‘ದ್ರೌಪದಿ’ ಮತ್ತು ಎ.ಬಿ.ವಿ.ಪಿ. ‘ದೇಶಭಕ್ತಿ’

ಸಂಪುಟ: 
10
ಸಂಚಿಕೆ: 
42
date: 
Sunday, 9 October 2016
Image: 

ನಮ್ಮ ಸರಕಾರಗಳು ಸೇನೆ ಹಾಗೂ ಪೋಲೀಸರನ್ನು ಜನರ ವಿರುದ್ಧ, ಅವರ ಪ್ರತಿಭಟನೆಗಳನ್ನು ಹತ್ತಿಕ್ಕಲು ದುರ್ಬಳಕೆ ಮಾಡಿಕೊಳ್ಳುತ್ತಿವೆ.  ಅಂಥ ಸಂದರ್ಭದಲ್ಲಿ ಜನರು ಪ್ರಶ್ನೆ ಮಾಡುವುದು ಸೇನೆಯನ್ನಲ್ಲ, ಸೇನೆಯನ್ನು ಪ್ರಜಾಪ್ರಭುತ್ವದ ವಿರುದ್ಧ ಬಳಸಿಕೊಳ್ಳುವ ಸರಕಾರಗಳನ್ನು. ಹೀಗಾಗಿ ಈ ಪ್ರಶ್ನೆಗಳನ್ನು ಟೀಕೆಗಳನ್ನು ಮಾಡುವವರನ್ನು ಸೇನೆಯ ಅವಮಾನ ಮಾಡುವ ದೇಶದ್ರೋಹಿಗಳೆಂದು ಬಿಂಬಿಸುವವರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರದ ಸರಕಾರಗಳ ಬೆಂಬಲಿಗರಾಗಿರುತ್ತಾರೆ. ಅವರಿಗೆ ಮಹಾಶ್ವೇತಾದೇವಿಯಂಥ ಬರಹಗಾರರು ಅಪಾಯಕಾರಿಯಾಗಿ ಕಾಣುತ್ತಾರೆ.

ಇತ್ತೀಚೆಗೆ ಅಸಹಿಷ್ಣುತೆಯ ಘಟನೆಯೊಂದು ಮತ್ತೊಮ್ಮೆ ವಿಶ್ವವಿದ್ಯಾನಿಲಯವೊಂದರಲ್ಲಿ ನಡೆದಿದೆ.  ಕೇಂದ್ರೀಯ ವಿಶ್ವವಿದ್ಯಾನಿಲಯವೊಂದರ ಇಂಗ್ಲಿಷ್ ವಿಭಾಗವು ಇತ್ತೀಚೆಗೆ ನಮ್ಮನ್ನು ಅಗಲಿದ ಶ್ರೇಷ್ಠ ಲೇಖಕಿ ಮಹಾಶ್ವೇತಾದೇವಿಯವರ ಪ್ರಸಿದ್ಧ ಕತೆ ದೋಪ್ದಿ (ದ್ರೌಪದಿ) ಯನ್ನು ಆಧರಿಸಿದ ನಾಟಕವೊಂದನ್ನು ಏರ್ಪಡಿಸಿತ್ತು. ಜಗತ್ತಿನ ಮಹಾನ್ ಲೇಖಕಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗುವ ಮಹಾಶ್ವೇತಾದೇವಿಯವರ ಈ ಕತೆ ದೇಶ ವಿದೇಶಗಳಲ್ಲಿ ಬಹು ಚರ್ಚಿತವಾದ ಕತೆಯಾಗಿದೆ.  ಕತೆಯ ತಿರುಳು ಹೀಗಿದೆ.  ದೋಪ್ದಿ ಎನ್ನುವವಳು ಬುಡಕಟ್ಟು ಜನಾಂಗಕ್ಕೆ ಸೇರಿದ ಒಬ್ಬಳು ಮಹಿಳೆ.  ಅವಳು ಹಾಗೂ ಅವರ ಸಂಗಾತಿ ದುಲ್ನಾ ಇಬ್ಬರೂ ಕ್ರೂರಿಗಳಾದ ಜಮೀನ್ದಾರರು ಹಾಗೂ ವ್ಯಾಪಾರಿಗಳ ವಿರುದ್ಧ ಬಂಡಾಯಕ್ಕೆ ಬೆಂಬಲವಾಗಿರುವವರು.  ಅವರ ಬಗ್ಗೆ ಮಾಹಿತಿಯನ್ನು ಕೊಟ್ಟು ಕಾಡಿನಲ್ಲಿ ಮರೆಯಾಗಿಹೋಗುವರು. ತೀವ್ರ ಬರಗಾಲದ ಕಾಲದಲ್ಲಿ ಊರಿನ ಬಾವಿ ಹಾಗೂ ಕೊಳವೆಬಾವಿಗಳನ್ನು ಜನರು ಉಪಯೋಗಿಸದಂತೆ ಮಾಡಿರುವ ಜಮೀನ್ದಾರನ ಕೊಲೆಗೆ ಇವರು ಕಾರಣವೆಂದು ನಂಬಿದ ಸೈನ್ಯವು ಇವರನ್ನು ಮುಗಿಸಲು ಒಂದು ಆಪರೇಶನ್ ಶುರುಮಾಡುತ್ತದೆ.  ಅದರಲ್ಲಿ ದುಲ್ನಾ ಬಲಿಯಾಗುತ್ತಾನೆ.  ಇನ್ನಾರೋ ಮೋಸ ಮಾಡಿದ್ದರಿಂದ ದೋಪ್ದಿ ಸೆರೆಸಿಕ್ಕುತ್ತಾಳೆ.  ಇಡೀ ರಾತ್ರಿ ಆಪರೇಶನ್ ಅಧಿಕಾರಿಯಾಗಿದ್ದ ಸೇನಾನಾಯಕನ ಸೂಚನೆಯ ಮೇರೆಗೆ ಅವಳ ಮೇಲೆ ಅಮಾನುಷವಾದ ಬಲಾತ್ಕಾರ ನಡೆಯುತ್ತದೆ.  ಅವಳ ಮೈಯೆಲ್ಲಾ ರಕ್ತಸಿಕ್ತವಾಗುತ್ತದೆ.  ಪೂರ್ಣ ಬೆತ್ತಲೆಯಾಗಿರುವ ದೋಪ್ದಿ ಹಾಗೆಯೇ ಸೇನಾನಾಯಕನ ಎದುರಿಗೆ ಬಂದು ನಿಂತು “ನನ್ನನ್ನು ಬೆತ್ತಲು ಮಾಡಬಹುದು.  ಮತ್ತೆ ಬಟ್ಟೆ ತೊಡಿಸಿ ನೋಡೋಣ. ಲೋ ನೀನೂ ಒಬ್ಬ ಗಂಡಸೇನೋ” ಎಂದು ಕೂಗುತ್ತಾಳೆ.

ಇದೊಂದು ಪ್ರಬಲವಾದ ಕತೆ, ಬುಡಕಟ್ಟು ಜನಾಂಗದ ಬಂಡಾಯಗಳನ್ನು ಸರಕಾರ ಪೋಲೀಸರು ಹಾಗೂ ಸೇನೆಗಳು ಹೇಗೆ ಬಗ್ಗು ಬಡಿಯುತ್ತ ಬಂದಿವೆಯೆನ್ನುವುದು ಮಹಾಶ್ವೇತಾದೇವಿಯವರ ಬರಹದ ಒಂದು ವಸ್ತುವಾಗಿದೆ.  ತಮ್ಮ ಬರಹ ಹಾಗೂ ಬದುಕನ್ನು ಸಂಪೂರ್ಣವಾಗಿ ಬುಡಕಟ್ಟು ಜನರಿಗಾಗಿ ಅವರು ಮುಡುಪಾಗಿ ಇಟ್ಟಿದ್ದರು. ಒಂದು ಉದಾಹರಣೆಯನ್ನು ಪ್ರಸಿದ್ಧ ಭಾಷಾತಜ್ಞ ಗಣೇಶ್ ದೇವಿಯವರು ನೆನಪು ಮಾಡಿಕೊಡುತ್ತಾರೆ. ಬುಡಕಟ್ಟು ಜನಾಂಗದವರಿಗೆ ಶೇಕಡಾ 80 ರಿಂದ 120 ರಷ್ಟು ಬಡ್ಡಿಯ ಮೇಲೆ ಸಾಲವನ್ನು ಕೊಡುತ್ತಿದ್ದ ಸಾಹುಕಾರರ ಮೇಲೆ ಕಡಿವಾಣ ಹಾಕಿ ಎಂದು ಕೋರಿ ಅವರಿಬ್ಬರೂ ಒಂದು ರಾಜ್ಯದ ಮುಖ್ಯಮಂತ್ರಿ ಹಾಗೂ ರಾಷ್ಟ್ರಪತಿಯವರಿಗೆ ಅಹವಾಲು ಸಲ್ಲಿಸಿದ್ದರು. ಆದರೆ ಏನೂ ಆಗಲಿಲ್ಲ.

ಇನ್ನು ಆ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಏನಾಯಿತು ನೋಡೋಣ.  ಪತ್ರಿಕೆಗಳ ವರದಿಯ ಪ್ರಕಾರ ನಾಟಕದ ಪ್ರದರ್ಶನವನ್ನು ನೋಡಿದ ಅ.ಭಾ.ವಿ.ಪ.ದ ಸದಸ್ಯನೊಬ್ಬ ಬಲಪಂಥೀಯ ಸಂಘಟನೆಯ ಧುರೀಣನೊಬ್ಬನಿಗೆ ವಿಷಯವನ್ನು ತಿಳಿಸಿದನಂತೆ. ನಾಟಕದಲ್ಲಿ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸುವ ಸೈನಿಕರನ್ನು ಅವಮಾನಿಸಿ ದೇಶದ್ರೋಹ ಮಾಡಲಾಗಿದೆಯೆಂದು ಗಲಾಟೆ ಆರಂಭಿಸಲಾಯಿತು. ಇಂಗ್ಲಿಷ್ ವಿಭಾಗದ ಮೇಲೆ ಕ್ರಮಕೈಗೊಳ್ಳಲು ಒತ್ತಾಯಿಸಲಾಯಿತು. ದುರ್ದೈವದಿಂದ ಮಹಾಶ್ವೇತಾದೇವಿಯವರು ತೀರಿ ಹೋಗಿದ್ದರಿಂದ ಅವರ ಮೇಲೆ ದೇಶದ್ರೋಹದ ಆಪಾದನೆ ಹೊರಿಸಿ ಜೈಲಿಗೆ ಕಳಿಸುವುದು ಸಾಧ್ಯವಾಗಲಿಲ್ಲ!  ಇತ್ತೀಚೆಗೆ ಬೆಂಗಳೂರಿನ ಥಿಯಾಲಾಜಿಕಲ್ ಕಾಲೇಜಿನಲ್ಲಿ, ಈ ಮೊದಲು ಕನ್ಹಯ್ಯ ಕುಮಾರ್‍ಗೆ ಸಂಬಂಧಿಸಿದ ಘಟನೆಗಳಲ್ಲಿ ಒಂದು ಸಾಮಾನ್ಯವಾದ ವಿದ್ಯಮಾನವನ್ನು ಕಾಣಬಹುದು.  

ಅದೇನೆಂದರೆ ರಾಷ್ಟ್ರವೆಂದರೆ ಸೇನೆ, ಸೇನೆಯೆಂದರೆ ರಾಷ್ಟ್ರ ಮತ್ತು ಸೇನೆಯ ಬಗ್ಗೆ ಟೀಕೆ ಮಾಡಿದರೆ ಅದು ರಾಷ್ಟ್ರಕ್ಕೆ ಮಾಡಿದ ಅಪಮಾನ ಹಾಗೂ ರಾಷ್ಟ್ರದ್ರೋಹವೆಂದು ವಾದಿಸಲಾಗುತ್ತದೆ.  ಹಲವಾರು ಟೀ.ವಿ. ವಾಹಿನಿಗಳಲ್ಲಿ ನಿವೃತ್ತ ಸೇನಾಧಿಕಾರಿಗಳನ್ನು ರಾಷ್ಟ್ರದ ವಕ್ತಾರರನ್ನಾಗಿ ಚರ್ಚೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಬಲಪಂಥೀಯ ರಾಷ್ಟ್ರಪ್ರೇಮದ ಸ್ವರೂಪವೇ ಇದಕ್ಕೆ ಕಾರಣ.  ಈ ಪರಿಕಲ್ಪನೆಯ ಪ್ರಕಾರ ಸಾಲಮಾಡಿ ಸೋತು ಅತ್ಮಹತ್ಯೆಗೆ ಶರಣಾದ ರೈತರು ರಾಷ್ಟ್ರಪ್ರೇಮಿಗಳಲ್ಲ, ತಮ್ಮ ಹಕ್ಕಿಗಾಗಿ ಹೋರಾಟಮಾಡಿ ಪೋಲೀಸರಿಂದ ಬರ್ಬರವಾಗಿ ಹೊಡೆಸಿಕೊಂಡ ಗಾರ್ಮೆಂಟ್ ಫ್ಯಾಕ್ಟರಿಯ ಮಹಿಳಾ ಕಾರ್ಮಿಕರು ರಾಷ್ಟ್ರಪ್ರೇಮಿಗಳಲ್ಲ. ಕಳಸಾ ಬಂಡೂರಿ ರೈತ ಚಳುವಳಿಯಲ್ಲಿ ಇತ್ತೀಚೆಗೆ ಮೈತುಂಬಾ ಬಾಸುಂಡೆ ತಿಂದು ಆ ಗಾಯಗಳನ್ನು ಧೈರ್ಯವಾಗಿ ಟೀ.ವಿ. ಕ್ಯಾಮರಾಗಳಿಗೆ ತೋರಿಸಿದ ರೈತ ಮಹಿಳೆಯರು ರಾಷ್ಟ್ರಪ್ರೇಮಿಗಳಲ್ಲ. ಶಸ್ತ್ರಾಸ್ತ್ರಗಳನ್ನು, ಯುದ್ಧ ಹಾಗೂ ಸೇನೆಗಳನ್ನು ರಾಷ್ಟ್ರದ ಲಾಂಛನಗಳನ್ನಾಗಿಸಿ ಪೂಜಿಸುವ ರಾಷ್ಟ್ರಪ್ರೇಮದ ಉಗ್ರ ಜಾಹೀರಾತಿನ ರಾಜಕೀಯದ ಭರಾಟೆಯಲ್ಲಿ ಇಂದು ನಾವಿದ್ದೇವೆ.

ಭಾರತೀಯ ಸೈನಿಕರು ನಾವೆಲ್ಲಾ ಹೆಮ್ಮೆ ಪಡುವ ವೀರರು. ದೇಶದಲ್ಲಿ ಯಾವ ದುರಂತವೇ ನಡೆದರೂ ನಮ್ಮ ಸೈನಿಕರೇ ನಮ್ಮ ರಕ್ಷಣೆಗೆ ಬರುತ್ತಾರೆ. ನೆರೆ ಹಾವಳಿಯೇ ಇರಲಿ ಉಗ್ರರ ದಾಳಿಯೇ ಇರಲಿ ಸೈನಿಕರೇ ನಮ್ಮ ಆಪತ್ಭಾಂಧವರು. ಹೀಗಾಗಿಯೇ ನಮ್ಮ ಅಪಾರ ಪ್ರೀತಿಗೆ ಅವರು ಕಾರಣರಾಗಿದ್ದಾರೆ. ಸಾವನ್ನಪ್ಪಿದ ಸೈನಿಕನೊಬ್ಬನ ದೇಹ ಅವನು ಹುಟ್ಟಿದ ಹಳ್ಳಿಗೆ ಬಂದಾಗ ಇಡೀ ರಾಜ್ಯವೇ ಶೋಕದಲ್ಲಿ ಮುಳುಗುತ್ತದೆ.  ಹೀಗಾಗಿ ಯಾವ ಭಾರತೀಯನೂ ಸೇನೆಗೆ ಅವಮಾನ ಮಾಡುವುದು ಸಾಧ್ಯವೇ ಇಲ್ಲ. ಪ್ರಶ್ನೆ ಏನೆಂದರೆ ನಮ್ಮ ಸರಕಾರಗಳು ಸೇನೆ ಹಾಗೂ ಪೋಲೀಸರನ್ನು ಜನರ ವಿರುದ್ಧ, ಅವರ ಪ್ರತಿಭಟನೆಗಳನ್ನು ಹತ್ತಿಕ್ಕಲು ದುರ್ಬಳಕೆ ಮಾಡಿಕೊಳ್ಳುತ್ತಿವೆ.  ಹಾಗಾದಾಗ ಆಗಬಾರದ್ದೆಲ್ಲ ನಡೆಯುತ್ತದೆ.  ಅಂಥ ಸಂದರ್ಭದಲ್ಲಿ ಜನರು ಪ್ರಶ್ನೆ ಮಾಡುವುದು ಸೇನೆಯನ್ನಲ್ಲ, ಸೇನೆಯನ್ನು ಪ್ರಜಾಪ್ರಭುತ್ವದ ವಿರುದ್ಧ ಬಳಸಿಕೊಳ್ಳುವ ಸರಕಾರಗಳನ್ನು. ಹೀಗಾಗಿ ಈ ಪ್ರಶ್ನೆಗಳನ್ನು ಟೀಕೆಗಳನ್ನು ಮಾಡುವವರನ್ನು ಸೇನೆಯ ಅವಮಾನ ಮಾಡುವ ದೇಶದ್ರೋಹಿಗಳೆಂದು ಬಿಂಬಿಸುವವರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರದ ಸರಕಾರಗಳ ಬೆಂಬಲಿಗರಾಗಿರುತ್ತಾರೆ.  ಅವರಿಗೆ ಮಹಾಶ್ವೇತಾದೇವಿಯಂಥ ಬರಹಗಾರರು ಅಪಾಯಕಾರಿಯಾಗಿ ಕಾಣುತ್ತಾರೆ.

ಕಳಸಾ-ಬಂಡೂರಿ ಹೋರಾಟಗಳಲ್ಲಿ ನೀರಿಗಾಗಿ ಹೋರಾಟ ಮಾಡಿದ ಅನೇಕ ಹಳ್ಳಿಗಳಿಂದ ಭಾರತೀಯ ಸೇನೆಗೆ ಅನೇಕ ಯುವಕರು ಸೇರಿದ್ದಾರೆ. ಒಂದೇ ಕುಟುಂಬದ ಹಲವಾರು ಯುವಕರು ಸೇನೆಗೆ ಸೇರಿದ್ದಾರೆ.  ಹಲವಾರು ಸೈನಿಕರು ದೇಶದ ರಕ್ಷಣೆಗಾಗಿ ಪ್ರಾಣವನ್ನೂ ತೆತ್ತಿದ್ದಾರೆ.  ಈ ರೈತ ಹೋರಾಟಗಳ ಸಮಯದಲ್ಲಿ ಅವರು ಈ ಹಳ್ಳಿಗಳಲ್ಲಿ ಇದ್ದರೆ ನಮ್ಮ ರೈತ ಮಹಿಳೆಯರ ಮೈಮೇಲೆ ಬಾಸುಂಡೆಗಳು ಏಳುತ್ತಿರಲಿಲ್ಲ. ಏಕೆಂದರೆ ನಮ್ಮ ಸೈನಿಕರಲ್ಲಿ ಬಹುಪಾಲು ರೈತರ ಮಕ್ಕಳೆ.  ಸರಕಾರಗಳು ರೈತರ ಮಕ್ಕಳಾದ ನಮ್ಮ ಹೆಮ್ಮೆಯ ಸೈನಿಕರನ್ನು ತನ್ನ ಸ್ವಾರ್ಥ ರಾಜಕೀಯಕ್ಕಾಗಿ ಬಳಸಿಕೊಂಡಾಗ ಜನರು ದನಿಯೆತ್ತದಿದ್ದರೆ ಕೊನೆಗೆ ಬಲಿಪಶುಗಳಾಗುವುದು ನಮ್ಮ ಸೈನಿಕರೇ ಅಲ್ಲವೆ?

ಪ್ರೊ. ರಾಜೇಂದ್ರ ಚೆನ್ನಿ