ನಾಳೆ; ಸುರತ್ಕಲ್, ಕಾನ, ರಸ್ತೆ ಸರಿಪಡಿಸಬೇಕೆಂದು ಪಾದಯಾತ್ರೆ

Wednesday, 5 October 2016

ಮಂಗಳೂರು: ಅಕ್ಟೋಬರ್ 05: ಸುರತ್ಕಲ್, ಕಾನ, ಎಂ.ಆರ್.ಪಿ.ಎಲ್. ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಯಲ್ಲಿದೆ. ಎಂ.ಆರ್.ಪಿ.ಎಲ್. - ಹೆಚ್.ಪಿ.ಸಿ.ಎಲ್. - ಬಿ.ಎ.ಎಸ್.ಎಫ್. ನಂತಹ ಬೃಹತ್ ಕೈಗಾರಿಕೆಗಳಿಗೆ ಬರುವ ಘನವಾಹನಗಳು ಯಥೇಚ್ಛವಾಗಿ ರಸ್ತೆಯನ್ನು ಬಳಕೆ ಮಾಡುತ್ತಿದ್ದರೂ ರಸ್ತೆ ಅಭಿವೃದ್ಧಿ ಪಡಿಸಲು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ವ್ಯಾಪಾರಿ ಹಿತಾಸಕ್ತಿ ಹೊಂದಿರುವ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಪಡಿಸಲು ಪ್ರಯತ್ನಿಸದೆ ಕಂಪೆನಿಗಳ ಹಿತಾಸಕ್ತಿ ಕಾಯುತ್ತಿದ್ದಾರೆ.

ಜನರು ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಸಾರ್ವಜನಿಕರು ಹಲವು ಹೋರಾಟಗಳನ್ನು ನಡೆಸುತ್ತಿದ್ದಾರೆ. ಜನರ ಹೋರಾಟವನ್ನು ಕುಗ್ಗಿಸಲು ನಗರ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಬಿ.ಎ.ಎಸ್.ಎಫ್. ಕಂಪೆನಿಯ ಕೆಮಿಕಲ್ ತ್ಯಾಜ್ಯವನ್ನು ತಂದು ರಸ್ತೆಗೆ ಸುರಿಯುತ್ತಿದ್ದಾರೆ. ನಗರ ಪಾಲಿಕೆ ಮತ್ತು ಕಂಪೆನಿಗಳ ಜನವಿರೋಧಿ ಧೋರಣೆಯನ್ನು ವಿರೋಧಿಸಿ ನಾಳೆ(06.10.2016) ಬೃಹತ್ ಕೈಗಾರಿಕಾ ಪ್ರದೇಶಗಳಿಗೆ (ಎಂ.ಆರ್.ಪಿ.ಎಲ್. - ಹೆಚ್.ಪಿ.ಸಿ.ಎಲ್. - ಬಿ.ಎ.ಎಸ್.ಎಫ್.) ಕಂಪೆನಿಗಳಿಗೆ ಬೃಹತ್ ಪಾದಯಾತ್ರೆಯನ್ನು ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಸಂಚಾಲಕರಾದ ಬಿ.ಕೆ.ಇಮ್ತಿಯಾಜ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿರುತ್ತಾರೆ.