ತೋರಣಗಲ್ಲು : ಕೋಲ್ ಟಾರ್ ಕಾರ್ಖಾನೆಯ ವಿರುದ್ಧ ಪ್ರತಿಭಟನೆ

ಸಂಪುಟ: 
10
ಸಂಚಿಕೆ: 
40
Sunday, 25 September 2016

ಸರಕಾರವನ್ನು ವಂಚಿಸಿ, ಕಾನೂನು ಬಾಹಿರವಾಗಿ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಲ್ತನಾಪುರ ಹತ್ತಿರ ಎಪ್ಸ್‍ಲಿನ್ ಕಾರ್ಬೈಡ್ ಪ್ರೈವೇಟ್ ಲಿಮಿಟೆಡ್(ಇ.ಸಿ.ಪಿ.ಎಲ್.) ಕೆಮಿಕಲ್ಸ್ ಕಾರ್ಖಾನೆ ಸ್ಥಾಪನೆಗೆ ಭೂಮಿಯನ್ನು ಗುತ್ತಿಗೆ ಪಡೆದಿದೆ. 34.65 ಎಕರೆ ಪ್ರದೇಶದಲ್ಲಿ, 3 ಲಕ್ಷ ಟಿಪಿಎ ಕೋಲ್ ಟಾರ್ ಉತ್ಪಾದಿಸಲು ಅಕ್ರಮವಾಗಿ ಕಟ್ಟಡ ಕಾಮಗಾರಿ ಕೆಲಸ ಭರದಿಂದ ನಡೆದಿದೆ. ಜೀವ ಸಂಕುಲ ನಾಶಕ ಕೆಮಿಕಲ್ಸ್ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆಗೆ ಸ್ಥಳೀಯ ಸಂಸ್ಥೆಗಳು, ರೈತ-ಕಾರ್ಮಿಕ, ಯುವಜನ ವಿದ್ಯಾರ್ಥಿ ಪ್ರಜಾಸತ್ತಾತ್ಮಕ ಸಂಘ-ಸಂಸ್ಥೆಗಳು ಮತ್ತು ನಾಗರೀಕರ ವಿರೋಧವನ್ನು ವ್ಯಕ್ತಪಡಿಸಿ ಹಲವು ದಿನಗಳಿಂದ ತೀವ್ರವಾದ ಚಳುವಳಿಗಳನ್ನು ನಡೆಸುತ್ತಿವೆ.

ಕಳೆದ ಆರು ತಿಂಗಳಿಂದ ನಿರಂತರ ಜನರ ಅತಂಕ ನಿವಾರಣೆ ಮಾಡಲು ಕ್ರಮ ಕೈಗೊಳ್ಳಲು ಒತ್ತಾಯಿಸಿ ಹೋರಾಟಗಳನ್ನು ನಡೆಸುತ್ತಿದ್ದರೂ ಉದ್ಯಮಿಗಳಾಗಲಿ, ಸರ್ಕಾರದ ಇಲಾಖೆ ಅಥವಾ ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಸ್ಥಳೀಯ ಕಾರ್ಮಿಕರನ್ನು ಮತ್ತು ನಾಗರಿಕರ ಮತ್ತು ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡುವ ಮತ್ತು ಅಪಹರಣ, ಬೆದರಿಕೆ, ಹಲ್ಲೆ ನಡೆಸುವ ಭಯದ ವಾತಾವರಣ ಸೃಷ್ಟಿಯಾಗಿದೆ. ಜೀವಸಂಕುಲ ನಾಶಕ ಇ.ಸಿ.ಪಿ.ಎಲ್. 3 ಲಕ್ಷ  ಟಿಪಿಎ ಕೋಲ್ ಟಾರ್ ಕೆಮಿಕಲ್ಸ್ ಕಾರ್ಖಾನೆಯ ಡಿಸ್ಟಿಲೇಶನ್ ಪ್ಲ್ಯಾಂಟ್ ಕಾಮಗಾರಿ ಕೆಲಸ ತಡೆಯಲು ಒತ್ತಾಯಿಸಿ ಮತ್ತೊಮ್ಮೆ ಪ್ರತಿಭಟನೆ ನಡೆಸಲಾಗಿದೆ. ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಅಕ್ರಮವಾಗಿ ಸ್ಥಾಪನೆಯಾಗುವ ಕೈಗಾರಿಕೆಯನ್ನು ತಡೆಯಲು ಒತ್ತಾಯಿಸಲಾಗಿದೆ.

ಸೆಪ್ಟಂಬರ್ 20ರಂದು ಬೃಹತ್ ಪ್ರತಿಭಟನೆ ನಡೆಸಿ ಕಾರ್ಖಾನೆಯ ಗೇಟ್ ಬಳಿ ಸೇರಿದ ಸಾವಿರಾರು ಗ್ರಾಮಸ್ಥರು ಕಾರ್ಖಾನೆ ಸ್ಥಾಪನೆ ವಿರುದ್ಧ ಘೋಷಣೆ ಕೂಗಿದರು. ವಿಠ್ಠಲ್‍ಪುರ, ತೋರಣಗಲ್‍ನ ಜನತೆ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಹೋರಾಟದ ಬಲವನ್ನು ಹೆಚ್ಚಿಸಿತು. ಹೋರಾಟದ ತೀವ್ರತೆಯನ್ನು ಮನಗಂಡು ತಹಶೀಲ್ದಾರ್‍ರವರು ಕಾರ್ಖಾನೆ ಮುಚ್ಚಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಜೆ.ಎಂ.ಚನ್ನಬಸಯ್ಯ, ಎ.ಸ್ವಾಮಿ, ವಿ.ದೇವಣ್ಣ ಕುರಿಕುಪ್ಪ, ಎಂ.ತಾತಪ್ಪ, ಸೈಯದ್ ಸಿಕಂದರ್, ಯು.ಕೋನಪ್ಪ, ಯು.ತಿಪ್ಪೇಶ್ವಾಮಿ, ಗೋವಿಂದ ರೆಡ್ಡಿ, ಅರ್ಜುನ್, ಪರೀಫ್ ಈರಣ್ಣ, ಶಫೀ, ಹೆಚ್.ಸ್ವಾಮಿ ಮುಖಂಡರು ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‍ಎಸ್), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‍ಐ), ಗ್ರೀನ್ ಫೌಂಡೇಷನ್, ಕರ್ನಾಟಕ ರಕ್ಷಣಾ ವೇದಿಕೆ, ಕನಕದಾಸ ಯುವಕ ಸಂಘ, ಸ್ವಾಮಿ ವಿವೇಕಾನಂದ ಯೂತ್ ಅಸೋಸಿಯೇಷನ್, ಎಸ್.ಎಸ್.ಎ., ಅಂಬೇಡ್ಕರ್ ಸಂಘ, ಕುವೆಂಪು ಸಂಘ ಹಾಗೂ ಊರಿನ ಎಲ್ಲಾ ಸಂಘಟನೆಗಳು ಮತ್ತು ಇ.ಸಿ.ಪಿ.ಎಲ್. ಜೀವ ಸಂಕುಲ ನಾಶಕ ವಿರೋಧಿ ಸಮಿತಿ, ಕುಡಿತಿನಿಯಿಂದ ಭಾಗವಹಿಸಿದ್ದರು.