ಸಿಪಿಐ(ಎಂ) ರಾಜ್ಯ ಕಛೇರಿ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ

Monday, 17 October 2016

ಅಕ್ಟೋಬರ್, 15, 2016ರಂದು ಸುಮಾರು 150 ಜನ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐ(ಎಂ)ನ ರಾಜ್ಯ ಕೇಂದ್ರದ ಕಛೇರಿ ಇ.ಎಂ.ಎಸ್.ಭವನದ ಮೇಲೆ ದಾಳಿ ಮಾಡಿ ದಾಂದಲೆ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಸಿಪಿಐ(ಎಂ) ಕಾರ್ಯಕರ್ತರ ದಾಳಿಯನ್ನು ಪ್ರತಿಭಟಿಸಲು ಈ ದಾಳಿ ಎಂಬ ಬಿಜೆಪಿ ಕಾರ್ಯಕರ್ತರ ಹೇಳಿಕೆ ಸತ್ಯಕ್ಕೆ ದೂರವಾದುದ್ದು. ನಿಜವಾಗಿಯು ಕೇರಳ ಮತ್ತು ಇತರೆಡೆ ಹಲವಾರು ದಶಕಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಸಿಪಿಐ(ಎಂ) ಕಾರ್ಯಕರ್ತರ ಮೇಲೆ ಸತತವಾಗಿ ದಾಳಿ ಮಾಡುತ್ತಾ ಬಂದಿದ್ದಾರೆ. ಇದನ್ನು ಮುಚ್ಚಿ ಕೊಳ್ಳಲು ಇಂತಹ ಹುಸಿ ಪ್ರತಿಭಟನೆ ಮತ್ತು ದಾಳಿ ಅವರ ಒಂದು ತಂತ್ರವಾಗಿದೆ.

ಬಿಜೆಪಿ ಕಾರ್ಯಕರ್ತರ ಈ ದಾಳಿ ಮತ್ತು ಸಿಪಿಐ(ಎಂ) ವಿರುದ್ಧ ಹಿಂಸಾಚಾರದ ಅಪಪ್ರಚಾರವನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಖಂಡಿಸುತ್ತದೆ. ಈ ಅಪಪ್ರಚಾರವನ್ನು ನಂಬಬಾರದೆಂದು ಕರ್ನಾಟಕದ ಜನತೆಗೆ ಮನವಿ ಮಾಡಿದೆ.

ಸಂಘಪರಿವಾರದ ಧಾಳಿ ಯತ್ನವನ್ನು ಖಂಡಿಸಿ ಇಂದು(17.10.2016) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. 60ಕ್ಕೂ ಹೆಚ್ಚಿನ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮೊದಲಿಗೆ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಪ್ರಕಾಶ್‍ರವರು ಮಾತನಾಡಿ ``ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳು ಅಭೂತಪೂರ್ವ ಯಶಸ್ಸು ಕಂಡಿದ್ದು, ರಾಜ್ಯದ ಮುಖ್ಯಮಂತ್ರಿಗಳಾಗಿ ಸಿಪಿಐ(ಎಂ)ನ ಪಿಣರಾಯ್ ವಿಜಯನ್‍ರವರು ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಸಿಪಿಐ(ಎಂ) ಪಕ್ಷವು ದೇಶದ ಉದ್ದಗಲಕ್ಕೂ ಜನತೆಯ ಪರವಾಗಿ, ಕಾರ್ಮಿಕರ ಪರವಾಗಿ, ರೈತರ ಪರವಾಗಿ, ಅವರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾದ ಹೋರಾಟಗಳನ್ನು ನಡೆಸುತ್ತಿದ್ದು ಇದನ್ನು ಸಹಿಸದ ಆರ್.ಎಸ್.ಎಸ್. / ಬಿಜೆಪಿ ಒಳಗೊಂಡ ಸಂಘಪರಿವಾರವು ಸಿಪಿಐ(ಎಂ) ಕಾರ್ಯಕರ್ತರ ಮೇಲೆ ಧಾಳಿಗೆ ಮುಂದಾಗಿದ್ದಾರೆ.

ಅದೇ ರೀತಿಯಲ್ಲಿ ಪ್ರಸ್ತುತ ತ್ರಿಪುರ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್‍ರವರ ಮನೆ ಮೇಲೆ ಆರ್.ಎಸ್.ಎಸ್. ಗೂಂಡಾಗಳು ಧಾಳಿ ನಡೆಸಿ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೇರಳದಲ್ಲಿ ಸುಮಾರು 35 ಪಕ್ಷದ ಕಛೇರಿಗಳ ಮೇಲೆ ಧಾಳಿ ನಡೆದಿದೆ. ರಾಜ್ಯದಲ್ಲಿ ಎಲ್‍ಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ 7 ಜನ ಸಿಪಿಐ(ಎಂ) ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ.

ಹಣದ ಆಮೀಷದ ಮೂಲಕ ಜನಪ್ರತಿನಿಧಿಗಳನ್ನು ಕೊಂಡುಕೊಂಡು ರಾಜ್ಯಸಭಾ ಸದಸ್ಯರಾಗಿರುವ ಬಿಪಿಎಲ್ ಕಂಪನಿ ಮಾಲೀಕ ರಾಜೀವ್ ಚಂದ್ರಶೇಖರ್‍ರವರು ಬಿಜೆಪಿ ಪಕ್ಷದ ಮುಖಂಡರಾಗಿ ನೆನ್ನೆ ನಡೆದ ಒಂದ ವಿಚಾರ ಸಂಕಿರಣದಲ್ಲಿ ಕಮ್ಯೂನಿಸ್ಟ್ ಪಕ್ಷದ ಆರೋಪ ಹೊರಿಸಿ, ಸಿಪಿಐ(ಎಂ) ಪಕ್ಷವನ್ನು ನಿರ್ನಾಮ ಮಾಡಬೇಕೆಂದು ಹೇಳಿದ್ದಾರೆ. 

ಬಿಜೆಪಿ ಪಕ್ಷದಲ್ಲಿರುವವರು ಬಹುತೇಕ ಜನ ಬಂಡವಾಳದಾರರು, ಶ್ರೀಮಂತರು, ಕೈಗಾರಿಕೋದ್ಯಮಿಗಳು ಇವರ ರಕ್ಷಣೆಗಾಗಿ ಬಿಜೆಪಿ ಪಕ್ಷವು ನಿಂತಿದೆ. ಜನತೆಯ ಪರವಾಗಿ ಕೆಲಸ ಮಾಡುವ ಸಿಪಿಐ(ಎಂ) ಪಕ್ಷದ ವಿರುದ್ಧ ಧಾಳಿಗೆ ಮುಂದಾಗಿದ್ದಾರೆ.

ದೇಶದಲ್ಲಿ ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರವಹಿಸಿದ ನಂತರದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಜನತೆಯ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಕೃಷಿಯೂ ದೇಶದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಕಪ್ಪುಹಣ ಮರಳಿ ತಂದು ಪ್ರತಿಯೊಬ್ಬರ ಖಾತೆ 15 ಲಕ್ಷ ನೀಡುವುದಾಗಿ ಹಲವು ಭರವಸೆಗಳೊಂದಿಗೆ ಆಶ್ವಾಸನೆ ನೀಡಿದ ಬಿಜೆಪಿ ಪ್ರಧಾನಿಮಂತ್ರಿ ನರೇಂದ್ರಮೋದಿರವರು ಅಧಿಕಾರ ವಹಿಸಿಕೊಂಡ ನಂತರದಲ್ಲಿ ದೊಡ್ಡ ದೊಡ್ಡ ಶ್ರೀಮಂತರ ಪರ, ಬಂಡವಾಳದಾರರ ಪರ, ವಿದೇಶಿ ಕಂಪನಿಗಳು ಮತ್ತು ಅಂಬಾನಿ-ಅದಾನಿ ಅಂತಹ ದೊಡ್ಡ ದೊಡ್ಡ ಶ್ರೀಮಂತರಿಗೆ ಅನುಕೂಲ ಮಾಡಿಕೊಡುವಂತೆ ದೇಶವನ್ನು ಆಳುತ್ತಿದ್ದಾರೆ.

ಕೇಂದ್ರದ ವಿರುದ್ಧ ಜನತೆಯ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಯಲ್ಲಿಯೇ ಕಳೆದ ಸೆಪ್ಟಂಬರ್ 2ರಂದು ನಡೆದ ಮುಷ್ಕರದಲ್ಲಿ ಸುಮಾರು 18 ಕೋಟಿ ಜನರು ಭಾಗವಹಿಸಿದ್ದರು. ಕೇಂದ್ರದ ಜನ ವಿರೋಧಿ ನೀತಿಯ ವಿರುದ್ಧ ಜನತೆಯಲ್ಲಿ ಪ್ರತಿರೋಧಗಳು ಹೆಚ್ಚಾಗುತ್ತಿದೆ. ಕಾಂಗ್ರೆಸ್ ಪಕ್ಷ ಜನತೆಯ ಪರವಾಗಿ ಹೋರಾಟಗಳನ್ನು ಮಾಡುವುದಿಲ್ಲ. ಸಿಪಿಐ(ಎಂ) ನೇತೃತ್ವದ ಎಡಪಕ್ಷಗಳು ಮಾತ್ರ ಜನಪರವಾಗಿ ನಿರಂತರವಾಗಿ ಚಳುವಳಿ ನಡೆಸುತ್ತಾ ಬಂದಿದೆ.

ಒಂದು ಕಡೆ ರೈತರ ಆತ್ಮಹತ್ಯೆಗಳು, ಇನ್ನೊಂದು ಕರೆ ಜಾತಿ, ಧರ್ಮದ ಹೆಸರಿನಲ್ಲಿ ಧಾಳಿ ದಬ್ಬಾಳಿಕೆಗಳು, ಕೋಮುಗಲಭೆಗಳು, ಗೋವಿನ ಹೆಸರು ಹೇಳಿಕೊಂಡು ದಲಿತರ ಮೇಲೆ ಹಲ್ಲೆಗಳು ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸಲಾಗುತ್ತಿದೆ. ಜನತೆಯಿಂದ ಎದ್ದು ಬರುತ್ತಿರುವ ಪ್ರತಿರೋಧವನ್ನು ಹಿಮ್ಮೆಟ್ಟಿಸಲು ಧಾಳಿ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ. ಇಂತಹ ಧಾಳಿಗಳಿಗೆ ಸಿಪಿಐ(ಎಂ) ಎಂದಿಗೂ ಹೆದರುವುದಿಲ್ಲ. ಜನಪರ ಹೋರಾಟ ಮೂಲಕ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.

ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಹೆಚ್.ಎನ್.ಗೋಪಾಲಗೌಡರವರು ಕೇಂದ್ರವು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಆ ಮೂಲಕ ಮಾಲೀಕರ ಪರವಾಗಿ ಕೆಲಸ ಮಾಡುತ್ತಿದ್ದು, ಅದನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ಸಂಘಪರಿವಾರದವರು ಮುಂದಾಗುತ್ತಿದ್ದಾರೆ. ಜನತೆಯಲ್ಲಿ ಕಾರ್ಮಿಕರಲ್ಲಿ, ಭಯದ ವಾತಾವರಣ ಸೃಷ್ಠಿ ಮಾಡುತ್ತಿದೆ, ಕಾರ್ಮಿಕರು ಎಂದಿಗೂ ಇದಕ್ಕೆ ಹೆದರುವುದಿಲ್ಲ. ಬದಲಾಗಿ ಸರ್ಕಾರದ ನೀತಿಗಳ ವಿರುದ್ಧ ಮತ್ತಷ್ಟು ದೊಡ್ಡ ಹೋರಾಟ ನಡೆಸುವ ಮೂಲಕ ನಿಮಗೆ ಎಚ್ಚರಿಕೆ ನೀಡುತ್ತೇವೆ ಎಂದು ಕಟುವಾಗಿ ಟೀಕಿಸಿದರು.

ಸಿಪಿಐ(ಎಂ) ಮುಖಂಡರಾದ ಆರ್.ಶ್ರೀನಿವಾಸ್‍ರವರು ಮಾತನಾಡಿ ``ಸಿದ್ಧಾಂತದ ಮೂಲಕ ಸಂಘಪರಿವಾರದವರಿಗೆ ಎದುರಿಸುವ ಧೈರ್ಯ ಇಲ್ಲ, ಸೈದ್ಧಾಂತಿಕತೆ ತಳಹದಿ ಗೊತ್ತಿಲ್ಲದ ಜನ ದೇಶದ ಜನತೆಗೆ ಮೌಢ್ಯವನ್ನು ತುಂಬುತ್ತಿದ್ದಾರೆ. ನಮ್ಮ ಮೇಲೆಯೇ ಧಾಳಿ ಎದುರಾದಾಗಲೂ ನಾವು ಪ್ರತಿಧಾಳಿಯಾಗಿ ಆರ್.ಎಸ್.ಎಸ್. ಕಛೇರಿ ಮುಂಭಾಗ ಹೋಗಲಿಲ್ಲ, ನಮ್ಮ ಧಾಳಿ ಇರುವುದು ವ್ಯಕ್ತಿಗಳ ವಿರುದ್ಧವಲ್ಲ, ಸಿದ್ಧಾಂತ, ವಿಷಾಧಾರಿತವಾಗಿ ನಾವು ನಮ್ಮ ಧಾಳಿಯನ್ನು ಮುಂದೊಯ್ಯುತ್ತೇವೆ. ಸಿಪಿಐ(ಎಂ) ಪಕ್ಷವೂ ಪ್ರತಿಕಾರಕ್ಕೆ ಮುಂದಾಗುವುದಿಲ್ಲ. ಜನತೆಯ ಮಧ್ಯೆ ನಮ್ಮ ವಿಚಾರಗಳನ್ನು ತೆಗೆದುಕೊಂಡು ಹೋಗುತ್ತೇವೆ. ಮಾಲೀಕರಿಗೆ ಜನತೆ ಪರವಾಗಿ ಕೆಲಸ ಮಾಡುವ ಕಮ್ಯೂನಿಸ್ಟರನ್ನು ಕಂಡರೆ ಆಗುವುದಿಲ್ಲ ಎಂದು ತಿಳಿಸಿದರು.

ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಉಮೇಶ್‍ರವರು ಮಾತನಾಡಿ ``ಮಹಾಲಕ್ಷ್ಮಿ ಲೇಔಟ್‍ನಲ್ಲಿರುವ ಇಎಂಎಸ್ ಭವನ ಎಂದರೆ ಅದು ಬರಿ ಕಟ್ಟಡವಲ್ಲ, ಅದೊಂದು ಸ್ಮಾರಕ, ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಮೊಟ್ಟಮೊದಲ ಕಮ್ಯೂನಿಸ್ಟ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಇ.ಎಂ.ಎಸ್. ನಂಬೂದರಿಪಾಡ್‍ರವರು ಸ್ಮಾರಕ ಅದು, ಸಂಘಪರಿವಾರವು ಎಲ್ಲೆಡೆ ಗೋಸುಂಬೆತನವನ್ನು ಪ್ರದರ್ಶಿಸುತ್ತದೆ. ಕೇರಳದಲ್ಲಿ ಒಂದು ರೀತಿ, ಕರ್ನಾಟಕದಲ್ಲಿ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡು, ಗೋವಾದಂತೆ ದೇಶದ ಇತರೆ ಭಾಗದಲ್ಲಿ ಒಂದೊಂದು ರೀತಿಯ ಅನುಕೂಲ ಸಿಂಧುವಾಗಿ ಮಾತನಾಡಿ ಜನತೆ ದಿಕ್ಕು ತಪ್ಪಿಸುತ್ತಿದ್ದಾರೆ.

ಇ.ಎಂಎಸ್.ರವರು ದೊಡ್ಡ ಜಮೀನ್ದಾರರಾಗಿದ್ದು ಆ ಜಮೀನೆಲ್ಲಾ ಬಡವರಿಗೆ ಹಂಚಿ ಜನತೆ ಪರವಾಗಿ ಕೆಲಸ ಮಾಡಿದವರು. ಆದರೆ ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳಲ್ಲಿ ಜೈಲಿಗೆ ಹೋದವರ ಪಟ್ಟಿ ಅತ್ಯಂತ ದೊಡ್ಡದಾಗಿಯೇ ಇದೆ. ಭ್ರಷ್ಟಾಚಾರದಲ್ಲೂ ದೊಡ್ಡ ಪಟ್ಟಿ ಬಿಜೆಪಿಯಲ್ಲಿ ಸಿಗುತ್ತದೆ. ಪೆಟ್ರೋಲ್, ಡೀಸೆಲ್ ಬೆಲೆಗಳು ನಿರಂತರವಾಗಿ ಏರಿಸುವ ಮೂಲಕ ಜನತೆ ಮತ್ತಷ್ಟು ಹೊರೆ ಹಾಕುತ್ತಿದೆ ಕೇಂದ್ರ ಬಿಜೆಪಿ ಸರ್ಕಾರ. ಕಾವೇರಿ ವಿಚಾರದಲ್ಲೂ ಮೌನವಹಿಸಿದ್ದರು. ಜನತೆ ದಿಕ್ಕು ತಪ್ಪಿಸುವ ಕೆಲಸಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಮುಂದಾಗಿದೆ. ಸಿಪಿಐ(ಎಂ) ಮೇಲೆ ಆರೋಪ ಮಾಡುವ ಮೂಲಕ ಧಾಳಿಗೆ ಮುಂದಾಗಿದ್ದಾರೆ. ಸೈದ್ಧಾಂತಿಕವಾಗಿ ಅವರು ಎದುರಿಸಲು ತಯಾರಿಲ್ಲ, ಆದರ್ಶ ಸಿದ್ಧಾಂತಗಳನ್ನು ನಾಶ ಪಡಿಸಲು ಸಂಘಪರಿವಾರಕ್ಕೆ ಎಂದಿಗೂ ಸಾಧ್ಯವಿಲ್ಲ, ಧಾಳಿಗಳಿಗೆ ಮುಂದಾದರೆ ನಾವು ಎಂದಿಗೂ ಜಗ್ಗುವುದಿಲ್ಲ ಎಂದು ತಿಳಿಸಿದರು.

ಪ್ರತಿಭಟನೆಯ ನಿರೂಪಣೆಯನ್ನು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋಪಾಲಕೃಷ್ಣರವರು ವಹಿಸಿದ್ದರು. ಮುಖಂಡರಾದ ಟಿ.ಲೀಲಾವತಿ, ರುದ್ರಮೂರ್ತಿ, ಕೆ.ವೀರಮಣಿ, ಎನ್.ನಾಗರಾಜ್, ಮಂಜುನಾಥ್, ನಂಜೇಗೌಡ, ನವೀನ್‍ಶೆಣೈ, ರಮೇಶ್, ವಿ.ಕೋದಂಡರಾಮ್, ಬಸಮ್ಮ, ಲಲಿತಾ ಶೆಣೈ, ಎಸ್.ವೆಂಕಟೇಶ್, ಮತ್ತಿತರ ಮುಖಂಡರು ಭಾಗವಹಿಸಿದ್ದರು.