ಮನೆಗಳಿಗೆ ಬೀಸುತ್ತಿದೆ ಜಿಂದಾಲ್ ಕಂಪನಿ ಧೂಳು

Tuesday, 18 October 2016

ಇದು ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಸಮೀಪದ ಸುಲ್ತಾನ್ ಪುರ ಜನರ ವ್ಯಥೆ. ಸುಲ್ತಾನ್ ಪುರ ಜಿಂದಾಲ್ ರಿಪಬ್ಲಿಕ್ ವ್ಯಾಪ್ತಿಗೆ ಬರುವ ಒಂದು ಪುಟ್ಟ ಗ್ರಾಮ. ಈ ಗ್ರಾಮವನ್ನು ಮೂರು ಕಡೆಯಿಂದಲೂ ಜಿಂದಾಲ್ ಕೈಗಾರಿಕಾ ಘಟಕಗಳು ಆವರಿಸಿವೆ. ಗ್ರಾಮಕ್ಕೆ ತಾಗಿಕೊಂಡೆ ಕೋಲ್ ಘಟಕ ಕಾರ್ಯಾಚರಿಸುತ್ತಿದ್ದು, ಕಂಪೆನಿ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿ ನಿಯಮಗಳನ್ನು ಅನುಸರಿಸದಿರುವುದರಿಂದ ಸುಲ್ತಾನ್ ಪುರದ ಜನರ ಬದುಕು ಅಕ್ಷರಶಃ ನರಕ ಸದೃಷವಾಗಿದೆ. ಕಂಪೆನಿಯ ಹಾರುಬೂದಿ ನೇರವಾಗಿ ಹಾರಿಬಂದು ಸುಲ್ತಾನ್ ಪುರದ ಮನೆಯ ಕಿಟಕಿ ಬಾಗಿಲುಗಳ ಮೂಲಕ ಅಡುಗೆ ಮನೆ, ಊರಿನ ಗಾಳಿ, ನೀರಿನ ಮೂಲ ಸೇರುತ್ತಿದೆ. ಇಲ್ಲಿನ ಪುಟ್ಟ ಮಕ್ಕಳು ಇದೇ ಗಾಳಿ, ನೀರು ಸೇವಿಸುತ್ತಾರೆ. ಮನೆಗೆ ನುಗ್ಗಿ ಬರುವ ಹಾರುಬೂದಿಯನ್ನು ಸ್ಚಚ್ಚಗೊಳಿಸಲು ಹೆಣಗುತ್ತಾರೆ. ಈ ಮಾಲಿನ್ಯದಿಂದ ಹಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗ ಇಷ್ಟು ಸಾಲದೆಂಬಂತೆ ಊರಿನ ಇನ್ನೊಂದು ದಿಕ್ಕಿನಲ್ಲಿ ಅಪಾಯಕಾರಿ ಡಾಂಬರು ಘಟಕ ಉತ್ಪಾದನೆಗೆ ಸಜ್ಜಾಗಿ ನಿಂತಿದೆ.

ಇಂತಹ ಘೋರ ಅನ್ಯಾಯಗಳನ್ನು ಇಲ್ಲಿ ಯಾರು ಪ್ರಶ್ನಿಸುವಂತಿಲ್ಲ. ಧ್ವನಿ ಎತ್ತಿದರೆ ಜಿಂದಾಲ್ ರಿಪಬ್ಲಿಕ್ ನ ವ್ಯಾಪ್ತಿಯಲ್ಲಿ ಬದುಕು ನಡೆಸುವುದು ದುಸ್ತರ. ಈ ರೀತಿಯ ಗುಲಾಮಿ ಬದುಕು ಕಳೆದ ಎರಡು ದಶಕಗಳಿಂದ ಯಾವುದೇ ಪ್ರಶ್ನೆ, ಪ್ರತಿಭಟನೆಗಳಿಲ್ಲದೆ ನಡೆದು ಬಂದಿದೆ. ಈ ಬಾರಿ ಮಾತ್ರ ಪ್ರತಿರೋಧದ ಸಣ್ಣ ಅಲೆ ಗೋಚರಿಸತೊಡಗಿದೆ.

ಕಮ್ಯುನಿಸ್ಟರ ನೇತೃತ್ವದಲ್ಲಿ ಅಕ್ರಮ ಡಾಂಬರು ಕಾರ್ಖಾನೆಯ ವಿರುದ್ದ ರೂಪುಗೊಳ್ಳುತ್ತಿರುವ ಹೋರಾಟ ಇಂತಹ ಅನ್ಯಾಯ, ಅಕ್ರಮ, ದೌರ್ಜನ್ಯಗಳನ್ನು ಹೊರ ಜಗತ್ತಿಗೆ ಪರಿಚಯಿಸತೊಡಗಿದೆ. ಈ ಬಾರಿ ಹೋರಾಟ ಗೆಲ್ಲಬೇಕು. ಜಿಂದಾಲ್ ರಿಪಬ್ಲಿಕ್ ಕೊನೆಗೊಳ್ಳಬೇಕು. ಇಲ್ಲದಿದ್ದರೆ ಇಲ್ಲಿನ ಪುಟಾಣಿ ಮಕ್ಕಳ ಶ್ವಾಸಕೋಶ, ಹೃದಯ ಜಿಂದಾಲ್ ಕಂಪೆನಿಯ ಹಾರುಬೂದಿಯಿಂದ ಛಿದ್ರಗೊಂಡೀತು. ನಾಗರಿಕ ಸಮಾಜ ಇಂತಹ ಅನ್ಯಾಯಗಳನ್ನು ಸಹಿಸಬಾರದು. ಎಂದು ನಾಗರಿಕರು ಮತ್ತೊಮ್ಮೆ ಹೋರಾಟದ ಸಾಗರಕ್ಕೆ ದುಮುಕ್ಕಿದ್ದಾರೆ.