ಆಡಳಿತ ಮಂಡಳಿಯ ಕಿರುಕುಳ ತಾಳಲಾರದೇ ಕಾರ್ಮಿಕ ಸಂಘದ ಅಧ್ಯಕ್ಷ ರಾಜಣ್ಣ ಸಾವು

Wednesday, 5 October 2016

ಅಕ್ಟೋಬರ್ 04, 2016: ಏಕ್ಸಿಡಿ ಕಾರ್ಖಾನೆಗೆ ಭೂಮಿ ನೀಡಿದ್ದ ರೈತ ಕುಟುಂಬಗಳಲ್ಲಿ ರಾಜಣ್ಣ ಕುಟುಂಬವು ಒಂದಾಗಿತ್ತು. ಭೂಮಿ ಕಳೆದುಕೊಂಡು ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದ ರಾಜಣ್ಣ ಮತ್ತು ಇತರೇ ಕಾರ್ಮಿಕರಿಗೆ ಅತಿ ಕಡಿಮೆ ಸಂಬಳ ಮತ್ತು ಕಾನೂನು ರೀತ್ಯ ನೀಡಬೇಕಾಗಿದ್ದ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿತ್ತು. ಇದನ್ನು ವಿರೋಧಿಸಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಸಂಘಟಿತರಾಗಿದ್ದರು. 

ವೇತನ ಏರಿಕೆ ಮತ್ತು ಇತರೇ ಸೌಲಭ್ಯಕ್ಕಾಗಿ ಕಾರ್ಮಿಕರು ಕಳೆದ 15 ದಿನಗಳಿಂದ ಹೋರಾಟ ಮಾಡುತ್ತಿದ್ದರು. ಕಾರ್ಖಾನೆಯ ಏಜೆಂಟರು, ಗುತ್ತಿಗೆದಾರರು ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಮೂಲಕ ಹೋರಾಟವನ್ನು ಮುರಿಯಲು ಸತತವಾಗಿ ಪ್ರಯತ್ನಿಸಿದರು. ಆದರೂ ರಾಜಣ್ಣ ಸೇರಿದಂತೆ ನೂರಾರು ಕಾರ್ಮಿಕರು ಛಲ ಬಿಡದೇ ಹೋರಾಟ ಮುಂದುವರೆಸಿದ್ದರು. ನೆನ್ನೆ (04.10.2016) ಬೆಳಿಗ್ಗೆ ಕಾರ್ಮಿಕ ಸಂಘದ ಅದ್ಯಕ್ಷ ರಾಜಣ್ಣ ನಿಧನರಾಗಿದ್ದಾರೆ.

ಬಹುಶ ಸಕಾಲಕ್ಕೆ ಜಿಲ್ಲಾಡಳಿತ ಮಧ್ಯೆ ಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸಿದ್ದರೇ ಈ ಸಾವು ಸಂಭವಿಸುತ್ತಿರಲಿಲ್ಲ. ಕಾರ್ಖಾನೆಯನ್ನು ಉಳಿಸುವ ಗುತ್ತಿಗೆ ಪಡೆದ ಶಾಸಕ ವರ್ತೂರು ಪ್ರಕಾಶ್ ರವರಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚಿಂತೆ ಇಲ್ಲ. ಕಾರ್ಮಿಕರ ಬಗ್ಗೆ ಮಾತನಾಡಿದರೇ ಬೆದರಿಕೆ ಹಾಕುವ ಈ ಶಾಸಕರಿಗೆ ಮಾಲೀಕರ ಯೋಗಕ್ಷೇಮ ಮುಖ್ಯವಾಗಿದೆ.

ಸರ್ಕಾರ ಈ ಕೂಡಲೇ ಮಧ್ಯೆ ಪ್ರವೇಶ ಮಾಡಿ ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸಬೇಕು. ಕಾರ್ಖಾನೆಯಲ್ಲಿನ ಕಿರುಕುಳವನ್ನು ತಡೆಗಟ್ಟಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.

 

 

ವರದಿ : ವಿಜಯಕೃಷ್ಣ