ದೇಶಕ್ಕಾಗಿ ಹೋರಾಡಿದವರ ತ್ಯಾಗ ಅವಿಸ್ಮರಣೀಯ : ಸತೀಶ್ ಕುಲಕರ್ಣಿ

Wednesday, 28 September 2016

ಹಾವೇರಿ, ಸೆ.28: ಭಾರತ ವಿದ್ಯಾರ್ಥಿ ಫೆಡರೆಷನ್ (ಎಸ್‍ಎಫ್‍ಐ), ಜಿಲ್ಲಾ ಸಮಿತಿಯು ನಗರದ ಸಮಾಜ ಕಲ್ಯಾಣ ಇಲಾಖೆಯ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ಭಗತ್‍ಸಿಂಗ್‍ರವರ 110ನೇ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಭಗತ್ ಸಿಂಗ್ ಸಿನಿಮಾ ಪ್ರದರ್ಶನ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಸತೀಶ್ ಕುಲಕರ್ಣಿರವರು ದೇಶಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಭಗತ್‍ಸಿಂಗ್‍ರವರ ತ್ಯಾಗ, ಅವರ ಹೋರಾಟ ಅವಿಸ್ಮರಣೀಯವಾದುದು ಅವರನ್ನು ಸ್ಮರಿಸುವ ಕೆಲಸವಾಗಬೇಕು ಎಂದರು.

ನೂರ ಜನ್ಮಕ್ಕಿಂತ ಒಂದು ಜನ್ಮ ಅದು ದೇಶಕ್ಕಾಗಿ ಆಗಲಿ ಎಂದರು. 23ನೇ ವಯಸ್ಸಿನಲ್ಲಿ ಅದ್ಭುತ ಹೆಜ್ಜೆಯನ್ನಿಟ್ಟವರು, ಅವರ ನೆನಪನ್ನು ಉಳಿಸಿ ಹೋದವರು ಕೊರಳಿಗೆ ಹಗ್ಗದ ಕುಣಿಕೆ ಬೀಳುವಾಗ ನನ್ನ ನಂಬಿಕೆಗಳನ್ನು ಎಂದೂ ಬಿಟ್ಟುಕೊಡಲ್ಲ, ಈ ಕ್ಷಣದಲ್ಲಿ ದೇಶಕ್ಕಾಗಿ ನನ್ನನ್ನು ಅರ್ಪಿಸಿಕೊಂಡಿದ್ದೆನೆ. ಇದು ನನಗೆ ಸಿಕ್ಕ ಪುರಸ್ಕಾರ ಎಂದವರು ಭಗತ್, ಭಗತ್‍ಸಿಂಗ್ ಕೇವಲ ಕ್ರಾಂತಿಕಾರಿ ಹೋರಾಟಗಾರ ಅಲ್ಲದೆ ಅವರೊಬ್ಬ ಅಧ್ಯಯನಶೀಲರು ಆಗಿದ್ದರು, ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಕ್ರಾಂತಿಗಳನ್ನು ಅಧ್ಯಯನ ಮಾಡುತ್ತಿದ್ದರು, ಅವರ ಅಧ್ಯಯನ ಸಾಗಿದ ಹಾಗೆ ವೈಚಾರಿಕತೆಯಿಂದ ಕೂಡಿತ್ತು, ನಾಸ್ತಿಕವಾದಿಯಾದವರು ಭಗತ್‍ಸಿಂಗ್‍ರವರು ಎಂದು ಸ್ಮರಿಸಿಕೊಂಡರು ಸತೀಶ್ ಕುಲಕರ್ಣಿ.

ಕ್ರಾಂತಿ ವಿಚಾರಗಳೆಂದರೆ ಸಾಣೆ ಕಲ್ಲಿನ ಮೇಲೆ ಮಸೆದು ಅವನ್ನು ಹೋರಾಟಕ್ಕೆ ಉಪಯೋಗಿಸಿಕೊಳ್ಳಬೇಕು. ದೇಶಪ್ರೇಮ, ದೇಶದ್ರೋಹ ವಿಷಯಗಳು ಇಂದಿನ ಯುವ ಸಮುದಾಯದ ಚರ್ಚಿತ ವಿಷಯವಾಗಿದೆ. ಇಂದಿನ ಯುವ ಜನಾಂಗ ಸರಿ-ತಪ್ಪುಗಳ ಚರ್ಚೆ ಮಾಡುತ್ತಿದೆ, ಭಗತ್‍ಸಿಂಗ್ ಇದಕ್ಕೆ ಬೀಜ ಹಾಕಿದವರು, ದೇಶವೇ ಹೆಮ್ಮೆ ಪಡುವಂತ ವ್ಯಕ್ತಿ ಭಗತ್‍ಸಿಂಗ್ ಅವರ ಕ್ರಾಂತಿಕಾರಿ ಹೆಜ್ಜೆ ಅವರ ಆಲೋಚನೆ, ಅವರ ಅಧ್ಯಯನಶೀಲ ವ್ಯಕ್ತಿತ್ವ ಇಂದಿನ ಯುಜನತೆಗೆ ಆದರ್ಶವಾಗಲಿ ಎಂದರು. 

ಭಗತ್‍ಸಿಂಗ್, ರಾಜಗುರು, ಸುಖದೇವ್ ತರಹದ ತ್ರಿವಳಿ ಕ್ರಾಂತಿಕಾರಿಗಳು ಹಾವೇರಿ ಭಾಗದ ಮೈಲಾರ ಮಹದೇವಪ್ಪ, ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಕೂಡಾ ಆಗಿದ್ದರು ಎಂದರು.

ಎಸ್‍ಎಫ್‍ಐ ಜಿಲ್ಲಾ ಕಾರ್ಯದರ್ಶಿ ಸುಭಾಸ ಎಂ ಮಾತನಾಡಿ "ಭಗತ್‍ಸಿಂಗ್ ಕಂಡ ಕನಸಿನ ಭಾರತವನ್ನು ನಿರ್ಮಾಣವಾಗಲಿ, ಸಮಸಮಾಜವನ್ನು ನಿರ್ಮಿಸುವ, ಶೋಷಣಾರಹಿತ ಸಮಾಜ, ಸಮಾಜವಾದಿ ಭಾರತದ ಕನಸನ್ನು ಕಂಡ ಅವರು ಹಿಂದೊಸ್ತಾನ್ ರಿಪಬ್ಲಿಕ್ ಅಸೋಷಿಯೇಶನ್‍ನ್ನು ಹಿಂದೂಸ್ತಾನ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಷಿಯೇಶನ್ ಎಂದು ಬದಲಾಯಿಸಿ ಸಮಾಜವಾದಿ ಭಾರತವನ್ನು, ಸಂಪೂರ್ಣ ಸ್ವತಂತ್ರ ಭಾರತವನ್ನಾಗಿ ನಿರ್ಮಿಸುವ ಕನಸು ಕಂಡಿದ್ದರು ಎಂದರು. 

ಭಗತ್‍ಸಿಂಗ್ ಬಹಳ ಅಪಾಯಕಾರಿ ವ್ಯಕ್ತಿ ಎಂದು ಬ್ರಿಟೀಷ್ ಅಧಿಕಾರಿಗಳು ಕರೆಯುತ್ತಿದ್ದರು. ದೇಶದ ಐಕ್ಯತೆ, ಸೌಹಾರ್ದತೆಯಿಂದ ಕೂಡಿರಬೇಕು ಎಂದು ಬಯಸಿದ್ದ ಮಹಾನ್ ವ್ಯಕ್ತಿ ಭಗತ್‍ಸಿಂಗ್. ಅವರ ಹೇಳಿದ ಹಾಗೆ ಸ್ವಾತಂತ್ರ್ಯ ಎಂದರೆ ಕೇವಲ ಯಜಮಾನರ ಬದಲಾವಣೆ ಅಲ್ಲ, ಬದಲಾಗಿ ಎಲ್ಲಾ ಶೋಷಿತರು ಶೋಷಣೆಯಿಂದ ಮುಕ್ತರಾಗುವುದೇ ನಿಜವಾದ ಸ್ವಾತಂತ್ರ್ಯ  ಎಂದಿದ್ದರು. 

ವಸತಿ ನಿಲಯದ ನಿಲಯ ಪಾಲಕರಾದ ಕೆ.ಬಿ.ಕಾಂಬ್ಳೆ, ಸದಾನಂದಮೂರ್ತಿ ವೇದಿಕೆ ಮೇಲಿದ್ದರು. ಎಸ್‍ಎಫ್‍ಐ ಮುಖಂಡರಾದ ಬಸನಗೌಡ ಭರಮಗೌಡ್ರ ಕಾರ್ಯಕ್ರಮವನ್ನು ನಿರ್ವಹಿಸಿದದರು.