ಪರಂಪರೆಯ ವೈಭವೀಕರಣ ಮತ್ತು ಲಿಂಗ ಸಮಾನತೆ

ಸಂಪುಟ: 
41
ಸಂಚಿಕೆ: 
10
date: 
Sunday, 2 October 2016

ಸ್ತ್ರೀವಾದಿಗಳು ಮಹಿಳೆಯರಿಗಾಗಿ ಸರ್ಕಾರಗಳು ಹಮ್ಮಿಕೊಳ್ಳುವ ಅಭಿವೃದ್ದಿ ಕಾರ್ಯಕ್ರಮಗಳನ್ನು ಎರಡು ಭಾಗಗಳಾಗಿ ವರ್ಗೀಕರಿಸುತ್ತಾರೆ. ಮೊದಲನೆಯದು ಮಹಿಳೆಯರ ದೈನಂದಿನ ಹಿತಾಸಕ್ತಿಗಳನ್ನು ಈಡೇರಿಸುವ ಕಾರ್ಯಕ್ರಮಗಳು ಮತ್ತು ಎರಡನೆಯದು ಮಹಿಳೆಯರ ಸಂಘರ್ಷಣಾತ್ಮಕ ಹಿತಾಸಕ್ತಿಗಳನ್ನು ಪೂರೈಸುವ ಕಾರ್ಯಕ್ರಮಗಳು. ಕರ್ನಾಟಕದಲ್ಲಿ ಇಂದು ಅನುಷ್ಟಾನದಲ್ಲಿರುವ ಅನೇಕ ಕಾರ್ಯಕ್ರಮಗಳು ಮೊದಲನೆಯ ರೀತಿಯವು. ಈ ಬಗೆಯ ಕಾರ್ಯಕ್ರಮಗಳನ್ನು ಪೂರೈಸಲು ಸರ್ಕಾರ ಹಣವನ್ನು ಮಾತ್ರ ವಿನಿಯೋಗಿಸಬೇಕಾಗುತ್ತದೆ ವಿನಾ ಯಾವುದೇ ರೀತಿಯ ಸಾಮಾಜಿಕ ಬದಲಾವಣೆಯನ್ನು ಯೋಜಿಸಬೇಕಾಗಿಲ್ಲ. ಆದರೆ ಸಾಮಾಜಿಕ ರಚನೆಯಲ್ಲಿ ಬದಲಾವಣೆಯಿಲ್ಲದೆ ಮಹಿಳೆಯರ ಬದುಕನ್ನು ಸಮೃದ್ಧಗೊಳಿಸುವುದು ಸಾಧ್ಯವಿಲ್ಲ. ಲಿಂಗ ಸಮಾನತೆ ಅನ್ನುವುದು ಕೇವಲ ವ್ಯಕ್ತಿಗತ ಸಂಗತಿಯಲ್ಲ. ಅದು ಸಾಮಾಜಿಕ ಮತ್ತು ಆರ್ಥಿಕ ರಚನೆಗೆ ಸಂಬಂಧಿಸಿದ ಸಂಗತಿ.

ಮಹಿಳೆಯರಿಗೆ ದೇವಾಲಯ ಪ್ರವೇಶ ನಿಷೇಧ; ಮರ್ಯಾದೆ ಹತ್ಯೆ, ವೈವಾಹಿಕ ಅತ್ಯಾಚಾರ ಅತ್ಯಾಚಾರವಲ್ಲ; ಮಹಿಳೆಯರ ಕಾರ್ಯಕ್ಷೇತ್ರವೇನಿದ್ದರೂ ಕುಟುಂಬ, ಗಂಡ; ಮಹಿಳೆಯರು ರಾತ್ರ್ರಿ ಸಮಯದಲ್ಲಿ ಹೊರಗೆ ನಡೆದಾಡಬಾರದು; ಮಹಿಳೆಯರು ಇಂತಹದ್ದೇ ಬಟ್ಟೆ ಉಡಬೇಕು; ಮಹಿಳಾ ದುಡಿಮೆಗಾರರಿಗೆ ರಾತ್ರಿ ಸರದಿಯ ನಿಷೇಧ - ಇತ್ಯಾದಿ ಸಂಗತಿಗಳು ಭಾರತೀಯ ಮಹಿಳೆಯರ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಸೀಮಿತಗೊಳಿಸಿವೆ. ನಮ್ಮ ಸಮಾಜದಲ್ಲಿ ಮಹಿಳೆಯರ ಬದುಕನ್ನು ನಿಯತ್ರಿಸುವ ಸಾಮಾಜಿಕ ಕಟ್ಟುಪಾಡುಗಳು, ನಿಯಮ-ಸಂಹಿತೆಗಳು ಲಾಗಾಯ್ತಿನಿಂದ ಹರಿದುಕೊಂಡು ಬಂದಿವೆ. ಇವೆಲ್ಲ ನಮ್ಮ ಸಮಾಜದಲ್ಲಿನ ಸಾಂಪ್ರದಾಯಿಕ ನಂಬಿಕೆ, ಆಚರಣೆಗಳು. ಸಮಾಜದಲ್ಲಿ ಏನೆಲ್ಲ ಬದಲಾಗುತ್ತಿದ್ದರೂ ಮಹಿಳೆಯರಿಗೆ ಸಂಬಂಧಿಸಿದಂತೆ ಅನೇಕ ಸಂಗತಿಗಳು ಪಾರಂಪರಿಕವಾಗಿ ಮುಂದುವರಿದುಕೊಂಡು ಬರುತ್ತಿವೆ ಮತ್ತು ಅವುಗಳನ್ನು ಗಟ್ಟಿ ಮಾಡುವ ಶಕ್ತಿಗಳು ನಮ್ಮಲ್ಲಿ ಕ್ರಿಯಾಶೀಲವಾಗಿವೆ. ಪರಂಪರೆಯ ಹೆಸರಿನಲ್ಲಿ ಮಹಿಳೆಯರಿಗೆ ಕೆಲವೊಂದು ದೇವಾಲಯಗಳಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ತಂದ ಒಂದು ಶಾಸನದಲ್ಲಿ ವೈವಾಹಿಕ ಅತ್ಯಾಚಾರ ಅಪರಾಧವಲ್ಲವೆಂದು ಘೋಷಿಸಿದೆ. ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿರುವ ಒಂದು ಮಸೂದೆಯಲ್ಲಿ ಮಹಿಳೆಯರು ತಮ್ಮ ಗರ್ಭವನ್ನು ಬಾಡಿಗೆ ಕೊಡುವುದಾದರೆ ಅದಕ್ಕೆ ಹಣವನ್ನು ಪಡೆಯುವಂತಿಲ್ಲ ಮತ್ತು ಅದು ಭಾರತೀಯ ವಿವಾಹಿತ ದಂಪತಿಗಳಿಗೆ ಮಾತ್ರ ಎಂದು ಅನೇಕ ಮಿತಿಗಳನ್ನು ಹೇರುವ ಕ್ರಮ ತೆಗೆದುಕೊಂಡಿದೆ. ಈ ಕ್ರಮಗಳು, ಸಾಂಪ್ರದಾಯಿಕ ಆಚರಣೆಗಳು, ಪಾರಂಪರಿಕ ನಂಬಿಕೆಗಳು ಮಹಿಳೆಯರ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಸೀಮಿತಗೊಳಿಸುತ್ತಿವೆ. ಅನೇಕ ಹಕ್ಕುಗಳಿಂದ ಅವರನ್ನು ವಂಚಿಸಲಾಗುತ್ತಿದೆ.

ನಮ್ಮದು ಮೂಲತಃ ಅಸಮಾನತೆಯ, ಶ್ರೇಣೀಕರಣದ, ಪುರುಷ ಪ್ರಧಾನ ಸಮಾಜ. ಇಲ್ಲಿ ಮಹಿಳೆಯರ ಹಕ್ಕುಗಳನ್ನು ಶಾಸನಗಳು ನಿಯಂತ್ರಿಸುವುದಕ್ಕೆ ಬದಲಾಗಿ ಸಂಪ್ರದಾಯಗಳು ನಿಯಂತ್ರಿಸುತ್ತವೆ. ಮಹಿಳೆಯರಿಗೆ ಸಂಬಂಧಿಸಿದಂತೆ ಕೆಲವೊಂದು ವಿಷಯದಲ್ಲಿ ಸಂವಿಧಾನದ ಹಕ್ಕುಗಳು ಅಪ್ರಸ್ತುತವಾಗಿ ಬಿಡುತ್ತವೆ. ಈ ಕ್ರಮಗಳು, ಸಂಪ್ರದಾಯಗಳು, ಪರಂಪರೆಯಿಂದ ಹರಿದುಕೊಂಡು ಬರುತ್ತಿರುವ ಆಚರಣೆಗಳು ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತವೆ. ಈ ಬಗೆಯ ನಿಯಂತ್ರಣಗಳಿಂದ ಪುರುಷರು ಮುಕ್ತರಾಗಿದ್ದಾರೆ. ಅಂದರೆ ನಮ್ಮ ಸಮಾಜವು ತಿಳಿದು ತಿಳಿದು ಲಿಂಗ ಅಸಮಾನತೆಯನ್ನು ಸಂಪ್ರದಾಯದ ಹೆಸರಿನಲ್ಲಿ ಒಪ್ಪಿಕೊಂಡು ಬಿಟ್ಟಿದೆ ಮತ್ತು ಪೋಷಿಸುತ್ತಿದೆ. 

ಲಿಂಗ ಸಂಬಂಧಗಳಲ್ಲಿ ಸಹಕಾರ ಮತ್ತು ಸಂಘರ್ಷದ ಸಂಗತಿಗಳು

ಮಹಿಳೆಯರ ಅಭಿವೃದ್ದಿಗೆ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಿವೆ, ಜಾರಿಗೊಳಿಸಿವೆ. ವಿಶ್ವಸಂಸ್ಥೆ, ಅದರ ಅಂಗ ಸಂಸ್ಥೆಗಳು, ವಿಶ್ವ ಬ್ಯಾಂಕು ಮುಂತಾದವು ಮಹಿಳೆಯರ ಸಶಕ್ತೀಕರಣ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿವೆ. ಇತ್ತೀಚಿಗೆ ವಿಶ್ವಬ್ಯಾಂಕು ಲಿಂಗ ಸಮಾನತೆಯನ್ನು ಸ್ಮಾರ್ಟ್ ಅರ್ಥಶಾಸ್ತ್ರ ಎಂದು ಕರೆದಿದೆ (2012). ಮಹಿಳೆಯರ ಅಭಿವೃದ್ಧಿಯನ್ನು ಹಕ್ಕಿನ ಪರಿಭಾಷೆಯಲ್ಲಿ ಪರಿಭಾವಿಸಿಕೊಳ್ಳವ ಕ್ರಮವೂ ವಾಡಿಕೆಯಲ್ಲಿದೆ. ಇಲ್ಲಿ ನಾವು ಕೇಳಿಕೊಳ್ಳಬೇಕಾದ ಸೂಕ್ಷ್ಮ ಪ್ರಶ್ನೆಗಳು ಇವು: ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಮಹಿಳೆಯರ ಯಾವ ಬಗೆಯ ಹಿತಾಸಕ್ತಿಗಳನ್ನು ಪೂರೈಸುತ್ತಿವೆ? ಅವು ಸಮಾಜದ ಯಾವ ವರ್ಗಗಳನ್ನು ಗುರಿಯಾಗಿಟ್ಟುಕೊಂಡಿವೆ? ಯಾವ ಪ್ರದೇಶದ ಮಹಿಳೆಯರನ್ನು ಅದು ಓಲೈಸುತ್ತಿದೆ? ಈ ಪ್ರಶ್ನೆಗಳನ್ನು ನಾವು ಚರ್ಚಿಸಬೇಕಾಗಿದೆ.

ಸ್ತ್ರೀವಾದಿಗಳು ಮಹಿಳೆಯರಿಗಾಗಿ ಸರ್ಕಾರಗಳು ಹಮ್ಮಿಕೊಳ್ಳುವ ಅಭಿವೃದ್ದಿ ಕಾರ್ಯಕ್ರಮಗಳನ್ನು ಎರಡು ಭಾಗಗಳಾಗಿ ವರ್ಗೀಕರಿಸುತ್ತಾರೆ. ಮೊದಲನೆಯದು ಮಹಿಳೆಯರ ದೈನಂದಿನ ಹಿತಾಸಕ್ತಿಗಳನ್ನು ಈಡೇರಿಸುವ ಕಾರ್ಯಕ್ರಮಗಳು ಮತ್ತು ಎರಡನೆಯದು ಮಹಿಳೆಯರ ಸಂಘರ್ಷಣಾತ್ಮಕ ಹಿತಾಸಕ್ತಿಗಳನ್ನು ಪೂರೈಸುವ ಕಾರ್ಯಕ್ರಮಗಳು (ವಿವರಗಳಿಗೆ ನೋಡಿ. ಶ್ರೀಲತಾ ಬಾಟ್ಲಿವಾಲ 1994, ನೈಲಾ ಕಬೀರ್ 1996). ದೈನಂದಿನ ಹಿತಾಸಕ್ತಿಗಳು ಅಂದರೆ ಮಹಿಳೆಯರ ಆಹಾರ, ಉದ್ಯೋಗ, ವಸತಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಮುಂತಾದ ಸಂಗತಿಗಳಿಗೆ ಸೌಲಭ್ಯ ಒದಗಿಸುವುದು. ಸಂಘರ್ಷಣಾತ್ಮಕ ಹಿತಾಸಕ್ತಿಗಳು ಅಂದರೆ ಮಹಿಳೆಯರ ಆಸ್ತಿ ಹಕ್ಕು, ಸಂತಾನೋತ್ಪತ್ತಿ ದುಡಿಮೆಯನ್ನು ಗಂಡ-ಹೆಂಡತಿ ಹಂಚಿಕೊಳ್ಳುವುದು, ಲಿಂಗ ಸಂಬಂಧಿ ಶ್ರಮ ವಿಭಜನೆಯನ್ನು ಅಪ್ರಸ್ತುತವನ್ನಾಗಿಸುವುದು, ಮಹಿಳೆಯರನ್ನು ‘ತಾಯಿ’ ‘ಹೆಂಡತಿ’, ‘ಮಗಳು’ --- ಈ ರೀತಿಯಲ್ಲಿ ನೋಡುವುದಕ್ಕೆ ಪ್ರತಿಯಾಗಿ ಸರ್ವತಂತ್ರ ಸ್ವತಂತ್ರ ವ್ಯಕ್ತಿಗಳನ್ನಾಗಿ ಪರಿಭಾವಿಸಿಕೊಳ್ಳುವುದು, ಮಹಿಳೆಯರ ದೈಹಿಕ ಭದ್ರತೆ ಹಕ್ಕು, ಸ್ವಂತ ನಿರ್ಣಯದ ಮೇಲೆ ಸಂಚರಿಸುವ ಹಕ್ಕು ಮುಂತಾದವು. 

ಕರ್ನಾಟಕದಲ್ಲಿ ಇಂದು ಅನುಷ್ಟಾನದಲ್ಲಿರುವ ಅನೇಕ ಕಾರ್ಯಕ್ರಮಗಳು, ಅಂದರೆ ಭಾಗ್ಯಲಕ್ಷ್ಮಿ, ಬೈಸಿಕಲ್ಲು, ಸ್ತ್ರೀಶಕ್ತಿ, ಮಹಿಳಾ ಸ್ವಸಹಾಯ ಗುಂಪುಗಳು, ಯಶಸ್ವಿನಿ, ಮಡಿಲು, ಜನನಿ ಸುರಕ್ಷಾ, ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಶೇ.50 ಸದಸ್ಯತ್ವ ಮೀಸಲಾತಿ, ದೇವದಾಸಿ ವಸತಿ ಯೋಜನೆ ಮುಂತಾದವು ಮಹಿಳೆಯರ ದೈನಂದಿನ ಹಿತಾಸಕ್ತಿಗಳನ್ನು ಮಾತ್ರ ಪೂರೈಸಬಲ್ಲವು. ಈ ಬಗೆಯ ಅಗತ್ಯಗಳನ್ನು ಸರ್ಕಾರಗಳು ಪೂರೈಸಬೇಕಾಗುತ್ತದೆ. ಇವೆಲ್ಲ ಮಹಿಳೆಯರ ಹಿಟ್ಟು, ಬಟ್ಟೆ, ಹೊಟ್ಟೆ ಪ್ರಶ್ನೆಗಳು. ಇವು ಮಹಿಳೆಯರ ಬದುಕನ್ನು ಸುಧಾರಿಸುತ್ತವೆ. ಈ ಬಗೆಯ ಕಾರ್ಯಕ್ರಮಗಳನ್ನು ಪೂರೈಸಲು ಸರ್ಕಾರ ಹಣವನ್ನು ಮಾತ್ರ ವಿನಿಯೋಗಿಸಬೇಕಾಗುತ್ತದೆ ವಿನಾ ಯಾವುದೇ ರೀತಿಯ ಸಾಮಾಜಿಕ ಬದಲಾವಣೆಯನ್ನು ಯೋಜಿಸಬೇಕಾಗಿಲ್ಲ. ಈ ಕಾರ್ಯಕ್ರಮಗಳು ಮಹಿಳೆಯರ ಭೌತಿಕ ಬದುಕನ್ನು ಉತ್ತಮ ಪಡಿಸುತ್ತವೆ. ಆದರೆ ಇವು ಮಹಿಳೆಯರು ಎದುರಿಸುತ್ತಿರುವ ಅಸಮಾನತೆ, ಶೋಷಣೆ, ಹಿಂಸೆ, ಆಸ್ತಿ, ಅಧಿಕಾರ, ಘನತೆ ಮುಂತಾದವುಗಳಿಗೆ ಸಂಬಂಧಿಸಿದ ತಾರತಮ್ಯ ಸ್ಥಿತಿಗತಿಯನ್ನು ಮಾತ್ರ ಬದಲಾಯಿಸಲಾರವು.

ವಿಶ್ವಬ್ಯಾಂಕು ಕೂಡ ಇಂತಹ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ವಹಿಸುತ್ತದೆ. ಅದು ಇತ್ತೀಚಿಗೆ ಕಾರ್ಪೋರೇಟ್ ಮತ್ತು ವಾಣಿಜ್ಯ ಪರಿಭಾಷೆಯಲ್ಲಿ ಲಿಂಗ ಸಮಾನತೆಯನ್ನು ಪರಿಭಾವಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಬಂಡವಾಳ ವಿನಿಯೋಗಿಸಿದರೆ ಆರ್ಥಿಕತೆಯಲ್ಲಿ ಉತ್ಪಾದನಾ ಕ್ಷಮತೆ ಉತ್ತಮವಾಗಿ ಜಿ ಡಿ ಪಿ ಯಲ್ಲಿ ಏರಿಕೆಯಾಗುತ್ತದೆ ಎಂಬ ಸಿದ್ಧಾಂತವನ್ನು ಮುಂದು ಮಾಡುತ್ತಿದೆ. ಇದನ್ನು ಅದು ‘ಸ್ಮಾರ್ಟ್ ಅರ್ಥಶಾಸ್ತ್ರ’ ಎಂದು ಕರೆಯುತ್ತಿದೆ. ಲಿಂಗ ಸಮಾನತೆಯನ್ನು ಅಭಿವೃದ್ಧಿಯ ಒಂದು ಸಾಧನವಾಗಿ ನೋಡುವ ಕ್ರಮ ಇಲ್ಲಿದೆ. ಅವು ಮಹಿಳೆಯರ ಸ್ವಾತಂತ್ರ್ಯವನ್ನು ವಿಸ್ತøತಗೊಳಿಸುತ್ತವೋ ಇಲ್ಲವೋ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಮಹಿಳೆಯರು ಘನತೆಯಿಂದ ತಮ್ಮ ಬದುಕನ್ನು ಕಟ್ಟಕೊಳ್ಳಲು ಅವು ಅನುವು ಮಾಡಿಕೊಡುತ್ತವೋ ಇಲ್ಲವೋ ಅನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಈ ಬಗೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅಮತ್ರ್ಯ ಸೆನ್ ಉಪಕರಣವಾದಿ ಕ್ರಮಗಳು ಎಂದು ಕರೆಯುತ್ತಾನೆ. ನಿಜಕ್ಕೂ ಮಹಿಳೆಯರ ಸ್ವಾತಂತ್ರ್ಯದ ವ್ಯಾಪ್ತಿಯನ್ನು ವಿಸ್ತೃತಗೊಳಿಸುವ ಸಂಗತಿಗಳಾವುವು? ಅವುಗಳನ್ನು ಸಂಘರ್ಷಣಾತ್ಮಕ ಕಾರ್ಯಕ್ರಮ ಎಂದು ಏಕೆ ಕರೆಯಲಾಗುತ್ತದೆ?

ಸಂಘರ್ಷಣಾತ್ಮಕ ಕಾರ್ಯಕ್ರಮ

ಸಮಾಜ, ಸಂಪ್ರದಾಯ, ಪರಂಪರೆ, ಆಚರಣೆಗಳಲ್ಲಿ ರವಷ್ಟು ಬದಲಾವಣೆ ಬಯಸದ ದೈನಂದಿನ ಹಿತಾಸಕ್ತಿ ಪೂರೈಸುವ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದಕ್ಕೆ ಸರ್ಕಾರಗಳು ಮುಂದೆ ಬರುತ್ತವೆ. ಆದರೆ ಸಾಮಾಜಿಕ ರಚನೆಯಲ್ಲಿ ಬದಲಾವಣೆಯಿಲ್ಲದೆ ಮಹಿಳೆಯರ ಬದುಕನ್ನು ಸಮೃದ್ಧಗೊಳಿಸುವುದು ಸಾಧ್ಯವಿಲ್ಲ. ಲಿಂಗ ಸಮಾನತೆ ಅನ್ನುವುದು ಕೇವಲ ವ್ಯಕ್ತಿಗತ ಸಂಗತಿಯಲ್ಲ. ಅದು ಸಾಮಾಜಿಕ ಮತ್ತು ಆರ್ಥಿಕ ರಚನೆಗೆ ಸಂಬಂಧಿಸಿದ ಸಂಗತಿ.

ಆಸ್ತಿಯ ಹಕ್ಕನ್ನು ಶಾಸನದಲ್ಲಿ ಮಹಿಳೆಯರಿಗೆ ನೀಡಲಾಗಿದೆ. ಆದರೆ ಅದನ್ನು ಆಕೆಗೆ ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇಲ್ಲಿ ಅಧಿಕಾರ ಸಂಬಂಧದ ಪ್ರಶ್ನೆಯಿದೆ. ಲಿಂಗ ಸಂಬಂಧಿ ಅಧಿಕಾರ ಸಂಬಂಧಗಳಲ್ಲಿ ಬದಲಾವಣೆ ತಾರದೆ ಮಹಿಳೆಯರು ತಮ್ಮ ಶಾಸನಾತ್ಮಕ ಆಸ್ತಿ ಹಕ್ಕನ್ನು ಚಲಾಯಿಸಲು ಬರುವುದಿಲ್ಲ. ಕುಟುಂಬದಲ್ಲಿ ಮನೆವಾರ್ತೆ ದುಡಿಮೆಯನ್ನು ಗಂಡ ಮತ್ತು ಹೆಂಡತಿ ಹಂಚಿಕೊಳ್ಳುವ ಕ್ರಮವನ್ನು ನೋಡಬಹುದು. ಇದಕ್ಕೆ ಶಾಸನದ ಅಗತ್ಯವಿಲ್ಲ. ಆದರೆ ಮಹಿಳೆಯರನ್ನು ಸಮಾನ ವ್ಯಕ್ತ್ತಿಯನ್ನಾಗಿ ಪುರುಷರು ನೋಡುವ ಮೌಲ್ಯದ ಅಗತ್ಯವಿದೆ. ಆದರೆ ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಸಮಾನ ನೆಲೆಯಲ್ಲಿ ನೋಡುವ ಕ್ರಮವಿಲ್ಲ. ಕುಟುಂಬ ಚೌಕಟ್ಟಿನಲ್ಲಿಯೂ ಮಹಿಳೆಯರನ್ನು ಅಧೀನ ಸ್ಥಿತಿಯಲ್ಲಿಡಲಾಗುತ್ತದೆ. 

ಇದನ್ನೆಲ್ಲ ಪ್ರಜ್ಞಾಪೂರ್ವಕವಾಗಿ ಯಾರೂ ಮಾಡುವುದಿಲ್ಲ. ಇವೆಲ್ಲ ನಮ್ಮ ಸಮಾಜದಲ್ಲಿ ಹೇಗೆ ಅಂತರ್ಗತಗೊಂಡಿವೆಯೆಂದರೆ ಅವುಗಳನ್ನು ಯಾರೂ ಹೇಳದಿದ್ದರೂ ಮಹಿಳೆಯರು ಪಾಲಿಸಬೇಕಾಗುತ್ತದೆ. ಉದಾಹರಣೆಗೆ ಗಂಡನ ಜೊತೆಯಲ್ಲಿ ಅಬ್ಬರಿಸಿ ಮಾತನಾಡಬಾರದು, ಆಸ್ತಿ, ಮನೆ, ರೇಷನ್ ಕಾರ್ಡ್ ಮುಂತಾದವು ಗಂಡನ ಹೆಸರಿನಲ್ಲಿರಬೇಕು, ಮನೆಯಲ್ಲಿ ಗಂಡಸರಿಗಿಂತ ಮೊದಲು ಮಹಿಳೆಯರು ಊಟ ಮಾಡುವಂತಿಲ್ಲ, ಕುಟುಂಬದ ಹಣಕಾಸು ವ್ಯವಹಾರವನ್ನು ಪುರುಷರು ಮಾತ್ರ ನಿರ್ವಹಿಸಬೇಕು, ಪುರುಷರು ಮಾತ್ರ ಉತ್ಪಾದನೆ ಮಾಡುವವರು, ಮಹಿಳೆಯರು ಏನಿದ್ದರೂ ಅನುಭೋಗಿಗಳು, ಮಹಿಳೆಯರು ಸಂಜೆಯಾದ ಮೇಲೆ ಮನೆಯಿಂದ ಹೊರಗೆ ಹೋಗುವಂತಿಲ್ಲ ಇತ್ಯಾದಿ ಇತ್ಯಾದಿ. ನಮ್ಮ ಸಂವಿಧಾನದಲ್ಲಿ ಕೊಡ ಮಾಡಿರುವ ಮೂಲಭೂತ ಹಕ್ಕುಗಳು ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ. ಆದರೆ ಮಹಿಳೆಯರು ಅನೇಕ ವಿಷಯಗಳಲ್ಲಿ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಉದಾಹರಣೆಗೆ ಮದುವೆಯಾಗುವ ಹಕ್ಕು, ಮಕ್ಕಳನ್ನು ಪಡೆಯುವ ಹಕ್ಕು, ದೈಹಿಕ ಭದ್ರತೆಯ ಹಕ್ಕು ಮುಂತಾದವು. ಮಹಿಳೆಯರ ಬದುಕನ್ನು ಎಲ್ಲ ಹಂತಗಳಲ್ಲಿಯೂ ಸಮಾಜದಲ್ಲಿ ಪುರುಷರು ನಿಯಂತ್ರಿಸುತ್ತಿರುತ್ತಾರೆ. ಆಕೆಗೆ ತನ್ನ ದೇಹದ ಮೇಲೆ ಅಧಿಕಾರವಿರುವುದಿಲ್ಲ. ಎಷ್ಟು ಮಕ್ಕಳನ್ನು ಪಡೆಯಬೇಕು ಮತ್ತು ಯಾವಾಗ ಪಡೆಯಬೇಕು ಎಂಬ ಸಂಗತಿಗಳು ಮಹಿಳೆಯರ ವೈಯುಕ್ತಿಕ ಹಕ್ಕಿನ ಸಂಗತಿಗಳು. ಆದರೆ ಅವುಗಳನ್ನು ಕುಟುಂಬ ನಿರ್ಧರಿಸುವ ಸ್ಥಿತಿ ನಮ್ಮಲ್ಲಿದೆ.

ಈ ಬಗೆಯ ಹಕ್ಕುಗಳಿಗೆ, ಸಮಾನತೆಗೆ, ಸ್ವಾಯತ್ತತೆಗೆ ಸಾಮಾಜಿಕ ರಚನೆಯ ಬದಲಾವಣೆ ಅಗತ್ಯ. ಮದುವೆ, ಕುಟುಂಬ, ಗಂಡ-ಹೆಂಡತಿ ಸಂಬಂಧ, ಮಕ್ಕಳ ಜನನ ಮುಂತಾದ ಸಂಗತಿಗಳನ್ನು ನಮ್ಮ ಸಮಾಜವು ‘ಖಾಸಗಿ’ ಎಂದು ವರ್ಗೀಕರಿಸಿಕೊಂಡು ಬಂದಿದೆ. ಆದ್ದರಿಂದ ಇವುಗಳನ್ನೆಲ್ಲ ಶಾಸನದ ಚೌಕಟ್ಟಿಗೆ ತರುವುದು ವಿಹಿತವಲ್ಲ ಎಂದು ಭಾವಿಸಲಾಗಿದೆ. ಇವೆಲ್ಲ ಸಂಪ್ರದಾಯದ ಸಂಗತಿಗಳು. ಇವೆಲ್ಲ ನಮ್ಮ ಪರಂಪರೆಗೆ ಸಂಬಂಧಿಸಿದ ಸಂಗತಿಗಳು. ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಭಾರತದ ಎಲ್ಲ ಪ್ರಜೆಗಳಿಗೂ ಸಂವಿಧಾನ ಹಕ್ಕನ್ನು ನೀಡಿದೆ. ಆದರೆ ಮಹಿಳೆಯರು ಅಶುದ್ಧರು, ಅವಳು ಸೂತಕ ಎಂಬ ಹೆಸರಿನಲ್ಲಿ ದೇವಾಲಯ ಪ್ರವೇಶವನ್ನು ಅವರಿಗೆ ನಿಷೇಧಿಸಲಾಗುತ್ತಿದೆ. ಇದನ್ನು ಸಮರ್ಥಿಸುವ ಬಹುಶೃತರು ನಮ್ಮಲ್ಲಿದ್ದಾರೆ. ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಶಾಸನದಲ್ಲಿ ಘೋಷಿಸಿದರೆ ನಮ್ಮ ಕುಟುಂಬ ವ್ಯವಸ್ಥೆಯು ನಾಶವಾಗುತ್ತದೆ ಎಂದು ಅದನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ.

ಈ ಬಗೆಯ ಕಾರ್ಯಕ್ರಮಗಳು ಸಮಾಜದಲ್ಲಿ ಸಂಘರ್ಷವನ್ನು ಉಂಟು ಮಾಡುತ್ತವೆ. ಈ ಕಾರಣಕ್ಕೆ ಸರ್ಕಾರಗಳು ಇಂತಹ ಕಾರ್ಯನೀತಿಗಳನ್ನು ಅನುಸರಿಸಲು ಸಿದ್ಧವಿರುವುದಿಲ್ಲ. ಮಹಿಳೆಯರ ದೈನಂದಿನ ಹಿತಾಸಕ್ತಿಗಳನ್ನು ಪೂರೈಸುವ ಕಾರ್ಯಕ್ರಮಗಳು ಮಹಿಳೆಯರ ಬದುಕನ್ನು ಸುಧಾರಿಸಬಹುದು. ಆದರೆ ಅಲ್ಲಿ ಲಿಂಗ ಸಮಾನತೆ, ವೈಯುಕ್ತಿಕ ಸ್ವಾಯತ್ತತೆ, ಸ್ವಾತಂತ್ರ್ಯ ಮಹಿಳೆಯರಿಗೆ ದೊರೆಯುವುದಿಲ್ಲ. ಅಮತ್ರ್ಯ ಸೆನ್ ತನ್ನ ಪ್ರಸಿದ್ಧ ಕೃತಿ ‘ಡೆವಲಪ್‍ಮೆಂಟ್ ಆಸ್ ಫ್ರೀಡಮ್’ನಲ್ಲಿ ಸ್ವಾತಂತ್ರ್ಯವೇ ಅಭಿವೃದ್ಧಿ ಎಂದು ಅಭಿವೃದ್ಧಿಯನ್ನು ನಿರ್ವಚಿಸಿದ್ದಾನೆ. ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂಬ ನಮ್ಮ ಸಾಂಪ್ರದಾಯಿಕ ನಂಬಿಕೆಯನ್ನು ಇಂದೂ ಅನುಸರಿಸಿಕೊಂಡು ಬರುತ್ತಿದ್ದೇವೆ. ಈ ಕಾರಣಕ್ಕೆ ಮಹಿಳೆಯರು ಅನೇಕ ಬಗೆಯ ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ ಮತ್ತು ಹಿಂಸೆಯನ್ನು ಅನುಭವಿಸುತ್ತಿದ್ದಾರೆ. 

ಪರಂಪರೆಯ ವೈಭವೀಕರಣ 

ಈಗಾಗಲೆ ಹೇಳಿರುವಂತೆ ನಮ್ಮ ಸಮಾಜದಲ್ಲಿ ಹಕ್ಕುಗಳನ್ನು, ಅದರಲ್ಲೂ ಮಹಿಳೆಯರ ಹಕ್ಕುಗಳನ್ನು ಶಾಸನಗಳು ನಿಯಂತ್ರಿಸುವುದಕ್ಕೆ ಬದಲಾಗಿ ಸಂಪ್ರದಾಯ-ಪರಂಪರೆ ನಿಯಂತ್ರಿಸುತ್ತಿವೆ. ಇಂದು ನಮ್ಮ ದೇಶದಲ್ಲಿ ಪರಂಪರೆಯ-ಸಂಪ್ರದಾಯದ ಸಂಗತಿಗಳನ್ನು ಪೋಷಿಸುವ, ಊರ್ಜಿತಗೊಳಿಸುವ ಮತ್ತು ಸಮಾಜದ ಮೇಲೆ ಹೇರುವ ಕ್ರಮಗಳು ನಡೆಯುತ್ತಿವೆ. ಇವು ಮಹಿಳೆಯರಿಗೆ ಹೆಚ್ಚಿನ ಹಾನಿ ಉಂಟು ಮಾಡುತ್ತಿವೆ. ಲಿಂಗ ಅಸಮಾನತೆಯ ಪರಿಣಾಮವಾಗಿ ನಮ್ಮಲ್ಲಿ ಲಿಂಗ ಅನುಪಾತ ಕೆಳಮಟ್ಟದಲ್ಲಿದೆ ಮತ್ತು 0-6 ವಯೋಮಾನದ ಮಕ್ಕಳ ಲಿಂಗ ಅನುಪಾತ ಕುಸಿಯುತ್ತಿದೆ. ಅನೇಕ ಬಗೆಯ ಸಾಂಪ್ರದಾಯಿಕ ಆಚರಣೆ, ನಂಬಿಕೆಗಳಿಂದಾಗಿ ನಮ್ಮ ಸಮಾಜದಲ್ಲಿ ಅರ್ಧದಷ್ಟು ಮಹಿಳೆಯರು ರಕ್ತಹೀನತೆಯಿಂದ(ಅನಿಮಿಯ) ನರಳುತ್ತಿದ್ದಾರೆ, ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ. ಅದನ್ನು ಮಹಿಳೆಯರಿಗೆ ‘ಸಹಜ’ವಾದುದು ಎಂದು ನಿರ್ಲಕ್ಷ್ಯ ಮಾಡಲಾಗುತ್ತಿದೆ. 

ನಮ್ಮದು ಪ್ರಧಾನವಾಗಿ ಶೇಣೀಕರಣದಿಂದ ಕೂಡಿದ ಸಮಾಜ. ಮಹಿಳೆಯರನ್ನು ಅಖಂಡ ವರ್ಗವನ್ನಾಗಿ ಪರಿಭಾವಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಇಂದು ಮಹಿಳೆಯರನ್ನು ಒಂದು ಅಖಂಡ ವರ್ಗವನ್ನಾಗಿ ನೋಡುವ ಕ್ರಮವನ್ನು ಒತ್ತಾಯಿಸಲಾಗುತ್ತಿದೆ. 

ಪರಂಪರೆಯನ್ನು ಗೌರವಿಸಬೇಕು. ಅದರಿಂದ ನಾವು ಅನೇಕ ಪಾಠ ಕಲಿಯಬಹುದಾಗಿದೆ. ಆದರೆ ಪರಂಪರೆಯ ಎಲ್ಲ ಸಂಗತಿಗಳೂ ಇಂದು ಪ್ರಸ್ತುತವಾಗುವುದಿಲ್ಲ. ಅದರಲ್ಲಿ ಅನೇಕ ನಕಾರಾತ್ಮಕ ಸಂಗತಿಗಳಿರುತ್ತವೆ. ಅದರಲ್ಲಿ ಸಕಾರಾತ್ಮಕ ಸಂಗತಿಗಳಿದ್ದರೆ ಅವುಗಳನ್ನು ಅನುಸರಿಸಬಹುದು. ಪರಂಪರೆ ಅನ್ನುವ ಕಾರಣಕ್ಕೆ ಅಲ್ಲಿನ ಎಲ್ಲ ಸಂಗತಿಗಳನ್ನು ಕುರುಡು ಕುರುಡಾಗಿ ಅನುಸರಿಸುವುದು ಸರಿಯಲ್ಲ. ಉದಾಹರಣೆಗೆ ನಮ್ಮಲ್ಲಿ ಕೆಲವು ಧಾರ್ಮಿಕ ಸಂಸ್ಥೆಗಳು ಮಹಿಳೆಯರಿಗೆ ‘ಉಡಿ’ ತುಂಬುವ ಕಾರ್ಯಕ್ರಮಗಳನ್ನು ನಡೆಸುತ್ತವೆ. ಈ ಉಡಿ ತುಂಬುವ ಕಾರ್ಯಕ್ರಮಗಳಲ್ಲಿ ಉಡಿಯನ್ನು ಕೇವಲ ‘ಮುತ್ತೈದೆ’ಯರಿಗೆ ಮಾತ್ರ ನೀಡಲಾಗುತ್ತದೆ. ಇದನ್ನು ವಿಧವೆಯರಿಗೆ ನೀಡುವುದಿಲ್ಲ. ಅವರನ್ನು ‘ಅಶುದ್ಧ’, ‘ಸೂತಕ’ ಎಂದು ಪರಿಗಣಿಸಲಾಗುತ್ತದೆ. ಇದು ಮಹಿಳೆಯರ ನಡುವೆ ಅಸಮಾನತೆಯನ್ನು ಹುಟ್ಟು ಹಾಕುತ್ತದೆ. ಮುತ್ತೈದೆಯರನ್ನು ಸುಮಂಗಲಿಯರೆಂದು ಮತ್ತು ವಿಧವೆಯರನ್ನು ಅಮಂಗಳೆಯರೆಂದು ವರ್ಗೀಕರಿಸುವ ಕ್ರಮವೇನಿದೆ ಅದು ಸಮಾನತೆಯ ಮೌಲ್ಯಕ್ಕೆ ವಿರುದ್ಧವಾದುದು.

ಪರಂಪರೆಯ ಹೆಸರಿನಲ್ಲಿ ಮೌಢ್ಯಾಚರಣೆಗಳನ್ನು ಇಂದು ಪ್ರೋತ್ಸಾಹಿಸಲಾಗುತ್ತಿದೆ. ಅವುಗಳ ನಿಷೇಧವನ್ನು ಪ್ರತಿಭಟಿಸಲಾಗುತ್ತಿದೆ. ಪರಂಪರೆಯ ಹೆಸರಿನಲ್ಲಿ ಅಸಮಾನತೆಗೆ ಕುಮ್ಮಕ್ಕು ನೀಡಲಾಗುತ್ತಿದೆ. ಅನೇಕ ಸಾಂಪ್ರದಾಯಿಕ ನಂಬಿಕೆಗಳು, ಆಚರಣೆಗಳು, ಮೌಲ್ಯಗಳು ಮಹಿಳೆಯರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಈ ಮೌಢ್ಯಾಚರಣೆಗಳು ಬಡವರಿಗೆ ಹೆಚ್ಚಿನ ಹಾನಿಯುಂಟು ಮಾಡುತ್ತಿವೆ. ಈ ಸಾಂಪ್ರದಾಯಿಕ ಆಚರಣೆಗಳು ಪುರೋಹಿತ ವರ್ಗಕ್ಕೆ ಸಂಪಾದನೆಯ ಸಂಗತಿಗಳಾಗಿ ಬಿಟ್ಟಿವೆ. ಪರಂಪರೆಯ ಹೆಸರಿನಲ್ಲಿ ಇಂದಿಗೂ ಮಹಿಳೆಯರನ್ನು ಅಶುದ್ಧ, ಸೂತಕ ಎಂದು ನೋಡುವ ಕ್ರಮ ವಾಡಿಕೆಯಲ್ಲಿದೆ. ಇದು ಮಹಿಳೆಯರ ಮುಕ್ತ ಬೆಳವಣಿಗೆಗೆ ಅಡ್ಡಿಯಾಗಿ ಬಿಟ್ಟಿದೆ. ಅವರಲ್ಲಿ ಇದು ಕೀಳರಿಮೆಯನ್ನು ಹುಟ್ಟು ಹಾಕುತ್ತಿದೆ. ಮಹಿಳೆಯರನ್ನು ‘ಬೇರೆ’ ಎಂಬ ವರ್ಗೀಕರಿಸುವ ಕ್ರಮಕ್ಕೆ ಇವು ಕಾರಣವಾಗುತ್ತಿವೆ.

ಮಹಿಳೆಯರಿಗೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ‘ಖಾಸಗಿ’ಎಂದು ಶಾಸನಗಳ ಚೌಕಟ್ಟಿನಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ. ಇಂದು ಸಾರ್ವಜನಿಕ(ಪಬ್ಲಿಕ್) ಮತ್ತು ಖಾಸಗಿ(ಪ್ರೈವೇಟ್) ಅನ್ನುವ ಭಿನ್ನತೆ ಅಳಿಸಿ ಹೋಗಿದೆ. ಆದರೂ ಕೌಟುಂಬಿಕ ಸಂಗತಿಗಳನ್ನು ಶಾಸನಗಳ ವ್ಯಾಪ್ತಿಯಿಂದ ಅಲಾಯದವಾಗಿಡಲಾಗುತ್ತಿದೆ. ಪರಂಪರೆಯನ್ನು ಕುರುಡು ಕುರುಡಾಗಿ ವೈಭವೀಕರಿಸುವ ಕ್ರಮಗಳನ್ನು ಕೈಬಿಡಬೇಕು. ಪರಂಪರೆಯಲ್ಲಿ ಯಾವುದು ಅನುಕರಣೀಯ, ಯಾವುದು ಅಸಮಾನತೆಯನ್ನು ಪೋಷಿಸುತ್ತದೆ, ಮಹಿಳೆಯರ ಹಕ್ಕುಗಳಿಗೆ ಚ್ಯತಿ ತರುತ್ತವೆ ಎಂಬುದರ ಬಗ್ಗೆ ಆಯ್ಕೆಯ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸಬೇಕು.

ಪ್ರೊ. ಟಿ.ಆರ್. ಚಂದ್ರಶೇಖರ್