ಕುಂದಾಪುರ: ಪುರಸಭೆ ಕಛೇರಿ ಎದುರು ಭೂಮಿ ಹಕ್ಕು ಪತ್ರಕ್ಕಾಗಿ ಧರಣಿ

Tuesday, 27 September 2016

ಕುಂದಾಪುರ, ಸೆಪ್ಟಂಬರ್ 27: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಸಮಿತಿಯ ನೇತೃತ್ವದಲ್ಲಿ ಕುಂದಾಪುರ ಪುರಸಭಾ ವ್ಯಾಪ್ತಿಯ ಬಡ ಮನೆ, ನಿವೇಶನ ರಹತ ಅರ್ಜಿದಾರರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಾಡುವಂತೆ ಆಗ್ರಹಿಸಿ ಕುಂದಾಪುರ ಪುರಸಭೆ ಕಛೇರಿ ಎದುರು ಇಂದು ಬೃಹತ್ ಪ್ರತಿಭಟನೆ ಧರಣಿ ಮುಷ್ಕರ ನಡೆಸಲಾಯಿತು. 

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಕುರಿತು ಮಾತನಾಡಿದ ಮಾಜಿ ಪುರಸಭಾ ಅಧ್ಯಕ್ಷ ವಿ.ನರಸಿಂಹ ಅವರು ಈ ಹಿಂದೆ ಮನೆ ನಿವೇಶನ ರಹಿತರಿಗೆ ಭೂಮಿ ಹಕ್ಕುಪತ್ರ ನೀಡುವಂತೆ ಮನವಿ ಸಲ್ಲಿಸಿದ ನಂತರ ನಿವೇಶನ ರಹಿತರ ಅಂತಿಮ ಪಟ್ಟಿ ಸಿದ್ಧಪಡಿಸಿ ಹಲವಾರು ವರ್ಷ ಕಳೆದರೂ ಈ ತನಕ ನಿವೇಶನ ರಹಿತರಿಗೆ ಸರಕಾರಿ ಜಮೀನು ಗುರುತಿಸಬೇಕು ಹಾಗೂ ಖಾಸಗಿ ಜಾಗ ಖರೀದಿಸಿ ಹಕ್ಕುಪತ್ರ ಕೊಡಿಸುವುದಕ್ಕೆ ಮೇಲಾಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆ ಕಳುಹಿಸಬೇಕು ಎಂದು ಆಗ್ರಹಿಸಿದರು. 

ನಿವೇಶನ ರಹಿತರ ಪ್ರತಿಭಟನಾ ಧರಣಿ ಮುಷ್ಕರದ ಪೂರ್ವಭಾವಿಯಾಗಿ ಕುಂದಾಪುರ ಭವನದಲ್ಲಿ ಜರಗಿದ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶವನ್ನುದ್ದೇಶಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡುತ್ತಾ, ಕುಂದಾಪುರ ಪುರಸಭೆ ವ್ಯಾಪ್ತಿಯ ಮನೆ ನಿವೇಶನ ರಹಿತರಿಗೆ ಭೂಮಿಯನ್ನು ಗುರುತಿಸಿ ಹಕ್ಕು ಪತ್ರ ವಿತರಣೆ ಮಾಡದ ಪುರಸಭೆಯ ನೀತಿಯನ್ನು ಖಂಡಿಸಿದರು. ಈ ಬಗ್ಗೆ ನವಂಬರ್ ತಿಂಗಳಲ್ಲಿ ಉಡುಪಿ-ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಚಲೋ ಹೋರಾಟವನ್ನು ಸಂಘಟಿಸಿ ಚಳುವಳಿಯನ್ನು ತೀವ್ರಗೊಳಿಸಲಾಗುವುದು. ನಿವೇಶನ ರಹಿತ ಅರ್ಜಿದಾರರು - ಭೂಮಿ ಹಕ್ಕುಪತ್ರಕ್ಕಾಗಿ ಬಂಧನಕ್ಕೊಳಗಾಗಿ ಜೈಲ್ ಬರೋ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸರಕಾರವನ್ನು ಎಚ್ಚರಿಸಿದರು. 

ಮನೆ ನಿವೇಶನ ರಹಿತ ಅರ್ಜಿದಾರರು ಕುಂದಾಪುರ ಪೇಟೆ ಮುಖ್ಯ ಬೀದಿಯಲ್ಲಿ ಬೃಹತ್ ಮೆರವಣಿಗೆ ಮೂಲಕ - ನಿವೇಶನ ಹಕ್ಕು ಪತ್ರ ಕೊಡಬೇಕೆಂಬ ಘೋಷಣೆ ಕೂಗುತ್ತಾ-ಕುಂದಾಪುರ ಪುರಸಭೆ ಕಛೇರಿ ಎದುರು ಜಮಾಯಿಸಿದರು. 

ಮುಖಂಡರಾದ ಎಚ್. ನರಸಿಂಹ, ರಾಜೀವ ಪಡುಕೋಣೆ, ನಾಗರತ್ನ ನಾಡ, ಬಾಲಕೃಷ್ಣ ಕೆ.ಎಂ. ಮಹಾಬಲ ವಡೇರ ಹೋಬಳಿ, ಸತೀಶ ಖಾರ್ವಿ, ಪದ್ಮಾವತಿ ಶೆಟ್ಟಿ, ಕುಶಲ, ರಮೇಶ ಪೂಜಾರಿ ಗುಲ್ವಾಡಿ, ಅಶೋಕ ಹಟ್ಟಿಯಂಗಡಿ ಹೋರಾಟ ನೇತೃತ್ವ ವಹಿಸಿದರು. 

 

 

ವರದಿ : ವೆಂಕಟೇಶ ಕೋಣಿ