಈ ವ್ಯತ್ಯಾಸವನ್ನು ಗಮನದಲ್ಲಿರಿಸಿಕೊಂಡು ಈಗ ಚಾಲ್ತಿಯಲ್ಲಿರುವ ಎಲ್ಲ ರೀತಿಯ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ನೈತಿಕಮೌಲ್ಯಗಳನ್ನು ಅರ್ಥಮಾಡಿಕೊಂಡರೆ ಯಾವುದು ನ್ಯಾಯ, ನೀತಿ, ಧರ್ಮ ಮತ್ತು ಮಾನವೀಯತೆಗಳು, ಯಾವುದು ಅಲ್ಲ ಎಂಬುದು ಸ್ಪಷ್ಟವಾಗಬಹುದು.

ಸಂವಿಧಾನ, ಕಾನೂನು, ನ್ಯಾಯ

ಯಾವುದೇ ದೇಶದ ಸಂವಿಧಾನವೆಂದರೆ, ಆಳುವವರು, ಆಳಿಸಿಕೊಳ್ಳುವವರ ಹೆಸರಿನಲ್ಲಿ ಜಾರಿಗೆ ತರುವ ಅಧಿಕಾರದ ಕೈಪಿಡಿ. ಇದರ ನೀತಿ-ನಿಯಮಾವಳಿಗಳ ಘೋಷಿತ ಆಶಯ ಮತ್ತು ಉದ್ದೇಶಗಳು ಸಮಸ್ತ ಜನರ ಕಲ್ಯಾಣಕ್ಕಾಗಿ ಎಂದಿದ್ದರೂ ಅನುಷ್ಠಾನದಲ್ಲಿ ಬಹಳ ಮಟ್ಟಿಗೆ ಆಳುವವರ್ಗದ ಹಿತಾಸಕ್ತಿಗಳನ್ನು ಕಾಯುವಂತೆ ರೂಪಿತವಾಗಿರುತ್ತವೆ. ಆಳುವವರು ಮತ್ತು ಆಳಿಸಿಕೊಳ್ಳುವವರ ಹಿತಾಸಕ್ತಿಗಳು ಒಂದೇ ಆಗಿದ್ದಾಗ ಸಂವಿಧಾನದ ಆಶಯ-ಉದ್ದೇಶಗಳಿಗೂ, ಅನುಷ್ಠಾನದಲ್ಲಿ ರಕ್ಷಿತವಾಗುವ ಆಶಯ-ಉದ್ದೇಶಗಳಿಗೂ ಮಧ್ಯೆ ಬಿರುಕು ಅಥವಾ ಕಂದಕಗಳು ಇರುವುದಿಲ್ಲ. ಆಗ ಮಾತ್ರ ವರ್ಗ ಸಂಘರ್ಷ ಇರುವುದಿಲ್ಲ. ಅಂಥ ಸಂವಿಧಾನ ಜನಪರವಾದ ಆದರ್ಶ ಸಂವಿಧಾನ. ಅಂಥ ಸಂವಿಧಾನಾತ್ಮಕ ಸರ್ಕಾರ ಮಾತ್ರ ‘ಜನರ ಸರ್ಕಾರ’, ಕಡೆಯಪಕ್ಷ, ‘ಜನಪರ ಸರ್ಕಾರ’ ವಾದರೂ ಆಗಿರಲು ಸಾಧ್ಯ. ಸಮಾಜವಾದೀ ಸಂವಿಧಾನ ಇಂಥ ಸಂವಿಧಾನ. ಅದನ್ನಾಧüರಿಸಿ ರಚಿತವಾಗುವ ಸರ್ಕಾರ ಸಮಾಜವಾದಿ ಸರ್ಕಾರ. ಇವನ್ನು ಹೊರತುಪಡಿಸಿ ಉಳಿದೆಲ್ಲ ರೀತಿಯ ಸಂವಿಧಾನಗಳೂ ಆಳಿಸಿಕೊಳ್ಳುವವರ?  ಸಂವಿಧಾನ. ಅಂದರೆ, ಜನರ ಹೆಸರನ್ನು ಹೇಳಿಕೊಂಡು ಆಳುವವರ್ಗದ ಹಿತವನ್ನು ಕಾಯುವ ಸಂವಿಧಾನಗಳು. ಅಂಥ ಜನಪರವಲ್ಲದ ಸಂವಿಧಾನಗಳು ಬಡವರು, ಶ್ರಮಿಕರು ಮತ್ತು ದುರ್ಬಲರ ಹಿತಕಾಯುವಂತೆ ರಚಿತವಾಗಿವೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತವೆ. ಆದರೆ, ಆಳದಲ್ಲಿ, ಅದರ ಮೂಲ ಸ್ವರೂಪದಲ್ಲಿ, ಶ್ರೀಮಂತರು, ಉದ್ಯಮಿಗಳು ಮತ್ತು ಅವರನ್ನು ಸಮರ್ಥಿಸುವವರ ಸ್ವಹಿತಾಸಕ್ತಿಯನ್ನು ಕಾಪಾಡುವಂತೆ ರಚಿತವಾಗಿರುತ್ತವೆ.  ಯಾರ ಹೆಸರಿನಲ್ಲಿ ಸಂವಿಧಾನವಿದೆಯೋ ಅಂಥ ಸಾಮಾನ್ಯ ಜನರ ಬದುಕನ್ನು ಬಲಿಕೊಟ್ಟು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಂಥ ನೀತಿ-ನಿಯಮಾವಳಿಗಳನ್ನು ಕಾನೂನಿನ ಹೆಸರಿನಲ್ಲಿ ಜಾರಿಗೊಳಿಸುವಂತೆ ಇರುತ್ತವೆ.

ಸಂವಿಧಾನದಲ್ಲಿ ಏನೇ ಬದಲಾವಣೆ-ತಿದ್ದುಪಡಿಗಳನ್ನು ಬೇಕಾದರೂ ಜನರಿಂದ ಚುನಾಯಿತವಾದ ಸರ್ಕಾರಗಳು ತರಬಹುದು. ಆದರೆ ಅಂಥ ಬದಲಾವಣೆ-ತಿದ್ದುಪಡಿಗಳು ‘ಕಾನೂನುಬದ್ಧ’ವಾಗಿರಬೇಕೆಂದರೆ ಸಂವಿಧಾನದ ಮೂಲಸ್ವರೂಪವನ್ನು ಬದಲಾಯಿಸಬಾರದು. ಭಾರತದ ಸಂವಿಧಾನದ ಮೂಲ ಸ್ವರೂಪದಲ್ಲಿ ಖಾಸಗಿ ಆಸ್ತಿ ನಾಗರಿಕರ ಮೂಲಭೂತ ಹಕ್ಕು. ಈಗಿರುವಂತೆ ಭೂಮಿಯ ಖಾಸಗಿ ಒಡೆತನವನ್ನು ಸಾಮಾಜಿಕ ಒಡೆತನವೆಂದು ಬದಲಾಯಿಸಲು ಹೊರಟರೆ ನಮ್ಮ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತಗುಲುತ್ತದೆ. ಒಂದು ಸಾಂವಿಧಾನಿಕ ತಿದ್ದುಪಡಿ ಅಥವಾ ಬದಲಾವಣೆ ಬಹುಸಂಖ್ಯಾತರಾದ ಆಳಿಸಿಕೊಳ್ಳುವ ಜನರ ಹಿತವನ್ನು ಕಾಯುವಂತಿದ್ದರೂ ಆಳುವವರ್ಗದ ಹಿತಕ್ಕೆ ಧಕ್ಕೆ ತರುವಂತಿದ್ದರೆ ಅಂಥ ತಿದ್ದುಪಡಿ-ಬದಲಾವಣೆಗಳನ್ನು ‘ಸಂವಿಧಾನಬದ್ಧವಾಗಿಲ್ಲ’ ಎಂದು ಊರ್ಜಿತವಲ್ಲವೆಂದು ಅತ್ಯುನ್ನತ ನ್ಯಾಯಾಲಯವು ಘೋಷಿಸುತ್ತದೆ. ನ್ಯಾಯಾಧೀಶರು ವೈಯಕ್ತಿಕವಾಗಿ ಎಷ್ಟೇ ಬಡವರ ಪರ, ನ್ಯಾಯಪರವಾಗಿರಬೇಕೆಂದು ಬಯಸಿದರೂ ಸಂವಿಧಾನದ ಮೂಲಸ್ವರೂಪಕ್ಕೆ ಧಕ್ಕೆ ತರುವಂಥ ಆದರೆ ಬಹುಸಂಖ್ಯಾತ ಬಡವರ ಹಿತವನ್ನು ಕಾಯುವಂಥ ನ್ಯಾಯವನ್ನು  ಕೊಡಲಾಗದಂತೆ ಸಂವಿಧಾನವು ನ್ಯಾಯಾಲಯದ ಕೈಗಳನ್ನು ಕಟ್ಟಿಬಿಟ್ಟಿರುತ್ತದೆ. ಜನರಿಂದ ಚುನಾಯಿತರಾಗಿ ಬಹುಮತ ಹೊಂದಿ ಅಧಿಕಾರಕ್ಕೆ ಬರುವ ಕಮುನಿಸ್ಟ್ ಪಕ್ಷಗಳ ಸರ್ಕಾರಗಳೂ ಸಹ ಸಾಂವಿಧಾನಿಕವಾಗಿ ಈ ವಿಷಯದಲ್ಲಿ ಅಸಹಾಯಕವಾಗಿರುತ್ತವೆ.

ಇದರ ಅರ್ಥ, ಉಳ್ಳವರ ಹಿತವನ್ನು ಕಾಯುವಂತೆ ರಚಿತವಾದ ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ಮತ್ತು ನ್ಯಾಯ ಎರಡೂ ಒಂದೇ ಅಲ್ಲ. ಸರಳವಾಗಿ ಹೇಳಬೇಕೆಂದರೆ, ಆಳುವವರು ಯಾವುದನ್ನು ‘ಸರಿ’ ಎಂದು ಹೇಳುತ್ತಾರೋ ಅದೇ ಕಾನೂನು. ಯಾವುದು ಎಲ್ಲರಿಗೂ ಒಳ್ಳೆಯದೋ ಅದು ನ್ಯಾಯ. ಆದ್ದರಿಂದ ಸಾಮಾಜಿಕ ನ್ಯಾಯದ ಪ್ರಶ್ನೆ ಬಂದಾಗ ನ್ಯಾಯಾಲಯಗಳನ್ನು ಶ್ರೀಮಂತರ ಪರವೆಂದು ಅಥವ ಬಡವರ ಪರ ಅಲ್ಲವೆಂದು ದೂಷಿಸುವುದರಲ್ಲಿ ಅರ್ಥವಿಲ್ಲ. ಆದರೆ ಆಳುವವರ್ಗದ ಹಿತಕಾಯುವಂತೆ ರಚಿತವಾದ ಸಂವಿಧಾನವನ್ನು ನಿರ್ಲಕ್ಷಿಸಿ ಅಥವ ಧಿಕ್ಕರಿಸಿ ಬಡವರ ಪರವಾದ ನ್ಯಾಯವನ್ನು ಪಡೆಯುವಂತೆಯೂ ಇಲ್ಲ. ಅಂಥ ಯಾವುದೇ ಪ್ರಯತ್ನವನ್ನು ಸರ್ಕಾರ ‘ದೇಶದ್ರೋಹ’ವೆಂದು ಸಾರುತ್ತದೆ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ತಾಕೀತು ಮಾಡುತ್ತದೆ. ಇಂಥ ಇಕ್ಕಟ್ಟಿನಿಂದ ಪಾರಾಗಿ ವ್ಯಕ್ತಿ ಮಟ್ಟದಲ್ಲಿ, ತಮ್ಮದೇ ಆದ ರೀತಿಯಲ್ಲಿ ನ್ಯಾಯ ಪಡೆಯಲು ಯತ್ನಿಸುವ ಜನರನ್ನು ಸರ್ಕಾರ ಸಾಮಾಜಿಕ ಅಪರಾಧಿಗಳೆಂದು, ಸಮಾಜಘಾತುಕ ಶಕ್ತಿಗಳೆಂದು ಹೆಸರಿಸಿ ನ್ಯಾಯಾಲಯಗಳ ಮೂಲಕ ಶಿಕ್ಷಿಸುತ್ತದೆ. ಸಾಂಘಿಕವಾಗಿ, ಸಂಘಟಿತ ರೂಪದಲ್ಲಿ ತತ್ವ-ಪ್ರಣಾಳಿಕೆಗಳ ಮೂಲಕ ಬಡವರ ಪರವಾದ ಸಂವಿಧಾನವನ್ನು ಪ್ರತಿಪಾದಿಸುವ ಯತ್ನಗಳನ್ನು ‘ಅಪಾಯಕಾರಿ’ಯೆಂದು, ಅಂಥ ಪ್ರಯತ್ನ ಮಾಡುವವರೆಲ್ಲರೂ ಸಂವಿಧಾನದಲ್ಲೆ ನಂಬಿಕೆ ಇಲ್ಲದವರೆಂದು, ‘ದೇಶದ್ರೋಹಿ’ಗಳೆಂದು ಪರಿಗಣಿಸಿ ಹತ್ತಿಕ್ಕುತ್ತದೆ. ಆಳುವ ವರ್ಗದ ಸಂವಿಧಾನಬದ್ಧ ಹಿಂಸೆಗೆ ಪ್ರತಿಯಾಗಿ ಶಸ್ತ್ರಸಹಿತರಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರನ್ನು ರಾಜಕೀಯ ಭಯೋತ್ಪಾದಕರೆಂದು, ತೀವ್ರಗಾಮಿಗಳೆಂದು ಘೋಷಿಸಿ ನಿರ್ದಯವಾಗಿ ಕೊಂದು ಹಾಕುತ್ತದೆ. ಬ್ರಿಟಿಷರ ಕಾಲದಿಂದ ಹಿಡಿದು ಪ್ರಸ್ತುತ ಕಾಲದ ವಿವಿಧ ಬಗೆಯ ಸಂಘರ್ಷಗಳಲ್ಲಿ ಸಮಾನವಾಗಿ ಕಂಡುಬರುವ ವಿದ್ಯಮಾನಗಳು ಇವು. ಇಂದು ಜಾಗತಿಕ ಬಂಡವಾಳ ಸಾಮಾನ್ಯ ಜನರಲ್ಲಿ ಪ್ರತಿಷ್ಠಾಪಿಸುತ್ತಿರುವ ‘ನ್ಯಾಯ, ನೀತಿ, ಧರ್ಮ ಮತ್ತು ಮಾನವೀಯ ಸಂಬಂಧಗಳು’ ಬಹುಸಂಖ್ಯಾತ ಬಡವರ ಹಿತಾಸಕ್ತಿಗಳನ್ನು ದಮನಮಾಡಿ ಉಳ್ಳವರ ಹಿತಾಸಕ್ತಿಗಳನ್ನು ಕಾಯುವಂಥ ರಾಜಕೀಯ ಮೌಲ್ಯಗಳಾಗಿವೆ.

ಕಳೆದ 25 ವರ್ಷಗಳ ನ್ಯಾಯ, ನೀತಿ, ಧರ್ಮಗಳ ಧೂರ್ತ ನಿರ್ವಚನೆ

ಕಳೆದ 25 ವರ್ಷಗಳ ಹಿಂದೆ ಭಾರತದಲ್ಲಿ ಉದಾರೀಕರಣ-ಖಾಸಗೀಕರಣ-ಜಾಗತೀಕರಣಗಳೆಂಬ ಜಾಗತಿಕ ರಾಜಕೀಯದ ಆರ್ಥಿಕತೆಯಲ್ಲಿ ‘ಚಿಂತನಾ ವಿನ್ಯಾಸ ಪಲ್ಲಟ’ (Paradigm Shift) ಎಂಬ ಪದವನ್ನು ಅರ್ಥಪಂಡಿತರು ಮತ್ತು ರಾಜಕೀಯಪಂಡಿತರು ಮೇಲಿಂದಮೇಲೆ ಬಳಸಿದರು. ಅವರನ್ನು ಅನುಸರಿಸಿ ಶಿಕ್ಷಣತಜ್ಞರು ಮತ್ತು ಕಲಾ ಮೀಮಾಂಸಕರೂ ಸಹ ಈ ಪದವನ್ನು ಮೇಲಿಂದ ಮೇಲೆ ಬಳಸಿ ಅದರಲ್ಲಿ ಏನೋ ಗಹನವಾದ ಅರ್ಥವಿದೆ ಎಂಬ ಭ್ರಮೆ ಹುಟ್ಟಿಸಿದರು. ಅದರ ಅರ್ಥ ಇಷ್ಟೆ: ಪ್ರತಿಯೊಂದು ತಾತ್ವಿಕ ಪರಿಕಲ್ಪನೆಯನ್ನೂ ಜಾಗತಿಕ ಬಂಡವಾಳದ ಆಶಯವನ್ನು ಬಿಂಬಿಸುವಂತೆ ಮರುವ್ಯಾಖ್ಯಾನ ಮಾಡುವುದು. ಅನ್ಯಾಯವನ್ನು ಕಾನೂನುಬದ್ಧಗೊಳಿಸಿ ನ್ಯಾಯವೆಂದು ಹೇಳುವುದು. ಎಲ್ಲ ಬಗೆಯ ಅಕ್ರಮಗಳನ್ನು ಸಕ್ರಮಗೊಳಿಸುವುದು. ಅನೈತಿಕತೆಗೆ ನೀತಿಯನ್ನು ಹೊಂದಿಸಿ ತಾತ್ವೀಕರಿಸುವುದು. ಮಾನವೀಯ ಆಸಕ್ತಿ, ಅನುಕಂಪ, ಕರುಣೆಗಳನ್ನು ಕೆಳಗೆ ಹಾಕಿ ಸ್ವಕೇಂದ್ರಿತ ಹಿತಾಸಕ್ತಿಯನ್ನು ವೈಭವೀಕರಿಸಿ ವೃತ್ತಿ ಧರ್ಮವೆಂದು ಸಾರುವುದು. ಸ್ವಾರ್ಥಪರತೆಯನ್ನು ಸಾರ್ಥಕ ಬದುಕೆಂದು,  ಅಸಾಮಾಜಿಕತೆಯನ್ನು ಬುದ್ಧಿವಂತಿಕೆಯೆಂದು ನಿರ್ವಚಿಸುವುದು. ಪೂರ್ಣ ಚಿತ್ರವನ್ನು ಮರೆಮಾಚಿ ಆಂಶಿಕ ಚಿತ್ರವನ್ನು ಸಾಂದರ್ಭಿಕ ಅನುಕೂಲಕ್ಕೆ ತಕ್ಕಂತೆ ತೋರಿಸಿ ಅದೇ ಇಡೀ ಚಿತ್ರವೆಂದು ನಂಬಿಸುವುದು. ತಪ್ಪು-ಸರಿ, ಒಳ್ಳೆಯದು-ಕೆಟ್ಟದ್ದು, ನ್ಯಾಯ-ಅನ್ಯಾಯ, ಉದ್ಯೋಗ-ನಿರುದ್ಯೋಗ, ಬಡತನ-ಸಿರಿತನ, ನೀತಿ-ಅನೀತಿ, ಧರ್ಮ-ಅಧರ್ಮ, ಮಾನವೀಯತೆ-ಅಮಾನವೀಯತೆ, ಮುಂತಾದ ದ್ವಂದ್ವಾತ್ಮಕ ವಿಭಾಗಗಳ ನಡುವಿನ ಗೆರೆಗಳನ್ನು ಅಳಿಸಿಹಾಕುವಂಥ, ಇಲ್ಲವೆ ಮಸುಕುಗೊಳಿಸುವಂತೆ ಸಂಕೀರ್ಣಗೊಳಿಸಿದ ಧೂರ್ತ ವಾದಗಳನ್ನು ತರ್ಕಬದ್ಧವಾಗಿ ಮಂಡಿಸಿ ಜನರ ಯೋಚನಾಲಹರಿಯಲ್ಲೇ ಗೊಂದಲ ಹುಟ್ಟಿಸುವುದು.

ನ್ಯಾಯ, ನೀತಿ, ಧರ್ಮಗಳ ಈ ಬಗೆಯ ಧೂರ್ತ ನಿರ್ವಚನೆಯನ್ನು ಜನರಲ್ಲಿ, ಅದರಲ್ಲೂ ಯುವಜನತೆಯ ಚಿಂತನಾಕ್ರಮದಲ್ಲಿ ಆಳವಾಗಿ ಬೇರೂರಿಸುವ ಕಾರ್ಯದಲ್ಲಿ ಧೂರ್ತ ಕಾನೂನು ತಜ್ಞರು, ಹೃದಯಹೀನ ಮನೋವಿಜ್ಞಾನಿಗಳು, ಹಣಗಳಿಕೆಯಲ್ಲದೆ ಬೇರಾವ ಮೌಲ್ಯಗಳ ಪ್ರಾಥಮಿಕ ಪರಿಚಯವೂ ಇಲ್ಲದ ಅರ್ಥಶಾಸ್ತ್ರಜ್ಞರು, ಮನುಷ್ಯರೆಂದು ಕರೆಸಿಕೊಳ್ಳಲೂ ಅಯೋಗ್ಯರಾದ ರಾಜಕಾರಣಿಗಳು, ಎಳಸು ಪ್ರತಿಭೆ-ವಣಿಕ ಕಲಾಕೌಶಲಗಳ ಜಾಹಿರಾತು ಕಲಾವಿದರು, ಉದ್ಯಮಿಗಳ ಅಡಿಯಾಳಾದ ವಿಜ್ಞಾನಿಗಳು, ಜ್ಞಾನ-ಮಾಹಿತಿಗಳ ಬಿಕರಿಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡ ಶಿಕ್ಷಣತಜ್ಞರು ಮತ್ತು ಇವರೆಲ್ಲರ ಸೇವೆಯನ್ನು ಕೊಂಡುಕೊಂಡು ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳನ್ನೂ ವ್ಯಾಪಾರದ ಸರಕನ್ನಾಗಿಸಿಕೊಳ್ಳುವ ಉದ್ಯಮಿ-ವ್ಯಾಪಾರಿಗಳು ಮಹತ್ತರ ಪಾತ್ರ ವಹಿಸಿದ್ದಾರೆ.  ಇವರೆಲ್ಲರ ಸಕ್ರಿಯ ರಾಜಕಾರಣದಿಂದಾಗಿ ಪ್ರಜಾತಂತ್ರವೆಂದರೆ ಮಾರುಕಟ್ಟೆಯ ಹಿಡಿತ, ಸ್ವಾತಂತ್ರ್ಯವೆಂದರೆ ಆಯ್ಕೆ ಇಲ್ಲದ ಸ್ಥಿತಿ, ಯಾರನ್ನೂ ಏನನ್ನೂ ಕೇಳಲಾಗದ, ಸರ್ಕಾರಗಳು ಜನರಿಗೆ ಉತ್ತರದಾಯಿತ್ವವನ್ನು ಕೊಡದ, ಅನಾಥತೆ, ಅತಂತ್ರತೆ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಮಾನವೀಯ ಸಂಬಂಧಗಳೆಂದರೆ ಅವರವರ ಪಾಡು ಅವರಿಗೆ. ಅಭಿವೃದ್ಧಿಯೆಂದರೆ ಜಾಗತಿಕ ಸಾಲದಿಂದ ರಸ್ತೆ-ಮೇಲ್ಸೇತುವೆ ನಿರ್ಮಿಸಿ ಮೆಟ್ರೊ-ಬುಲೆಟ್ ರೈಲುಗಳನ್ನು ಓಡಿಸುವುದು, ಕೃಷಿಭೂಮಿಯನ್ನು ವಶಪಡಿಸಿಕೊಂಡು ಉದ್ಯಮಿಗಳಿಗೆ ಸ್ಮಾರ್ಟ್ ಸಿಟಿ ನಿರ್ಮಿಸಲು ಗುತ್ತಿಗೆ ಕೊಡುವುದು. ಆದಾಯವೆಂದರೆ ಬಡ್ಡಿ ಗಳಿಕೆ. ಸುಖಪಡುವುದೆಂದರೆ ಕೊಂಡುಕೊಳ್ಳವುದು. ನೆಮ್ಮದಿಯೆಂದರೆ ಭ್ರಮೆಗಳಲ್ಲಿ ಮೈ ಮರೆಯುವುದು.

ಹೀಗೆ ಪದಗಳು ಅವೇ ಇದ್ದರೂ ಅವುಗಳ ಅರ್ಥ ಮಾತ್ರ ತದ್ವಿರುದ್ಧವಾಗಿ ಅರ್ಥಾಂತರ ಆಗಿದೆ. ಕ್ರೆಡಿಟ್ ಕಾರ್ಡ್, ಸೆಲ್‍ಫೋನ್, ವಿಮೆ, ಲಾಟರಿ, ಇವೇ ಮೊದಲಾದ ಮಾರ್ಜಾಲ ಜಾಲಗಳ ಮೂಲಕ ಜನಸಾಮಾನ್ಯರ ಬೆವರ ಗಳಿಕೆಯ ಪುಡಿಗಾಸನ್ನು ಸದ್ದಿಲ್ಲದೆ ಬಸಿದುಕೊಂಡು ಕೋಟ್ಯಾಧಿಪತಿಗಳಾಗುವ ಭವ್ಯ ಮಹಲ್ಲುಗಳ ಜಂಟ್ಲ್‍ಮನ್‍ಗಳು. ಸರಕು-ಸೇವೆಗಳ ವಿನಿಮಯ-ವ್ಯಾಪಾರಗಳಲ್ಲಿ ಹೆಜ್ಜೆ ಹೆಜ್ಜೆಗೂ ಸಿಗುವ ದಲ್ಲಾಳಿಗಳ ಕುಟಿಲ ವ್ಯವಹಾರಗಳಿಂದ ಹಿಡಿದು, ಕುಳಿತ ಕಡೆಗಳಿಂದಲೇ ರೈತ-ಕಾರ್ಮಿಕರ ಶ್ರಮದ ಫಲವನ್ನು ಲಪಟಾಯಿಸಿ, ಬೆಳೆ ಬೀಜಗಳ ಸಂಪೂರ್ಣ ನಿಯಂತ್ರಣದ ಮೂಲಕ ಇಡೀ ಜಗತ್ತನ್ನೆ ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳಲು ಹೆಣಗುವ ಜಾಗತಿಕ ಹಗಲು ದರೋಡೆಕೋರರವರೆಗೆ ಈ ಅರ್ಥಾಂತರದ ರೂವಾರಿಗಳು ಮತ್ತು ಫಲಾನುಭವಿಗಳು ವ್ಯಾಪಿಸಿದ್ದಾರೆ. ಪಾರಂಪರಿಕ ಅಮಲುಕಾರಕವಾದ ಹೆಂಡದ ಜೊತೆಗೆ ಯುವಜನರನ್ನು ನಿಷ್ಕ್ರಿಯೆ ಮತ್ತು ಖಿನ್ನತೆಗಳಿಗೆ ದೂಡುವ ಸಾಮಾಜಿಕ ಜಾಲತಾಣಗಳು ಆಧುನಿಕ ಜನಜೀವನವನ್ನು ಪಲ್ಲಟಗೊಳಿಸಿವೆ. 

ಆದ್ದರಿಂದಲೇ, ಜಾಗತಿಕ ಬಂಡವಾಳ ಮತ್ತೊಮ್ಮೆ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನ್ಯಾಯ, ನೀತಿ, ಧರ್ಮ ಮತ್ತು ಮಾನವೀಯ ಸಂಬಂಧಗಳ ಮರು-ವ್ಯಾಖ್ಯಾನ ತುರ್ತಾಗಿ ಆಗಬೇಕಿದೆ. ಕಲ್ಪಿತ ವಾಸ್ತವಗಳಲ್ಲಿ ಮುಳುಗುತ್ತಿರುವ ಈ ವಿಶ್ವವನ್ನು ವಾಸ್ತವ ಸತ್ಯದ ನೆಲೆಗೆ ಮತ್ತೆ ತರಬೇಕಾಗಿದೆ. ಒಂದು ಕಡೆ ನಿರಂತರವಾಗಿ ಉಂಟಾಗುತ್ತಿರುವ ಪ್ರಾಕೃತಿಕ ಅಸಮತೋಲನ. ಮತ್ತೊಂದು ಕಡೆ ಆರ್ಥಿಕ ಬಿಕ್ಕಟ್ಟುಗಳಿಂದಾಗಿ ದಿನೇ ದಿನೇ ಹೆಚ್ಚುತ್ತಿರುವ ಅಸಹನೆ, ಹತಾಶೆ, ಅಸಹಾಯಕತೆ, ಆತ್ಮಹತ್ಯೆ, ಕ್ರೌರ್ಯ, ಹಿಂಸೆಗಳು ಮತ್ತು ಕಳ್ಳತನ, ಹಾದರ, ಕೊಲೆ ಸುಲಿಗೆ ದರೋಡೆಗಳಂಥ ಬಡತನ ಮೂಲದ ಸಾಮಾಜಿಕ ವಿಷಮತೆಗಳು. ಇವುಗಳಿಂದಲೂ ಲಾಭ ಪಡೆದುಕೊಳ್ಳಲು ವ್ಯಾಪಾರಿಗಳು ಅಧಿಕಾರಸ್ಥರ ಸಹಯೋಗದಲ್ಲಿ ಬೀದಿ ಬೀದಿಗೂ, ಮನೆ ಮನೆಗೂ ಅಳವಡಿಸುತ್ತಿರುವ ವಿಚಕ್ಷಣಾ ಕ್ಯಾಮರಾಗಳು. ಕುಸಿದ ನೈತಿಕತೆಯಿಂದಾಗಿ ಸಾಮಾನ್ಯ ಜನರಲ್ಲಿ ಹೆಚ್ಚುತ್ತಿರುವ ಹತಾಶೆ-ದೈವಭಕ್ತಿಗಳನ್ನು ಬಂಡವಾಳ ಮಾಡಿಕೊಂಡು ಜನರ ಮಧ್ಯೆ ದ್ವೇಷ-ಮೌಢ್ಯಗಳನ್ನು ಬಿತ್ತಿ ತಮ್ಮ ಬೇಳೆ ಬೇಯಿಸಿ ಕೊಳ್ಳಬಯಸುವ, ಬದುಕಿ ಬಾಳುವ ಉತ್ಸಾಹದ ಬದಲು ಕೊಲ್ಲುವ ರಣೋತ್ಸಾಹಗಳಲ್ಲಿ ಸಂತೋಷ ಕಾಣುವ ಮಾನಸಿಕವಾಗಿ ರೋಗಿಷ್ಟರಾದ ರಾಜಕಾರಣಿಗಳು. ಇವೆಲ್ಲವುಗಳ ಮಧ್ಯೆಯೇ ನಿಜವಾದ ಸ್ವಾತಂತ್ರ್ಯ, ಪ್ರೀತಿ-ಸಮಾನತೆ-ಸೋದರತೆಗಳ ಸಂಬಂಧ ಜಾಲವನ್ನು ನಿರ್ಮಿಸಿಕೊಳ್ಳಬೇಕಿದೆ. ಶ್ರಮವನ್ನು ಗೌರವಿಸಿ, ಮೌಲ್ಯ ವೃದ್ಧಿಸಿದ ಆಹಾರ-ಸಂಪತ್ತುಗಳ ಮರುಹಂಚಿಕೆಯಲ್ಲಿ ನಿಜವಾದ ಅರ್ಥದ ಮನುಷ್ಯ ಸಂಬಂಧಗಳನ್ನು ಏರ್ಪಡಿಸಿಕೊಳ್ಳಬೇಕಾಗಿದೆ. ಹೊಸ ಸಮಾಜದ ನಿರ್ಮಾಣ ಆಗಬೇಕಿದೆ.

ಪ್ರೊ. ವಿ.ಎನ್. ಲಕ್ಷ್ಮಿನಾರಾಯಣ