ಹೋರಾಟಗಾರರಿಗೆ ರೌಡಿಪಟ್ಟ: ಜೋಕಟ್ಟೆ ನಾಗರಿಕರ ಪ್ರತಿಭಟನೆ

ಸಂಪುಟ: 
10
ಸಂಚಿಕೆ: 
40
Sunday, 25 September 2016

ಮಂಗಳೂರು ಹೊರವಲಯದ ಎಂಆರ್‍ಪಿಎಲ್ ಪೆಟ್ರೋದ್ಯಮ ಕಾರ್ಖಾನೆಯ ತ್ಯಾಜ್ಯಗಳಿಂದ  ಪಕ್ಕದ ಜೋಕಟ್ಟೆ ಗ್ರಾಮಸ್ಥರಿಗೆ ಆಗುತ್ತಿದ್ದ ತೊಂದರೆಗಳ ವಿರುದ್ಧ ಎರಡು ವರ್ಷಕ್ಕೂ ಮೀರಿ ನಡೆಸುತ್ತಿದ್ದ ಪ್ರತಿಭಟನೆಗಳಿಗೆ ಗೆಲುವು ಒದಗುವ ರೀತಿಯಲ್ಲಿ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕೆಲವು ಕ್ರಮಗಳನ್ನು ಕೈಗೊಳ್ಳುವ ಹಂತದಲ್ಲಿತ್ತು. ಇತ್ತೀಚೆಗೆ ಜೋಕಟ್ಟೆ ಸಂತ್ರಸ್ಥ ಗ್ರಾಮಸ್ಥರ ನಿವೇಶನಗಳನ್ನು ಉದ್ಯಮವು ಸ್ವಾಧೀನಪಡಿಸುವ ಪ್ರಕಟಣೆ ನೀಡಿದಾಗ, ಹೋರಾಟದ ಕಾರಣದಿಂದಾಗಿ, ಭೂಮಿ ಮನೆ ಕಳಕೊಳ್ಳುವವರಿಗೆ ಒಳ್ಳೆಯ ನಿವೇಶನ, ಪರಿಹಾರ ಇತ್ಯಾದಿ ಪ್ರಸ್ತಾಪಗಳನ್ನು ಮುಂದಿಟ್ಟಿತ್ತು.

ಇದೆಲ್ಲ ಆಗುತ್ತಿರುವಂತೆಯೇ ಇದೀಗ ವಾರದ ಹಿಂದೆ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯು ಅಧ್ಯಕ್ಷರಾದ ಬಿ.ಎಸ್.ಹುಸೈನ್, ಮುಖ್ಯ ಕಾರ್ಯಕರ್ತರಾದ ಅಬೂಬಾಕರ್ ಬಾವಾ, ಮೊಯ್ದಿನ್ ಶರೀಫ್ ಮತ್ತು ವಿಜಯಾನಂದ ರಾವ್ ಅವರನ್ನು ರೌಡಿ ಪಟ್ಟಿಯಲ್ಲಿ ಜಿಲ್ಲಾ ಪೋಲೀಸ್ ಇಲಾಖೆ ಪ್ರಕಟಿಸಿ, ತತ್ಸಂಬಂಧ ಹೇಳಿಕೆ ನೀಡಲು ಅವರುಗಳಿಗೆ ನೋಟೀಸು ನೀಡಿತ್ತು.

ಜನಪರ ಹಾಗೂ ಪರಿಸರ ಹೋರಾಟಗಾರರನ್ನು ರೌಡಿಗಳ ಪಟ್ಟಿಗೆ ಸೇರಿಸುವ ಪೋಲೀಸ್ ಇಲಾಖೆ ಹುನ್ನಾರದ ಹಿಂದೆ ಇಲಾಖೆಯ ಒಳಗಡೆ ಸೇರಿಕೊಂಡಿರುವ ವ್ಯಕ್ತಿಗಳ ಕೋಮುವಾದಿತ್ವದ ವಾಸನೆ ಎಲ್ಲರಿಗೂ ಹೊಡೆಯುವಂತಿದೆ.

ಪೋಲೀಸರ ದುಷ್ಟ ಬುದ್ಧಿಯನ್ನು ವಿರೋಧಿಸಿ ಜೋಕಟ್ಟೆ ನಾಗರಿಕರ ಸಮಿತಿ ಹಾಗೂ ಡಿವೈಎಫ್‍ಐ ನೇತೃತ್ವದಲ್ಲಿ ಸುರತ್ಕಲ್ ಪರಿಸರದ ನಾಗರಿಕರು ಸಪ್ಟೆಂಬರ್ 19ರಂದು ಕಪ್ಪು ವಸ್ತ್ರ ಪ್ರದರ್ಶಿಸಿ ಸುರತ್ಕಲ್ ಪೇಟೆಯಲ್ಲಿ ಮೌನ ಮೆರವಣೆಗೆ ನಡೆಸಿದರು. ಮಹಿಳೆಯರೂ, ವೃದ್ಧರೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾಕಾರರ ಮೆರವಣಿಗೆ ಹೆದ್ದಾರಿಯ ಮೇಲುಸೇತುವೆಯಲ್ಲಿ ಸಾಗುತ್ತಿದ್ದಂತೆ ಸುರತ್ಕಲ್ ಪೋಲೀಸ್ ಠಾಣೆಗೆ ಸಾಗುವ ದಾರಿಯಲ್ಲಿ ಪೋಲೀಸರಿಂದ ತಡೆಹಿಡಿಯಲ್ಪಟ್ಟಿತು. ಮೆರವಣಿಗೆಯು ಧರಣಿಯಾಗಿ ಪರಿವರ್ತಿತವಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ "ಠಾಣಾಧಿಕಾರಿ ಚೆಲುವರಾಜು ಹೋರಾಟಗಾರರನ್ನು ರೌಡಿಗಳನ್ನಾಗಿ ರೌಡಿಗಳನ್ನು ಜನನಾಯಕ ರನ್ನಾಗಿ ಪರಿಗಣಿಸುತ್ತಾರೆ. ಸುರತ್ಕಲ್ ಪರಿಸರದ ಎಲ್ಲಾ ಕಾನೂನು ಬಾಹಿತ ವ್ಯವಹಾರಗಳನ್ನು ಹಣದಾಸೆಗಾಗಿ ಪೋಷಿಸುತ್ತಿದ್ದು ಜನ ಸಾಮಾನ್ಯರಿಗೆ ನ್ಯಾಯ ಮರಿಚೀಕೆಯಾಗಿದೆ. ಜನತೆ ಪೊಲೀಸ್ ಠಾಣೆಗೆ ತೆರಳಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೋಕಟ್ಟೆ ಹೋರಾಟಗಾರರ ಮೇಲಿನ ರೌಡಿಶೀಟ್ ಮತ್ತು ಚೆಲುವರಾಜುವಿನ ಉದ್ಧಟತನದ ಪರಮಾವಧಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳ ಆಶ್ರಯದಲ್ಲಿ ತೀವ್ರರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಸ್.ಹುಸೈನ್, ಡಿವೈಎಫ್‍ಐ ದ.ಕ.ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಮಾತನಾಡಿದರು. ಪಣಂಬೂರು ಉಪವಿಭಾಗದ ಎಸಿಪಿಯವರು ಬಂದು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸುವವರೆಗೂ ಧರಣಿ ನಿರತರು ಸ್ಥಳ ಬಿಟ್ಟು ಕದಲಿಲ್ಲ. ಹೋರಾಟಗಾರರ ಮೇಲೆ ಸುಳ್ಳು ಸುಳ್ಳೇ ಹಾಕಿರುವ ರೌಡಿಪಟ್ಟಿಯನ್ನು ಹಿಂತೆಗೆಯಬೇಕೆಂದು ಮತ್ತು ಇನ್ಸ್‍ಪೆಕ್ಟರ್ ಚಲುವರಾಜು ರವರ ಅಮಾನತ್ತಿಗೆ ಆಗ್ರಹಿಸಲಾಯಿತು.

ಡಿವೈಎಫ್‍ಐ ಜಿಲ್ಲಾ ಮುಖಂಡರಾದ ಸಂತೋಷ್ ಕುಮಾರ್ ಬಜಾಲ್, ಸಾದಿಕ್ ಕಣ್ಣೂರು, ಶ್ರೀನಾಥ್ ಕಾಟಿಪಳ್ಳ, ಎಸ್‍ಎಫ್‍ಐ ಜಿಲ್ಲಾ ಕಾರ್ಯದರ್ಶಿ ಚರಣ್ ಪಂಜಿಮೊಗರು, ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಮುಖಂಡರಾದ ಅಬೂಬಾಕರ್ ಬಾವಾ, ಮೊಯ್ದಿನ್ ಶರೀಫ್, ವಿಜಯಾನಂದ ರಾವ್, ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಿ.ಎಸ್.ಬಶೀರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಂಶುದ್ದೀನ್, ಜನಪರ ಹೋರಾಟಗಾರರಾದ ವಿದ್ಯಾ ದಿನಕರ್, ನಟೇಶ್ ಉಳ್ಳಾಲ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ: ವಾಸುದೇವ ಉಚ್ಚಿಲ್