‘ಗ್ರಾಮ ಅಸ್ಪೃಶ್ಯ ಕೇಂದ್ರಿತ ಆದಾಗ ಗ್ರಾಮ ಕೇಂದ್ರ್ರಿತವಾದ ನಾಡನ್ನು ಕಟ್ಟಬಹುದು': ದೇವನೂರ

ಸಂಪುಟ: 
10
ಸಂಚಿಕೆ: 
40
Sunday, 25 September 2016

‘ಅಸ್ಪೃಶ್ಯರನ್ನು ಊರಿನ ಹೊರಗೆ ಇಟ್ಟಿದ್ದೇವೆ. ಬದಲಿಗೆ ಅವರನ್ನು ಊರು, ಮನ್ಸಿನ ಒಳಗೆ ಬಿಟ್ಟುಕೊಂಡಾಗ ಆರೋಗ್ಯಯುತ ಗ್ರಾಮ ನಿರ್ಮಾಣವಾಗುತ್ತದೆ' ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ಸೆಪ್ಟಂಬರ್ 10ರಂದು ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಡಾ||ಬಿ.ಆರ್.ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರ ``ಡಾ||ಬಿ.ಆರ್.ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನು'' ಎಂಬ ಕಿರುಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಊರಿನಿಂದ ಆಚೆಗೆ ಅಸ್ಪೃಶ್ಯರನ್ನು ಎಸೆದಿದ್ದೇವೆ. ಅವರನ್ನೂ ಮನಸ್ಸಿನೊಳಗೆ ಇಟ್ಟುಕೊಂಡೇ ಅಸ್ಪøಶ್ಯ ಕೇಂದ್ರಿತ ಗ್ರಾಮ ಕಟ್ಟಬಹುದು, ಆಗ ಗ್ರಾಮ ಆರೋಗ್ಯವಾಗಿರುತ್ತದೆ' ಎಂದರು. ಗಾಂಧಿ ಅವರು ಗ್ರಾಮ ಸ್ವರಾಜ್ ಬಗ್ಗೆ ಹೇಳುತ್ತಾರೆ, ಅಸ್ಪೃಶ್ಯ ಕೇಂದ್ರದ ಬಗ್ಗೆ ಹೇಳುವುದಿಲ್ಲ. ಅಸ್ಪೃಶ್ಯ ಕೇಂದ್ರಿತ ಗ್ರಾಮ ಆದಾಗ ಗ್ರಾಮ ಕೇಂದ್ರ್ರಿತವಾದ ನಾಡನ್ನು ಕಟ್ಟಬಹುದು' ಎಂದು ದೇವನೂರ ಸಲಹೆ ನೀಡಿದರು.

`1893ರಲ್ಲಿ ಗಾಂಧಿ ಅವರು ಆಫ್ರಿಕಾದಲ್ಲಿ ರೈಲಿನಿಂದ ಕರಿಯ ಎಂದು ದಬ್ಬಿಸಿಕೊಳ್ಳುತ್ತಾರೆ, 1917ರಲ್ಲಿ ಅಂಬೇಡ್ಕರ್ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿಧ್ಯಾಭ್ಯಾಸ ಮಾಡಿ ಬರೋಡದಲ್ಲಿ ವಕೀಲಿ ವೃತ್ತಿ ಮಾಡಲು ಬಂದಾಗ ಬಾಡಿಗೆ ಮನೆ ಸಿಗದೆ ಜಾತಿ ಹೆಸರು ಹೇಳಿಕೊಳ್ಳದೆ ಹೋಟೇಲ್‍ನಲ್ಲಿ ಉಳಿದುಕೊಳ್ಳುತ್ತಾರೆ. ಜಾತಿ ಗೊತ್ತಾದಾಗ ಅಲ್ಲಿಯೂ ಇಟ್ಟುಕೊಳ್ಳದೆ ಬೀದಿಗೆ ತಳ್ಳುತ್ತಾರೆ, ಆಗ ಮನಸ್ಸು ಖಾಲಿಯಾಗಿತ್ತು ಎಂದು ಹೇಳುತ್ತಾರೆ ಅಂಬೇಡ್ಕರ್. ಗಾಂಧಿಯನ್ನು ರೈಲಿನಿಂದ ದಬ್ಬಿದ ಘಟನೆಯನ್ನು ನಮಗೇ ಆದ ಅವಮಾನ ಎಂದು ಭಾರತ ಭಾವಿಸಿದೆ. ಆದರೆ ಅಂಬೇಡ್ಕರ್ ಜಾತಿ ಕಾರಣಕ್ಕೆ ದಬ್ಬಿಸಿಕೊಂಡು ಬೀದಿಗೆ ಬಂದಿದ್ದಾರೆ, ಇದನ್ನು ತನ್ನದೇ ಅವಮಾನ ಎಂದು ದೇಶ ಭಾವಿಸಿಲ್ಲ. ಅದು ದೊಡ್ಡದು, ಇದು ಚಿಕ್ಕದು ಎಂದು ಹೇಳುವುದಿಲ್ಲ. ಭಾರತೀಯ ಮನಸ್ಥಿತಿ ಅರ್ಥಮಾಡಿಕೊಳ್ಳಲು ನೋಡುತ್ತಿದ್ದೇನೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, `ಜಾತ್ಯತೀತತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವವನ್ನು ನಾನು ಅನೇಕ ವರ್ಷಗಳ ಕಾಲ ಅರ್ಥಮಾಡಿಕೊಂಡಿದ್ದೇ ಬೇರೆ ರೀತಿ, ಹೆಚ್ಚೆಚ್ಚು ಅಂಬೇಡ್ಕರ್ ಅವರನ್ನು ಓದಿಕೊಂಡಾಗ ಈ ಪದಗಳಿಗೆ ಸಿಕ್ಕ ಅರ್ಥವೇ ಬೇರೆ. ಅದನ್ನು ಈ ಪುಸ್ತಕದಲ್ಲಿ ತಿಳಿಸಿದ್ದೇನೆ' ಎಂದರು. `ಈ ವಿಷಯಗಳ ಬಗ್ಗೆ ಅಂಬೇಡ್ಕರ್ ಅವರ ಚಿಂತನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರೆ ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಿತ್ತು' ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಹಿರಿಯ ವಕೀಲರಾದ ಕೆ.ಸುಬ್ಬರಾವ್, ಮಾಜಿ ಕಾರ್ಮಿಕ ಆಯುಕ್ತರಾದ ವಸಂತಕುಮಾರ್ ಹಿಟ್ಟಣಗಿ, ಸಿಐಟಿಯು ರಾಜ್ಯ ಅ ಧ್ಯಕ್ಷರಾದ ವಿಜೆಕೆ ನಾಯರ್, ಜಿಲ್ಲಾಧ್ಯಕ್ಷರಾದ ಕೆ.ಪ್ರಕಾಶ್, ಜಿಲ್ಲಾ ಖಜಾಂಚಿ ಜೋಮಿ ಜಾರ್ಜ್ ಉಪಸ್ಥಿತರಿದ್ದರು. ಬಿ.ರಾಜಶೇಖರಮೂರ್ತಿ ನಿರೂಪಣೆ ಮಾಡಿದರು. ಲಿಂಗರಾಜು, ಕೆ.ಎಸ್.ಲಕ್ಷ್ಮಿ ಮತ್ತು ಸಂಗಡಿಗರು ಹೋರಾಟದ ಹಾಡುಗಳನ್ನು ಹಾಡಿದರು.