ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ 16ನೇ ವಾರ್ಷಿಕ ಮಹಾಸಭೆ

Monday, 26 September 2016

ಉಡುಪಿ, ಸೆ.26: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ಗೆ ಸಂಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ 16ನೇ ವಾರ್ಷಿಕ ಮಹಾಸಭೆಯು ನೆನ್ನೆ ಕುಂದಾಪುರದ ಕಾರ್ಮಿಕ ಭವನದಲ್ಲಿ ಜರಗಿತು. ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಅಧ್ಯಕ್ಷ ವಿ.ನರಸಿಂಹ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ "ಉಡುಪಿ ಜಿಲ್ಲೆಯ ಹಂಚು ಉದ್ದಿಮೆ ತೀವ್ರವಾದ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಹಂಚು ಮಾರುಕಟ್ಟೆ ಕುಸಿತ, ಕಚ್ಚಾ ವಸ್ತು ಆವೆ ಮಣ್ಣನ್ನು ತೆಗೆಯಲು ಪರಿಸರ ಇಲಾಖೆಯ ಅನುಮೋದನೆ ಕಡ್ಡಾಯವೆಂಬ ಸರಕಾರದ ನೀತಿಯಿಂದಾಗಿ ಕೈಗಾರಿಕೆಗೆ ಮಾರಕವಾಗಲಿದೆ. ಹಂಚು ಉದ್ದಿಮೆ ರಕ್ಷಣೆಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಹಂಚು ಕೈಗಾರಿಕೆ ಉಳಿಸಿ ಬೆಳೆಸುವ ಬಗ್ಗೆ ಕಾರ್ಮಿಕ ಸಂಘವಾಗಿ ನಾವು ಸರಕಾರಕ್ಕೆ ಒತ್ತಾಯಿಸುವುದಕ್ಕೆ ಸಂಘಟಿತ ಹೋರಾಟ ಮಾಡಬೇಕು ಎಂದು ಹೇಳಿದರು. 

ಶ್ರದ್ದಾಂಜಲಿ ಟರಾವು ಮಂಡಿಸಿದ ಬಳಿಕ - ಹಂಚು ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಗತ ವರ್ಷದ ಚಟುವಟಿಕೆ ವರದಿ ಮಂಡಿಸಿದರು. ಪ್ರತಿನಿಧಿಗಳು ವರದಿಯ ಮೇಲೆ ಚರ್ಚಿಸಿ ರಚನಾತ್ಮಕ ಸಲಹೆ ನೀಡಿದರು. ಉಡುಪಿ ಜಿಲ್ಲಾ ಸಿಐಟಿಯು ಕಾರ್ಯದರ್ಶಿ ಸುರೇಶ ಕಲ್ಲಾಗರ, ಮಹಾಬಲ ವಡೇರ ಹೋಬಳಿ, ವೆಂಕಟೇಶ ಕೋಣಿ, ಸಭೆಯಲ್ಲಿ ಮಾತನಾಡಿದರು. ಹಂಚು ಕೈಗಾರಿಕೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೆತನ ಜ್ಯಾರಿಗೊಳಿಸಬೇಕು. ಇ.ಎಸ್.ಐ. ಸಮಸ್ಯೆಗಳನ್ನು ಬಗೆಹರಿಸಬೇಕು, ಕೇರಳ ರಾಜ್ಯದ ಮಾದರಿಯಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲಗೊಳಿಸಬೇಕು, ಬೆಲೆ ಏರಿಕೆಯನ್ನು ತಡೆಗಟ್ಟಬೇಕು. ವೃತ್ತಿ ತೆರಿಗೆ ಪಾವತಿಸುವುದಕ್ಕೆ ಆದಾಯ ಮಿತಿ ಹೆಚ್ಚಿಸಲು ಕ್ರಮವಹಿಸಬೇಕು. ಹಂಚು ಕೈಗಾರಿಕೆಯ ಬಿಕ್ಕಟ್ಟನ್ನು ಪರಿಹರಿಸಿ- ಪ್ರೋತ್ಸಾಹ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸುವುದಕ್ಕೆ ಸಂಘಟಿತ ಹೋರಾಟ ಮಾಡಲು ತೀರ್ಮಾನಿಸಲಾಯಿತು. 

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ, ನಾಗರತ್ನ ನಾಡ, ಶುಭ ಸಂಶನೆ ಮಾಡಿದರು. ಸಂಘದ ಪದಾಧಿಕಾರಿ- ಪ್ರಕಾಶ ಕೋಣಿ, ಜಿ.ಡಿ.ಪಂಜು, ಲಕ್ಷ್ಮಣ ಡಿ. ಗೋಪಾಲ ಮಾರ್ಕೊಡು, ಶೀಲಾವತಿ ಉಪಸ್ಥಿತರಿದ್ದರು. 

 

 

ವರದಿ : ವೆಂಕಟೇಶ ಕೋಣಿ