“ರೈತರು ಅನ್ನದಾತರು, ಭೂಗಳ್ಳರಲ್ಲ” ಒಕ್ಕಲೆಬ್ಬಿಸುವುದಕ್ಕೆ ಪೊಲೀಸರ ನಿಯೋಜನೆ ಸರಿಯಲ್ಲ

ಸಂಪುಟ: 
10
ಸಂಚಿಕೆ: 
40
Sunday, 25 September 2016

ರೈತರು ಅನ್ನದಾತರು, ಭೂಗಳ್ಳರಲ್ಲ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಕಳೆದ 30-40 ವರ್ಷಗಳಿಂದ ಭೂರಹಿತ ಕಡು ಬಡವರು ಸರಕಾರಿ ಭೂಮಿ ಹಾಗೂ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಹಿಂದೆ ಆಳ್ವಿಕೆ ನಡೆಸಿದ ಎಲ್ಲಾ ಸರಕಾರಗಳು ಭೂರಹಿತ ಸಾಗುವಳಿದಾರರಿಗೆ ಇದುವರೆಗೆ ಹಕ್ಕು ಪತ್ರ ನೀಡಿಲ್ಲ. ಈಗಿನ ಕಾಂಗ್ರೆಸ್ ಸರಕಾರ ಭೂಮಿ ಕಬಳಿಕೆ ನಿಷೇಧ ಕಾಯ್ದೆಯ ವ್ಯಾಪ್ತಿಗೆ ಈ ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿದಾರರನ್ನು ತಂದು ಸಾಗುವಳಿ ಭೂಮಿಯಿಂದ ಹೊರ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಯು. ಬಸವರಾಜು ರವರು ಹೇಳಿದ್ದಾರೆ.

ಕೆಪಿಆರ್‍ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜು ಅವರು ಬಗರ್ ಹುಕುಂ ಸಾಗುವಳಿದಾರರು, ಸೆಪ್ಟಂಬರ್ 19ರಂದು ಅರಣ್ಯ ಭೂಮಿ ಸಾಗುವಳಿದಾರರ ತಾಲೂಕು ಸಮಾವೇಶವನ್ನು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ರಾಜ್ಯಾದ್ಯಂತ ಅಧಿಕಾರಿಗಳ ಚುನಾಯಿತ ಪ್ರತಿನಿಧಿಗಳ ಕೈಗೊಂಬೆಯಾಗಿದ್ದು, ಬಂದೂಕು ಹಾಗೂ ಲಾಠಿ ತೋರಿಸಿ ಬೆದರಿಸಿ, ಕ್ರಿಮಿನಲ್ ಮೊಕದ್ದಮೆಗಳನ್ನು ಹೊರಿಸಿ ಹೊಟ್ಟೆ ಪಾಡಿಗಾಗಿ ಉಳುಮೆ ಮಾಡುತ್ತಿರುವ ರೈತರನ್ನು ಪೊಲೀಸರು ಒಕ್ಕಲೆಬ್ಬಿಸುತ್ತಿರುವುದು ಖಂಡನಾರ್ಹ. ನಾಡಿನಲ್ಲಿರುವ ಬಂಜರು ಭೂಮಿಯನ್ನು ಪರಿಶ್ರಮದಿಂದ ಉಳುಮೆ ಮಾಡಿ ಹಲವು ವರ್ಷಗಳಿಂದ ಅನ್ನವನ್ನು ಬೆಳೆಯುತ್ತಿರುವುದು ಅಪರಾಧವೇ ಎಂದು ಪ್ರಶ್ನಿಸಿ, ನಮ್ಮ ರೈತರು ಭೂಗಳ್ಳರಲ್ಲ ಎಂದ ಅವರು, ರೈತರು ಉಳುಮೆ ಮಾಡುತ್ತಲಿರುವ ಭೂಮಿಯನ್ನು ಕಸಿದುಕೊಂಡು ಕಂಪನಿಯವರಿಗೆ ನೀಡುತ್ತಿರುವ ರಾಜಕಾರಣಿಗಳು ನಿಜವಾದ ಭೂಗಳ್ಳರು ಎಂದರು.

ಇದುವರೆಗೂ ಆಡಳಿತ ನಡೆಸಿದ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಆರೋಪ ಹೊರಿಸುತ್ತ ಸ್ಥಳೀಯ ಶಾಸಕರು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ತಾಲ್ಲೂಕಿನ 121 ರೈತರ ಬೆಂಬಲಕ್ಕೆ ನಿಲ್ಲುವುದು ಬಿಟ್ಟು ಕಾಣದಂತಾಗಿದ್ದಾರೆ. ಅವರನ್ನು ಹುಡುಕಿಕೊಡಿ ಎಂದು ಕಿಡಿ ಕಾರಿದರು.

ಕೆಪಿಆರ್‍ಎಸ್ ಜಿಲ್ಲಾ ಅಧ್ಯಕ್ಷ ಬಿ.ಎಸ್.ಸೊಪ್ಪಿನ್ ಮಾತನಾಡಿ "ಜಿಲ್ಲಾಧಿಕಾರಿಗಳು ಮೊದಲು ಸರ್ವೆ ಕಾರ್ಯಕ್ಕೆ ಮುಂದಾಗಲಿ, ಹುಲ್ಲುಗಾವಲು, ಗುಡ್ಡಗಾಡು, ಅರಣ್ಯ ಪ್ರವೇಶವೆಂದು ಕಾಗದ ಪತ್ರಗಳಲ್ಲಿ ಕಾಣಿಸುತ್ತಿದ್ದೀರಲ್ಲ. ವಾಸ್ತವಾಂಶವನ್ನು ಮೊದಲು ಬಹಿರಂಗಪಡಿಸಿ. ಉಳುಮೆ ಮಾಡುತ್ತಿರುವ ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ. ಇಲ್ಲದಿದ್ದಲ್ಲಿ ಅಮರಣಾಂತ ಉಪವಾಸ ಮಾಡಬೇಕಾದೀತು ಎಂದು ಎಚ್ಚರಿಸಿದರು.

ಸದರಿ ಸಮಾವೇಶದಲ್ಲಿ ಕಲಘಟಗಿ ತಾಲೂಕಿನ ವಿವಿಧ ಗ್ರಾಮಗಳ ಸಾಗುವಳಿದಾರರು ಭಾಗವಹಿಸಿದ್ದರು. ಸಮಾವೇಶದ ನಂತರ ಕಲಘಟಗಿ ತಾಲ್ಲೂಕು ತಹಶೀಲ್ದಾರ್ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಕೆಪಿಆರ್‍ಎಸ್ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್.ಸೊಪ್ಪಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಹೆಚ್.ಪಾಟೀಲ, ಧಾರವಾಡ ಜಿಲ್ಲಾ ಎಸ್‍ಎಫ್‍ಐ ಮುಖಂಡ ಈರಪ್ಪ ನಾಯಕ್ ಭಾಗವಹಿಸಿದ್ದರು.

ವರದಿ : ಕೆ.ಹೆಚ್.ಪಾಟೀಲ